• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿರೀಶ ಕಾರ್ನಾಡರ ಆತ್ಮಕತೆ ಆಡಾಡತ ಆಯುಷ್ಯ

By ಜೀವಿ ಕುಲಕರ್ಣಿ, ಮುಂಬಯಿ
|

ಕನ್ನಡ ಸಾಹಿತ್ಯದಲ್ಲಿ ಗಿರೀಶ ಕಾರ್ನಾಡ ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿ. ನಾನು ಧಾರವಾಡದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಾಲ್ಕು ವರ್ಷ ಗಿರೀಶನನ್ನು ಚೆನ್ನಾಗಿ ಬಲ್ಲವನಾಗಿದ್ದೆ. ನಂತರ ಕೂಡ ನಮ್ಮ ಮೈತ್ರಿ ಮುಂದುವರಿಯಿತು. ನಾವು ಭೆಟ್ಟಿಯಾದಾಗ ಸಲುಗೆಯಿಂದ ಏಕವಚನದಲ್ಲೇ ಮಾತಾಡುತ್ತೇವೆ. ಇಲ್ಲಿ ನನ್ನ ಲೇಖನದಲ್ಲಿ ಬಹುವಚನದಿಂದ ಸಂಬೋಧಿಸುವೆ.

ವರಕವಿ ಬೇಂದ್ರೆಯವರು, ಗೋಕಾಕರು ತಮ್ಮ ಆತ್ಮಕತೆ ಬರೆಯಲಿಲ್ಲ. ಅದೊಂದು ಕೊರತೆ ಎಂದು ನನಗೆ ಸದಾ ಎನಿಸುತ್ತದೆ. ಕುವೆಂಪು, ಕಾರಂತರು ತಮ್ಮ ಆತ್ಮಕತೆ ಬರೆದು ದೊಡ್ಡ ಉಪಕಾರ ಮಾಡಿದ್ದಾರೆ. ಗಿರೀಶರು ತಮ್ಮ ಆತ್ಮಕತೆಯ ಮೊದಲನೆಯ ಭಾಗ ಪ್ರಕಟಿಸಿದ್ದಾರೆ. ಅವರ ಜೀವನದ 36 ವರುಷಗಳ ಕತೆಗಳು ಮೊದಲ ಭಾಗದಲ್ಲಿ ಇವೆ. ಶಿರಸಿಯಲ್ಲಿ ಕಳೆದ ಬಾಲ್ಯಜೀವನದಿಂದ ಅವರು ಪುಣೆಯ ಫಿಲ್ಮ್ ಇನ್ಸಿಟ್ಯೂಟಿನ ನಿರ್ದೇಶಕರಾಗಿರುವವರೆಗೆ ಅವರ ಜೀವನದ ಚಿತ್ರಣ 'ಆಡಾಡತ ಆಯುಷ್ಯ'ದಲ್ಲಿದೆ. ಧಾರವಾಡದ ಮನೋಹರ ಗ್ರಂಥಮಾಲೆಯವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ

ಕಾರ್ನಾಡರಿಗೆ ಬೇಂದ್ರೆಯವರ ಬಗ್ಗೆ ಬಹಳ ಪ್ರೀತಿ. ಅವರ ಕಾವ್ಯದಿಂದ ಪ್ರಭಾವಿತರಾಗಿದ್ದರು. ಅವರು ಸೆಸಿಲ್ ರ‍್ಹೋಡ್ಸ್ ಸಾಲರ್‌ಶಿಪ್ ಪಡೆದು ಮೂರು ವರ್ಷ ಇಂಗ್ಲೆಂಡಿಗೆ ತೆರಳಿ, ನಂತರ ಮರಳಿದಾಗ ಅವರಿಗೆ ಧಾರವಾದದಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು. ನಾವು ಬೇಂದ್ರೆಯವರ ಮನೆಗೆ ಹೋಗಿದ್ದೆವು. ಬೇಂದ್ರೆಯವರ ಮನೆಯಲ್ಲಿ ತಮ್ಮ ಸ್ಕಾಲರ್‌ಶಿಪ್ ದೊರೆಯುವ ಮುಂಚೆ ನಡೆದ ಸಂದರ್ಶನದ ಬಗ್ಗೆ ಹೇಳುತ್ತಿದ್ದರು. ಅಲ್ಲಿ ಅವರಿಗೊಂದು ಪ್ರಶ್ನೆ ಕೇಳಿದ್ದರಂತೆ, ನಿಮಗೆ ಸಾಹಿತ್ಯದಲ್ಲಿ ಯಾವ ಪ್ರಕಾರ ಬಹಳ ಸೇರುತ್ತದೆ? ಎಂದು. ಆಗ ಗಿರೀಶರು, ಕಾವ್ಯ ಎಂದು ಉತ್ತರಿಸಿದ್ದರು. ಯಾವ ಕವಿಯ ಕಾವ್ಯ? ಎಂದು ಕೇಳಿದಾಗ, ಕವಿ ಬೇಂದ್ರೆ ಎಂದಿದ್ದರು. ಒಂದು ಪದ್ಯ ಉದ್ಧರಿಸಿ ಎಂದಾಗ, ಬೇಂದ್ರೆಯವರ ಬೀದಿನಾಯಿ ರಾಧೆ ಪದ್ಯ ಉದ್ಧರಿಸಿ, ಜೊತೆಗೆ ಅದರ ಆಂಗ್ಲ ಅನುವಾದ ಕೂಡ ಹೇಳಿದ್ದರು.

ಇನ್ನೊಂದು ಸಂದರ್ಭ, ಅವರಿಗೆ ಮಗಳು ಜನಿಸಿದಾಗ ಯಾವ ಹೆಸರು ಇಡಬೇಕೆಂಬ ಚರ್ಚೆ ನಡೆದಾಗ, ಇವರಿಗೆ ಹೊಳೆದ ಹೆಸರು ಶಾಲ್ಮಲಿ. (ಶಾಲ್ಮಲಾ ನದಿಯ ಉಗಮ ಧಾರವಾಡ, ಅದು ಗುಪ್ತವಾಗಿ ಮುಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಕಟವಾಗುತ್ತದೆ. ಬೇಂದ್ರೆಯವರು ತಮ್ಮ ಕವಿತೆ ಸಣ್ಣ ಸೋಮವಾರದಲ್ಲಿ, ಶಾಲ್ಮಲಿ ನಮ್ಮ ಬಾಲಿ ಎಂದು ಕರೆಯುತ್ತಾರೆ.). ಆತ್ಮ ಕತೆಗಳನ್ನು ಬರೆಯಲು ಪ್ರಾರಂಭಿಸಿದಾಗ ಅದರ ಶೀರ್ಷಿಕೆ ಬೇಂದ್ರೆಯವರ ಕವಿತೆಯಿಂದ ಪಡೆದರು. ಬೇಂದ್ರೆಯವರ ಕವನ ಸಂಗ್ರಹ ಗರಿಯಲ್ಲಿ ಪ್ರಕಟವಾದ ನನ್ನ ಕಿನ್ನರಿ ಕವಿತೆಯ ಪ್ರಥಮ ಚರಣ ಹೀಗಿದೆ:

ಮೂಗಲ್ಲಿ ನಳಿಕೆ, ಆದರೂ ಹೋರಾಟದಲ್ಲಿ ಮುಂದೆ! ಕಾರ್ನಾಡರೆಂದರೆ ಹಾಗೆ!

ನೋಡ್ ನೋಡ್ತಽ ದಿನಮಾನಾ ಆಡಾಡ್ತಽ ಆಯುಷ್ಯಾ

ನಡದಽದ ನಡದಽದ ನಡದಽದ

ಕಾಣದ ಕಡಲ್ಹಾದಿ ಹಿಡದಽದ

ಮುಳಗಾಂವ ಬೆಂಡಿಗೆ ತೆಕಿಮುಕ್ಕಿ ಬಿದ್ದಾಂಗ

ನನ್ನಽ ಕಿನ್ನರಿ ನಿನ್ನ ಹಿಡದೇನ

ನಿನ್ನ ಜೀವದ ತಂತಿ ಮಿಡದೇನ ||

ಕಾರ್ನಾಡರ ಆತ್ಮಕತೆಯ ಪೂರ್ವಾರ್ಧ ಆಡಾಡತ ಆಯುಷ್ಯ, ಇನ್ನು ಇದರ ಉತ್ತರಾರ್ಧ ನೋಡ ನೋಡ್ತ ದಿನಮಾನ ಮುಂದೆ ಬರಲಿದೆ. ಅದನ್ನು ನಾವು ನಿರೀಕ್ಷಿಸುತ್ತಿದ್ದೇವೆ.

ನವ್ಯತೆ ಕಾರ್ನಾಡ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇವರ ಆತ್ಮಕತೆ ನವನವೋನ್ಮೇಷಶಾಲಿನಿಯಾಗಿದೆ. ಎಲ್ಲ ದೃಷ್ಟಿಯಿಂದ ನೋಡಿದರೂ ಹೊಸತನ ಎದ್ದು ಕಾಣುತ್ತದೆ. ಇವರ ಕೃತಿಯ ಅರ್ಪಣೆಯಲ್ಲಿಯೂ ನವ್ಯತೆ ಇದೆ. ಈ ಕೃತಿಯನ್ನು ಡಾ| ಮಧುಮಾಲತಿ ಗುಣೆ ಎಂಬ ಪುಣೆಯ ಡಾಕ್ಟರರಿಗೆ ಅರ್ಪಿಸಿದ್ದಾರೆ. ಇಲ್ಲಿಯೂ ವಿನೂತನತೆ ಇದೆ.

ಬೈಯಪ್ಪನಹಳ್ಳಿಯ ಸ್ಮಶಾನದಲ್ಲಿ ಇಂದು ಸಂಜೆ ಕಾರ್ನಾಡ್ ಅಂತ್ಯಕ್ರಿಯೆ

1973ರಲ್ಲಿ ತಮ್ಮ ಧಾರವಾಡದ ಮನೆಯಲ್ಲಿ ತಮ್ಮ ತಾಯಿತಂದೆಯವರೊಡನೆ ಊಟಮಾಡುತ್ತಿದ್ದರು. ಆಗ ಅವರಿಗೆ 35 ವರ್ಷ. ಸಂಸ್ಕಾರ ಚಿತ್ರ ಸ್ವರ್ಣ ಕಮಲ ಗಳಿಸಿ ಇವರಿಗೆ ಭಾರತಾದ್ಯಂತ ಕೀರ್ತಿ ತಂದಿತ್ತು. ವಂಶವೃಕ್ಷ ಚಿತ್ರ ಯಶಸ್ವಿಯಾಗಿ ಅನೇಕ ಬಹುಮಾನ ಗಳಿಸಿತ್ತು. ಕಾಡು ಚಿತ್ರ ಮುಕ್ತಾಯದ ಹಂತದಲ್ಲಿತ್ತು. ಇವರಿಗೆ ಪುಣೆಯ ಫಿಲ್ಮ್ ಹಾಗೂ ಟೆಲಿವಿಜನ್ ಇನ್‌ಟ್ಯೂಟಿನ ನಿರ್ದೇಶಕ ಹುದ್ದೆಗೆ ಆಯ್ಕೆಯಾಗಿತ್ತು. ಆಗ ತಾಯಿ, ಇವನನ್ನು ಬೇಡ ಅಂದುಕೊಂಡಿದ್ದೆವಲ್ಲ ಎಂದು ಗಂಡನ ಕಡೆಗೆ ನೋಡಿ ಅಂದರಂತೆ. ಕುತೂಹಲದಿಂದ ಏನೆಂದು ಕೇಳಿದಾಗ ಗುಟ್ಟು ರಟ್ಟಾಗಿತ್ತು.

ಇವರ ತಾಯಿಗೆ ಎರಡು ಮಕ್ಕಳಿದ್ದವು, ಮೂರನೆಯ ಮಗ ಗರ್ಭದಲ್ಲಿದ್ದ. ಪುಣೆಯಲ್ಲಿ ಡಾ| ಮಧುಮಾಲತಿ ಗುಣೆ ಎಂಬ ಡಾಕ್ಟರನ್ನು ಕಂಡು ಮೂರನೆಯ ಮಗು ಬೇಡವೆಂದು, ಅದಕ್ಕೆ ಸಂಬಂಧಿಸಿದ ಕ್ರಿಯೆಯಲ್ಲಿ ತೊಡಗಿದ್ದರು. ಒಂದು ತಾಸು ಅವಳ ದಾರಿ ಕಾಯ್ದು ಬೇಸತ್ತು ಮನೆಗೆ ಬಂದರಂತೆ. ಆಮೇಲೆ ಆ ಕಡೆಗೆ ಹೋಗಲಿಲ್ಲವಂತೆ. ಈ ಸುದ್ದಿ ತಿಳಿದಾಗ ಗಿರೀಶ ಗರಬಡಿದವರಂತೆ ಕುಳಿತರಂತೆ. ಮಂಕು ಕವಿದಿತ್ತು. ತಾನಿಲ್ಲದ ಜಗತ್ತು ಹೇಗಿರುತ್ತಿತ್ತು ಎಂದು ಯೋಚಿಸಿದರು. ತಂದೆತಾಯಿಯನ್ನು ದಿಟ್ಟಿಸುತ್ತ ಕುಳಿತರು. ತಂಗಿ ಲೀನಾ(ನಾಲ್ಕನೆಯ ಸಂತಾನ) ಬಂದದ್ದು ಹೇಗೆ? ಎಂದು ಕೇಳಿದಾಗ, ತಾಯಿ ನಕ್ಕು ನಂತರ ಆ ವಿಚಾರ ಬಿಟ್ಟ ವಿಷಯ ತಿಳಿಸಿದರಂತೆ. ಆ ಡಾಕ್ಟರರು ಕೊಟ್ಟ ಮಾತಿಗೆ ಸರಿಯಾಗಿ ಕ್ಲಿನಿಕ್ಕಿಗೆ ಬಂದಿದ್ದರೆ, ಈ ಆತ್ಮಕತೆಗಳು ಮಾತ್ರವಲ್ಲ, ಇದರ ಉತ್ತಮ ಪುರುಷ ತಾವೂ ಈ ಜಗದಲ್ಲಿರುತ್ತಿರಲಿಲ್ಲ. ಈ ಕಾರಣ, ತಮ್ಮ ಅಸ್ತಿತ್ವಕ್ಕೆ ಕಾರಣಳಾದ ಡಾಕ್ಟರರಿಗೆ ಈ ಕೃತಿ ಸಮರ್ಪಿಸಿದ್ದಾರಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more