ಗಿರೀಶ್ ಕಾರ್ನಾಡರ ತಾಯಿ ಕುಟ್ಟಕ್ಕನ ಕತೆ

ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುವ ಸಂಪ್ರದಾಯವಿತ್ತು. 15ನೆಯ ವಯಸ್ಸಿಗೆ ಗೋಕರ್ಣ ಎಂಬ ತರುಣನೊಂದಿಗೆ ವಿವಾಹವಾಯ್ತು. ಒಬ್ಬ ಮಗ ಹುಟ್ಟಿದ. ಒಂದು ವರ್ಷದಲ್ಲೇ ರೋಗಪೀಡಿತನಾಗಿ ಗಂಡ ತೀರಿಕೊಂಡ. ಮಗ ಬಾಲಚಂದ್ರನನ್ನು ಕಟ್ಟಿಕೊಂಡು ಪರದಾಡಬೇಕಾಯಿತು. ಆಗ ಸಹಾಯಕ್ಕೆ ಬಂದ ವ್ಯಕ್ತಿ ಹಿರಿಯ ಅಕ್ಕನ ಗಂಡ ಸಶಿತ್ತಲ್ ಮಂಗೇಶರಾಯರು. ಮೆಟ್ರಿಕ್ ಆದರೆ ಆ ಕಾಲದಲ್ಲಿ ಮೆಡಿಕಲ್ ಸೀಟು ಸಿಗುತ್ತಿತ್ತಂತೆ. ಶಿಕ್ಷಣ ಅರ್ಧಕ್ಕೆ ನಿಂತಿತ್ತು. ನರ್ಸ್ ಕೋರ್ಸ್ ಮಾಡಿ, ಜೊತೆಗೆ ಸಮಯವಿದ್ದಾಗ ಮೆಟ್ರಿಕ್ ಪಾಸಾಗಬಹುದಲ್ಲ ಎಂಬ ಸಲಹೆ ಮಂಗೇಶರಾಯರು ನೀಡಿದರು. ಅವರ ಮಿತ್ರರಾದ ಡಾ| ಕಾರ್ನಾಡರು ಬೆಳಗಾವಿಯಲ್ಲಿದ್ದರು. ಅಲ್ಲಿ ಶಿಕ್ಷಣದ ಏರ್ಪಾಡು ಮಾಡಿದರು. ಅವರ ಮನೆಯಲ್ಲೇ ಇರಲು ವ್ಯವಸ್ಥೆ ಮಾಡಿದರು. ಡಾಕ್ಟರರ ಹೆಂಡತಿ ಸದಾ ಕಾಯಿಲೆಯಿಂದಾಗಿ ಹಾಸಿಗೆಯಲ್ಲೇ ಇರುತ್ತಿದ್ದರು. ಆಗ ಡಾಕ್ಟರರು ರಿಮ್ಯಾರೇಜ್ ಮಾಡಿಕೊಳ್ಳಬಹುದು ಎಂಬ ವಿಚಾರದ ಬೀಜ ಅವಳಲ್ಲಿ ಬಿತ್ತಿದರು.
ಡಾಕ್ಟರರಿಗೆ ಆಗ 34 ವರ್ಷ, ಕೃಷ್ಣಾಬಾಯಿಗೆ ಇನ್ನೂ 22ರ ಪ್ರಾಯ. ಆ ಕಾಲದಲ್ಲಿ ದ್ವಿಭಾರ್ಯಾ ಪ್ರತಿಬಂಧಕ ಕಾಯದೆ ಇರಲಿಲ್ಲ. ಐದು ವರ್ಷ ಡಾಕ್ಟರರ ಜೊತೆಗಿದ್ದರು. ಇವರ ಶಿಕ್ಷಣ ಮುಗಿದಿತ್ತು, ಮದುವೆ ಆಗಿರಲಿಲ್ಲ. ಜನರು ಆಡಿಕೊಳ್ಳತೊಡಗಿದರು. ಡಾಕ್ಟರರಿಗೆ ಧಾರವಾಡದ ಸಿವಿಲ್ ಆಸ್ಪತ್ರೆಗೆ ವರ್ಗವಾಯಿತು. ಅಲ್ಲಿ ಸ್ಟಾಫ್ ನರ್ಸ್ ಜಾಗೆ ಖಾಲಿಯಾಗಿತ್ತು. ಡಾಕ್ಟರರು ಆ ಪೋಸ್ಟಿಗೆ ಅರ್ಜಿಹಾಕಲು ಹೇಳಿದರು. ಕೃಷ್ಣಾಬಾಯಿ ಕೆಲಸಕ್ಕೆ ಸೇರಿದರು. ಒಂದು ವರ್ಷ ಕಳೆದರೂ ಡಾಕ್ಟರರು ಮುಂದಿನ ಹೆಜ್ಜೆ ಇಡಲಿಲ್ಲ. ಅವರದು ಪುಕ್ಕಲು ಸ್ವಭಾವ. ಆಗ ಕೃಷ್ಣಾಬಾಯಿ ಕೇಳಿದರು, ನಿಮ್ಮ ಸಲುವಾಗಿ ಜನರ ನಿಂದೆ ಸಹಿಸಿದೆ. ಈಗ ಅರ್ಧ ಹಾದಿಯಲ್ಲೇ ಕೈ ಬಿಡುತ್ತೀರೇನು? ಎಂದು. ಕೊನೆಗೊಂದು ದಿನ ಇಬ್ಬರೂ ರಜೆ ತೆಗೆದುಕೊಂಡು ಮುಂಬೈಗೆ ಹೋಗಿ ಅಗ್ನಿಸಾಕ್ಷಿಯಾಗಿ ಮದುವೆಯಾದರಂತೆ. ಇದಕ್ಕೆ ಆರ್ಯಸಮಾಜದ ವೈದ್ಯ ಎಂಬವರು ಸಹಾಯ ಮಾಡಿದ್ದರಂತೆ. ಆರ್ಯಸಮಾಜದ ಸಂಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿಯವರ ಫೋಟೋ ಅವರ ದೇವರ ಕೋಣೆಯಲ್ಲಿ ಪ್ರವೇಶ ಪಡೆಯಿತಂತೆ. ಐದು ವರ್ಷ ಅವರು ಕಳೆದ ಯಾತನೆಯ ಬಗ್ಗೆ ಆತ್ಮಕತೆಯಲ್ಲಿ ಬರೆದಿದ್ದಾರೆ. ಇಲ್ಲಿಗೆ ಅವರ ಆತ್ಮಕತೆ ಮುಗಿಯಿತು. ಸೊಸೆ ಮುಂದೆ ಬರೆಸಿರಿ ಎಂದಾಗ ಇನ್ನೇನು ಬರೆಯುವುದಿಲ್ಲ ಎಂದಿದ್ದರಂತೆ.
ಡಾ| ಕಾರ್ನಾಡರಿಗೆ ನಾಲ್ಕು ಜನ ಮಕ್ಕಳು. ವಸಂತ, ಪ್ರೇಮಾ, ಗಿರೀಶ ಮತ್ತು ಲೀನಾ. ಕೃಷ್ಣಾಬಾಯಿಯ ಮೊದಲ ಸಂತಾನ ಬಾಲಚಂದ್ರನನ್ನು ಡಾ| ಕಾರ್ನಾಡರು ಪ್ರೀತಿಸುತ್ತಿದ್ದರು. ಅವನು ಗೋಕರ್ಣ ಅಡ್ಡ ಹೆಸರನ್ನು ತೆಗೆದುಹಾಕಿ ಕಾರ್ನಾಡ ಎಂದೇ ಹೆಸರು ಇಟ್ಟುಕೊಂಡು ಇವರ ಹಿರಿಯ ಮಗನಾದ. ಎತ್ತರನಾಗಿದ್ದ, ಸ್ಫುರದ್ರೂಪಿಯಾಗಿದ್ದ. ಇಂಡಿಯನ್ ರೇಲ್ವೇಸ್ ಸರ್ವಿಸ್ ಸೇರಿ ರೇಲ್ವೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದ.












Click it and Unblock the Notifications