ಜೀವನದ ದಿಕ್ಕನ್ನೇ ಬದಲಿಸಿದ ಕೀರ್ತಿನಾಥ
ಅವರನ್ನು ನನ್ನ ಸೈಕಲ್ ಮೇಲೆ, ಹಿಂದೆ ಕೂಡಿಸಿಕೊಂಡು, ಡಬಲ್‌ರೈಡ್ ಮಾಡಿದ ದಿನಗಳು ನೆನಪಿಗೆ ಬರುತ್ತವೆ. ಗಿರೀಶ ಆಗ ಬಿ.ಎ.ಕ್ಲಾಸಿನಲ್ಲಿದ್ದರು. ಅವರ ಮಿತ್ರ ಕಿಟ್ಟಿ (ಕೃಷ್ಣ ಬಸರೂರ್) ಇಂಗ್ಲಿಷ್ ಎಂ.ಎ.ಕ್ಲಾಸಿಗೆ ಸೇರಿದ್ದರು, ಕೀರ್ತಿಯವರ ಸಹಪಾಠಿಯಾಗಿದ್ದರು. ಕೀರ್ತಿಯವರ ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯ ಸಾಕಷ್ಟು ಓದಿಕೊಂಡಿದ್ದರು. ಅವರು ಜಿ.ಬಿ.ಜೋಶಿಯವರ ಮನೆಯಲ್ಲಿ ಇರುತ್ತಿದ್ದರು. ನಡೆದು ಬಂದ ದಾರಿಯ ಸಂಪುಟಗಳಿಗೆ ವಿಮರ್ಶಾತ್ಮಕ ಪೀಠಿಕೆಗಳನ್ನು ಬರೆಯುತ್ತಿದ್ದರು. ಮನೋಹರ ಗ್ರಂಥ ಮಾಲೆಯ ಸಾಹಿತ್ಯ ಸಲಹೆಗಾರರಾಗಿದ್ದರು.
ಮನೋಹರ ಗ್ರಂಥಮಾಲೆಯ ಅಟ್ಟ ಸಾಹಿತ್ಯ ರಸಿಕರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಗಿರೀಶರು ಒಮ್ಮೆ ಅಲ್ಲಿಗೆ ಹೋದಾಗ ವಿ.ಜಿ.ಭಟ್ಟರು ಮುಖ್ಯ ಅತಿಥಿಗಳಾಗಿದ್ದರು. ಹಿರೇಮಲ್ಲೂರ ಈಶ್ವರನ್ ಅವರು ಬಂದಿದ್ದರು. ಭಟ್ಟರ ಅಪೂರ್ಣ ಕಾದಂಬರಿ ಬೇಗ ಮುಗಿಸಲು ಜಿ.ಬಿ.ಜೋಶಿಯವರು ಹೇಳಿದಾಗ, ಅದನ್ನು ತಾವು ಮಾಲೆಯಿಂದ ಪ್ರಕಟಿಸುವ ಆಸಕ್ತಿ ತೋರಿಸಿದಾಗ, ಗಿರೀಶರಿಗೂ ಮನದೊಳಗೆ ಹೀಗೆ ತಮ್ಮ ಕೃತಿ ಪ್ರಕಟಿಸುವುದಾಗಿ ಪ್ರಕಾಶಕರು ಆಮಂತ್ರಿಸಬಹುದೇ ಎಂದುಕೊಂಡರು. ಇವರು ಬರೆದ ಮೊದಲ ನಾಟಕ ಯಯಾತಿಯನ್ನು ಮೆಚ್ಚಿದ ಕೀರ್ತಿನಾಥರು ಪ್ರಕಟಿಸಲು ಜಿ.ಬಿ.ಜೋಶಿಯವರಿಗೆ ಶಿಫಾರಸುಮಾಡಿದರು. ಅವರನ್ನು ನಾಟಕಕಾರನ್ನಾಗಿ ರೂಪಿಸಿದ ಶ್ರೇಯಸ್ಸು ಕೀರ್ತಿನಾಥ ಕುರ್ತಕೋಟಿಯವರದು ಎಂಬುದನ್ನು ಗಿರೀಶ ನೆನೆಯುತ್ತಾರೆ.
ಗಿರೀಶರ ತಾಯಿಗೆ ಸಂಸ್ಕೃತದ ಬಗ್ಗೆ ಪ್ರೀತಿ ಇತ್ತು. ಅವರು ಸುಭಾಷಿತ ಉದ್ಧರಿಸುತ್ತಿದ್ದರು. ಕಾಲೇಜಿನಲ್ಲಿ ಮೊದಲನೆಯ ವರ್ಷ ಪಠ್ಯವಾಗಿದ್ದ ಕಾಳಿದಾಸನ ರಘುವಂಶ ಕಾವ್ಯದ ಮಾಧುರ್ಯ, ಪದಲಾಲಿತ್ಯ ಗಿರೀಶರನ್ನು ಮರುಳುಗೊಳಿಸಿದ್ದವು. ಮೊದಲಿನ ಎರಡು ಸರ್ಗ ಇವರಿಗೆ ಕಂಠಪಾಠವಾಗಿದ್ದವು. ಮುಂದೆ ಹರ್ಷನ ನಾಗಾನಂದ ಹಾಗೂ ರತ್ನಾವಲಿ ಅಭ್ಯಾಸ ಮಾಡಬೇಕಾಯಿತು. ಈ ಕಳಪೆ ನಾಟಕಗಳಿಂದಾಗಿ ಇವರಿಗೆ ಸಂಸ್ಕೃತ ನಾಟಕಗಳಲ್ಲಿ ಆಸಕ್ತಿ ಕಡಿಮೆಯಾಯಿತು.
ಮುಂದೆ ಇವರು ಮದ್ರಾಸಿನಲ್ಲಿದ್ದಾಗ ಮನ್ವಂತರದಲ್ಲಿ (ಮನೋಹರ ಗ್ರಂಥಮಾಲೆಯ ಅ-ನಿಯತಕಾಲಿಕ ಪತ್ರಿಕೆ) ಕೀರ್ತಿಯವರು ಸಂಸ್ಕೃತ ನಾಟಕಗಳ ಬಗ್ಗೆ ಬರೆದ ಲೇಖನ ಓದಿ ಪ್ರಭಾವಿತರಾಗಿ ಕಾಳಿದಾಸನ ಶಾಕುಂತಲ, ಭವಭೂತಿಯ ಉತ್ತರರಾಮ ಚರಿತ, ಶೂದ್ರಕನ ಮೃಚ್ಛಕಟಿಕ ಮೊದಲಾದ ಸಂಸ್ಕೃತ ನಾಟಕಗಳನ್ನು ಅಭ್ಯಾಸ ಮಾಡಿದರು. ಮುಂದೆ ಫುಲ್ ಬ್ರೈಟ್ ಸ್ಕಾಲರ‍್ಶಿಪ್ ಪಡೆದು (ರಾಮಾನುಜನ್ ನೆಲೆಸಿದ್ದ) ಶಿಕಾಗೋಕ್ಕೆ ಹೋದಾಗ (1987-88) ಅಲ್ಲಿ ಸಂಸ್ಕೃತ ನಾಟಕಗಳ ಮೇಲೆ ಒಂದು ಭಾಷಣಮಾಲೆಯನ್ನೇ ಪ್ರಸ್ತುತಪಡಿಸಿದ್ದನ್ನು ನೆನೆಯುತ್ತಾರೆ. ಧಾರವಾಡದಲ್ಲಿ ಸಂಸ್ಕೃತವನ್ನು ದುರ್ಲಕ್ಷ್ಯ ಮಾಡಿದ್ದರಿಂದ ಕರ್ನಾಟಕ ಕಾಲೇಜಿನಲ್ಲಿದ್ದ ಸಂಸ್ಕೃತ ಘನವಿದ್ವಾಂಸ ಪ್ರೊ| ಕೆ.ಟಿ.ಪಾಂಡುರಂಗಿಯವರ ಸಂಪರ್ಕ ಬರಲಿಲ್ಲ ಎಂಬುದರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಮುಂದೆ ಬೆಂಗಳೂರಲ್ಲಿ ಅವರ ಮಾರ್ಗದರ್ಶನ ಪಡೆದುದನ್ನೂ ನೆನೆಯುತ್ತಾರೆ.













Click it and Unblock the Notifications