• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಡಿತಪ್ರಕಾಂಡ ಬ್ರಹ್ಮಶ್ರೀ ಭಾಲಚಂದ್ರಶಾಸ್ರಿ

By * ಡಾ| ಜೀವಿ ಕುಲಕರ್ಣಿ
|
Scholar Bhalachandra Shastry, Dharwad
ಧಾರವಾಡ ಎಂದೊಡನೆ ನನ್ನ ಮೈ ಪುಲಕಿತಗೊಳ್ಳುತ್ತದೆ. ಎಂಟು ವರ್ಷ ನಾನು ಧಾರವಾಡದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೆ (ಜೆಎಸ್‌ಎಸ್ ಆರ್ಟ್ಸ್ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜನತಾ ಲಾ ಕಾಲೇಜುಗಳಲ್ಲಿ ಶಿಕ್ಷಣ). ಇಲ್ಲಿ ಕಳೆದ ಕಾಲ, ಎಂಟೆರ್ದೆ ಪಡೆದ ಕಾಲ, ನನ್ನ ಜೀವನದ ರನ್ನ-ಕಾಲ, ಸುವರ್ಣಕಾಲ ಎಂದೇ ಭಾವಿಸುವೆ. ಧಾರವಾಡ ಎಂದೊಡನೆ ವರಕವಿ ಬೇಂದ್ರೆ-ಗೋಕಾಕ, ಸಂಶೋಧಕ ಶಂಬಾ-ಬೆಟಗೇರಿ, ಕನ್ನಡ ಪ್ರಾಧ್ಯಾಪಕ ತೀನಂಶ್ರೀ-ಆರ್‌ಸಿ ಹಿರೇಮಠ, ಸಂಸ್ಕೃತ ವಿದ್ವಾಂಸ ಭಾಲಚಂದ್ರಶಾಸ್ತ್ರಿ-ಆರ್‌ಎಸ್ ಪಂಚಮುಖಿ ಇವರುಗಳೊಡನೆ ಕಳೆದ ದಿನಗಳ ನೆನಪಾಗುತ್ತದೆ. ಆರಂಕುಸಮಿಟ್ಟೊಡಂ ನೆನೆವುದೆನ್ನ ಮನ ಧಾರಾವಾಡ ದೇಶಮಂ ಎಂದು ಎಂದು ನಾಡೋಜ ಪಂಪನ ಧಾಟಿಯಲ್ಲಿ ಹಾಡಬೇಕೆನಿಸುತ್ತದೆ. ಧಾರವಾಡ ಎಂದೊಡನೆ ನನ್ನ ತಲೆ ವಿಜಾಪುರದ ಗೋಳಗುಮ್ಮಟವಾಗುತ್ತದೆ, ಒಂದೇ ಮಾತು ಎಂಟು ಸಲ ಕೇಳುವುದರ ಬದಲು ಎಂಟು ಜನರ ನುಡಿ ಒಮ್ಮೆಲೆ ಕೇಳಿಸುತ್ತದೆ. ತೇಹಿನೋ ದಿವಸಾಗತಾಃ ಎಂಬ ಭವಭೂತಿಯ ಮಾತು ನೆನಪಿಗೆ ಬರುತ್ತದೆ.

ಧಾರವಾಡದ ಬಹು ಎತ್ತರದ ಕಟ್ಟಡಹೊಂದಿದ್ದ, ವಿದ್ಯಾಸಂಸ್ಥೆಗಳಲ್ಲಿಯೇ ಶಿಖರಪ್ರಾಯವಾಗಿದ್ದ, ಶ್ರೀಮಜ್ಜಗದ್ಗುರು ಶಕರಾಚಾರ್ಯ ಪಾಠಶಾಲೆಯ ಆಧಾರಸ್ಥಂಭರಾಗಿರುವ ಬ್ರಹ್ಮಶ್ರೀ ಭಾಲಚಂದ್ರಶಾಸ್ತ್ರಿಗಳ ತೊಂಭತ್ತೊಂದನೆಯ ವರ್ಧಂತಿಯ ನಿಮಿತ್ತ ಹಮ್ಮಿಕೊಂಡ ವೇದಶಾಸ್ತ್ರ ಪ್ರಭೋಧಕ ಸಪ್ತಾಹದಲ್ಲಿ (ಅಕ್ಟೋಬರ್3ರಿಂದ 8) ಭಾಗವಹಿಸಲು ಬರಬೇಕು ಎಂದು ಮಿತ್ರ ಪಂ. ವೀಣಾಕರಶಾಸ್ತ್ರಿಯವರು ನನಗೆ ದೂರವಾಣಿಯ ಮೂಲಕ ಕರೆಯಿತ್ತರು. (ನನಗಾದ ಆನಂದವನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಸಾಧ್ಯವಿಲ್ಲ.) ಮೂರನೆಯ ದಿನ (ಅಕ್ಟೋಬರ್ 7) ನಡೆಯುವ ಸಾಂಸ್ಕೃತಿಕ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಸಂಸ್ಕೃತಿ ಸಂರಕ್ಷಣೆಯ ಮಾರ್ಗೋಪಾಯಗಳು ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಲುನನಗೆ ಆಮಂತ್ರಣ ನೀಡಿದರು. ಇದನ್ನು ನಾನು ಬಹುದೊಡ್ದ ಗೌರವವೆಂದು ಭಾವಿಸುವೆ. ನಾನು ಹುಟ್ಟಿದ್ದು ವಿಜಾಪುರ(ಡೊಮ್ನಾಳ), ಬೆಳೆದದ್ದು ಧಾರವಾಡ, ನನಗೆ ಬದುಕಲು ಆಶ್ರಯ ಕೊಟ್ಟದ್ದು ಮುಂಬೈ. ಈ ಮೂರು ಊರುಗಳಲ್ಲಿ ನನಗೆ ಗೌರವ ದೊರೆತರೆ ಅದು ಜಗತ್ತಿನ ಯವುದೇ ಭಾಗದಲ್ಲಿ ದೊರೆತ ಗೌರವದ ಹತ್ತುಪಟ್ಟು ಹೆಚ್ಚಾದ ಗೌರವ ಎಂದೇ ಭಾವಿಸುವೆ.

ಕೆಲವು ಅನಿವಾರ್ಯ ಕಾರಣಗಳಿಂದಾಗಿ ನಾನು ಕಾಲೇಜಿನಲ್ಲಿ ಕಲಿಯುತ್ತಿರುವಾಗ. ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯ ಬಿಟ್ಟು (ಆರುತಿಂಗಳ ನಂತರ) ಕನ್ನಡ ಮೇಜರ್ ಹಾಗೂ ಸಂಸ್ಕೃತ ಸಬ್ಸಿಡಿಯರಿ ಆಗಿ ಆಯ್ಕೆ ಮಾಡಿದ್ದೆ. ಎರಡು ವಿಷಯಗಳಲ್ಲಿ ನಾನು (ವೀಕ್)ಅಶಕ್ತನಾಗಿದ್ದೆ. ಕನ್ನಡ ವಿಷಯದಲ್ಲಿ ನನಗೆ ಮಾರ್ಗದರ್ಶನ ಮಾಡಲು ನನ್ನ ಸಹಪಾಠಿ ಆರ್.ಜಿ.ಯವರಿದ್ದರು. ಇನ್ನು ಸಂಸ್ಕೃತ ವಿಷಯದಲ್ಲಿ ಮಾರ್ಗದರ್ಶನ ಪಡೆಯಲು ನಾನು ಪಂ.ಮಾಹೇಶ್ವರ ಶಾಸ್ತ್ರಿಗಳ ಸ್ನೇಹ ಬೆಳೆಸಿದೆ. ಮಿತ್ರರಿಬ್ಬರೂ ನಮಗೆ ಒಂದು ವರ್ಷ ಸೀನಿಯರ್ ಆಗಿದ್ದರು. ಆರ್.ಜಿ. ಹಾಗೂ ಮಾಹೇಶ್ವರ ಶಾಸ್ತ್ರಿಗಳಲ್ಲಿ ಒಂದು ವಿಷಯ ಸಮಾನವಾಗಿತ್ತು. ಇಬ್ಬರೂ ಗೋಕಾಕರ ಶಿಷ್ಯರು. ಗೋಕಾಕರ ಮಾತಿನ ಮೋಡಿಗೆ ಮರುಳಾಗಿ ಇಬ್ಬರೂ ಬಿ.ಎ. ಡಿಗ್ರಿಗೆ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದ್ದರು. ಅವರು ಸ್ವಾಭಾವಿಕವಾಗಿ ಕನ್ನಡ ಹಾಗೂ ಸಂಸ್ಕೃತ ವಿಷಯಗಳಲ್ಲಿ ಅಗಾದ ಪಾಂಡಿತ್ಯ ಪಡೆದವರು. ಇಬ್ಬರಿಗೂ ದ್ವಿತೀಯಶ್ರೇಣಿ ದೊರೆಯಲಿಲ್ಲ. ಆದುದರಿಂದ ಗೋಕಾಕರ ಸಲಹೆಯಂತೆ ಮತ್ತೆ ತಮ್ಮ ವಿಷಯದ ಕಡೆ (ನನ್ನಡ ಮತ್ತು ಸಂಸ್ಕೃತದ ಕಡೆ) ಹೊರಳಿದರು. ಒಂದೇ ವರ್ಷದಲ್ಲಿ ಅವರಿಗೆ ಮತ್ತೊಂದು ಡಿಗ್ರಿ ಪಡೆಯುವ ಅವಕಾಶ ದೊರೆಯಿತು. ಇಬ್ಬರೂ ಕನ್ನಡ ಸಂಸ್ಕೃತ ವಿಷಯಗಳಲ್ಲಿ ವಿಶ್ವವಿದ್ಯಾಲಕ್ಕೆ ಪ್ರಥಮಸ್ಥಾನ ಪಡೆದರು. ಮುಂದೆ ಆರ್‌ಜಿಯವರು ಕನ್ನಡಪ್ರಾಧ್ಯಾಪಕರಾಗಿ, ಮಾಹೇಶ್ವರ ಜೋಶಿಯವರು ಸಂಸ್ಕೃತ ಪ್ರಾಧ್ಯಾಪಕರಾಗಿ ಹೆಸರು ಗಳಿಸಿದರು. ಇವರಿಬ್ಬರೂ ನನ್ನ ಸಹಪಾಠಿಗಳಾಗಿದ್ದರು, ನನ್ನ ಮಾರ್ಗದರ್ಶಿಗಳಾಗಿದ್ದರು. ಮಾಹೇಶ್ವರ ಶಾಸ್ತ್ರಿಗಳ ಮನೆ ನಮ್ಮ ಮನೆಯ ಸಮೀಪದಲ್ಲಿತ್ತು. ಪ್ರತಿದಿನ ಮಧ್ಯಾಹ್ನ ಅವರ ಮನೆಗೆ ಸಂಸ್ಕೃತ ಅಭ್ಯಾಸಕ್ಕೆ ಹೋಗುತ್ತಿದ್ದೆ. ಸಂಜೆ ಆರ್‌ಜಿಯವರ ರೂಮಿಗೆ (ಆದರ್ಶ ವಿದ್ಯಾನಿಲಯಕ್ಕೆ) ಹೋಗಿ ಅವರೊಂದಿಗೆ ವಾಸಿಸುತ್ತಿದ್ದೆ. ಮುಂದೆ ಎಂ.ಎ. ಪದವಿಗಾಗಿ ಅಭ್ಯಾಸ ಮಾಡುವಾಗ ಇವರಿಬ್ಬರ ಮಾರ್ಗದರ್ಶನ ಮತ್ತೆ ದೊರೆತಿತ್ತು. ಈ ಸಂದರ್ಭದಲ್ಲಿ ಪಂ.ಭಾಲಚಂದ್ರಶಾಸ್ತ್ರಿಗಳ ಕೃಪಾಕಟಾಕ್ಷದಲ್ಲಿ ಬೆಳೆಯಲು ಅವಕಾಶ ದೊರೆಯಿತು. ನಾನು ಪಂ.ಭಾಲಚಂದ್ರಶಾಸ್ತ್ರಿಗಳ ಮನೆಯ ಹುಡುಗನಾಗಿಬಿಟ್ಟೆ. ಶಾಸ್ತ್ರಿಗಳು ನನ್ನನ್ನು ಯಾವಗಲೂ ಗುರಣ್ಣ ಎಂದೇ ಕರೆಯುತ್ತಿದ್ದರು (ಮಿತ್ರರಿಗೆಲ್ಲ ಜೀವಿಯಾದ ನಾನು ನನ್ನ ತಂದೆ, ಪೋಷಕ ವಾಮನರಾವ, ಸಹಾಯಕ ಮಹದೇವ ಹೂಗಾರ ಮತ್ತು ಮನೆಯ ಸದಸ್ಯರಿಗೆ ಮಾತ್ರ ಗುರಣ್ಣನಾಗಿದ್ದೆ).

ಪಂ. ಭಾಲಚಂದ್ರಶಾಸ್ತ್ರಿಗಳ ಪ್ರವಚನ ಕೇಳಲು ನನಗೆ ಬಹಳ ಅವಕಾಶಗಳು ದೊರೆಯುತ್ತಿದ್ದವು. ಹಲವಾರು ಸಲ ಅವರ ಮಾರ್ಗದರ್ಶನದ ಅವಕಾಶವೂ ದೊರೆತಿತ್ತು. ಜೀವನದಲ್ಲಿಯ ಘಟನೆಗಳು ಇಟ್ಟಿಗೆಗಳಿಂದ್ದಂತೆ. ಅವು ಚಿಕ್ಕವಾಗಿದ್ದರೂ ಜೀವನದ ಕಟ್ಟಡಕ್ಕೆ ಆಧಾರ ನೀಡುತ್ತವೆ. ಪಂ.ಭಾಲಚಂದ್ರಶಾಸ್ತ್ರಿಗಳ ಆತ್ಮೀಯತೆ ಬಿಂಬಿಸುವ ಮೂರು ಪ್ರಸಂಗಗಳನ್ನು ಇಲ್ಲಿ ನೆನೆಯುವೆ.

ನನ್ನ ತಂಗಿ ಒಂದು ತಿಂಗಳ ಶಿಶುವಾಗಿದ್ದಾಗ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದಳು. ಹಳ್ಳಿಯಲ್ಲಿ ಅಜ್ಜಿಯ ಮನೆಯಲ್ಲಿ (ಡೊಮ್ನಾಳದಲ್ಲಿ) ಬೆಳೆದಳು. ದೊಡ್ಡಮ್ಮನ ಮೊಲೆಹಾಲು ಕುಡಿದು ಬೆಳೆದಳು. ಬಹಳ ಕಷ್ಟ ಅನುಭವಿಸಿದಳು. ಅವಳ ಮದುವೆಯ ಪ್ರಸ್ತಾಪ ಬಂದಾಗ ನಮ್ಮ ಸಂಬಂಧಿಕರ ಮಗ ಒಳ್ಳೆಯ ಕೆಲಸದಲ್ಲಿದ್ದ. ಹೇಳಿಮಾಡಿಸಿದಂತಹ ಜೋಡಿಯಾಗಿತ್ತು. ಎಲ್ಲರಿಗೂ ಒಪ್ಪಿಗೆಯಾಯ್ತು. ಒಬ್ಬ ಪಂಡಿತರು ಜಾತಕದಲ್ಲಿ ದೋಷ ತೆಗೆದು ಮದುವೆ ಬೇಡ ಅಂದರು. ನಮಗೆಲ್ಲ ಆಘಾತವಾಗಿತ್ತು. ಅನೇಕ ಜೋತಿಷಿಗಳನ್ನು ಸಂಪರ್ಕಿಸಿದೆವು. ವರ ಪಕ್ಷದವರಿಗೆ ಸಮಾಧಾನವಾಗಲಿಲ್ಲ. ಕೊನೆಗೆ ಪಂಡಿತ ಭಾಲಚಂದ್ರಶಾಸ್ತ್ರಿಗಳ ಸಲಹೆಗಾಗಿ ಬಂದೆವು. ಎರಡು ಜಾತಕಗಳನ್ನು ಅಭ್ಯಸಿಸಿ ಹಲವಾರು ಆಧಾರಗಳನ್ನು ಕೊಟ್ಟು ಒಂದು ಚಿಕ್ಕ ಶಾಂತಿಯನ್ನು ಮಾಡಿಸಿದರೆ ದೋಷ (ಷಡಾಷ್ಟಕಯೋಗ) ಪರಿಹಾರವಾಗುತ್ತದೆ ಎಂಬ ತೀರ್ಪು ನೀಡಿದರು. ನಿರ್ವಿಘ್ನವಾಗಿ ಮದುವೆ ಸಾಂಗವಾಗಿ ನಡೆಯಿತು.

ಸೊಂಡೂರು ಸಂಸ್ಥಾನದ ಆಳರಸರಾದ ಘೋರ್ಪಡೆಯವರು ಶತಚಂಡಿಯಾಗವನ್ನು ದೊಡ್ಡಪ್ರಮಾಣದಲ್ಲಿ ಹಮ್ಮಿಕೊಂಡಿದ್ದರು. ಅದರ ಪ್ರಧಾನ ಆಚಾರ್ಯರಾಗಿ ಪಂ.ಭಾಲಚಂದ್ರಶಾಸ್ತ್ರಿಗಳು ಐವತ್ತರಷ್ಟು ವೈದಿಕರನ್ನು ಕರೆದುಕೊಂಡು ಸೊಂಡೂರಿಗೆ ಹೋಗುವ ಪ್ರಸಂಗ. ನಾನು ಅಕಸ್ಮಾತ್ತಗಿ ಅವರ ಮನೆಗೆ ಹೋಗಿದ್ದೆ. ನನ್ನನ್ನು ಜೊತೆಗೆ ಬರಲು ಶಾಸ್ತ್ರಿಗಳು ಆಮಂತ್ರಿಸಿದರು. ನಾನೇನು ಶ್ರೋತ್ರಿಯನಲ್ಲ, ವೈದಿಕನೂ ಅಲ್ಲ. ಆದರೆ ಶಾಸ್ತ್ರಿಗಳ ಪ್ರೀತಿಗೆ ಪಾತ್ರನಾದ ಹುಡುಗನಾಗಿದ್ದರಿಂದ ನನಗೆ ಬಹುದೊಡ್ಡಯಾಗದಲ್ಲಿ ಪ್ರೇಕ್ಷಕನಾಗಿ ಭಾಗವಹಿಸುವ ಭಾಗ್ಯ ದೊರೆತಿತ್ತು. ಅವರೊಂದಿಗೆ ಕೈಕೊಂಡ ಸೊಂಡೂರ ಯಾತ್ರೆ ನನಗೆ ಅವಿಸ್ಮರಣೀಯ ಅನುಭವ ನೀಡಿತ್ತು. ಸ್ರೀಯರಿಗೆ ಪ್ರವೇಶವಿಲ್ಲದ ಕುಮಾರಸ್ವಾಮಿಯ ಮಂದಿರದ ದರ್ಶನ ಪಡೆದೆ. (ಕುಮಾರಸ್ವಾಮಿ ತಾಯಿಯಹಾಲನ್ನು ವಮನ ಮಾಡಿದಾಗ ಅದು ಬೆಟ್ಟದಾಕಾರವಾಗಿ ನಿಂತಿದ್ದ ಗುಡ್ದದ ಕತೆಯನ್ನು ಕೇಳುವ ಅವಕಾಶ ಒದಗಿಬಂದಿತ್ತು). ರಾಜರ ಅರಮನೆಯಲ್ಲಿ ನಮಗೆಲ್ಲ ಆದರದ ಸನ್ಮಾನ ನಡೆದಿತ್ತು.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಪಾಠಶಾಲೆಯ ಶತಾಮನೋತ್ಸವದ ಸಂದರ್ಭ (1987). ಅವರ ಕಟ್ಟಡವನ್ನು ಹೊಸತಾಗಿ ಕಟ್ಟುವ ಬೃಹದ್ ಯೋಜನೆಗಾಗಿ ಧನಸಂಗ್ರಹದ ಕಾರ್ಯ ನಡೆದಿತ್ತು. ಮುಂಬೈಯಲ್ಲಿ ಒಂದು ಸಮಿತಿ ರಚಿತವಾಗಿತ್ತು. ಅದಕ್ಕೆ ಯಾರನ್ನು ಕಾರ್ಯದರ್ಶಿ ಮಾಡಬೇಕೆಂದು ಚರ್ಚೆ ನಡೆದಾಗ ಪಂ. ಭಾಲಚಂದ್ರಶಾಸ್ತ್ರಿಗಳು ಹೇಳಿದ್ದರು, ಮುಂಬೈಯಲ್ಲಿ ನಮ್ಮ ಗುರಣ್ಣ ಇದ್ದಾನೆ, ಅವನೇ ಕಾರ್ಯದರ್ಶಿಯಾಗಲಿ ಎಂದು. ಮುಂಬೈ ಸಮಿತಿ ಚೆನ್ನಾಗಿ ಕೆಲಸ ಮಾಡಿತ್ತು. ಹಿರಿಯರ ಪ್ರಶಂಸೆಗೆ ಪಾತ್ರವಾಗಿತ್ತು. ನಾನು ಕಾರ್ಯದರ್ಶಿಯಾದದ್ದು ಹಲವರಿಗೆ ಅಚ್ಚರ್ಯನ್ನುಂಟುಮಾಡಿತ್ತು. ಆದರೆ ಶಾಸ್ತ್ರಿಗಳ ಪ್ರೀತಿ ಹಾಗೂ ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದ ಹಲವಾರು ಪ್ರಸಂಗಗಳಲ್ಲಿ ಇದೂ ಒಂದು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more