• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನವೆಂಬ ಮರ್ಕಟವ ತಡೆಯಲಾರೆನೊ ದೇವ

By * ಡಾ| ಜೀವಿ' ಕುಲಕರ್ಣಿ
|

ನೋಡುವದು, ಕಾಣುವದು, ತೋರುವದು, ಇರುವದು-

ಒಂದು ಎಂದು ಭ್ರಮಿಸದಿರಿ, ಭ್ರಾಂತಿ ಎಂದೂ ತಪ್ಪದು,

ಬೇರೆ ಜನರ ಜಗಳವೇಕೆ? ಗೊಂದಲ ನಮ್ಮೊಳಗೆ ಇದೆ!

ನಮ್ಮ ಮನ-ಚಿತ್ತ-ಬುದ್ಧಿ ಎಲ್ಲಿ ಒಂದೆ ಆಗಿವೆ?

ಬಹಳ ದಿನಗಳ ಮೇಲೆ ನಾನು ಬರೆದ ಒಂದು ಕವಿತೆಯ ಚರಣ ಇದು. ನನ್ನ ಬರವಣಿಗೆ ನಿಂತಾಗ ಗುರು ಬೇಂದ್ರೆಯವರು ಕೈಹಿಡಿದು ನಡೆಸಲು ಬಂದು ಬಿಡುತ್ತಾರೆ. ಅವರ ಎಂದೋ ಹೇಳಿದ ಮಾತುಗಳು ನನ್ನ ಮಾತಿನಲ್ಲಿ ಸೇರಿಬಿಡುತ್ತವೆ. ನನಗೆ ವಿಚಾರ ಮಾಡಲು ಹಚ್ಚುತ್ತವೆ. ಜೀವನದಲ್ಲಿ ನಾವು ನೋಡುವದೇ ಬೇರೆ, ವಸ್ತು ಕಾಣುವದೇ ಬೇರೆ. ಅದು ತೋರುವದೇ ಬೇರೆ. ವಸ್ತುಸ್ಥಿತಿ ಇರುವದೇ ಬೇರೆ. ಇಂಥ ಪರಿಸ್ಥಿತಿಯಲ್ಲಿ ಭ್ರಾಂತರಾಗುವುದಕ್ಕಿಂತ ಶಾಂತ ಚಿತ್ತದಿಂದ ತಿಳಿಯುವುದು ಅವಶ್ಯಕವೆನಿಸುತ್ತದೆ. ನಮಗೆ ಇನ್ನೊಬ್ಬರ ಜಗಳ ನೋಡಿ ಆನಂದಿಸುವ ಸಣ್ಣತನ ಬಂದುಬಿಡುತ್ತದೆ. ನಮ್ಮೊಳಗೇ ಸಾಕಷ್ಟು ಗೊಂದಲ ಇರುವುದನ್ನು ನಾವು ಮರೆಯುತ್ತೇವೆ. ನಮ್ಮವೇ ಆದ ಮನಸ್ಸು, ಚಿತ್ತ ಹಾಗೂ ಬುದ್ಧಿ ನಮ್ಮ ಹಿಡಿತದಲ್ಲಿರುವುದಿಲ್ಲ. ಒಂದರ ಮಾತು ಇನ್ನೊಂದು ಕೇಳುವುದಿಲ್ಲ. ಇವು ಒಂದಾಗಿರಬೇಕಾದರೆ ಮನವನ್ನು ಏಕಾಗ್ರಗೊಳಿಸುವ ಧ್ಯಾನದ ಅವಶ್ಯಕತೆ ಇರುತ್ತದೆ.

ಎಲ್ಲರೂ ನೋಡುತ್ತಾರೆ. ಎಲ್ಲರ ದೃಷ್ಟಿ ಒದೆ ರೀತಿ ಇರುವುದಿಲ್ಲ. ಅದಕ್ಕೆ ಅವರವರ ಸಂಸ್ಕಾರವೇ ಕಾರಣ. ನಮ್ಮಲ್ಲಿ ಆಶಾವಾದಿಗಳಿದ್ದಾರೆ, ನಿರಾಶವಾದಿಗಳಿದ್ದಾರೆ, ಇದಕ್ಕೆ ವಿಪರೀತವಾದ ಸಿನಿಕರು ಇದ್ದಾರೆ. ಇವರ ಮುಂದೆ ಹಾಲಿನ ಗ್ಲಾಸು ಇದೆ ಎಂದು ಭಾವಿಸಿರಿ. ಆ ಗ್ಲಾಸು ಅರ್ಧ ತುಂಬಿದೆ ಎಂದಿಟ್ಟುಕೊಳ್ಳಿ. ಇದರ ಬಗ್ಗೆ ಮೂವರ ಪ್ರತಿಕ್ರಿಯೆ ಹೇಗಿರುತ್ತದೆ ನೋಡೋಣ. ಅಶಾವಾದಿ ಎಲ್ಲವನ್ನೂ ಧನಾತ್ಮಕವಾಗಿಯೇ ವಿಚಾರಿಸುತ್ತಾನೆ. ಗ್ಲಾಸು ಅರ್ಧ ತುಂಬಿದೆ, ಪರವಾಗಿಲ್ಲ ಎನ್ನುತ್ತಾನೆ. ನಿರಾಶವಾದಿ ಅದೇ ರೀತಿಯಲ್ಲಿ ವಿಚಾರಿಸುವುದಿಲ್ಲ. ಅವನಿಗೆ ಅರ್ಧ ಗ್ಲಾಸು ಬರಿದಾಗಿದೆಯಲ್ಲ ಎಂಬ ಚಿಂತೆ. ತುಂಬಿದ ಭಾಗ ನೋಡುವುದಿಲ್ಲ, ಬರಿದಾಗಿದ್ದ ಭಾಗ ಕಾಣುತ್ತದೆ. ಇನ್ನು ಸಿನಕ ರೀತಿಯೇ ವಿಚಿತ್ರ, ಅವನಿಗೆ ಎಲ್ಲದರಲ್ಲಿಯೂ ಸಂಶಯ. ಅವನಿಗೆ ಅರ್ಧ ತುಂಬಿದ ಸುಖವಿಲ್ಲ, ಅರ್ಧ ಏಕೆ ಬರಿದಾಗಿದೆ ಎಂಬ ಚಿಂತೆಯಿಲ್ಲ. ಅವನಿಗೆ ಸಂಶಯ, ಇದಲ್ಲಿ ವಿಷವಸ್ತು ಸೇರಿಲ್ಲತಾನೇ? ಎಂಬ ದುಗುಡ. ನೆರೆಹಾವಳಿಯಲ್ಲಿ ಧನ ಸಹಾಯ ಕೇಳಲು ಹೊರಟಿದ್ದೆವು. ಕೆಲವರು ಮರುಮಾತಡದೆ ಸಹಾಯ ಮಾಡಿದರು. ಕೆಲವರು ಬೈಯ್ಯುತ್ತ ಹಣ ಕೊಟ್ಟರು. ಇನ್ನು ಕೆಲವರು ಈ ಹಣವನ್ನೆಲ್ಲ ಮಧ್ಯದ ಜನರೇ ತಿಂದುಹಾಕುತ್ತಾರೆ. ಸಂತ್ರಸ್ತರು ನಮ್ಮನ್ನು ಬಂದು ಕೇಳಲಿ ಅವರಿಗೆ ಕೊಡುವೆವು ಅಂದರು.

ನನ್ನ ತಂದೆ ನಾವು ಚಿಕ್ಕವರಿರುವಾಗ ಒಂದು ಕತೆ ಹೇಳಿದ್ದರು. ಅದು ಅವಿವೇಕಿ-ಕುಟುಂಬದ ಕತೆ. ಒಬ್ಬ ಹಳ್ಳಿಯ ಶ್ರೀಮಂತ ಜಮೀನುದಾರ, ತನ್ನ ಮನೆಯ ಮಹಡಿಯ ಮೇಲೆ ನಿಂತಿದ್ದನಂತೆ. ಸಾಕಷ್ಟು ದಷ್ಟಪುಷ್ಟನಾಗಿ ಬೆಳೆದಿದ್ದ. ಅವನ ಸ್ಥೂಲದೇಹ ಕಂಡು ರಸ್ತೆಯಲ್ಲಿ ಹೋಗುವ ಬಾಲಕನೋರ್ವ ನಸುನಕ್ಕನಂತೆ. ಶ್ರೀಮಂತನಿಗೆ ಸಂತೋಷವಾಯ್ತು. ಈ ಬಾಲಕ ತನ್ನ ಐಶ್ವರ್ಯಕಂಡು ನಕ್ಕನೆಂದು ಭಾವಿಸಿ ಅವನನ್ನು ಕರೆಕಳುಹಿಸಿದ. ಅವನು ನಕ್ಕ ಕಾರಣ ಕೇಳಿದ. ಆ ಹುಡುಗ ಬಾಯ್ಬಿಡಲು ಸಿದ್ಧನಿಲ್ಲ. ಅವನಿಗೆ ಬಹುಮಾನ ಕೊಡುವ ಇಚ್ಛೆಯಿಂದ, ಪರವಾಗಿಲ್ಲ ಹೇಳು ಮಗು ಯಾಕೆ ನಕ್ಕೆ ಎಂದ. ಕೊನೆಗೆ ಆ ಹುಡುಗ ಹೇಳಿದ, ಧಣಿ ನೀವು ಇಷ್ಟು ದಪ್ಪಗಾಗಿದ್ದೀರಿ, ನೀವು ಸತ್ತರೆ, ನಿಮ್ಮನ್ನು ಹೇಗೆ ಹೊತ್ತುಕೊಂಡು ಕೆಳಗೆ ತರುತ್ತಾರೆ ಎಂಬ ಯೋಚನೆಬಂದಾಗ ನಗು ಬಂತು ಎಂದ. ಧನಿಕನಿಗೆ ಕೋಪ ಬಂತು. ಈ ಹುಡುಗನನ್ನು ಕೊಣೆಯಲ್ಲಿ ಹಾಕಿಡಲು ಸೇವಕರಿಗೆ ಹೇಳಿದ. ಅವನ ಅಪ್ಪ ಮಗನನ್ನು ಹುಡುಕಿಕೊಂಡು ಬಂದ. ಧಣಿ ಅವನ ಮಗನ ಅವಿವೇಕದ ಮಾತು ಹೇಳಿದ. ಇವನಿಗೆ ಬಹುಮಾನ ಕೊಡಬೇಕೆಂದಿದ್ದೆ, ಆದರೆ ಎಂತಹ ಅವಿವೇಕಿಯಂತೆ ಮಾತನಾಡಿದ. ಇವನಿಗೆ ಇಷ್ಟು ಬುದ್ಧಿ ಹೇಳು ಎಂದ. ತಂದೆ ಮಗನನ್ನು ತರಾಟೆಗೆ ತೆಗೆದುಕೊಂಡ. ದೇಹ ದಪ್ಪಗಾಗಿದ್ದರೇನಾಯ್ತು ಸತ್ತರೆ ಎರಡು ಭಾಗ ಮಾಡಿ ಕೆಳಗಿಳಿಸುತ್ತಿದ್ದರು. ಇದರಲ್ಲಿ ನಗುವದೇನಿದೆ? ಎಂದ. ಧನಿಕ ಆ ಹುಡುಗನ ಅಪ್ಪನನ್ನೂ ಕೋಣೆಯಲ್ಲಿ ಬಂಧಿಸಿಡಲು ಆಜ್ಞಾಪಿಸಿದ. ಮಗ, ಮೊಮ್ಮಗನನ್ನು ಹುಡುಕುತ್ತ ಅವರ ಅಜ್ಜ ಆ ಕಡೆ ಬಂದ. ಧನಿಕ ಆ ಮುದುಕಪ್ಪನಿಗೆ ಅವಿವೇಕಿ ಮಗ, ಮೊಮ್ಮಗನ ಕತೆ ವಿವರಿಸಿದ. ಇವರಿಗೆ ಬುದ್ಧಿ ಹೇಳು ಎಂದ. ವೃದ್ಧ ಅಜ್ಜ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ. ಇಂಥ ದೊಡ್ಡ ಧಣಿಗಳೇ ಸತ್ತರೆ ಅವರನ್ನು ತುಂಡೇಕೆ ಮಾಡಬೇಕು? ಮನೆಗೇ ಬೆಂಕಿಹಚ್ಚುತ್ತಿದ್ದರು, ಇದಲ್ಲಿ ನಗುವಂತಹದೇನಿದೆ? ಎಂದಿದ್ದ. ಇದು ಅವಿದೇಕಿಗಳ ಕುಟುಂಬ ಎಂದರಿತು ನಿರುಪಾಯನಾಗಿ ಧನಿಕ ಅವರನ್ನು ಬಿಡಬೇಕಾಯಿತು.

ಕಾಣುವುದು ಯಾವಾಗಲೂ ಸತ್ಯವಾಗಿರುವುದಿಲ್ಲ. ಜಗತ್ತಿನಲ್ಲಿ ಹೆಚ್ಚಿನ ಜನ ಮುಖವಾಡ ಧರಿಸಿರುತ್ತಾರೆ. ಅಲ್ಲಿ ಅಡಗಿರುವ ಸತ್ಯ ಅರಿಯಬೇಕಾದರೆ ಪ್ರತ್ಯುತ್ಪನ್ನ ಮತಿ ಬೇಕಾಗುತ್ತದೆ. ಹೆಚ್ಚಾಗಿ ಸಾಮಾನ್ಯ ಜನತೆಗೆ ಗಲಿಬಲ್ ಎನ್ನುತ್ತಾರೆ. ಸುಲಭವಾಗಿ ಮೋಸ ಹೋಗುವವರು ಎಂದರ್ಥ. ಹೆಚ್ಚಿನ ಭಿಕ್ಷುಕರು ನಿಮ್ಮ ಗಮನ ಸೆಳೆಯುತ್ತಾರೆ. ಒಬ್ಬ ಇಂಗ್ಲಿಷ್ ಲೇಖಕ ವಾಯುವಿಹಾರಕ್ಕೆ ಹೊರಟಿದ್ದ. ದಾರಿಯಲ್ಲಿ ಒಬ್ಬ ಬಡವನಂತೆ ನಟಿ ಮೂರು ದಿನ ಉಪವಾಸ ಇರುವುದಾಗಿ ತೋಡಿಕೊಂಡ. ಲೇಖಕನ ಮನ ಕರಗಿತು. ಒಂದು ಪೌಂಡಿನ ನೋಟು ಅವನಿಗೆ ಕೊಟ್ಟ. ಅಷ್ಟರಲ್ಲಿ ಲೇಖಕನನ್ನು ಗುರುಸಿದ ಮಿತ್ರನೊಬ್ಬ ಹೇಳಿದೆ, ಆ ಬಡ ವ್ಯಕ್ತಿಗೆ ನೀವು ಹಣ ಕೊಟ್ಟಿರಾ? ಅಹುದು ಎಂಬ ಉತ್ತರ ಬಂದಾಗಿ, ಮಿತ್ರನೆಂದ, ಅವನೊಬ್ಬ ವಂಚಕ, ಎಲ್ಲರಿಂದ ಹೀಗೆ ಹಣ ಪಡೆಯುತ್ತಾನೆ. ನಿಮಗೀಗ ಹಣ ಕಳೆಯಿತು ಎಂದು ದುಃಖವಾಗಿರಬೇಕಲ್ಲ? ಎಂದಾಗ, ಲೇಖಕ ಮಾರ್ಮಿಕವಾಗಿ ಉತ್ತರಿಸಿದ, ನನಗೆ ದುಃಖವೇನಿಲ್ಲ, ಅವನು ಹಣ ಪಡೆಯಲು ಅರ್ಹನಾಗಿದ್ದಾನೆ. ನಾನು ಆ ಹಣ ಕೊಟ್ಟದ್ದು ಅವನ ಉತ್ತಮ ನಟನೆಗಾಗಿ ಎಂದ.

ತೋರುವುದು ನಿಜವಾಗಿ ಇರುವುದಿಲ್ಲ. ಟೂಥಪೇಸ್ಟ್, ಸೋಪ್, ಶಾಂಪೂ, ಡ್ರಿಂಕ್ಸ್ ಮೊದಲಾದ ಜಾಹೀರಾತು ಮಾಡುವ ಒಬ್ಬ ನಟ ಅಥವಾ ನಟಿ ಅವನ್ನು ಬಳಸುತ್ತಾರೇನು. ಇದು ಶುದ್ಧ ಸುಳ್ಳು, ಆದರೂ ನಾವೂ ಮೋಸಹೋಗುತ್ತೇವಲ್ಲ. ಹೆಚ್ಚಾಗಿ ಮಾರ್ಕೆಟಿಂಗ್ ಹಾಗೂ ಬಿಸ್‌ನೆಸ್ ಮ್ಯಾನೇಜಮೆಂಟ್ ಕ್ಲಾಸಿನಲ್ಲಿ ಸುಳ್ಳನ್ನು ಸತ್ಯದಂತೆ ತೋರುವ ಕಲೆಯಲ್ಲಿ ಪರಿಣತಿ ನೀಡಲಾಗುತ್ತದೆ.

ಇರುವದು ಎಷ್ಟೋಸಲ ತೋರುವುದಿಲ್ಲ. ಅದರ ಸತ್ಯದ ಕಲ್ಪನೆ ಬಂದಾಗ ಆಗುವ ಪ್ರಕ್ರಿಯೆಯೇ ಬೇರೆ. ಒಂದು ಆಫೀಸಿನಲ್ಲಿ ಒಬ್ಬ ಕಾರಕೂನ ಪ್ರತಿ ದಿನ ತಡವಾಗಿ ಬರುತ್ತಿದ್ದ. ಬಾಸ್ ಅಹಲವು ಸಲ ವಾರ್ನಿಂಗ್ ಕೊಟ್ಟ, ಸಂಬಳದಲ್ಲಿ ಕಡಿತ ಮಾಡಿದ. ಆದರೂ ಆ ಆಸಾಮಿ ವಾರದಲ್ಲಿ 2-3 ಸಲವಾದರೂ ತಡವಾಗಿ ಬರುತ್ತಿದ್ದ. ಒಮ್ಮೆ ಅವನನ್ನು ಕರೆಸಿ ನಿಜವಾದ ಕಾರಣ ಏನೆಂದು ಕೇಳಿದಾಗ ಅಧಿಕಾರಿಗೆ ಬಹಳ ಪಶ್ಚಾತ್ತಾಪವಾಯಿತು. ಅವನ ಹೆಂಡತಿ ತೀರಿದ್ದಳು. ಮಗನ ಊಟದಡಬ್ಬಿ ಸಿದ್ಧಪಡಿಸಿ ದಿನಾಲೂ ಶಾಲೆಗೆ ಬಿಟ್ಟು ಬರುತ್ತಿದ್ದ. ಸಂಜೆ ಕರೆತರಲು ಬೇರೆ ವ್ಯವಸ್ಥೆ ಮಾಡಿದ್ದ. ಬಸ್ ತಡವಾಗಿ ಬಂದಾಗ ಇವನ ಲೋಕಲ್ ಟ್ರೇನ್ ತಪ್ಪುತ್ತಿತ್ತು. ಆಗ ಆಫೀಸಿಗೂ ತಡವಾಗುತ್ತಿತ್ತು. ಆಗ ಬಾಸ್ ಹೇಳಿದ, ನಾಳೆಯಿಂದ ನೀನು ಒಂದು ತಾಸು ತಡವಾಗಿ ಆಫೀಸಿಗೆ ಬಾ, ಮತ್ತೆ ಒಂದು ತಾಸು ಹೆಚ್ಚು ಕೆಲಸಮಾಡು ಎಂದಾಗ ಆ ಬಡಪಾಯಿಯ ಹರ್ಷ ಕಂಡ ಬಾಸ್‌ನ ಆನಂದಕ್ಕೆ ಮೇರೆ ಇರಲಿಲ್ಲ. (ಆ ಬಾಸ್ ಒಂದು ಸೆಮಿಅನಾರ್‌ನಲ್ಲಿ ತನ್ನ ಅನುಭವ ಹೇಳಿದಾಗ ನಾನು ಪ್ರತ್ಯಕ್ಷದರ್ಶಿಯಾಗಿದ್ದೆ.)

ನಮ್ಮ ಎಲ್ಲ ಇಂದ್ರಿಯಗಳನ್ನು ಕಡಿವಾಣದಲ್ಲಿಟ್ಟುಕೊಳ್ಳುವುದು ಮನಸ್ಸು. ನಮ್ಮ ಬಂಧ ಹಾಗೂ ಮೋಕ್ಷ ನಮ್ಮ ಮನವನ್ನು ಅವಲಂಬಿಸಿವೆ ಎನ್ನಲಾಗುತ್ತದೆ. (ಮನೋಹಿ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ). ಮನವೆಂಬ ಮರ್ಕಟವ ತಡೆಯಲಾರೆನೊ ದೇವ ಎಂದು ದಾಸರು ಹಾಡಿದರು. ಮನಸ್ಸಿನ ಮೇಲಿರುವುದು ಚಿತ್ತ. ಪತಂಜಲಿ ಮಹರ್ಷಿಗಳು ಯೋಗವನ್ನು, ಚಿತ್ತವೃತ್ತಿ ನಿರೋಧಃ ಎಂದರು. ಚಿತ್ತವು ಮನಸ್ಸು ಬುದ್ಧಿ ಎರಡನ್ನೂ ಹಿಡಿತದಲ್ಲಿಡುತ್ತದೆ. ಬುದ್ಧಿವಂತರೆಲ್ಲ ಪ್ರಾಮಾಣಿಕರೂ ಸತ್ಯಸಂಧರೂ ಆಗಿರುವುದಿಲ್ಲ. ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ವಿವೇಕ ಮುಖ್ಯ. ಬೇಂದ್ರೆಯವರ ಕಾವ್ಯ ಹೃದಯ ಮತ್ತು ವಿವೇಕಕ್ಕೆ ಅಮೃತಸಿಂಚನ ಮಾಡುವಂತಹದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more