• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ನಾಡರ ಆಡಾಡತ ಆಯುಷ್ಯದ ಸುತ್ತಮುತ್ತ-5

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Girish Karnads autobiography part5
1956ರಲ್ಲಿ ಅಖಿಲ ಭಾರತ ಅಂತರ್-ವಿಶ್ವವಿದ್ಯಾಲಯಗಳ ಯುವಜನ ಮಹೋತ್ಸವವು ದೆಹಲಿಯಲ್ಲಿ ನಡೆಯಿತು. ಅದರಲ್ಲಿ ವಾದ್ಯಸಂಗೀತ ಸ್ಪರ್ಧೆಯಲ್ಲಿ ಗಿರೀಶರ ಅಣ್ಣ ವಸಂತ ಕಾರ್ನಾಡ ಪಿಟೀಲು ವಾದನದಲ್ಲಿ ಆಯ್ಕೆಗೊಂಡಿದ್ದರು. ಗಿರೀಶ, ಕಿಟ್ಟಿ(ಕೃಷ್ಣ ಬಸರೂರ್), ಅರೋರಾ ಸೇರಿ ಅಭಿನಯಿಸಿದ ಎ.ಎ.ಮಿಲ್ನೇ (A.A.Milne)ಯವರ ದಿ ಅಗ್ಲೀ ಡಕ್ಲಿಂಗ್ (The Ugly Duckling) ಎಂಬ ಇಂಗ್ಲಿಷ ನಾಟಕ ದೆಹಲಿ ಯುಥ್ ಫೆಸ್ಟಿವಲ್‌ಗಾಗಿ ಆಯ್ಕೆಗೊಂಡಿತ್ತು. ಗಿರೀಶ ಆಗ ಜ್ಯೂನಿಯರ್ ಬಿ.ಎ.ಕ್ಲಾಸಿನಲ್ಲಿದ್ದರು.

ನಾನು ಆ ವರುಷ ಜ್ಯೂನಿಯರ್ ಎಂ.ಎ.ಕ್ಲಾಸಿನಲ್ಲಿದ್ದೆ. ಸ್ನಾತಕೋತ್ತರ ವಿಭಾಗದಿಂದ ನಾವು ಭಾಗವಹಿಸಿದ ರೇಡಿಯೋ ನಾಟಕ ಕುವೆಂಪು ರಚಿತ 'ಸ್ಮಶಾನ ಕುರುಕ್ಷೇತ್ರ' ಆಯ್ಕೆಗೊಂಡಿತ್ತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕಲಾವಿದರ ಒಂದು ಗುಂಪು ದೆಹಲಿಗೆ ತೆರಳಿತ್ತು. ನೃತ್ಯದ ಶಿಕ್ಷಕರಾದ ಉಮೇಶ ಹೆರಂಜಾಳ ಬಂದಿದ್ದರು. ಕೊಳಲು ವಾದಕ ಪ್ರೊ| ಶಾಮ್ ಜೊತೆಗಿದ್ದರು. ಎಲ್ಲ ವಿದ್ಯಾರ್ಥಿಗಳು ಧಾರವಾಡದಿಂದ ಟ್ರೇನ್‌ನಿಂದ ಪ್ರಯಾಣ ಮಾಡಿದ್ದೆವು. ನಮ್ಮ ಕಂಟಿಂಜೆಂಟ್ ಇನ್-ಚಾರ್ಜ್ ವಿಜಾಪುರದ ವಿಜಯ ಕಾಲೇಜಿನ ತತ್ತ್ವಜ್ಞಾನ ಪ್ರಾಧ್ಯಾಪಕ ಪ್ರೊ |ಟಿ.ರುಬೆನ್ ಆಗಿದ್ದರು. ಅವರು ವಾಗ್ಮಿ ಎಂದೇ ಪ್ರಸಿದ್ಧರು. ಧಾರವಾಡದ ವಿಜಯ ಟಾಕೀಜಿನಲ್ಲಿ ಪ್ರಾಧ್ಯಾಪರ ಚರ್ಚಾಕೂಟ ನಡೆದಾಗ ವಿಷಯದ ಪರವಾಗಿ ಗೋಕಾಕರು ಪ್ರಧಾನ ಭಾಷಣಕಾರರಾಗಿದ್ದರೆ ಪ್ರೊ| ರುಬೆನ್ ಅವರ ವಿರುದ್ಧ ಮಾತಾಡಿ ಜನರ ಮನ್ನಣೆ ಗಳಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದಿಂದ 44 ವಿದ್ಯಾರ್ಥಿಗಳಿದ್ದೆವು. ಪ್ರವಾಸದಲ್ಲಿ ಹೋಗುವಾಗ ಮತ್ತು ಬರುವಾಗ ನಾಲ್ಕುದಿನ ನಮಗೆ ಕಂಪಾರ್ಟ್‌ಮೆಂಟ್ ಮನೆಯಂತಾಗಿತ್ತು. ಹಾಡು, ವಾದ್ಯ, ಹರಟೆ, ಊಟ. ತಿಂಡಿಗಳಲ್ಲಿ ನಾವು ದಿನ ಕಳೆದದ್ದೇ ಗೊತ್ತಾಗಲಿಲ್ಲ. ಅದೊಂದು ಅವಿಸ್ಮರಣಿಯ ಅನುಭವ. ದೆಹಲಿಯಲ್ಲಿ 33 ವಿಶ್ವವಿದ್ಯಾಲಯಗಳಿಂದ 1800 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಶಾಲವಾದ ತಾಲಕಟೋರಾ ಗಾರ್ಡನ್‌ನಲ್ಲಿ ಎಲ್ಲರಿಗೂ ಟೆಂಟಿನಲ್ಲಿ ಬಿಡಾರದ ವ್ಯವಸ್ಥೆ ಮಾಡಿದ್ದರು. ಮೊದಲನೆಯ ದಿನ ಪಂಡಿತ ಜವಾಹರಲಾಲ ನೆಹರು ಅವರ ಸ್ವಾಗತ ಭಾಷಣ ಕೇಳಿ ಆನಂದಿಸಿದೆವು. ವಿದ್ಯಾರ್ಥಿಗಳು ವಿವಿಧ ಹಾಬಿ(ಸದಭ್ಯಾಸ)ಗಳನ್ನು ರೂಢಿಸಿಕೊಳ್ಳಬೇಕು. ನನಗೆ ಹೂಗಳನ್ನು ಕಂಡರೆ ಪ್ರೀತಿ. ನಾನು ನಲವತ್ತು ಹೂಗಳನ್ನು ಗುರುತಿಸಬಲ್ಲೆ, ಅವುಗಳ ಹೆಸರನ್ನು ಹೇಳಬಲ್ಲೆ. ನೀವು ಎಷ್ಟು ಹೂಗಳನ್ನು ಗುರುತಿಸಬಲ್ಲಿರಿ? ಎಂದು ಕೇಳಿದಾಗ ನಮಗೆಲ್ಲರಿಗೂ ಅಚ್ಚರಿ. ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರ ರಾಷ್ಟ್ರಪತಿ ಭವನದ ಐತಿಹಾಸಿಕ ಮುಘಲ್ ಗಾರ್ಡನ್ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಭೋಜನಕೂಟವಿತ್ತು.

ನಮ್ಮ ಕಲಾವಿದರು ಹಾಡಿದ ಪಂಚಮಿ ಹಬ್ಬ ಉಳಿತವ್ವ ದಿನ ನಾಕ | ಅಣ್ಣ ಬರಲಿಲ್ಲ ಯಕೋ ಕರಿಲಾಕ (ಬೇಟಗೇರಿ ಕೃಷ್ಣಶರ್ಮರ ಹಾಡು) ಇತರ ಭಾಷೆಯವರನ್ನೂ ಆಕರ್ಷಿಸಿತ್ತು. ಗಾಯಕಿಯಾಗಿ ಬಂದ ಶಾಂತಮತಿ ಗಂಗೊಳ್ಳಿ (ನಂತರ ಧಾರೇಶ್ವರ ಎಂದು ಪ್ರಸಿದ್ಧಿ ಪಡೆದ ರೇಡಿಯೋ ಕಲಾವಿದೆ) ಅವರು ಹಾಡಿದ ದೇಸಾಯಿ ದತ್ತಮೂರ್ತಿಯವರ ಹಾಡು ಸಖಿ ಮಾಧವನೇತಕೆ ಬಾರ| ಇನ್ನೂ ನಮ್ಮ ಕಿವಿಗಳಲ್ಲಿ ನಿನಾದಿಸುತ್ತಿದೆ. ಅಂತರ್ ವಿಶ್ವವಿದ್ಯಾಲಯದ ಭಾಷಣ ಸ್ಪರ್ಧೆಯಲ್ಲಿ ಗಿರೀಶ ಕಾರ್ನಾಡ ಪ್ರಥಮ ಸ್ಥಾನ ಪಡೆದಾಗ ನಮಗಾದ ಆನಂದ ಹೇಳತೀರದು. ಕರ್ನಾಟಕ ಕಾಲೇಜಿನಿಂದ ವಿಮರ್ಶಕ ವೈದ್ಯ ನಾಟಕ ಆಯ್ಕೆಗೊಂಡಿತ್ತು. ಇದರ ಲೇಖಕರು ವಿ.ಕೃ.ಗೋಕಾಕರು. ಅದರ ಪ್ರಧಾನ ಪಾತ್ರದಲ್ಲಿ ವರಕವಿ ಬೇಂದ್ರೆಯವರ ಮಗ ವಾಮನ ಬೇಂದ್ರೆ ಇದ್ದರು. ಮೈಸೂರು ವಿಶ್ವ ವಿದ್ಯಾಲಯದಿಂದ ಕೂಡ ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ನಾಟಕವೇ ಆಯ್ಕೆಗೊಂಡಿತ್ತು. ಅದರಲ್ಲಿ ಪೂರ್ಣಚಂದ್ರ ತೇಜಸ್ವಿ ಭಾಗವಹಿಸಿದ್ದರು. ನಾವೂ ಅದೇ ನಾಟಕವನ್ನು ಆರಿಸಿದ್ದೆವು. ಇವೆಲ್ಲ ಅವಿಸ್ಮರಣೀಯವಾದ ಘಟನೆಗಳು).

ಜ್ಯೊಂ ಅನೂಯ್ (Jean Anouilh) ಬರೆದ ಅಂತಿಗೊನೆ (Antigone) ಎಂಬ ನಾಟಕವನ್ನು ಪ್ರಯೋಗಿಸಲು ಸಿದ್ಧತೆ ನಡೆಸಿ ಆ ನಾಟಕದ ಹಲವು ಸಲ ವಾಚನವನ್ನು ಮಿತ್ರರೊಂದಿಗೆ ಗಿರೀಶ ಮಾಡಿದ್ದರು. ಕಾರಣಾಂತರದಿಂದ ಆ ನಾಟಕದ ಪ್ರಯೋಗವಾಗಲಿಲ್ಲ ಎಂದು ಗಿರೀಶ ಬರೆಯುತ್ತಾರೆ. ಆದರೆ ಆ ನಾಟಕದ ವಾಚನವನ್ನು ಗಿರೀಶ ಮರೆಯಲಿಲ್ಲ. ಮುಂದೆ ಅವರು ಬರೆದ ಯಯಾತಿ ನಾಟಕದಲ್ಲಿ ಅದರ ಪ್ರಭಾವ ಕಾಣುತ್ತದೆ ಎಂದು ಬರೆಯುತ್ತಾರೆ. (ಚಿತ್ರಲೇಖೆ ಮತ್ತು ಯಾಯಾತಿಯ ಎದುರಾಟದ ಸನ್ನೀವೇಶ ಅಂತಿಗೊನೆ-ಕ್ರಿಯೋನ್‌ರ ಸಂಘರ್ಷದಿಂದ ಪ್ರೇರೇಪಿತವಾಗಿತ್ತು ಎನ್ನುತ್ತಾರೆ).

1956ರಲ್ಲಿ ಅಖಿಲ ಭಾರತ ಇಂಗ್ಲಿಷ್ ಪ್ರಾಧ್ಯಾಪಕರ ಸಮ್ಮೇಲನ ಧಾರವಾಡದಲ್ಲಿ, ಕರ್ನಾಟಕ ಕಾಲೇಜಿನ ಆತಿಥ್ಯದಲ್ಲಿ ಹಮ್ಮಿಕೊಂಡಿತ್ತು. ಅಲ್ಲಿ ಸ್ವಯಂಸೇವಕರಾಗಿ ದುಡಿಯುವ ಅವಕಾಶ ಗಿರೀಶರ ಗೆಳೆಯರ ಬಳಗಕ್ಕೆ ದೊರೆತಿತ್ತು. ಭಾರತದ ಹೆಸರಾಂತ ಇಂಗ್ಲಿಷ್ ಪ್ರಾಧ್ಯಾಪಕರನ್ನು ಸಮೀಪದಿಂದ ಕೇಳುವ, ನೋಡುವ ಅವಕಾಶ ಕೂಡ ಲಭಿಸಿತ್ತು. ಆಗ ಗಿರೀಶ, ಕಿಟ್ಟಿ, ಅರೋರಾ ಇತ್ಯಾದಿ ಮಿತ್ರರು ಜಾರ್ಜ ಬರ್ನಾಡ್ ಶಾನ ದಿ ಮ್ಯಾನ್ ಆಫ್ ಡೆಸ್ಟಿನಿ ನಾಟಕವನ್ನು ಪ್ರಯೋಗಿಸಿದ ಅನುಭವದ ಬಗ್ಗೆ ಬರೆಯುತ್ತಾರೆ. ಸ್ಟಾಫ್-ರೂಮಿನಲ್ಲಿ ಖಾಸಗಿಯಾಗಿ, ಪ್ರಸಿದ್ಧ ಆಂಗ್ಲ ಪ್ರಾಧ್ಯಾಪಕರ ಸನ್ನಿಧಿಯಲಿ, ತಮ್ಮ ಆಂಗ್ಲ ಕವಿತೆಗಳ ವಾಚನವನ್ನು ಪ್ರೊ ಎ.ಕೆ ರಾಮಾನುಜನ್ ಮಾಡಿದರು.

ಆಗ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ರಾಮಾನುಜನ್ ಅವರನ್ನು ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ, ನಾಟಕ ಸ್ಪರ್ಧೆಯಲ್ಲಿ, ವಿದ್ಯಾರ್ಥಿಗಳ ಇನ್‌ಚಾರ್ಜ್ ಆಗಿ ಬಂದಾಗ ಕಂಡಿದ್ದರು, ಮತ್ತು ಜಿ.ಬಿ.ಜೋಶಿಯವರ ಪ್ರಸಿದ್ಧವಾದ ಸಾಹಿತ್ಯ ಚರ್ಚೆಗೆ ಮೀಸಲಾದ ಅಟ್ಟದಲ್ಲಿಯೂ ಗಿರೀಶ ಕಂಡಿದ್ದರು. ಕುಳ್ಳ ಮೈಕಟ್ಟು, ಕೊಂಚ ಉಬ್ಬು ಹಲ್ಲು ಎದ್ದಂತಿದ್ದ ಮೂಗು ಇವುಗಳಿಂದ ರಾಮಾನುಜನ್ ಅವರಲ್ಲಿ ನ್ಯೂನತಾ ಭಾವ ಇರಬೇಕೆಂದು ಗಿರೀಶ ಭಾವಿಸಿದ್ದರು. ಅದರೆ ವಸ್ತುಸ್ಥಿತಿ ಹಾಗಿರಲಿಲ್ಲ. ಅವರ ತೀವ್ರ ವಿನೋದ ಬುದ್ಧಿ, ಯಾವುದೇ ಪರಿಸ್ಥಿತಿಯಲ್ಲಿ ಯಾರೋ ಸಹಜವಾಗಿ ಆಡಿದ ಮಾತಿನಲ್ಲಿ ಸುಸಂಬದ್ಧತೆ ಗುರುತಿಸುವ ತೀಕ್ಷ್ಣ್ಣತೆ, ದಂಭ-ಆಡಂಬರಗಳನ್ನು ನವಿರಾಗಿ ಕಳಚಿ ಇಡುವ ಸುಕುಮಾರವಾದರೂ ಹರಿತವಾದ ವ್ಯಂಗ್ಯ, ಅದೇ ಹೊತ್ತಿಗೆ ಕಾವ್ಯದ ಬಗ್ಗೆ, ಸಾಹಿತ್ಯದ ಬಗ್ಗೆ, ವೈಯಕ್ತಿಕ ಸಂಬಂಧಗಳ ಬಗ್ಗೆ ಇದ್ದ ನಿತಾಂತ ಆಸ್ಥೆ ಇವುಗಳನ್ನು ಗುರುತಿಸುತ್ತ ಹೋದಂತೆ ರಾಮಾನುಜನ್ ಗಿರೀಶರ ಎಣಿಕೆಯಲ್ಲಿ ಬೆಳೆಯುತ್ತ ಹೋದರು.

ಅವರ ಎರಡು ಗುಣ ಇವರನ್ನು ವಿಶೇಷವಾಗಿ ಆಕರ್ಷಿಸಿದವು. ಮೊದಲನೆಯದಾಗಿ, ಸಮಕಾಲೀನ ಪಾಶ್ಚಾತ್ಯ ಲೇಖಕರ ಬಗ್ಗೆ ಮಾತನಾಡುವಾಗ ಉಳಿದ ಇಂಗ್ಲಿಷ್ ಪ್ರಾಧ್ಯಾಪಕರಲ್ಲಿ ಕಾಣುವ ದೀನ-ನಾನು-ತನ ಅವರಲ್ಲಿ ಕಾಣಿಸುತ್ತಿರಲಿಲ್ಲ. ಪಾಶ್ಚಾತ್ಯ ಲೇಖಕರನ್ನು ಹೊಗಳುವಾಗಲೇ ಅವರ ದೋಷಗಳನ್ನು ಎತ್ತಿ ಪರೀಕ್ಷಿಸುವ ವಿರಲ ವಸ್ತುನಿಷ್ಠತೆ ಅವರಲ್ಲಿತ್ತು. ಎರಡನೆಯದಾಗಿ, ಅವರ ಆಸಕ್ತಿ-ಕ್ಷೇತ್ರ ಅಸಾಮಾನ್ಯವಾಗಿತ್ತು. ಗಾದೆಗಳು, ಒಗಟುಗಳು, ಆಟದಲ್ಲಿ ಬಳಕೆಯಾಗುವ ಹಾಡುಗಳು, ಅವರೇ ಹಳ್ಳಿಗಳಲ್ಲಿ ಮುದುಕಿಯರನ್ನು ಭೆಟ್ಟಿಯಾಗಿ ಸಂಗ್ರಹಿಸಿದ ಅಜ್ಜೀಕತೆಗಳು. ಎಲಿಯಟ್-ಪೌಂಡ್‌ರ ಸಂದರ್ಭದಲ್ಲಿ ಅರ್ಥಹೀನವೆನಿಸುವಂಥ ಸಾಂಸ್ಕೃತಿಕ ಪ್ರಕ್ರಿಯೆಗಳ ಬಗ್ಗೆ ಅವರಿಗೆ ಆಳವಾದ ಆಸ್ಥೆಯಿತ್ತು. (ಅವರು ಅಮೇರಿಕೆಗೆ ತೆರಳಿದ ನಂತರ ಅವರು ಏರಿದ ಶಿಖರಗಳನ್ನು ಯಾರೂ ಮೊದಲೇ ಅಪೇಕ್ಷಿಸಿರಲಿಲ್ಲ).

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು girish karnad ಸುದ್ದಿಗಳುView All

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 5.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more