• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಗಾವತರಣ ಉಪಾಸಕ ಬೇಂದ್ರೆಯವರ ಅನಾವರಣ

By Prasad
|

ಬೇಂದ್ರೆಯವರ ಗರಡಿಯಲ್ಲಿ ಬೆಳೆದ ಪುತ್ರ ವಾಮನ ಅವರು ಬೇಂದ್ರೆ ಅವರ ಕಾವ್ಯಕ್ಕೆ 'ಸಂವಾದ ಕಂಡ ಅಂದತ್ತ' ಎಂಬ ಎರಡು ಸಂಪುಟಗಳಲ್ಲಿ ಟಿಪ್ಪಣಿ ಬರೆದಿದ್ದಾರೆ. ಬೇಂದ್ರೆ ಸಂಶೋಧನ ಕೇಂದ್ರ ಪ್ರಕಟಿಸಿರುವ ಎರಡು ಸಂಪುಟಗಳ ಬೆಲೆ ರು.1000. ಸಂಪುಟ ಕುರಿತ ಲೇಖನದ ಎರಡನೇ ಭಾಗ ಇಲ್ಲಿದೆ.

* 'ಜೀವಿ' ಕುಲಕರ್ಣಿ, ಮುಂಬಯಿ

ಬೇಂದ್ರೆಯವರು ಸಿದ್ಧಪುರುಷರಾಗಿದ್ದರು. ಆದರೆ ಅವರು ತಮ್ಮ ಸಿದ್ಧಿಯನ್ನು ಇತರರಿಗೆ ವ್ಯಕ್ತಪಡಿಸುವುದರಲ್ಲಿ ಆಸಕ್ತಿ ವಹಿಸಿರಲಿಲ್ಲ. ಒಂದು ಸಂದರ್ಭದಲ್ಲಿ ಬೇಂದ್ರೆಯವರು ಮಗನನ್ನು ಕರೆದು ಬಾಗಿಲಿಗೆ ಚಿಲಕ ಹಾಕಲು ಹೇಳಿದರು. ಆರೆಂಟು ಫೂಟು ಅಂತರದಲ್ಲಿ ನಿಂತು ಅದು ತಂತಾನೆ ತೆರೆಯುವಂತೆ ಮಾಡಿದರು. ಇದು ಚಮತ್ಕಾರ. ಇಂಥ ಅನೇಕ ಚಮತ್ಕಾರ ಮಾಡಿ ತೋರಿಸಬಲ್ಲೆ. ಅದು ನನ್ನ ದಾರಿಯಲ್ಲ ಎಂದಿದ್ದರಂತೆ. ಚಮತ್ಕಾರ ತೋರುವುದು ಸಾಧುಸತ್ಪುರುಷರ ದಾರಿ, ತಮ್ಮದು ಸಾಹಿತ್ಯದ ಹಾದಿ ಎನ್ನುತ್ತಿದ್ದರಂತೆ. ಒಮ್ಮೆ ಮಗ ವಾಮನರೊಡನೆ ಮಾತಾಡುವಾಗ ಇದ್ದಕ್ಕಿಂದ್ದಂತೆ ವಾಮನರಿಗೆ ಕಿವಿ ಕೇಳಿಸುವುದು ನಿಂತಿತು. ತಂದೆಗೆ ತಿಳಿಸಿದಾಗ ಅವರು ಧ್ಯಾನಮುದ್ರೆಯಲ್ಲಿ ಕುಳಿತು, ಇಂದಿನಿಂದ ನಿನಗೆ ಕೇಳಿಸುವುದು ನಿಂತಿತು. ಅದು ನಿನ್ನ ಕಲ್ಯಾಣಕ್ಕಾಗಿ ಇದೆ ಎಂದರಂತೆ. ಬೇಂದ್ರೆಯವರು ಉಚ್ಚ ಸ್ವರದಲ್ಲಿ ಮಾತಾಡುತ್ತಿದ್ದರು ಅದು ವಾಮನರಿಗೆ ಕೇಳುತ್ತಿತ್ತು. ಹೆಂಡತಿ ವಿಶಾಖಾಗೆ ಇದರಿಂದ ತೊಂದರೆಯಾಗುತ್ತಿತ್ತು. ಕಿವಿ ಕೇಳದಿರುವುದು ವಾಮನರ ಸಾಧನೆಗೆ ಒಂದು ದಾರಿ ಮಾಡಿಕೊಟ್ಟಿತ್ತು.

ಒಮ್ಮೆ ಬೇಂದ್ರೆಯವರ ಸ್ವಪ್ನದಲ್ಲಿ ಅರಳಿ(ಅಶ್ವತ್ಥ), ಅತ್ತಿ(ಔದುಂಬರ) ಮತ್ತು ಆಲ(ನ್ಯಗ್ರೋಧ) ಗಿಡಗಳು ಬಂದು, 13 ಶ್ರೀಮಾತಾ ಆವರಣದಲ್ಲಿ ಹುಟ್ಟಿಬರುವುದಾಗಿ ಹೇಳಿದವಂತೆ. ಅರಳಿಯಲ್ಲಿ ವಿಷ್ಣು ಸಾನ್ನಿಧ್ಯವಿದೆ, ಅತ್ತಿಯಲ್ಲಿ ಬ್ರಹ್ಮ ಸಾನ್ನಿಧ್ಯವಿದೆ, ಆಲದಲ್ಲಿ ಮಹೇಶ ಸಾನ್ನಿಧ್ಯವಿದೆ. ಈ ವೃಕ್ಷಗಳು ಬೇಂದ್ರೆಯವರ ಹಿತ್ತಲಲ್ಲಿ ಇವೆ. ಒಮ್ಮೆ ಆಲದ ಕೆಳಗೆ ಕುಳಿತು ಪತ್ರವ್ಯವಹಾರ ಮಾಡೋಣ ಅಂದರಂತೆ. ಅಂದು (1978ರಲ್ಲಿ) ಮಧ್ಯಾಹ್ನ ಅಕ್ಕಲಕೋಟ ಮಹಾರಾಜರ ಸಂಸ್ಥಾನದಿಂದ ಪತ್ರ ಬಂತು. ಅದು ಮಹಾರಾಜರ ಜನ್ಮಶತಾಬ್ದಿಯ ವರ್ಷವಾಗಿತ್ತು. ದತ್ತ ಸಂಪ್ರದಾಯದ ಬಗ್ಗೆ ಮೂರು ಪ್ರವಚನ ನೀಡಲು ಆಮಂತ್ರಣ ಬಂದಿತ್ತು. ಮಗ ಹಾಗೂ ಸೊಸೆಯೊಂದಿಗೆ ಅಕ್ಕಲಕೋಟಕ್ಕೆ ಬೇಂದ್ರೆಯವರು ಹೋಗಿ ಮೂರು ಉಪನ್ಯಾಸ ನೀಡಿದರು. (ವಿಷಯ: 1)ವೈದಿಕ ದತ್ತಾತ್ರೇಯ, 2)ಪೌರಾಣಿಕ ದತ್ತಾತ್ರೇಯ, 3)ಐತಿಹಾಸಿಕ ದತ್ತಾತೇಯ). ಅವರಿಗೆ ಒಂದು ಸಾವಿರ ರೂಪಾಯಿ ಸಂಭಾವನೆ ಕೊಡಲಾಯಿತು. ಅದನ್ನು ಮಗನಿಗೆ ಕೊಟ್ಟರು. ಅಲ್ಲಿಂದ ಪುಣೆಗೆ ಬಂದರು. ಅಲ್ಲಿ ಭಾವುಸಾಹೇಬ ಆಠವಲೆ ಎಂಬವರು ಜ್ಞಾನೇಶರ ಸ್ಮಾರಕಕ್ಕೆ ಒಂದು ಸಾವಿರ ರೂಪಾಯಿ ಧನಸಹಾಯ ಬೇಂದ್ರೆಯವರಿಂದ ಅಪೇಕ್ಷಿಸಿದರು. ಮಗನಿಗೆ ಹಣ ಕೊಡಲು ಬೇಂದ್ರೆ ಹೇಳಿದರು, ಅಕ್ಕಲಕೋಟ್ ಮಹಾರಾಜರು ಕೊಟ್ಟ ಹಣ ಜ್ಞಾನೇಶ್ವರರಿಗೆ ಸಲ್ಲಲಿ ಎಂದರು. ನಂತರ ಪತ್ರವ್ಯವಹಾರದ ಚಮತ್ಕಾರ ಇಲ್ಲಿಗೆ ಮುಗಿಯಿತು ಎಂದರಂತೆ.

ಬೇಂದ್ರೆಯವರು ಮುಂಬೈ ಹರಕಿಸನದಾಸ ಆಸ್ಪತ್ರೆಯಲ್ಲಿ (16-10-1981)ಕೊನೆಯ ಉಸಿರು ಎಳೆದರು. ಮರಣಪೂರ್ವದಲ್ಲಿ ಮಗನಿಗೆ ಅಂಬಿಕಾತನಯದತ್ತ ವೇದಿಕೆ ಪ್ರಾರಂಭಿಸಲು ಹೇಳಿದರಂತೆ. ತಂದೆಯ ಇಚ್ಛಾನುಸಾರ ವಾಮನರು ವೇದಿಕೆ ಪ್ರಾರಂಭಿಸಿದರು. ಕೆ.ಎಸ್.ಶರ್ಮಾ ಅಧ್ಯಕ್ಷರಾದರು, ವಾಮನರು ಸಂಚಾಲಕರಾದರು, ಸುರೇಶ ಕುಲಕರ್ಣಿ ನಿರ್ವಾಹಕರಾದರು. ಧಾರವಾಡದಲ್ಲಿ ವರಕವಿ ಅಂಬಿಕಾತನಯದತ್ತ ರಾಷ್ಟ್ರೀಯ ಸ್ಮಾರಕ, ಹುಬ್ಬಳ್ಳಿಯಲ್ಲಿ ಸಪ್ತಸ್ಮಾರಕಗಳು, ಬೇಂದ್ರೆ ಸಮಗ್ರ ಸಾಹಿತ್ಯದ ಪ್ರಕಾಶನ ಕಾರ್ಯಗಳನ್ನು ನೆನೆಯುತ್ತಾರೆ. ಬೇಂದ್ರೆಯವರು ಗುರುವಾಗಿ ಮಗನಿಗೆ ಮಾರ್ಗದರ್ಶನ ಮಾಡಿದ್ದು ತಮ್ಮ ಜೀವನದ ಭಾಗ್ಯ ಹಾಗೂ ಸಂಪತ್ತು ಎಂದು ಭಾವಿಸಿದ್ದಾರೆ.

ವರಕವಿ ಬೇಂದ್ರೆಯವರ ಜೀವಿತಾವಧಿಯಲ್ಲಿ ಪ್ರಕಟಗೊಂಡ 27 ಕವನ ಸಂಗ್ರಹಗಳನ್ನು ವಾ.ದ.ಬೇಂದ್ರೆ ಸಂಪಾದಿಸಿದರು, ಆಷ್ಟೇ ಅಲ್ಲ, ವಿವರವಾದ ಭೂಮಿಕೆಯನ್ನು ಬರೆದರು. ವಾ.ದ. ಅವರು ತಂದೆಯೊಡನೆ ಅಹರ್ನಿಶಿ ಸಂವಾದದಲ್ಲಿ ತೊಡಗಿದ್ದರ ಫಲಸ್ವರೂಪಿಯಾಗಿ ಅವರ ಬರವಣಿಗೆ ಸಪಿಂಡೀಕರಣಗೊಂಡಿದೆ. ಅದಕ್ಕೆ ಅವರ ಕಾವ್ಯನಾಮ ಸಂವಾದ ಅನ್ವರ್ಥಕವಾಗಿದೆ.

ಬೇಂದ್ರೆಯವರ ಮೊದಲ ಕೃತಿ ಕೃಷ್ಣಾಕುಮಾರಿ 27 ವಾರ್ಧಕ ಷಟ್ಪದಿಗಳಲ್ಲಿ ರಚಿತವಾದ ಖಂಡಕಾವ್ಯ. ಇದಕ್ಕೆ 30 ಪುಟಗಳ ಸಂಪಾದಕರ ಭೂಮಿಕೆಯನ್ನು ಬರೆದಿದ್ದಾರೆ. ಬೇಂದ್ರೆಯವರು ಪುಣೆಯಲ್ಲಿ ಬಿ.ಎ. ಪದವಿಗಾಗಿ ಅಭ್ಯಾಸ ಮಾಡುತ್ತಿದ್ದ ದಿನಗಳು, ಇಂಗ್ಲಿಷ್ ಮೇಜರ್, ಸಂಸ್ಕೃತ ಮೈನರ್ ಅಭ್ಯಾಸದ ವಿಷಯ. ಕನ್ನಡ ಮಾರಾಠಿ ಇಂಗ್ಲಿಷಿನಲ್ಲಿ ಕಾವ್ಯ ರಚನೆ. ಪ್ರಾರಂಭದ ಕವಿತೆಗಳ ಗಂಟು ಮುಳಾಮುಠಾ ನದಿಯಲ್ಲಿ ಬಿದ್ದು ತೇಲಿಹೋದದ್ದು. ರಜಪೂತ ಸುಂದರಿ ಕೃಷ್ಣಾಕುಮಾರಿಯ ಸೌಂದರ್ಯವೇ ಅವಳ ಶತ್ರುವಾದ ದುರಂತ ಕಥೆಯ ಮೇಲೆ ಒಂದು ನಾಟಕ ಬರೆಯಲು ಪ್ರಾರಂಭಿಸಿ, ತಮ್ಮ ನೆಚ್ಚನ ಕವಿ ಲಕ್ಷ್ಮೀಶನ ವಾರ್ಥಕ ಷಟ್ಪದಿಯಲ್ಲಿ 27 ನುಡಿಯ ಖಂಡಕಾವ್ಯವಾಗಿ ರಚಿಸಿದ್ದು. ಇದನ್ನು ಲಕ್ಷ್ಮೀಶನಿಗೆ ಅರ್ಪಿಸಿದ್ದು. ಬೇಂದ್ರೆಯವರ ಕೃತಜ್ಞತಾ ಪ್ರಜ್ಞೆ, ದೃಶ್ಯಕಾವ್ಯ ಪ್ರಜ್ಞೆ, ಸಾಂಖ್ಯಪ್ರಜ್ಞೆ, ನವ ಅಧ್ಯಾತ್ಮ ಪ್ರಜ್ಞೆ, ಶ್ರೀಅರವಿಂದರ ಚತುರ್ಮುಖ ಸೌಂದರ್ಯ ಸಿದ್ಧಾಂತ ಪ್ರಜ್ಞೆ- ಇವೆಲ್ಲವುಗಳ ಬಗ್ಗೆ ಬರೆಯುತ್ತಾರೆ. ಪ್ರಾಣ ಕಳೆದುಕೊಳ್ಳುವುದೆಂದರೆ ಪಂಚತ್ವದಲ್ಲಿ ಲೀನವಾಗುವುದು, ಪಂಚಪ್ರಾಣಗಳು(ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ), ಪಂಚ ಉಪಪ್ರಾಣಗಳು(ನಾಗ, ಕೂರ್ಮ, ಕ್ರುಕಲ, ದೇವದತ್ತ. ಧನಂಜಯ) ಇವುಗಳ ವಿವರಣೆ ಹಾಗೂ ಚರ್ಚೆ ಉಪಯುಕ್ತವಾಗಿದೆ.

27 ಕವನ ಸಂಕಲನಗಳ ಬಗ್ಗೆ ಅಭ್ಯಾಸಪೂರ್ಣ ಚರ್ಚೆ ಹಾಗೂ ಮಾಹಿತಿ ಒದಗಿಸುವುದು ಸಂಪಾದಕರ ಭೂಮಿಕೆಯ ವೈಶಿಷ್ಟ್ಯವಾಗಿದೆ. ಗರಿಯ ಬಗ್ಗೆ ಬರೆಯುವಾಗ ಗೆಳೆಯರ ಗುಂಪಿನ ಬಗ್ಗೆ, ಅವರು ಸಂಪಾದಿಸಿದ ಜಯಕರ್ನಾಟಕದ ಬಗ್ಗೆ, ಗೆಳೆಯರ ಗಂಪಿನ 20 ಸದಸ್ಯರ ಯಾದಿ, ಗರಿಯಲ್ಲಿರುವ 55 ಪದ್ಯಗಳ ನಾಲ್ಕು ವಿಭಾಗಗಳ ಬಗ್ಗೆ(ಸ್ವ-ಭಾವ, ಸ-ಸ್ನೇಹ, ಸೌಂದರ್ಯ-ಆನಂದ, ಸಮಸ್ಯೆ-ಮನನ) ಬರೆಯುತ್ತಾರೆ. ಗರಿಯ ಮುನ್ನುಡಿಯಲ್ಲಿ, ಇವು ನನ್ನವಲ್ಲ, ಕನ್ನಡದ ಕವನಗಳು. ಕನ್ನಡದ ಅಶರೀರವಾಣಿಯು ಸಾವಿರ ಬಾಯಿಯಿಂದ ತನ್ನ ಕಣಸನ್ನು ಕನ್ನಡಿಸುತ್ತಿದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಈ ಮಾತುಗಳನ್ನು ಕೃಷ್ಣಾಕುಮಾರಿಯ ಭೂಮಿಕೆಯಲ್ಲಿ ಬರೆಯುತ್ತಾರೆ. ಆದ್ದರಿಂದ ಇವೆಲ್ಲ ಭೂಮಿಕೆಗಳನ್ನು ಒಂದೆಕಡೆಗೆ ಓದುವುದು ಬಹಳ ಮಹತ್ವಪೂರ್ಣವಾಗುತ್ತದೆ.

ಮೂರ್ತಿಎಂಬ ಹನ್ನೊಂದು ಕವನಗಳ ಚಿಕ್ಕ ಸಂಗ್ರಹ. ಇದಕ್ಕೆ ಬರೆದ ಭೂಮಿಕೆ ಬಹಳ ಮಹತ್ವದ್ದಾಗಿದೆ. ಅದನ್ನು ಅಣುಮಹಾಕಾವ್ಯವೆನ್ನುತ್ತಾರೆ. ಬೇಂದ್ರೆಯವರ ಜೀವನಮಹಾಕಾವ್ಯ ಔದುಂಬರಗಾಥೆಯ ಒಂದು ಪ್ರಮುಖ ಭಾಗವಾಗಿ ಅದು ಇರುವುದನ್ನು ವಾಮನರು ಚರ್ಚಿಸುತ್ತಾರೆ. ಪ್ರತಿಯೊಂದು ಕವನವನ್ನು ಗೆಳೆಯರ ಗುಂಪಿನ ವಿಘಟನೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಭಾವಗೀತ ಎಂಬ ಪದ್ಯವನ್ನು ಗೆಳೆಯರ ಗುಂಪಿನ ಭಾವಗೀತ ಎಂದು ಕರೆದು ಆ ಕವಿತೆಯಲ್ಲಿ ಅಡಗಿದ ವಿಶೇಷಾರ್ಥವನ್ನು ವಿಶ್ಲೇಷಿಸುತ್ತಾರೆ. ತನ್ನ ಒಡಲ ನೂಲಿನಿಂದ ಬೇಂದ್ರೆ ಗೆಳೆಯರ ಗುಂಪಿನ ಜಾಲ ನೇಯತೊಡಗಿದ್ದು, ಮುಂದೆ ವಜ್ರಾಯುಧದ ಹೊಡೆತ ಪಡೆದದ್ದು, ಅಯ್ಯೋ ನೋವೆ , ಅಹಹ ಸಾವೆ, ವಿಫಲ ಸಫಲ ಜೀವಾ ಸ್ಥಿತಿಗೆ ತಲುಪಿದ್ದು. ಗುಂಪು ಕಟ್ಟುವಲ್ಲಿ ಬೇಂದ್ರೆಯವರ ಸ್ವಾರ್ಥ ಇಲ್ಲದೆ ಇರುವುದು. 1933ರಲ್ಲಿ ಗೆಳೆಯರ ಗುಂಪಿನ ಶ್ರಾದ್ಧ ಮುಗಿಸಿಕೊಂಡೆ ಎಂದೂ ಬೇಂದ್ರೆ ಬರೆಯುತ್ತಾರೆ. ಭಾವಗೀತದ ಹೊಸ ಅರ್ಥದ ಪದರುಗಳು ವಾಮನ ಅವರ ಇಲ್ಲಿಯ ವಿಶ್ಲೇಷಣೆಯಲ್ಲಿ ದೊರೆಯುತ್ತವೆ. ಮೂರ್ತಿ ಸಂಗ್ರಹದ ಕೊನೆಯ ಹಾಡು ಬರೆಯುವಾಗಿನ ಹಿನ್ನೆಲೆ , ಸಂಕಟ, ತಳಮಳದ ಬಗ್ಗೆ ವಾಮನರು ಬರೆಯುತ್ತಾರೆ. ಈ ವಿವರಗಳು ಕವಿತೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ.

ಮೂರ್ತಿಯೊಂದಿಗೆ ಕಾಮ ಕಸ್ತೂರಿಯಯಲ್ಲಿಯ 16 ಕವನಗಳು ಪ್ರಕಟವಾಗುತ್ತಿದ್ದವು. ಈ ಕವಿತೆಗಳನ್ನು ಗಂಡುಹೆಣ್ಣಿನ ಪ್ರೇಮ ಕವನಗಳೆಂದೇ ಪರಿಗಣಿಸಲಾಗುತ್ತಿತ್ತು. ಈ ಕವನಗಳಲ್ಲಿ ಬೇಂದ್ರೆಯವರ ಜೀವನದರ್ಶನವಾದ ಪ್ರಣಯ ಹಾಗೂ ಪ್ರೇಮದ ಆವಿಷ್ಕಾರದ ನೆಲೆಗಳಲ್ಲಿ ಮೌಲಿಕವಾದ ಚಿಂತನೆಗಳನ್ನು ನಮೂದಿಸಿದ ಡಾ| ನಾಗರಾಜ, ಡಾ| ಬಸವರಾಜ ಕಲ್ಗುಡಿ ಮೊದಲಾದವರ ಬರವಣಿಗೆಯ ಹಿನ್ನೆಲೆಯಲ್ಲಿ ವಾಮನರು ಚರ್ಚಿಸಿ, ಬೇಂದ್ರೆಯವರ ದೃಷ್ಟಿಯಲ್ಲಿ ಪ್ರಣಯ, ಪ್ರೀತಿ, ಪ್ರೇಮ, ಕಾಮ, ಒಲವು ಬೇರೆ ಎಂಬುದನ್ನು ಬರೆಯುತ್ತಾರೆ.

ಕಾಮಕಸ್ತೂರಿಯ ಹೊಸ ಆವೃತ್ತಿಯಲ್ಲಿ ಮೂವತ್ತೊಂದು ಕವನಗಳನ್ನು ಸೇರಿಸಿದ್ದರ ಬಗ್ಗೆ ಹೇಳುತ್ತಾರೆ. ಉಯ್ಯಾಲೆ ಕವನ ಸಂಗ್ರಹದಲ್ಲಿ ಬರುವ ಅಷ್ಟಷಟ್ಪದಿ(ಸಾನೆಟ್), ಸೀಸಪದ್ಯ, ಹಾಡು, ವಚನಗಳಾಗಿ ನಾಲ್ಕು ಭಾಗ ಬೇಂದ್ರೆಯವರು ಮಾಡಿದ್ದಾರೆ. ಆ ಕವನಗಳನ್ನು ವಾಮನರು ಶಬ್ದ, ಛಂದ, ಧ್ವನಿ ಮತ್ತು ಹೃದಯ ಎಂದು ವಿಭಜಿಸಿದ್ದಾರೆ. ನಾದಲೀಲೆಯ ಪ್ರಣವೋಪಾಸನೆಯ ಬಗ್ಗೆ ಬರೆಯುತ್ತಾರೆ. ಇದಕ್ಕೆ ಮಾಸ್ತಿಯವರ ಮುನ್ನುಡಿ ಇದೆ. ಈ ಸಂಗ್ರಹದ ಆದಿಯಲ್ಲಿ ಬರೆದ ಬೇಂದ್ರೆಯವರ ನಾಲ್ಕು ಸಾಲುಗಳನ್ನು ವಾಚಕರು ಮರೆಯುವಂತಿಲ್ಲ. (ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ | ನೀಡುವೆನು ರಸಿಕ ನಿನಗೆ | ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ | ಆ ಸವಿಯ ಹಣಿಸು ನನಗೆ ||).

ಕನ್ನಡ ಮೇಘದೂತದ ಎಂಟನೆಯ ಆವೃತಿಯಲ್ಲಿ ಬರೆದ ಭೂಮಿಕೆ ಬಹಳೇ ಉಪಯುಕ್ತವಾಗಿದೆ. ಕಾವ್ಯವಸ್ತುವಿನಿಂದ ಹಿಡಿದು ಕನ್ನಡ ಮೇಘದೂತದ ಮಹೋನ್ನತಿಯ ವರೆಗೆ, ಪೀಠಿಕೆಯಲ್ಲಿ ಬರೆದ 24 ನುಡಿಗಳ ಮಹತ್ವದ ಬಗ್ಗೆ, ಕನ್ನಡದಲ್ಲಿ ಬಂದ ಇತರ ಅನುವಾದಗಳ ತುಲನೆ ಹಾಗೂ ಬೇಂದ್ರೆಯವರು ತೋರಿಸಿದ ಕನ್ನಡದ ಕೆಚ್ಚು ಮೊದಲಾದ ಉಪಯುಕ್ತ ವಿವರಗಳು ಇವೆ. ಕನ್ನಡ ಮೇಘದೂತದಲ್ಲಿ ಬರುವ ಸಂಖ್ಯಾ ಸಿದ್ಧಾಂತದ ವಿಮರ್ಶೆ ಕೂಡ ಇಲ್ಲಿದೆ. ಹಾಡು ಪಾಡು ಕವಿತೆಗಳ ಜೊತೆಗೆ ಬೇಂದ್ರೆಯವರ ಮಗ ರಾಮ ಬರೆದ ಪದ್ಯಗಳನ್ನು (ನನ್ನ ಕವಿತೆಗಳು ಎಂಬ ಶೀರ್ಷಿಕೆಯ ಕೆಳಗೆ) ಸೇರಿಸಲಾಗಿದೆ. ಅದರ ಹಿನ್ನೆಲೆಯನ್ನು ವಾಮನರು ವಿವರವಾಗಿ ಬರೆಯುತ್ತಾರೆ. ಗಂಗಾವತರಣ ಉಪಾಸಕ ಬೇಂದ್ರೆಯವರ ಮುಖವನ್ನು ತೋರುತ್ತದೆ. ಅದರಲ್ಲಿ ಜೋಗಿಯಂತಹ ಮಹತ್ವದ ಕವನಗಳೂ ಇವೆ.

ಪುಸ್ತಕ ಬೇಕಿದ್ದರೆ ಸಂಪರ್ಕಿಸಿ : ಪ್ರಕಾಶಕರು: ಡಾ| ಕೆ.ಎಸ್.ಶರ್ಮಾ, ಬೇಂದ್ರೆ ಸಂಶೋಧನ ಸಂಸ್ಥೆ, ಶ್ರೀ ಮಾತಾ ಪ್ರಕಾಶನ, ವಿಶ್ವಶಮ ಚೇತನ, ಗೋಗುಲ ರೋಡ್, ಹುಬ್ಬಳ್ಳಿ-580 030 ಫೋ: 99868 01909.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more