ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಜೀವನವನ್ನೇ ಮಹಾಕಾವ್ಯವಾಗಿಸಿದ ಬೇಂದ್ರೆ

By Prasad
|
Google Oneindia Kannada News

Samvada Kanda Andatta
ಬೇಂದ್ರೆಯವರ ಗರಡಿಯಲ್ಲಿ ಬೆಳೆದ ಪುತ್ರ ವಾಮನ ಅವರು ಬೇಂದ್ರೆ ಅವರ ಕಾವ್ಯಕ್ಕೆ 'ಸಂವಾದ ಕಂಡ ಅಂದತ್ತ' ಎಂಬ ಎರಡು ಸಂಪುಟಗಳಲ್ಲಿ ಟಿಪ್ಪಣಿ ಬರೆದಿದ್ದಾರೆ. ಬೇಂದ್ರೆ ಸಂಶೋಧನ ಕೇಂದ್ರ ಪ್ರಕಟಿಸಿರುವ ಎರಡು ಸಂಪುಟಗಳ ಬೆಲೆ ರು.1000. ಸಂಪುಟ ಕುರಿತ ಲೇಖನದ ಮೂರನೇ ಭಾಗ ಇಲ್ಲಿದೆ.

* 'ಜೀವಿ' ಕುಲಕರ್ಣಿ, ಮುಂಬಯಿ

ಅರಳು-ಮರಳು ಪಂಚಕಾವ್ಯ ಸಮುಚ್ಚಯದ ಬಗ್ಗೆ ಕೂಡ ಬಹಳ ವಿವರವಾದ ವಿಶ್ಲೇಷಣೆ ದೊರೆಯುತ್ತದೆ. (ಇದರಲ್ಲಿರುವ ಪ್ರತ್ಯೇಕ ಸಂಕಲನಗಳ ಬಗ್ಗೆ, ಅಂದರೆ, ಸೂರ್ಯಪಾನ, ಹೃದಯ ಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ ಸಂಗ್ರಹಗಳ ಬಗ್ಗೆ ಪ್ರತ್ಯೇಕವಾದ ಸಂಪಾದಕರ ಭೂಮಿಕೆ ಇದೆ.) ಬೇಂದ್ರೆಯವರು ಅರಳು ಮರಳು ಸಂಗ್ರಹದ ಎರಡನೆಯ ಸಂಸ್ಕರಣಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಈ ಸಾಲುಗಳನ್ನು ಸೇರಿಸಿದರು: ಮರುಳನಲ್ಲ ನಾನು, ಮರುಳಾದೆನಯ್ಯ ನನ್ನೆದೆಯ ಮರುಳಸಿದ್ಧ | ನಿಮ್ಮರುಳಿನಿಂದ ಮರಮರಳಿ ಅರಳಿ ಸ್ಪುಟವಾಗಿ ಭಾವ ಶುದ್ಧ| ನಿಮ್ಮಡಿಗೊ ಮುಡಿಗೋ ಮುಡಿಪಾಯ್ತು ಮಾತು ಸಂತತದ ಏಕನಾದ | ಈ ಕೊರಳು ಬೆರಳು, ಆ ಕರುಳು ಅರಳು ಮರಳೂನು ತಂ ಪ್ರಸಾದ |.

ಗೋಕಾಕರು ಅರಳು ಮರಳು ಕಾವ್ಯ ಗುಚ್ಛಕ್ಕೆ ಮುನ್ನುಡಿ ಬರೆದಿದ್ದಾರೆ. ಅವರೆನ್ನುತ್ತಾರೆ, ಇಲ್ಲಿ ಮುಖ್ಯವಾದುದು ಕವಿಯ ಆರ್ಷದೃಷ್ಟಿ. ಬೇಂದ್ರೆಯವರು ಸೂತ್ರಧಾರನಾದ ಬಾಲಕ. ಅಂಬಿಕಾತನಯದತ್ತ ವಿಶ್ವಮಾನವ, ವಿಶ್ವನಾಗರಿಕ. ಆತ ಹೇಳಿದ ಪ್ರಯೋಗಗಳನ್ನು ಬೇಂದ್ರೆಯವರು ಜೀವನದಲ್ಲಿ ನಡೆಸುತ್ತಾರೆ. ಗೋಕಾಕರು ಬೇಂದ್ರೆಯವರನ್ನು ಜಾನಪದ ಗೀತೆಗಳ ಚಕ್ರವರ್ತಿ ಎಂದು ಕರೆದರು. ಬೇಂದ್ರೆ ಕಾವ್ಯ, ಶಬ್ದ, ಭಾವ, ಅರ್ಥ, ವ್ಯುತ್ಪತ್ತಿ, ಪ್ರತಿಭೆ, ಪ್ರಜ್ಞೆ, ಗುರು-ರಸೋವೈ ಸಃ ಎಂಬ ಏಳು ನೆಲೆಗಳಲ್ಲಿ ನಿರ್ಮಿತವಾಗಿದೆ ಆದುದರಿಂದ ಬೇಂದ್ರೆಯವರ ಕೆಲವು ಕವನಗಳಲ್ಲಿ ಶಬ್ದದ ಕುಣಿತ, ಭಾವಗಳ ವಿಲಾಸ, ಅರ್ಥದ ವೈಭವ, ವ್ಯುತ್ಪತ್ತಿ ಚಮತ್ಕಾರ, ಪ್ರತಿಭೆಯ ಮಿಂಚು, ಪ್ರಜ್ಞೆಯ ಹರಹು ಮತ್ತು ಗುರುವಿನ ಪ್ರಸಾದ ಇವುಗಳನ್ನು ಹೆಕ್ಕಿ ತೆಗೆಯಬೇಕಾಗುತ್ತದೆ ಎಂದು ವಾಮನ ಬೇಂದ್ರೆ ಬರೆಯುತ್ತಾರೆ.

ನಮನ ಸಂಗ್ರಹದ ಬಗ್ಗೆ ಬರೆಯುತ್ತ, ಯೋಗ, ಆಯೋಗ, ಪ್ರಯೋಗ, ವಿಯೋಗ, ಸಂಯೋಗ, ಅಭಿಯೋಗ ಮತ್ತು ಉತ್‌ಯೋಗ ಎಂಬವು ಬೇಂದ್ರೆಯವರ ಕಾವ್ಯ ಸಾಧನೆಯ ಸಪ್ತಭೂಮಿಕೆಗಳು ಎನ್ನುತ್ತಾರೆ. ಯೋಗ ಮಾರ್ಗದಲ್ಲಿ ಉನ್ನತ ಸ್ಥಿತಿ ತಲುಪಿದಾಗ ಮಾತ್ರ ಕಾವ್ಯ ಶ್ರೇಷ್ಠವಾಗುವುದು, ಅದೇ ಉತ್‌ಯೋಗ ಎಂದು ಬೇಂದ್ರೆ ನಂಬಿದ್ದರು. ಉನ್ಮನದ ಮಹತ್ವವನ್ನು ಬೇಂದ್ರೆ ತಿಳಿಸುತ್ತಾರೆ. ಋತು ನಮನ ದಿಂದ ಹಿಡಿದು ಕಾಲಕ್ಕೆ ನಮನದ ವರೆಗೆ ಹತ್ತು ನಮನಗಳ ಕವಿತೆಗಳು ಇಲ್ಲಿವೆ. ಸಂಚಯ, ಉತ್ತರಾಯಣ, ಮುಗಿಲ ಮಲ್ಲಿಗೆ, ಯಕ್ಷ-ಯಕ್ಷಿ, ಕವನ ಸಂಕಲನಗಳ ಭೂಮಿಕೆಗಳು ಅರ್ಥವತ್ತಾಗಿವೆ.

ನಾಕುತಂತಿ ಕವನ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. 1964ರಲ್ಲಿ ತಾನಾಗಿ ತನನನ ಬಂಧ್ಹಾಂಗ ನಾಕುತಂತಿ ಬಂತು. ಇದೊಂದು ಉದ್ಭವ ಕಾವ್ಯ. ಭಾವಗೀತಕಾರನ ಮಹಾಕಾವ್ಯ ಎಂದು ವಾಮನರು ಬರೆಯುತ್ತಾರೆ. ನಂತರ ಬಂದ ಮರ್ಯಾದೆ, ಶ್ರೀಮಾತಾ, ಇದು ನಭೋವಾಣಿ, ಮತ್ತೆ ಶ್ರಾವಣಾ ಬಂತು ಕವನ ಸಂಗ್ರಹಳ ಭೂಮಿಕೆಗಳು ಇವೆ. ಚತುರೋಕ್ತಿ ಮತ್ತು ಇತರ ಕವನಗಳು ಬೇಂದ್ರೆಯವರ ಜೀವಿತಾವಧಿಯಲ್ಲಿ ಪ್ರಕಟಗೊಂಡ ಕೊನೆಯ ಸಂಗ್ರಹ. ಹೊಸ ಅನುಭೂತಿ ಮತ್ತು ಹೊಸ ಅಭಿವ್ಯಕ್ತಿಯಿಂದ ಕೂಡಿದ ಚತುರೋಕ್ತಿ ವಿಭಾಗದ ಕವಿತೆಗಳ ಬಗ್ಗೆ ಬರೆಯುತ್ತ, ರಾಮದಾಸರ ದಾಸಬೋಧ, ಕನಕದಾಸರ ಮುಂಡಿಗೆ ಮತ್ತು ವಚನಕಾರರ ಬೆಡಗು ಇವೆಲ್ಲವೂ ಅಂಬಿಕಾತನಯರ ಅಂತರಂಗದಲ್ಲಿ ಪಾಕಗೊಂಡು ಈ ಚತುರೋಕ್ತಿಗಳು ಹೊರಬಂದಿವೆ ಎನ್ನುತ್ತಾರೆ ವಾಮನ ಬೇಂದ್ರೆ.

ಮರಣೋತ್ತರವಾಗಿ ಪ್ರಕಟಗೊಂಡ ಪರಾಕಿ, ಕಾವ್ಯವೈಖರಿ ಮೊದಲಾದ 7 ಸಂಗ್ರಹಗಳ ಬಗ್ಗೆ ವಾಮನರು ಬರೆಯುತ್ತಾರೆ. ದೇವಕವಿ ವೇದವ್ಯಾಸರು ಮಹಾಭಾರತವನ್ನು ರಚಿಸಿದರು. ಅದನ್ನು ಬರೆದುಕೊಂಡವ ಗಣಪತಿ. ಅವನಿಗೆ ತಾ ಲೆಕ್ಕಣಿಕೆ, ತಾ ದೌತಿ ಎಂದು ಬೇಂದ್ರೆ ಕೇಳುತ್ತಾರೆ. ಹೊಸ ಬಾಲಾ | ಹೊಸ ಶಾಲಾ | ಹೊಸ ಕಾಲಾ ತೆರೆಯುವುದಾಗಿ, ನವಭಾರತ ಹರಕೆ ಪರ್ವ ಬರೆಯುವುದಾಗಿ ಹೇಳುತ್ತಾರೆ. ಬಾಲಬೋಧೆ ಒಂದು ಮಹತ್ವದ ಸಂಗ್ರಹ. ಬಾಲ ಎಂದರೆ ದತ್ತಾತ್ರೇಯ ದೇವರು, ದತ್ತಾತ್ರೇಯ ಬೇಂದ್ರೆ, ವಾಮನ ಬೇಂದ್ರೆ. ಬೋಧೆ ಅಂದರೆ ಜ್ಞಾನ, ತಿಳಿವಳಿಕೆ. ದತ್ತಾತ್ರೇಯ ದೇವರು, ದತ್ತಾತ್ರೇಯ ಬೇಂದ್ರೆಯವರಿಗೆ ಹೇಳಿದ ವಿಷಯವನ್ನು ಅವರು ತಮ್ಮ ಮಗ ವಾಮನ ಬೇಂದ್ರೆಗೆ ಉಪದೇಶಮಾಡುತ್ತಿದ್ದಾರೆ ಎಂದು ಅರ್ಥ. ಸುಮಾರು ಐವತ್ತು ವರ್ಷ ಧ್ಯಾನಮಾಡಿದ ತಮ್ಮ ವಿಚಾರಗಳನ್ನು ಇಲ್ಲಿ ಅಂಬಿಕಾತನಯದತ್ತರು ನಿರೂಪಿಸಿದ್ದಾರೆ.

ಶ್ರೀ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರು ಮತ್ತು ರಾಮದೇವರು ಬೇಂದ್ರೆಯವರೊಡನೆ ಸಾಂಖ್ಯಭಾಷೆಯಲ್ಲಿ ಮಾತನಾಡತೊಡಗಿದರು (ಸ್ವಪ್ನದಲ್ಲಿ ಮತ್ತು ಎಚ್ಚರದಲ್ಲಿ). ಈ ಮಾತನ್ನು ವಾಮನರು ಸ್ವಂತ ಅನುಭವದಿಂದ, ಪ್ರತ್ಯಕ್ಷಪ್ರಮಾಣದಿಂದ ಬರೆಯುತ್ತಾರೆ. ಋಗ್ವೇದದಲ್ಲಿ ನಿವಿದ್ ಮಂತ್ರಗಳು ಇವೆ. ಈ ಮಂತ್ರಗಳಲ್ಲಿ ಸಂಖ್ಯೆಗಳೇ ಹೆಚ್ಚು. (ಇವುಗಳ ಮೇಲೆ ಪುಣೆ ವಿಶ್ವವಿದ್ಯಾಲಯದಿಂದ ಒಬ್ಬರು ಪಿಎಚ್.ಡಿ. ಮಾಡಿದ್ದಾರಂತೆ). ನಿವಿದ್ ಎಂಬುದು ಪಾರಿಭಾಷಿಕ ಪದ ಎಂದು ವೈದಿಕ ಕೋಶದಲ್ಲಿ ಹೇಳಲಾಗಿದೆ. ಸಂಖ್ಯಾಜ್ಞಾನದ ಪಾರಿಭಾಷಿಕ ಪದ ನಿವಿದ್ ಎಂದು ಬೇಂದ್ರೆ ಶೋಧಮಾಡಿದರು. ಇದರಿಂದ ಬೇಂದ್ರೆಯವರ ಚಿಂತನದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆಯಿತಂತೆ. ಬ್ರಹ್ಮ=25; ರಾಮ=25; ಎಂದು ನಿರ್ಣಯವಾಗಿ ತಮ್ಮ ಪ್ರೇರಕ ಶಕ್ತಿ ಬ್ರಹ್ಮಚೈತನ್ಯರು ಎಂದು ಮನವರಿಕೆಯಾಯಿತಂತೆ. ರಾಮಭಕ್ತಿಯೂ ಬೇಂದ್ರೆಯವರಲ್ಲಿ ಮತ್ತಷ್ಟು ದೃಢವಾಯಿತಂತೆ. ಕಟಪಯಾದಿ ಸಾಂಕೇತಿಕ ಭಾಷೆಯ ಪ್ರಕಾರ ಬಾಲಬೋಧೆ=3339. ಇದರಿಂದ ಬೇಂದ್ರೆಯವರ ಶೋಧಕ್ಕೆ ಹೆಚ್ಚಿನ ಚಾಲನೆ ದೊರೆಯಿತಂತೆ. ವಿಶ್ವದೇವ-ನಿವಿನ್ಮಂತ್ರದಲ್ಲಿ ವಿಶ್ವದೇವತೆಗಳ ಸಂಖ್ಯೆ 3339 ಎಂದು ಸಿಕ್ಕಾಗ ಬೇಂದ್ರೆಯವರಿಗೆ ಬಾಲಬೋಧೆಯ ಸಂಪೂರ್ಣ ಬೋಧವಾಯಿತಂತೆ. ಇಂಥ ವಿವರಗಳನ್ನು ವಾಮನ ಬೇಂದ್ರೆ ಮಾತ್ರ ನೀಡಬಲ್ಲರು. ಪ್ರತಿಬಿಂಬಗಳು, ಶತಮಾನ ಎಂಬ ಕವನಗಳ ಸಂಕಲನಗಳ ಸಂಪಾದಕ ಭೂಮಿಕೆಯೂ ಬಹಳ ವಿದ್ವತ್ಪೂರ್ಣವಾಗಿವೆ.

ಏಳನೆಯ ಸಂಗ್ರಹ ಭೂ ದೈವತಗಳು. ಇದು ಖಲೀಲ್ ಜಿಬ್ರಾನನ The Earth Gods ಎಂಬ ಕೃತಿಯ ಭಾವಾನುವಾದ. ಗೆಳೆಯರ ಗುಂಪಿನ ಮಿತ್ರರಿಗೆ ಜಿಬ್ರಾನನ ಪರಿಚಯ ಮಾಡಿಕೊಟ್ಟವರೇ ಬೇಂದ್ರೆಯವರು. ಜಿಬ್ರಾನ ಅವರ ಗುರುಸ್ಥಾನದಲ್ಲಿದ್ದ. ಬೇಂದ್ರೆ ಹಾಗೂ ಜಿಬ್ರಾನ ಕವಿಯ ಜೀವನದಲ್ಲಿರುವ ಸಾಮ್ಯಗಳ ವಿವರ ವಾಮನ ಕೊಡುತ್ತಾರೆ. (ಕೆಲವು ಸಾಮ್ಯಗಳು ಅಚ್ಚರಿಯುಂಟುಮಾಡುವಂತಿವೆ. ಉದಾ: ಜಿಬ್ರಾನ ಹತ್ತನೆಯ ವರ್ಷ ಪ್ರಪಾತದಿಂದ ಬಿದ್ದಾಗ ಅವನ ಎಡತೋಳು ವಿಕೃತಗೊಳ್ಳುತ್ತದೆ; ಹತ್ತನೆಯ ವರ್ಷ ಬೇಂದ್ರೆ ಕುಸ್ತಿಯಾಡುವಾಗ ಅವರ ಎಡತೋಳು ವಿಕೃತವಾಗುತ್ತದೆ; ಇಬ್ಬರ ನಿರ್ವಾಣ ಆಸ್ಪತ್ರೆಯಲ್ಲಿ, ಇಬ್ಬರಿಗೂ ಪಿತ್ತಕೋಶದ ಬೇನೆ ಇತ್ತು.) ಭೂ ದೈವತಗಳು ಹಳೆಯ ಸನಾತನ ಧರ್ಮದ ಪ್ರಚಾರ ಕಾವ್ಯವಲ್ಲ, ಇದು ಬುದ್ಧಿ, ಭಾವದ ಸಂಗಮ ಹೊಂದಿದ ವೈಚಾರಿಕ ಪ್ರವಾದಿಯ ಕ್ರಾಂತಿ ಕಾವ್ಯ, ನವ ಅಧ್ಯಾತ್ಮದ ಉದ್ಭವ ಕಾವ್ಯ. ಎನ್ನುತ್ತಾರೆ ವಾಮನ ಬೇಂದ್ರೆ. 1872ರಲ್ಲಿ ಹುಟ್ಟಿದ ಯೋಗಿ ಶ್ರೀಅರವಿಂದರು, 1883ರಲ್ಲಿ ಹುಟ್ಟಿದ ಜಿಬ್ರಾನ ಮತ್ತು 1896ರಲ್ಲಿ ಹುಟ್ಟಿದ ಬೇಂದ್ರೆ ಸನಾತನ ಧರ್ಮದ ಪ್ರತಿಪಾದಕರಲ್ಲ. ನವ ಅಧ್ಯಾತ್ಮದ ಉದ್ಭವವಾದೀ ಕಾವ್ಯ ಸೃಷ್ಟಿಸಿದವರು. ಇವರು ದೇವರನ್ನೇ ಹಾಡಿ ಹೊಗಳುವ ಭಟ್ಟಂಗಿಗಳಲ್ಲ, ಸ್ತುತಿಪಾಠಕರಲ್ಲ; ನರರ ಜೀವನವೇ ದಿವ್ಯ ಜೀವನವಾಗಬೇಕು ಎಂದು ಅಪೇಕ್ಷಿಸಿದವರು. ಇದು ಸಾಧ್ಯವಾಗಬೇಕಾದರೆ ಈ ಭೂಲೋಕಕ್ಕೆ, ಜಗತ್ತಿಗೆ ಸುಪ್ರಮಾನಸ ಶಕ್ತಿಯ ಅವತರಣವಾಗಬೇಕು. ಇದರ ಪರಿಣಾಮವಾಗಿ ಭೂಮಾನವರೆಲ್ಲ ನವಮಾನವರಾಗುತ್ತಾರೆ. ಇದಕ್ಕಾಗಿಯೇ ಈ ಮೂರೂ ಮಹಾಕವಿಗಳು ತಮ್ಮ ತಮ್ಮ ಜೀವನವನ್ನೇ ಮಹಾಕಾವ್ಯವಾಗಿಸಿ, ಮಹಾಕಾವ್ಯ ಸೃಷ್ಟಿಸಿ, ಸಕಲ ಮಾನವರ ಕಲ್ಯಾಣ ಬಯಸಿದರು. ಎಂಬ ವಾಮನರ ನುಡಿ ಅರ್ಥಗರ್ಭಿತವಾಗಿದೆ.

ಎಂಟು ಆಯ್ದ ಕವನ ಸಂಗ್ರಹಗಳ ಸಮೀಕ್ಷೆಯೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಬಾ ಹತ್ತರ ಸಂಗ್ರಹಕ್ಕಾಗಿ ಬೇಂದ್ರೆಯವರ ಆದೇಶದ ಮೇರೆಗೆ ಕವಿತೆ ಆರಿಸಿದ್ದಾರೆ, ಟಿಪ್ಪಣಿ ಬರೆದಿದ್ದಾರೆ. ವಿನಯ ಸಂಗ್ರಹದ ಬಗ್ಗೆ ಬರೆದ ಒಂದು ವಿವೇಚನೆಯು ಅರ್ಥಗರ್ಭಿತವಾಗಿದೆ. ನಾನು ಕವನದಲ್ಲಿ ಕವಿಯ ಐದು ತಾಯಂದಿರ ಪ್ರಸ್ತಾಪ ಬರುತ್ತದೆ. (ವಿಶ್ವಮಾತೆ, ಭೂಮಿತಾಯಿ, ಭರತಮಾತೆ, ಕನ್ನಡತಾಯಿ, ಜನ್ಮಕೊಟ್ಟ ತಾಯಿ ಅಂಬಿಕೆ- ಇವರ ಪರಾಗ ಪರಮಾಣು ಕೀರ್ತಿ, ಗುಡಿಗಟ್ಟಿನಿಂತ ಮೂರ್ತಿ, ಮಿನುಗುತಿಹ ಜ್ಯೋತಿ, ಗಾಳಿ, ಜೀವಂತ ಮಮತೆ, ಜೀವದೇವ, ಹೃದಯಾರವಿಂದದಲ್ಲಿರುವ ನಾರಾಯಣನೆ ದತ್ತನರನಾಗಿ- ಅಂಬಿಕೆಯತನಯನಾಗಿ ಅವತರಿಸಿದ್ದಾನೆ ಎಂಬ ಕಲ್ಪನೆಯ ಅಲೌಕಿಕತೆ ಹಾಗೂ ಅಸಾಮಾನ್ಯತೆಯ ಬಗ್ಗೆ ಬರೆಯುತ್ತಾರೆ. ಇಲ್ಲಿ ಸರ್ವ ಸಮರ್ಪಣ ಭಾವದೊಡನೆ ವಿನಯವೂ ಅಡಗಿದೆ ಎನ್ನುತ್ತಾರೆ. ಒಲವೆ ನಮ್ಮ ಬದುಕು ಪ್ರಣಯಗೀತಗಳ ಸಂಗ್ರಹ. ಚೈತನ್ಯದ ಪೂಜೆ ಪ್ರಾರ್ಥನಾ ಗೀತಗಳ ಸಂಗ್ರಹ. ಕುಣಿಯೋಣು ಬಾ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಆಯ್ದ ಕವನಗಳ ಸಂಕಲನ. ನೂರುಮರ ನೂರು ಸ್ವರ ಆಯ್ದ ನೂರು ಕವನಗಳ ಸಂಗ್ರಹ. ನಾಳಿನಾ ಕನಸು ಶೋಷಿತರನ್ನು ಬೆಂಬಲಿಸುವ ಹೋರಾಟದ ಬದುಕನ್ನು ಚಿತ್ರಿಸುವ ಕವನಗಳ ಸಂಗ್ರಹ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X