• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವರ್ಣ ಕಮಲ ಗೆದ್ದ 'ಸಂಸ್ಕಾರ' ಚಿತ್ರದ ಮೇಕಿಂಗ್

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

ಗಿರೀಶರನ್ನು ನಾಟಕರಂಗದಿಂದ ಚಿತ್ರರಂಗದೆಡೆಗೆ ಕರೆತಂದದ್ದು ಸಂಸ್ಕಾರ ಚಿತ್ರ. ಈ ಚಿತ್ರದ ಆಯ್ಕೆ, ಅದರ ನಿರ್ಮಾಣ, ಪಾತ್ರಗಳ ಶೋಧನೆ-ಆಯ್ಕೆ, ಶೃಂಗೇರಿಯ ಬಳಿ ಮುಕ್ತವಾದ ವಾತಾವರಣದಲ್ಲಿ ಹೊರಾಂಗಣದಲ್ಲೇ ಚಿತ್ರಿಸಿದ್ದು, ಇದನ್ನು ಬ್ಯಾನ್ ಮಾಡಲು ಹೊರಟ ಸರಕಾರವೇ ಬಹುಮಾನ ನೀಡಿದ್ದು, ತಾವು ಅನಿವಾರ್ಯವಾಗಿ ದಿಗ್ದರ್ಶಿಸುವುದನ್ನು ಬಿಟ್ಟು ಮುಖ್ಯಪಾತ್ರ ವಹಿಸಿದ್ದು, ಆಸ್ಟ್ರೇಲಿಯನ್ ಕ್ಯಾಮರಾಮನ್ ಅನಾಯಾಸವಾಗಿ ದೊರೆತದ್ದು ಮೊದಲಾದ ಎಲ್ಲ ವಿವರಗಳನ್ನು ದೀರ್ಘವಾದ ಅಧ್ಯಾಯದಲ್ಲಿ ಗಿರೀಶರು ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಇದನ್ನು ಆನಂದಿಸಲು ಮೂಲವನ್ನೇ ಓದುವುದು ವಿಹಿತ. ಅತ್ಯಂತ ಸಂಕ್ಷಿಪ್ತವಾಗಿ ಈ ಸಂಸ್ಕಾರ ಚಿತ್ರ ಎಲ್ಲರ ಗಮನ ಸೆಳೆದುದರ ಬಗ್ಗೆ ಬರೆಯುವೆ.

ಪಟ್ಟಾಭಿಯವರು ಶಾಂತಿನಿಕೇತನದ ವಿದ್ಯಾರ್ಥಿಯಾಗಿದ್ದರು. ಸ್ನೇಹಾ ಮೂಲತಃ ಬಂಗಾಲಿ ಮಹಿಳೆ. ಒಳ್ಳೆಯ ಕಲಾವಿದೆ. ಅವರಿಬ್ಬರದು ಪ್ರೇಮವಿವಾಹ. ಇವರ ಮದುವೆಗೆ ಮನೆಯ ಹಿರಿಯರ ಒಪ್ಪಿಗೆ ಇರಲಿಲ್ಲ. ಪಟ್ಟಾಭಿ ಭಾವುಕ ಮನುಷ್ಯ. ತೆಲುಗು ನವ್ಯಕಾವ್ಯ ಪ್ರವರ್ತಕರಾಗಿದ್ದರು. ಅವರು ತೆಲುಗು ಚಿತ್ರಗಳ ನಿರ್ಮಾಣದಲ್ಲಿ ಹಣ ತೊಡಗಿಸಿದ್ದರು. ವಿಶೇಷ ಯಶಸ್ಸು ಪಡೆದಿರಲಿಲ್ಲ. ಮೈಮುರಿದು ದುಡಿದು ಗೊತ್ತಿದ್ದವರಲ್ಲ. ಆದರೆ ಅವರಿಗೆ ಹೆಂಡತಿಯ ಮೇಲಿನ ಪ್ರೇಮ ಅಗಾಧವಾಗಿತ್ತು. ಅವರ ಪ್ರೀತಿ ಅವರ ಕಣ್ಣೊಳಗೆ ಉಕ್ಕಿ ಹರಿಯುತ್ತಿತ್ತು. ಇತರರೆಲ್ಲ ಇವರನ್ನು ಕಂಡು ಕೌತುಕದಿಂದ ಆಡಿಕೊಳ್ಳುತ್ತಿದ್ದರಂತೆ, ಹೆಂಡತಿ ಎಂದರೆ ಎಂಥ ಅನುರಕ್ತಿ ಎಂದು. ಸ್ನೇಹಾಗೆ ಚಲನಚಿತ್ರ ನಟಿಯಾಗುವ ಹಂಬಲ ಬಹಳ. ಅವಳು ಮದ್ರಾಸಿನ ಜೈಮಿನಿ ಸ್ಟುಡಿಯೋಗೆ ಹೋಗಿ ಅಯಶಸ್ವಿಯಾಗಿ ಹಿಂದಿರುಗಿ ಬಂದಿದ್ದಳು. ಪಟ್ಟಾಭಿ ಹೇಗಾದರೂ ಮಾಡಿ ಹೆಂಡತಿಯನ್ನು ತಾರೆ ಮಾಡಬೇಕೆಂದಿದ್ದರು. ಅದನ್ನು ಪೂರ್ಣಗೊಳಿಸಲು ಸಂಸ್ಕಾರ ಚಿತ್ರದ ಯೋಜನೆಗೆ ಸಹಯೋಗ ನೀಡಿದ್ದರು.

ಗಿರೀಶ ಹಾಗೂ ವಾಸುದೇವ ಇವರಿಬ್ಬರು ಸಂಸ್ಕಾರ ಒಂದು ಶ್ರೇಷ್ಠ ಮಟ್ಟದ ಚಿತ್ರವಾಗಬೇಕೆಂಬ ಕನಸು ಕಂಡವರು. ಯಾರು ಯಾವ ಪಾತ್ರ ಹಾಕಬೇಕೆಂದು ತಮ್ಮಲ್ಲೇ ಚರ್ಚಿಸುತ್ತಿದ್ದರು. ಕನ್ನಡದ ಅಭಿನೇತ್ರಿಯರಲ್ಲಿ ಚಂದ್ರಿಯ ಪಾತ್ರ ತಾರೆ ಕಲ್ಪನಾ ಒಬ್ಬಳೇ ಮಾಡಲು ಅರ್ಹತೆಯುಳ್ಳವಳು, ಅವಳು ಮಣ್ಣಿನ ವಾಸನೆಯುಳ್ಳ ನಟಿ ಎಂದು ನಿರ್ಧರಿಸಿದ್ದರು. ಮುಂದೆ ಕಾರಣಾಂತರಗಳಿಂದ ಆ ವಿಚಾರ ಕೈಬಿಟ್ಟರು. ಚಿತ್ರವನ್ನು ನಿರ್ಮಿಸುವುದು ನಿಶ್ಚಿತವಾದಾಗ ಪ್ರಧಾನ ಸ್ತ್ರೀಪಾತ್ರ ಸ್ನೇಹಾಗೆ ಮೀಸಲಾಯಿತು.

ಕಣ್ಣು ಕುಕ್ಕಿದ ಕಾದಂಬರಿ : ಆಗಿನ್ನೂ ಸಂಸ್ಕಾರ ಇಂಗ್ಲಿಷಿಗೆ ಅನುವಾದಗೊಂಡಿರಲಿಲ್ಲ. (ಮುಂದೆ ರಾಮಾನುಜನ್ ಅನುವಾದಿಸಿದರು). ಮದ್ರಾಸ್ ಪ್ಲೇಯರ್ಸ್ ಗುಂಪು ಪಟ್ಟಾಭಿಯವರ ಮನೆಯಲ್ಲಿ ನೆರೆಯುತ್ತಿತ್ತು. ಗಿರೀಶ ಕನ್ನಡ ಪುಸ್ತಕ ಕಣ್ಣೆದುರಿಗೆ ಹಿಡಿದು ಬಾಯಿಯಿಂದ ಇಂಗ್ಲಿಷಿನಲ್ಲಿ ಅನುವಾದಿಸಿ ಹೇಳುತ್ತಿದ್ದರು. ಈ ಕಲೆಯಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಮೊದಲು ಇದರ ಪ್ರಯೋಗ ಯಾಯಾತಿ ನಾಟಕ ಸತ್ಯದೇವ ದುಬೆಯವರಿಗೆ ಓದಿ ತೋರಿಸಿದ್ದರು. ಕಾದಂಬರಿಯ ಪ್ರತಿಭೆ ಎಲ್ಲರ ಕಣ್ಣು ಕುಕ್ಕಿಸಿತ್ತು. ರಾಮ ಮನೋಹರ ಚಿತ್ರ ಎಂಬ ಬ್ಯಾನರನಲ್ಲಿ ಪಟ್ಟಾಭಿ ಚಿತ್ರ ನಿರ್ಮಿಸಲು ಸಿದ್ಧರಾದರು. (ಅವರು ರಾಮ ಮನೋಹರ ಲೋಹಿಯಾರ ಶಿಷ್ಯರಾಗಿದ್ದರು). ಅವರೇ ನಿರ್ದೇಶಕರಾಗುವರೆಂದಾಗ ಗಿರೀಶ ವಾಸುದೇವ ಹುಬ್ಬೇರಿಸಿದರು. ಅವರಿಗೆ ಆ ಅನುಭವ, ಯೋಗ್ಯತೆ ಇರಲಿಲ್ಲ. ವಾಸುದೇವ ಅವರನ್ನು ಕಲಾ ನಿರ್ದೇಶಕರಾಗಲು ಕೇಳಿದಾಗ ಅವರು ಒಪ್ಪಿದರು. ಗಿರೀಶರಿಗೆ ಸಮಾಧಾನವಾಯ್ತು. ವಾಸುದೇವ ಸಂಸ್ಕಾರವನ್ನು ತಮ್ಮ ಹೃದಯಕ್ಕೆ ಅಂಟಿಸಿಕೊಂಡಿದ್ದರು.

ಪಟ್ಟಾಭಿ, ಸುರೇಂದ್ರನಾಥ (ಹಂಚಿಕೆದಾರ), ವೈಎನ್ಕೆ, ವಾಸುದೇವ, ಮದ್ರಾಸಿನ ಒಬ್ಬ ಛಾಯಾಗ್ರಾಹಕ ಗಿರೀಶರೊಡನೆ ಶೃಂಗೇರಿಯ ಸುತ್ತುಮುತ್ತಲಿನ ಅಗ್ರಹಾರ ನೋಡಿಬಂದರು. ಛಾಯಾಗ್ರಹಕ ಮಾತ್ರ ಹೊರಾಂಗಣದಲ್ಲಿ ಚಿತ್ರೀಕರಣ ಬೇಡ, ಸ್ಟೂಡಿಯೋದಲ್ಲಿ ಸೆಟ್ ಹಾಕಿಸಿ ಮಾಡೋಣ ಎಂದನು. ಇವರಿಗೆಲ್ಲ ಸತ್ಯಜಿತ ರೇ ಅವರ ಪಥೇರ್ ಪಾಂಚಾಲಿ ಚಿತ್ರದ ಪ್ರಭಾವ ಬೀರಿತ್ತು. ಪೂರ್ತಿ ಹೊರಾಂಗಣ ಚಿತ್ರೀಕರಣವಾದರೆ ಅದು ಕಲಾತ್ಮಕ ಚಿತ್ರವಾಗಬಲ್ಲದು ಎಂಬುದು ಅಂದಿನ ನಂಬಿಗೆಯಾಗಿತ್ತು. (ಮುಂದೆ ಹಲವು ವರ್ಷಗಳ ಮೇಲೆ ಇವರು ತಿಳಿದಂತೆ ಪಥೇರ್ ಪಾಂಚಾಲಿ ಹೊರಾಂಗಣ ಚಿತ್ರವಲ್ಲ, ಸೆಟ್ ಮೇಲೆಯೇ ಚಿತ್ರಿಸಿದ್ದು ಎಂಬ ಸತ್ಯ ತಿಳಿಯಿತಂತೆ.) ಇಷ್ಟರಲ್ಲಿ ಟಾಮ್ ಕವನ್‌ ಎಂಬ ಆಸ್ಟ್ರೇಲಿಯನ್ ಛಾಯಾಗ್ರಹಕ ಸತ್ಯಜಿತ ರೇ ಅವರನ್ನು ಕಾಣಲು ಭಾರತಕ್ಕೆ ಬಂದವ ಮದ್ರಾಸಿಗೆ ಬಂದಿದ್ದ, ಚೋಳಮಂಡಲ ಕಲಾಗ್ರಾಮದಲ್ಲಿ ತಂಗಿದ್ದ, ಈ ಸುದ್ದಿ ಇವರಿಗೆ ತಿಳಿಯಿತು. ಅವನು ಇವರ ಯೋಜನೆಗೆ ಸಹಕರಿಸಲು ಸಿದ್ಧನಾದ. ತನ್ನ ಕುಶಲತೆಗೆ ಪ್ರಮಾಣವೆಂಬಂತೆ ಆಸ್ಟ್ರೇಲಿಯನ್ ರಾಯಭಾರಿ ಕಚೇರಿಯಿಂದ ತನ್ನ ಸಾಕ್ಷ್ಯಚಿತ್ರಗಳನ್ನು ತರಿಸಿ ತೋರಿಸಿದ. ಇವರೆಲ್ಲ ಪ್ರಭಾವಿತರಾದರು.

ನಟನೆಯ ಹೊಣೆ ಗಿರೀಶ ಮೇಲೆ : ವಿತರಕ ಸುರೇಂದ್ರನಾಥ ಪಟ್ಟಾಭಿಯವರ ಭಕ್ತನಾಗಿದ್ದ. ಸಂಸ್ಕಾರಕ್ಕೆ ದುಡ್ಡು ಹೊಂದಿಸಿದ. ರಾಷ್ಟ್ರೀಯ ನಾಟ್ಯಶಾಲೆಯಿಂದ ತರಬೇತಿ ಪಡೆದುಬಂದ ಎಸ್.ಗೋಪಾಲ ಎಂಬವ ಗಿರೀಶರ ಮಿತ್ರನಾಗಿದ್ದ. ಅವನು ತಾನು ಓದಿದ ನಾಟಕ-ಸಿನೆಮಾಗಳೆರಡರ ಬಗ್ಗೆ ಇದ್ದ ತಾಂತ್ರಿಕ ಪುಸ್ತಕಗಳನ್ನೆಲ್ಲ ಓದಲು ಗಿರೀಶರಿಗೆ ಕೊಟ್ಟ. ಅದರಿಂದಾಗಿ ಸಂಸ್ಕಾರದ ಚಿತ್ರಕತೆ ಬರೆಯಲು ಗಿರೀಶರಿಗೆ ಬಹಳ ಅನುಕೂಲವಾಯ್ತು. ಗಿರೀಶರಿಗೆ ನಿರ್ದೇಶನ ಮಾಡುವುದರಲ್ಲಿ ಆಸಕ್ತಿ ಇತ್ತೇ ಹೊರತು ನಟನೆಯಲ್ಲಲ್ಲ. ಆದರೆ ಅನಿವಾರ್ಯವಾಗಿ ಪ್ರಮುಖ ಪಾತ್ರ (ಪ್ರಾಣೇಶಾಚಾರ್ಯ) ವಹಿಸುವದು ಗಿರೀಶರ ಪಾಲಿಗೆ ಬಂತು. ಮನಸ್ಸಿಲ್ಲದಿದ್ದರೂ ಮುಖ್ಯವಾದ ಪ್ರಣೇಶಾಚಾರ್ಯರ ಪಾತ್ರ ವಹಿಸಲು ಒಪ್ಪಿಕೊಂಡರು. ಸ್ನೇಹಾಗೆ ಆಕ್ಸಫರ್ಡನಲ್ಲಿ ವ್ಯಾಸಂಗ ಮಾಡಿದವನೊಡನೆ ನಟಿಸುವದು ಹೆಚ್ಚಿನ ತೃಪ್ತಿನೀಡುವ ಸಂಗತಿಯಾಗಿತ್ತು. ಇದೇ ವೇಳೆಗೆ ಕಾನಕಾನಹಳ್ಳಿಯ ಗೋಪಿಯ ಪರಿಚಯವಾಯ್ತು. ಗಿರೀಶರಿಗೆ ಮಾಧ್ವ ಸಂಪ್ರದಾಯದ ಪರಿಚಯವಿರಲಿಲ್ಲ. ಗೋಪಿ ಎಲ್ಲವನ್ನು ತಿಳಿಸಿ ಹೇಳಿದ, ಬಾಳೆಯ ಹಣ್ಣನ್ನು ಸಿಪ್ಪೆ ಸುಲಿದು ತಿನ್ನುವ ಮಾಧ್ವ ವಿಧಾನವನ್ನು ಗೋಪಿ ಕಲಿಸಿದ ಎಂದು ಬರೆಯುತ್ತಾರೆ. ಗೋಪಿ ಮತ್ತು ವಾಸುದೇವ ಹಳೆಯ ಅಂಗಡಿಗೆ ಹೋಗಿ ಪಂಚೆ, ಧೋತರ, ಸೀರೆ, ಕುಪ್ಪುಸಕ್ಕೆ ಅರಿವೆ ತಂದರು.

ವೈಎನ್ಕೆಯವರು ಹವ್ಯಾಸಿ ನಟರ ಗುಂಪನ್ನು ಪರಿಚಯಿಸಿದರು. ದಾಶರಥಿ ದೀಕ್ಷಿತ, ಬಿ.ಎಸ್.ರಾಮರಾವ, ಸಿ.ಆರ್.ಸಿಂಹ, ಲೋಕನಾಥ, ಯೂ.ಕೆ.ಜಯದೇವ, ಜಿ.ವಿ.ಶಿವಾನಂದರು ಗುಬ್ಬಿ ಕಂಪನಿಯ ನಿವೃತ್ತ ನಟರನ್ನು ಕರೆತಂದರು. ಸ್ವಖುಶಿಯಿಂದ ಇಬ್ಬರು ಅಭಿನೇತ್ರಿಯರು ಮುಂದೆ ಬಂದರು; ವಾಸುದೇವನ ಅಕ್ಕ ಗೋದಾ ರಾಜಕುಮಾರ್, ಮೇಕಪ್ ನಾಣಿಯ ಶ್ರೀಮತಿ ಭಾರ್ಗವಿ ನಾರಾಯಣ. ಮದ್ರಾಸ್ ಪ್ಲೇಯರ್ಸ್ ಸದಸ್ಯರಾದ ಲಕ್ಷ್ಮೀ ಕೃಷ್ಣಮೂರ್ತಿ, ವಿಶಾಲಂ ಏಕಾಂಬರಮ್, ರಾಣಿ ಬುರ್ರಾ, ಯಮುನಾ ಪ್ರಭು, ಅಮ್ಮೂ ಮ್ಯಾಥ್ಯೂಸ್ ಇವರುಗಳು ಮುಂದೆ ಬಂದರು. ತಲೆಬೋಳಿಸಿರುವ ಲಕ್ಷ್ಮೀದೇವಮ್ಮನ ಪಾತ್ರ ಯಾರು ಮಾಡುವುದು ಎಂದಾಗ ಲಕ್ಷ್ಮೀ ಕೃಷ್ಣಮೂರ್ತಿ ಮುಂದೆ ಬಂದರು. ಯಮುನಾ ಪ್ರಭು ನಟಿಸಿದ ಪದ್ಮಾವತಿ, ಮಾತಿಲ್ಲದೆ ಕಣ್ಣಿನಿಂದಲೇ ಪ್ರಾಣೇಶಾಚಾರ್ಯರನ್ನು ಒಳಗೆ ಆಮಂತ್ರಿಸಿದ ರೀತಿ ಕನ್ನಡ ಚಿತ್ರಸೃಷ್ಟಿಯನ್ನು ದಂಗುಗೊಳಿಸಿತು ಎಂದು ಬರೆಯುತ್ತಾರೆ.

ವಿವಾದದ ಸುಳಿಯಲ್ಲಿ ಸಂಸ್ಕಾರ : ಸಂಸ್ಕಾರ ಕಾದಂಬರಿಯ ಸಂಕ್ಷಿಪ್ತರೂಪ ಕನ್ನಡ ಡೈಜೆಸ್ಟ್ ಕಸ್ತೂರಿಯಲ್ಲಿ ಪ್ರಕಟವಾದಾಗ, ಈ ಕಾದಂಬರಿ ಕರ್ನಾಟಕದಲ್ಲಿ ಮನೆಮಾತಾಯಿತು. ವಾಚಕರೊಬ್ಬರು ಸಂಪಾದಕರಿಗೆ ಪತ್ರ ಬರೆದರು. ಅನಾಥ ಶವವೊಂದು ಬಿದ್ದುಕೊಂಡಿದ್ದರೆ, ಅದಕ್ಕೆ ಮಾನವಧರ್ಮದ ಹೆಸರಿನಲ್ಲಿ ಸಂಸ್ಕಾರ ಮಾಡಬೇಕು, ಅದು ಯಾರದೆಂದು ಗೊತ್ತಿಲ್ಲದಿದ್ದರೂ ಆ ಪಾಪ ಮಾಡಿದವರಿಗೆ ತಟ್ಟಲಾರದು ಎಂಬ ಶಾಸ್ತ್ರವಿದೆ. ಆದ್ದರಿಂದ ಸಂಸ್ಕಾರದ ಕೇಂದ್ರ ಸಮಸ್ಯೆ ಮರಳಿನ ಮನೆಯಾಗಿದೆ ಎಂದು ಮೂಲ ಸಮಸ್ಯೆಯನ್ನೇ ಗಾಳಿಗೆ ಊದಿಬಿಟ್ಟರು. ಅದನ್ನು ದುರ್ಲಕ್ಷಿಸಿ ಮುಂದುವರಿಯಬೇಕಾಯ್ತು. ಅನೇಕ ಅಗ್ರಹಾರಗಳನ್ನು ಸುತ್ತುಹಾಕಿ ವೈಕುಂಠಪುರಕ್ಕೆ ಬಂದಾಗ ಅದು ಬಹಳ ಯೋಗ್ಯವಾಗಿತ್ತು. ಸಂಸ್ಕಾರ ಚಿತ್ರಕ್ಕಾಗಿಯೇ ಹೇಳಿ ಮಾಡಿಸಿದಂತೆ ಇತ್ತು.

ಕಸ್ತೂರಿ ಲೇಖನ ಓದಿ ಇದು ಸನಾತನ ಸಂಸ್ಕೃತಿಯನ್ನು ಹೀಗಳೆಯುವ ಕೃತಿ ಎಂದು ಗಲಾಟೆ ಎದ್ದಿತ್ತು. ವೈಕುಂಠಪುರದ ನಿವಾಸಿಗಳು ಚಿತ್ರ ತಂಡವನ್ನು ಪ್ರೀತಿಯಿಂದ ಸ್ವಾಗತಿಸದಿದ್ದರೆ ಎಂಬ ಆತಂಕ ಮೂಡಿತ್ತು. ಅಗ್ರಹಾರ ಶೃಂಗೇರಿಯ ಮಠಕ್ಕೆ ಸಂಬಂಧಿಸಿದ್ದು, ಇಲ್ಲಿಯ ಕಥೆ ಮಾಧ್ವ ಸಂಪ್ರದಾಯಕ್ಕೆ ಸೇರಿದ್ದು, ಆದ್ದರಿಂದ ಶೃಂಗೇರಿ ಮಠದ ಅನುಮತಿ ಪಡೆದು ಬನ್ನಿ ಎಂದರು. ಬೆಂಗಳೂರು ಶಂಕರ ಮಠದಲ್ಲಿ ಶೃಂಗೇರಿಯ ಸ್ವಾಮಿಗಳು ತಂಗಿದ್ದಾರೆಂದು ತಿಳಿಯಿತು. ಕಥೆಯ ಸಾರಂಶ ಬರೆದು ಸ್ವಾಮಿಗಳಿಗೆ ತೋರಿಸಬೇಕೆಂಬ ಅಭಿಪ್ರಾಯ ಬಂತು. ಕಾದಂಬರಿಯ ಕೊನೆಯಲ್ಲಿ, ನಾರಾಣಪ್ಪನ ಹೆಣವನ್ನು, ಅವನ ಮುಸಲ್ಮಾನ ಮಿತ್ರರು ಇರುಳುಗತ್ತಲೆಯಲ್ಲಿ ಕದ್ದುಕೊಂಡು ಹೋಗಿ ಅದನ್ನು ಸುಟ್ಟುಬಿಡುತ್ತಾರೆ ಎಂಬ ಅಂಶ ಮಠಕ್ಕೆ ಮಾನ್ಯವಾಗಲಿಕ್ಕಿಲ್ಲ ಎಂದು ಪ್ರಾಣೇಶಾಚಾರ್ಯರೇ ಅಗ್ರಹಾರಕ್ಕೆ ಮರಳಿ ಬಂದು ನಾರಾಣಪ್ಪನ ಸಂಸ್ಕಾರ ಮಾಡುತ್ತಾರೆ ಎಂಬ ಬದಲಾವಣೆ ಮಾಡಿ, ಆ ಟಿಪ್ಪಣಿಯನ್ನು ಮಠದ ಪರಿಚಾರಕರಿಗೆ ಕೊಟ್ಟರಂತೆ. ಮುಂದೆ ಚಿತ್ರೀಕರಣಕ್ಕೆ ಯಾವ ಅಭ್ಯಂತರವಿಲ್ಲ ಎಂಬ ಅಭಿಪ್ರಾಯ ಬಂದ ಮೇಲೆ ಚಿತ್ರೀಕರಣ ಮುಂದುವರಿಯತು.

ಅನೇಕ ವಿಘ್ನಗಳನ್ನು ಎದುರಿಸುತ್ತ ಮುಂದುವರಿದರು. ಪ್ರಾಣೇಶಾಚಾರ್ಯರು ಮಾರುತಿಯ ವಿಗ್ರಹದೆದುರು ಕುಳಿತು ಹೂವಿನ ಪ್ರಸಾದಕ್ಕಾಗಿ ಕಾಯುವುದು ಪಟ್ಟಾಭಿಯವರಿಗೆ ಹಾಸ್ಯಾಸ್ಪದವಾಗಿ ಕಂಡಿತು. ಅಲ್ಲಿ ದೇವಿಯ ವಿಗ್ರಹ ಇಟ್ಟರೆ ಹೇಗೆ ಎಂದಾಗ, ಮಾಧ್ವರಿಗೆ ಮಾರುತಿ ಎಂದರೆ ಪ್ರಾಣದೇವರು, ನಮ್ಮಲ್ಲಿ ದೇವಿ ದಲಿತರ ದೇವತೆ ಎಂದು ವಾದಿಸಬೇಕಾದ ಪ್ರಸಂಗದ ಬಗ್ಗೆ ಬರೆಯುತ್ತಾರೆ. ಚಿತ್ರೀಕರಣದ ದಿನಾಂಕಗಳು ನಿಗದಿಯಾದಮೇಲೆ ಗಿರೀಶ ಆರು ವಾರಗಳ ರಜೆ ಹಾಕಿದರು. ಪಟ್ಟಾಭಿ, ವಾಸುದೇವ, ಟಾಮ್ ಅವರೊಡನೆ ಎರಡು ಬಾಗಿಲಿನ ಹೆರಾಲ್ಡ್ ಕಾರಿನಲ್ಲಿ ಪ್ರವಾಸ ಮಾಡಿದ್ದು, ಶೃಂಗೇರಿಗೆ ಹೋದೊಡನೆ ಮಠದ ಅತಿಥಿಗೃಹ ಮಹಿಳೆಯರಿಗೆ ಬಿಟ್ಟು ಊರಲ್ಲಿಯ ಬಾಡಿಗೆ ಮನೆ ಸೇರಿದ್ದು, ಸಹಾಯಕ ದಿಗ್ದರ್ಶಕರಾಗಿ ಸೇರಿದ ಸೀಂಗೀತಂ ಅವರಿಂದ ಉಂಟಾದ ತೊಂದರೆಗಳು, ಚಿತ್ರೀಕರಣದ ವಿವರಗಳು, ನಾರಾಣಪ್ಪನ ಪಾತ್ರವಹಿಸಿದ ಲಂಕೇಶ ಪಟ್ಟಾಭಿಯವರ ಕ್ಯಾಂಪಿಗೆ ಸೇರಿದ್ದು, ಇದರಿಂದ ಗಿರೀಶರಿಗಾದ ತೊಂದರೆಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಪ್ರಶಂಸೆಯ ಸುರಿಮಳೆ : ಚಿತ್ರೀಕರಣ ಆಗುವ ಮುನ್ನ ಗಿರೀಶ ಪ್ರಾಣೇಶಾಚಾರ್ಯ ಆಗುವ ವಿಷಯ ತಿಳಿಸಿದಾಗ ಪ್ರತಿಯೊಬ್ಬರೂ ಅಪನಂಬಿಗೆಯಿಂದಲೇ ಪ್ರತಿಕ್ರಿಯಿಸಿದ್ದರು. ಜಿ.ಬಿ.ಜೋಶಿಯವರಂತು ಆಚಾರಿಯ ಪಾತ್ರ ಇವರಿಗೆ ಹೊಂದುವುದು ಸಾಧ್ಯವಿಲ್ಲ. ಕಾರಣ ಅವರು ಬೆಳೆದ ಪಾಶ್ಚಾತ್ಯ ಠೀವಿ ಎಂದಿದ್ದರು. ಸಂಸ್ಕಾರ ಹೊರಬಂದ ನಂತರ, ಒಂದು ಡಝನ್ ಚಿತ್ರಗಳಲ್ಲಿ, ವಿಶೇಷತಃ ತೆಲಗು ಚಿತ್ರಗಳಲ್ಲಿ ಗಿರೀಶ ಸಾಂಪ್ರದಾಯಿಕ ಬ್ರಾಹ್ಮಣನ ಪಾತ್ರ ಪಡೆದದ್ದರ ಬಗ್ಗೆ ಬರೆಯುತ್ತಾರೆ. ಭಾರತೀಯ ವಾತಾವರಣದ ಗಂಧಗಾಳಿಯಿಲ್ಲದ ಛಾಯಾಗ್ರಹಕ ಟಾಮ್‌ನೆ ಕೆಲಸ ಪ್ರಶಂಸಿಸುತ್ತಾರೆ. ಒಟ್ಟು ಸಂಸ್ಕಾರದ ನಿಜವಾದ ಶಿಲ್ಪಿ ಟಾಮ್ ಕವನ್ ಎಂದು ಬರೆಯುತ್ತಾರೆ. ಅಗ್ರಹಾರದ ಜನರಿಂದ ಇವರಿಗೆ ಸಹಕಾರ ದೊರೆಯಿತು. ತಾವು ಚಿತ್ರೀಕರಣ ಮುಗಿಸಿದ ದಿವಸ ಇಡಿಯ ಅಗ್ರಹಾರದ ಜನರು ಅವರ ವಾಹನಗಳವರೆಗೆ ಬಂದು ಬೀಳ್ಕೊಟ್ಟರಂತೆ. ಸ್ನೇಹಾಳ ಮುಖ ಅಶ್ರುಗಳಿಂದ ತೊಯ್ದಿತ್ತು.

ಚಿತ್ರೀಕರಣ ಮುಗಿದ ಮೇಲೆ ಆಫೀಸ್ ಕೆಲಸಕ್ಕೆ ಆರು ವಾರ ಗಿರೀಶ ಇಂಗ್ಲಂಡಿಗೆ ಹೋಗಿದ್ದರು. ಮರಳಿ ಬಂದಾಗ ಇವರ ಕಿವಿಯ ಮೇಲೆ ಬಿದ್ದ ಸುದ್ದಿ ಎಂದರೆ ಸಂಸ್ಕಾರ ಚಿತ್ರದ ಮೇಲೆ ಸೆನ್ಸಾರಿನವರು ಪ್ರತಿಬಂಧಕ ಹಾಕಿದ್ದಾರೆ ಎಂದು. ಗಿರೀಶ್ ಕೂಡಲೇ ಸೆನ್ಸಾರ ಬೋರ್ಡಿನ ಚೇರಮನ್‌ಗೆ ಫೋನ್ ಮಾಡಿ ಪ್ರಶ್ನಿಸಿದರಂತೆ. ಕಾರಣ ಈ ಚಿತ್ರ ಬ್ರಾಹ್ಮಣ ವಿರೋಧಿಯಾಗಿದೆ ಎಂದು ಬೋರ್ಡ್ ಅಭಿಪ್ರಾಯಪಟ್ಟಿದೆ ಎಂದರಂತೆ. ಇವರೆಂದರು, ಕಾದಂಬರಿ ಬರೆದವರು ಬ್ರಾಹ್ಮಣರು, ಪ್ರಕಟಿಸಿದವರು ಬ್ರಾಹ್ಮಣರು, ನಾನು ಬ್ರಾಹ್ಮಣ, ಕಲಾ ನಿರ್ದೇಶಕ- ಸಹನಿರ್ದೇಶಕ ಬ್ರಾಹ್ಮಣರು, ಭಾಗವಹಿಸಿದವರಲ್ಲಿ ಹೆಚ್ಚಿನವರು ಬ್ರಾಹ್ಮಣರು, ಅಂದಾಗ ಚಿತ್ರ ಬ್ರಾಹ್ಮಣ ವಿರೋಧಿಯಾಗುವುದು ಹೇಗೆ ಸಾಧ್ಯ? ಎಂದು. ಆಗ ಅವರು ತಮಗೆ ಇದು ಗೊತ್ತಿರಲಿಲ್ಲ ಎಂದರಂತೆ. ಈಗ ಇಡಿಯ ಫೈಲು ದಿಲ್ಲಿಯಲ್ಲಿ ಮಿನಿಸ್ಟ್ರಿಗೆ ಅಪೀಲ್ ಆಗಿ ಹೋಗಿದೆ, ಅವರೇ ನಿರ್ಧರಿಸಲಿ ಎಂದರಂತೆ. ನಂತರ ಮಂತ್ರಾಲಯ ನಿಷೇಧ ಹಿಂದೆ ತೆಗೆದುಕೊಂಡಿತು. ಶೂದ್ರ ಸ್ತ್ರೀಯಿಂದ ಶೂದ್ರ ಶಬ್ದ, ಗೋಮಾಂಸದಿಂದ ಗೋ ಶಬ್ದ ಕತ್ತರಿಸಲು ಹೇಳಿ ಎ ಸರ್ಟಿಫಿಕೇಟ್ ಕೊಟ್ಟರು. ಸಂಸ್ಕಾರ ಕರ್ನಾಟಕದಲ್ಲಿ ಮನೆಮಾತಾಯಿತು. ಚಿತ್ರದಲ್ಲಿದ್ದ ಚಂದ್ರಿ-ಪ್ರಾಣೇಶಾಚಾರ್ಯರ ಸಂಭೋಗದ ಉತ್ತೇಜಕ ಚಿತ್ರೀಕರಣ ಕೂಡ ಪ್ರೇಕ್ಷಕರನ್ನು ಆಕರ್ಷಿಸಿರಬೇಕು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಪಡೆಯಿತು. ಸರಕಾರದಿಂದ ನಿಷೇಧಿತವಾದ ಚಿತ್ರಕ್ಕೆ ಸರಕಾರದಿಂದ ಶ್ರೇಷ್ಠ ಚಿತ್ರವೆಂದು ಪುರಸ್ಕಾರ ಮತ್ತೆ ಸ್ವರ್ಣಕಮಲ ದೊರೆಯಿತು!

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 17. In this episode Karnad writes about the making of Kannada movie Samskara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X