• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಲಚಂದ್ರಶಾಸ್ರಿಗಳ 90ನೆಯ ವರ್ಧಂತಿ

By * ಡಾ| ಜೀವಿ ಕುಲಕರ್ಣಿ
|
ಬ್ರಹ್ಮಶ್ರೀ ಭಾಲಚಂದ್ರಶಾಸ್ತ್ರಿಗಳು ಧಾರವಾಡದ ಬಳಿಯಲ್ಲಿರುವ ಉಪ್ಪಿನಬೆಟಗೇರಿಯವರು. ಇವರದು ವೇದವಿದ್ವಾಂಸರ, ಶ್ರೋತ್ರಿಯರ ಮನೆತನ. ಇವರ ಅಜ್ಜ ಪಂ.ಕೃಷ್ಣಶಾಸ್ತ್ರಿಗಳು ಧಾರವಾಡದ ಶ್ರೀಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಯಾಗಿದ್ದರು. ಮೊದಲ ಪ್ರಾಂಶುಪಾಲರಾಗಿದ್ದ ಅಗ್ನಿಹೋತ್ರಿ ತಮ್ಮಣ್ಣಾಚಾರ್ಯರ ನೆಚ್ಚಿನ ವಿದ್ಯಾರ್ಥಿಯಾಗಿದ್ದರು. ಮುಂದೆ ತಮ್ಮಣ್ಣಾಚಾರ್ಯರ ನಂತರ ಇವರೇ ಪಾಠಶಾಲೆಯ ಎರಡನೆಯ ಪ್ರಾಂಶುಪಾಲರಾದರು (1899). ಸಾಹಿತ್ಯ, ಜ್ಯೋತಿಷ್ಯ, ನ್ಯಾಯ, ವೇದಾಂತ, ಧರ್ಮಶಾಸ್ತ್ರಗಳಲ್ಲಿ ಅನುಪಮ ನೈಪುಣ್ಯ ಪಡೆದಿದ್ದರಲ್ಲದೆ ಕನ್ನಡ, ಸಂಸ್ಕೃತ ಹಾಗೂ ಮರಾಠಿಯಲ್ಲಿ ಅಸ್ಖಲಿತವಾಗಿ ವ್ಯಾಖ್ಯಾನಿಸುವ ಮಹಾವಾಗ್ಮಿಗಳಾಗಿದ್ದರು. ಇವರು ಭಾರತದಲ್ಲಿಯ ವಿದ್ವತ್ ಸಭೆಗಳಲ್ಲಿ ವ್ಯಾಖ್ಯಾನ ಮಾಡಿ ಪಾಠಶಾಲೆಯ ಕೀರ್ತಿ ದೇಶದಲ್ಲೆಲ್ಲ ಹರಡಲು ಕಾರಣರಾಗಿದ್ದರು.

1907ರಲ್ಲಿ ಕಾಶಿಯ ಸನಾತನ ಧರ್ಮ ಮಂಡಲದವರು ವಿದ್ವತ್ ಸಭೆಯನ್ನು ಕಲಕತ್ತಾ ನಗರದಲ್ಲ್ಲಿ ಏರ್ಪಡಿಸಿದಾಗ ಲೋಕಮಾನ್ಯ ತಿಲಕರು ಪಂ. ಕೃಷ್ಣಶಾಸ್ತ್ರಿಗಳನ್ನು ದಕ್ಷಿಣಭಾಗದ ಪ್ರತಿನಿಧಿಯೆಂದು ಆಯ್ಕೆಮಾಡಿ ಕಳಿಸಿದ್ದರು. ಪಂ.ಕೃಷ್ಣಶಾಸ್ತ್ರಿಗಳು ಸದ್ಗುರು ಬ್ರಹ್ಮಚೈತನ್ಯರ ಅಪೇಕ್ಷೆನ್ನು ಕಾರ್ಯರೂಪಕ್ಕೆ ತಂದರು, ಧಾರವಾಡದಲ್ಲಿ ಎರಡು ರಾಮ ಮಂದಿರಗಳನ್ನು ಸ್ಥಾಪಿಸಿದರು. ಲೌಕಿಕ ಕಾಯುಗಳಿಂದ ನಿವೃತ್ತಿ ಬಯಸಿ ಅವರು 1921ರಲ್ಲಿ ಸಂನ್ಯಾಸವನ್ನು ಸ್ವೀಕರಿಸಿದರು. ಪಾಠಶಾಲೆಯ ಅಭಿವೃದ್ಧಿಗಾಗಿ ಅವರು ತಮ್ಮ ಜೀವನವನ್ನೇ ಗಂಧದಂತೆ ತೇಯ್ದಿದ್ದರು. ಅದರ ಶಾಶ್ವತ ಕುರುಹಾಗಿ ಪಾಠಶಾಲೆಯ ಪೂರ್ವದಿಕ್ಕಿನಲ್ಲಿ ಅವರ ಸಮಾಧಿ ಇದೆ.

ಪಂ.ಭಾಲಚಂದ್ರಶಾಸ್ತ್ರಿಗಳ ತಂದೆ ಪಂ.ನಾಗೇಶಶಾಸ್ತ್ರಿಯವರೂ ಪಾಠಶಾಲೆಯ ಪ್ರಾಂಶುಪಾಲರಗಿದ್ದರು(1920-41). ಇವರು ಬ್ರ.ಶ್ರೀ.ವಿರೂಪಾಕ್ಷಶಾಸ್ತ್ರಿಗಳಲ್ಲಿ ನ್ಯಾಯ, ವೇದಾಂತ ಅಧ್ಯಯನ ಮಾಡಿ ಮೈಸೂರಿನ ವಿದ್ವತ್ಪರೀಕ್ಷೆಯಲ್ಲಿ ಪ್ರಥಮರಾಗಿ ಉತ್ತೀರ್ಣರಾಗಿದ್ದರು. ಪುಣೆಯ ಸರಕಾರಿ ಆರ್ಟ್ಸ್ ಕಾಲೇಜಿನಲ್ಲಿ ಇವರಿಗೆ ಸಂಸ್ಕೃತ ಪ್ರಾಧ್ಯಾಪಕ ಸ್ಥಾನಕ್ಕೆ ಆಮಂತ್ರಣ ಬಂದಿತ್ತು. ಆದರೂ ತಮ್ಮ ಹಿರಿಯರು ಪೋಷಿಸಿದ ಸಂಸ್ಥೆ ಎಂಬ ಅಭಿಮಾನದಿಂದ ಧಾರವಾಡದ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಧಾನ ಅಧ್ಯಾಪಕರಾಗಿ ಸೇರಿದರು. ಇವರ ವಿದ್ವತ್ತಿನಿಂದ ಆಕರ್ಷಿತರಾದ ವಿದ್ಯಾರ್ಥಿಗಳು ಕರ್ನಾಟಕ, ಮೈಸೂರು(ಹಳೆಯ) ಹಾಗೂ ಮಹಾರಾಷ್ಟ್ರದಿಂದ ಬಂದರು, ಧಾರವಾಡದ ಪಾಠಶಾಲೆಯನ್ನು ಸೇರಿದರು. ಇದು ಇವರ ಘನತೆಗೆ ಪ್ರಮಾಣದಂತಿತ್ತು. ಡಾ| ಭಂಡಾರಕರರು ಇವರಿಗೆ ಡಾಕ್ಟರ್ ಆಫ್ ನ್ಯಾಯ ಎಂಬ ಪ್ರಶಸ್ತಿಯನ್ನು ನೀಡಿದರೆ ಕಾಶಿಯ ಬ್ರಾಹ್ಮಣ ಸಭೆಯವರು ಇವರಿಗೆ ವಿದ್ಯಾಲಂಕಾರ ಎಂಬ ಬಿರುದನ್ನು ನೀಡಿದ್ದರು.

ಪಂ. ಭಾಲಚಂದ್ರಶಾಸ್ತ್ರಿಗಳು ತಾತಪಾದರಲ್ಲಿ ವೇದ, ನ್ಯಾಯ, ವೇದಾಂತ ಅಧ್ಯಯನ ಮಾಡಿದರು. ಮೈಸೂರಿನಲ್ಲಿ ಅಭ್ಯಾಸ ಮುಂದುವರಿಸಿದರು, ನ್ಯಾಯಶಾಸ್ತ್ರದ ಪರೀಕ್ಷೆಯಲ್ಲಿ ಪ್ರಥಮರಾಗಿದ್ದರು. ನಂತರ ಪುಣೆಯ ಕವೀಶ್ವರ ದತ್ತಾತ್ರೇಯಶಾಸ್ತ್ರಿಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದರು. ತಂದೆಯವರ ಅಕಾಲಿಕ ಅಗಲುವಿಕೆಯಿಂದಾಗಿ ವ್ಯಾಸಂಗ ನಿಲ್ಲಿಸಿ ಧಾರವಾಡಕ್ಕೆ ಬರಬೇಕಾಯಿತು. ತಂದೆ ಪಂ. ನಾಗೇಶಶಾಸ್ತ್ರಿಗಳ ಆಕಸ್ಮಿಕ ಅಗಲುವಿಕೆಯಿಂದಾಗಿ ಪಾಠಶಾಲೆಗೆ ನಷ್ಟವಾಯಿತು. ಅದನ್ನು ತುಂಬಲು ಅವರ ಸುಪುತ್ರರಾದ ಪಂ.ಭಾಲಚಂದ್ರಶಾಸ್ತ್ರಿಗಳೇ ಪಾಠಶಾಲೆಯ ಪ್ರಾಂಶುಪಾಲರಾಗಬೇಕಾಯಿತು. ಇವರು ಸುದೀರ್ಘಕಾಲ (1942-85) ಪ್ರಧಾನ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ತಮ್ಮ ನಾಲ್ಕನೆಯ ಸುಪುತ್ರ ಡಾ|ರಾಜೇಶ್ವರಶಾಸ್ತ್ರಿಗೆ ಆ ಕೆಲಸವನ್ನು ಒಪ್ಪಿಸಿದ್ದಾರೆ. ಈಗ ಉಪ್ಪಿನಬೆಟಗೇರಿ ಪಂಡಿತ ಮನೆತನದ ನಾಲ್ಕನೆಯ ತಲೆಮಾರಿನ ವಿದ್ವಾಂಸರು ಸಂಸ್ಕೃತಪಾಠಶಾಲೆಯ ಪ್ರಾಂಶುಪಾಲರಾಗಿದ್ದಾರೆ.

ಪಂ.ಭಾಲಚಂದ್ರಶಾಸ್ತ್ರಿಗಳು 32 ಗ್ರಂಥಗಳನ್ನು ರಚಿಸಿದ್ದಾರೆ. ಯಜ್ಞಯಾಗಾದಿಗಳನ್ನು ನಡೆಸುವಲ್ಲಿ ಇವರು ನಿಸ್ಸೀಮರು. ಇವರ ಅರವತ್ತು, ಎಪ್ಪತ್ತು, ಎಂಭತ್ತನೆಯ ವರ್ಷ ಸಾರ್ವಜನಿಕವಾಗಿ ಸನ್ಮಾನಿಸಬೇಕೆಂದು ಮಂತ್ರಿಗಳು, ಉದ್ಯಮಪತಿಗಳು, ವಿದ್ವಾಂಸರು, ಶಿಷ್ಯರು, ಅಪ್ತರು ಎಷ್ಟು ಪ್ರಯತ್ನಿಸಿದರೂ ಅವರಿಗೆ ಯಶಸ್ಸು ಲಭಿಸಿರಲಿಲ್ಲ, ಶಾಸ್ತ್ರಿಗಳು ಒಪ್ಪಿಗೆ ನೀಡಿರಲಿಲ್ಲ. ಪ್ರಚಾರ, ಸತ್ಕಾರ ಸನ್ಮಾನ, ಎಂದರೆ ಪಂ. ಭಾಲಚಂದ್ರಶಾಸ್ತ್ರಿಗಳಿಗೆ ಸೇರುವುದಿಲ್ಲ. ಅವರು ಧ್ಯಾನ, ಕರ್ಮಾನುಷ್ಠಾನದಲ್ಲಿ ಸದಾ ಮಗ್ನರು.

ಅವರ ತೊಂಬತ್ತೊಂದನೆಯ ಹುಟ್ಟುಹಬ್ಬವನ್ನು ಆಚರಿಸಲು ವಿದ್ಯಾರ್ಥಿಗಳು ಮುಂದೆಬಂದಾಗ ಸಣ್ಣ ಪ್ರಮಾಣದಲ್ಲಿ ಮಾಡಲು ಅನುಮತಿಯಿತ್ತರು. ಶ್ರೀಕ್ಷೇತ್ರ ಹೆಬ್ಬಳ್ಳಿಯ ಪ.ಪೂ.ದತ್ತಾವಧೂತರು ಪಾಠಶಾಲೆಯ ಹಳೆಯ ಶಿಷ್ಯರು. ಅವರ ಅಧ್ಯಕ್ಷತೆಯಲ್ಲಿ ಒಂದು ವೇದಶಾಸ್ತ್ರ ಪ್ರಬೋಧಕ ಸಮಿತಿ ಆಯೋಜಿತವಾಯ್ತು. ಪಂ. ಭಾಲಚಂದ್ರಶಾಸ್ತ್ರಿಗಳ 91ನೆಯ ವರ್ಧಂತಿಯನ್ನು ಆಚರಿಸುವ ಯೋಜನೆ ರೂಪಗೊಂಡಿತು. ವಿದ್ಯಾರಣ್ಯ ಹೈಸ್ಕೂಲಿನ ಬಯಲಲ್ಲಿ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಮುಂಜಾನೆಯಿಂದ ರಾತ್ರಿಯ ವರೆಗೆ ಸಹಾಸ್ರಾರು ಜನರಿಗೆ ಊಟ-ಉಪಚಾರದ ವ್ಯವಸ್ಥೆಯಾಯಿತು. ಭಾಗವಹಿಸಿದದ ಪಂಡಿತರಿಗೆಲ್ಲ ಸಂಭಾವನೆ ನೀಡಲಾಯ್ತು. ಅಚ್ಚರಿಯೆಂದರೆ ಸಾರ್ವಜನಿಕರಿಂದ ಧನಸಂಗ್ರಹಿಸಲಿಲ್ಲ. (ಎರಡು ಮೂರು ಶಿಷ್ಯರು ಅನಾಮಿಕರಾಗಿ ಎಲ್ಲ ವೆಚ್ಚದ ಭಾರ ಹೊತ್ತರು.) ಏಳು ದಿನಗಳ ವರೆಗೆ ಹೋಮ-ಹವನ, ವಿದ್ವತ್ಸಭೆ ಹಾಗೂ ಮನರಂಜನೆಯ ಕಾರ್ಯಕ್ರಮ ಆಯೋಜಿಸಲಾಯ್ತು. ಹಲವಾರು ಯತಿವರೇಣ್ಯರು ಸಭೆಯಲ್ಲಿ ಭಾಗವಹಿಸಿದರು. ಪ್ರಮುಖರಾದವರೆಂದರೆ ಕಂಚಿಯ ಶಂಕರಮಠದ ಸ್ವಾಮಿಗಳು ಮತ್ತು ಉಡುಪಿ ಮಠದ ಶ್ರೀಶ್ರೀ ವಿಶ್ವೇಶತೀರ್ಥರು. ಪೇಜಾವರ ಮಠದಿಂದ ಪ್ರತಿ ವರ್ಷ ಕೊಡಲಾಗುವ ಅತುಚ್ಚ ಗೌರವ/ಪ್ರಶಸ್ತಿ ಹಾಗೂ ಒಂದು ಲಕ್ಷ ರೂಪಾಯಿ ಮೊತ್ತದ ಸಂಭಾವನೆಯನ್ನು ಈ ವರ್ಷ ಮಾಧ್ವೇತರ ಸಂಸ್ಕೃತ ಹಾಗೂ ವೇದ ವಿದ್ವಾಂಸರಾದ ಪಂ.ಭಾಲಚಂದ್ರಶಾಸ್ತ್ರಿಗಳಿಗೆ ಕೊಡಲು ನಿಶ್ಚಯಿಸಿರುವುದಾಗಿ ಪೇಜಾವರಶ್ರೀಗಳು ಘೋಷಿಸಿದಾಗ ಪ್ರೇಕ್ಷಕರೆಲ್ಲ ಹರ್ಷೋದ್ಗಾರ ವ್ಯಕ್ತಪಡಿಸಿದರು. ಆ ಸಭೆಗೆ ಪಂ.ಭಾಲಚಂದ್ರಶಾಸ್ತ್ರಿಗಳು ಬಂದಿರಲಿಲ್ಲ. ಪೇಜಾವರಶ್ರೀಗಳು ಶಾಸ್ತ್ರಿಗಳ ಮನೆಗೆ ಹೋಗಿ ಬಹುಮಾನದ ಬಗ್ಗೆ ಹೇಳಿದಾಗ ಶಾಸ್ತ್ರಿಗಳು ವಿನಮ್ರರಾಗಿ ಹೇಳಿದರು, ತಮ್ಮ ಆಶೀರ್ವಾದ ಸಾಕು, ಹಣ ಬೇಡ ಎಂದು. ಹಿಂದೆ ಕೂಡಲಿಮಠದ ವಾಲಕೇಶ್ವರ ಭಾರತಿ ಸ್ವಾಮಿಗಳು ಸದಾಚಾರ ಪ್ರವರ್ತಕ ಎಂಬ ಬಿರುದನ್ನು ನೀಡಿದ್ದರು. ಈ ವರ್ಷ ಪಂ.ಭಲಚಂದ್ರಶಾಸ್ತ್ರಿಗಳಿಗೆ ರಾಷ್ಟ್ರೀಯ ಪಶಸ್ತಿಯೂ ದೊರೆತಿದೆ, ಕಾಂಚಿಮಠದ ಜಗದ್ಗುರುಗಳು ಅವರಿಗೆ ಶಾಸ್ತ್ರಾಲಂಕಾರ ಎಂಬ ಪ್ರಶಸ್ತಿಯನ್ನು ನೀಡಿದ್ದಾರೆ.

ಧಾರವಾಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಬಗ್ಗೆ ಒಂದೆರಡು ಮಾತು ಬರೆಯುವುದು ಉಚಿತವೆನಿಸುತ್ತದೆ. ಈ ಪಾಠಶಾಲೆಗೆ ಈಗ 122 ವರ್ಷ. ಇದನ್ನು ಪ್ರಾರಂಭಿಸಲು ಕಾರಣಕರ್ತರಾದವರು ಆ ಕಾಲದಲ್ಲಿ ಧಾರವಾಡದಲ್ಲಿ ಪ್ರಸಿದ್ಧ ನ್ಯಾಯವಾದಿಗಳಾಗಿದ್ದ ಶ್ರೀ ಗುರುನಾಥರಾವ ಫಾಟಕ ಎಂಬವರು. ಅವರ ಸಂಕಲ್ಪದ ಫಲವಾಗಿ, ಶೃಂಗೇರಿಯ ಶಾರದಾಪೀಠದ ಜಗದ್ಗುರುಗಳಾಗಿದ್ದ ಶ್ರೀಶ್ರೀ ಸಚ್ಚಿದಾನಂದ ನೃಸಿಂಹ ಸರಸ್ವತೀ ಸ್ವಾಮಿಗಳ ಅನುಗ್ರಹದ ಫಲವಾಗಿ ಈ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ಆಗ ಸರ್ವಜಿತ ಸಂವತ್ಸರ. ಶ್ರೀಗಳು ಚಾತುರ್ಮಾಸ್ಯವನ್ನು ಧಾರವಾಡದಲ್ಲಿ ಆಚರಿಸುತ್ತಿದ್ದರು. ಶ್ರೀಗಳು ಗುರುನಾಥರಾಯರನ್ನು ಕರೆದು ಹೇಳಿದರಂತೆ, ನಾವು ಗುರುಗಳು ಧಾರವಾಡಕ್ಕೆ ಬಂದಿದ್ದೇವೆ. ನಿನ್ನ ಹೆಸರು ಗುರು. ಇಂದು ಗುರುವಾರ. ಈ ಗುರುತ್ರಯ ಶುಭವಾಗಿದೆ. ಬರುವ ನಾಗಪಂಚಮಿ ಇಲ್ಲಿ ಸಂಸ್ಕೃತಪಾಠಶಾಲೆ ಪ್ರಾರಂಭವಾಗಲಿ. ಎಂದು ಅಪ್ಪಣೆಕೊಡಿಸಿದರು.

ಶ್ರೀಗಳ ಅಮೃತಹಸ್ತಗಳಿಂದ ಪಾಠಶಾಲೆ ಪ್ರಾರಂಭವಾಯಿತು(1887). ಪಾಠಶಾಲೆಯ ಕಟ್ಟಡಕ್ಕಾಗಿ ಗುರುನಾಥ ಫಾಟಕರು ಬಹಳ ಕಷ್ಟಪಟ್ಟರು. ಮನೆಮನೆಗೂ ಪೈಸಾಫಂಡ್ ಸಂಗ್ರಹಿಸಿದರು. ಆ ಕಾಲದಲ್ಲಿ ಧಾರವಾಡದಲ್ಲಿ ಪ್ರಸಿದ್ಧ ವಕೀಲರಾಗಿದ್ದ ಬೆಟದೂರ ಬಳವಂತರಾಯರನ್ನು ದೇಣಿಗೆಗಾಗಿ ಫಾಟಕರು ಕಂಡರು. ತಮ್ಮ ಮನೆಗೆ ಬಂದರೆ ಒಂದು ಪೈ ದೇಣಿಗೆ ಕೊಡುವುದಾಗಿ ಬೇಟದೂರರು ಹೇಳಿದರಂತೆ. ಫಾಟಕರು ಅವರ ಮನೆಗೆ ಹೋದರು. ಬೆಟದೂರರು ಒಂದು ನೂರು ರೂಪಾಯಿಯ ನೋಟು ಕೊಟ್ಟು. ಇದರಲ್ಲಿ ಒಂದು ಪೈ ದಾನ ಪಡೆದು ಉಳಿದ ಹಣ ಹಿಂದುರುಗಿಸಿ ಎಂದು ಹೇಳಿದರಂತೆ. ಫಾಟಕರೂ ಗಟ್ಟಿಗರು. ನೂರು ರೂಪಾಯಿಯ ಚಿಲ್ಲರೆ ಮಾಡಿಸಿಕೊಂಡು ಹಿಂದಿರುಗಿದರು. ಬೆಟದೂರರಿಗೆ 99 ರೂಪಾಯಿ 15 ಆಣೆ 11ಪೈ ಮರಳಿ ಕೊಟ್ಟರಂತೆ. (ಆ ಕಾಲದಲ್ಲಿ ರೂಪಾಯಿಗೆ 16 ಆಣೆ. ಆಣೆಗೆ 4 ದುಡ್ಡು. ಒಂದು ದುಡ್ಡಿಗೆ 3 ಪೈ.) ಇವರ ಶ್ರದ್ಧೆಯನ್ನು ಕಂಡು ನೂರೂ ರೂಪಾಯಿ ದಾನವಾಗಿ ಕೊಟ್ಟರಂತೆ. (ಇದೇ ಬೆಟದೂರ ವಕೀಲರ ಮಗಳು ಶಾರದಾ ವಿ.ಕೃ.ಗೋಕಾಕರ ಧರ್ಮಪತ್ನಿ). 1894ರಲ್ಲಿ 5 ಅಂತಸ್ತುಗಳ ಕಟ್ಟಡಕ್ಕೆ ತಳಪಾಯ ಹಾಕಲಾಯಿತು. ಆ ಕಾಲದಲ್ಲಿ ಈ ಭವ್ಯ ಕಟ್ಟಡಕ್ಕೆ ತಗಲಿದ ವೆಚ್ಚ 20,000 ರೂಪಾಯಿ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more