• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೇದಶಾಸ್ತ್ರಸಂಪನ್ನ ರಾಮಚಂದ್ರಭಟ್ಟ

By Staff
|
ಮುಂಬೈ ನಗರದಲ್ಲಿ ನಡೆಯುವ ಯಾವುದೇ ಮಹತ್ವದ ಹೋಮ-ಹವನ ಕಾರ್ಯಕ್ರಮದಲ್ಲಿ ಕಾಣುವ ಒಂದು ಪರಿಚಿತ ಮುಖವೆಂದರೆ ಪಂ| ರಾಮಚಂದ್ರ ಭಟ್ಟರದು. ತಮ್ಮ ಕಂಚಿನಕಂಠದಿಂದ ಶ್ರೋತೃಗಳ ಗಮನ ಸೆಳೆಯುವ ಭಟ್ಟರು ವೈದಿಕ ಕ್ರಿಯಾಕರ್ಮಗಳ ಸುಲಭ ಅರ್ಥವಿರುವ ಪುಸ್ತಕ ಬರೆದಿದ್ದಾರೆ. ಅಪರೂಪದ ಪುಸ್ತಕ 'ಸೂರ್ಯವರ್ಗಾಃ' ಮತ್ತು ಭಟ್ಟರ ಪರಿಚಯ ಇಲ್ಲಿದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಬಿ.ಎ.ಪದವೀಧರರಾಗಿದ್ದರೂ ತಂದೆ ಅಂಗಡಿಮಾರು ಕೆ. ಕೃಷ್ಣಭಟ್ಟರ ಬಳಿಯಲ್ಲಿ ಬಾಲ್ಯದಲ್ಲೇ ಕಲಿತ ವೇದ, ಸಂಸ್ಕೃತ, ಜೌತಿಷ ಹಾಗೂ ಪೌರೋಹಿತ್ಯವನ್ನು ಮರೆಯಲಿಲ್ಲ. ನಿತ್ಯ ಕರ್ಮಾನುಷ್ಠಾನದಲ್ಲಿ ಎಂದಿಗೂ ಚ್ಯುತಿ ಬರದಂತೆ ನೋಡಿಕೊಂಡ ಅಪರೂಪದ ವ್ಯಕ್ತಿ. ಉಡುಪಿಯ ಫಲಿಮಾರುಮಠದ ಶ್ರೀಶ್ರೀ ವಿದ್ಯಾಮಾನ್ಯತೀರ್ಥದಲ್ಲಿ ಹೆಚ್ಚಿನ ವೇದಾಂತ ಹಾಗೂ ಶಾಸ್ತ್ರಾಧ್ಯಯನವನ್ನು ಮಾಡಿದ್ದಾರೆ. ಸಂಸ್ಕೃತ, ಕನ್ನಡ, ತುಳು, ಮರಾಠಿ, ಹಿಂದಿ, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಸಂಭಾಷಿಸಬಲ್ಲರು. ತಾವು ನಡೆಸುತ್ತಿರುವ ವೈದಿಕ ಕ್ರಿಯಾಕರ್ಮಗಳ ಸುಲಭ ಅರ್ಥವನ್ನು ಯಜಮಾನರಿಗೆ ತಿಳಿಸಿಕೊಡುವ ಕೆಲಸದಲ್ಲಿ ಪರಿಣತರು. ಅವರು ಸೂರ್ಯವರ್ಗಾಃ ಎಂಬ ಪುಸ್ತಿಕೆಯನ್ನು ಬರೆದಿದ್ದಾರೆ. ವೈದಿಕ ಮಂತ್ರಗಳನ್ನು ಪಠಿಸಿದರೆ ಸಾಲದು, ಅವುಗಳಲ್ಲಿ ಅಡಗಿದ ಅರ್ಥವನ್ನು ತಿಳಿಹೇಳುವುದೂ ಮಹತ್ವದ್ದಾಗಿದೆ.

ವಿವಾಹ ಸಂಸ್ಕಾರ ಷೋಡಶ ಸಂಸ್ಕಾರಗಳಲ್ಲಿ ಬಹಳ ಮಹತ್ವದ್ದು. ಒಂದು ಕಾಲಕ್ಕೆ ಸೂರ್ಯಸೂಕ್ತದ ಪಠನವು ವಿವಾಹ ಸಂಸ್ಕಾರದ ಅವಿಭಾಜ್ಯ ಅಂಗವಾಗಿತ್ತು. ಅದು ತಪ್ಪಿಹೋಗುತ್ತಿದೆಯಲ್ಲ ಎಂದು ಶ್ರೀರಾಮಚಂದ್ರಭಟ್ಟರ ತಂದೆಯವರು ಸೂರ್ಯಸೂಕ್ತವನ್ನು ಮುದ್ರಿಸಿ ವಿವಾಹ ನಡೆಯುವ ಸ್ಥಳಗಳಲ್ಲಿ ವೈದಿಕವೃಂದಕ್ಕೆ ಹಂಚುತ್ತಿದ್ದರಂತೆ. ಆಗ ಕೆಲವರು ಈ ಮಂತ್ರದ ಜೊತೆಗೆ ಅದರ ಅರ್ಥವನ್ನೂ ಬರೆದು ಪ್ರಕಟಿಸಿ ಹಂಚಿದ್ದರೆ ಒಳ್ಳೆಯದಾಗುತ್ತಿತ್ತು ಎಂದಿದ್ದರಂತೆ. ಈ ಕೆಲಸವನ್ನು ಮಾಡಲು ಜೇಷ್ಠಪುತ್ರರಾದ ರಾಮಚಂದ್ರಭಟ್ಟರಿಗೆ ಹೇಳಿದ್ದರು. (ಅವರಿಗೆ ಹನ್ನೆರಡು ಮಕ್ಕಳು. ಅದರಲ್ಲಿ ಒಬ್ಬರು ಪೇಜಾವರ ಮಠದ ಕಿರಿಯಸ್ವಾಮಿಗಳಾದ ಶ್ರೀಶ್ರೀ ವಿಶ್ವಪ್ರಸನ್ನತೀರ್ಥರು). ಈ ಕೆಲಸ ಬಹಳ ಕಾಲ ಸಿದ್ಧಿಸದೇ ಉಳಿಯಿತು. ತಂದೆಯವರ ಆಣತಿಯನ್ನು ಕಾರ್ಯರೂಪಕ್ಕೆ ತರಲು ತಮ್ಮ ಗುರುಗಳಿಗೆ ಶರಣು ಹೋದರು. (ಶ್ರೀಶ್ರೀವಿದ್ಯಾಮಾನ್ಯರ ವೃಂದಾವನದೆದುರು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಅನುಗ್ರಹಿಸಲು ಪ್ರಾರ್ಥಿಸಿದರು). ಅದರ ಫಲವೇ ಈ ಪುಸ್ತಿಕೆ. ಗುರುಗಳಲ್ಲಿ ಶಿಷ್ಯನಿಂದ ಬರೆಸುವ ಶಕ್ತಿ ಇರುತ್ತದೆ ಎಂಬ ಮಾತಿದೆ. ನನ್ನ ಗುರುಗಳಾದ ಬೇಂದ್ರೆಯವರು ನನ್ನಿಂದ ಬರೆಸಿದ್ದಾರೆ. ತಪಸ್ವಿಗಳಾದ ಶ್ರೀಶ್ರೀವಿದ್ಯಾಮಾನ್ಯರು ರಾಮಚಂದ್ರಭಟ್ಟರಿಂದ ಬರೆಸಿದ್ದರಲ್ಲಿ ಅಚ್ಚರಿಪಡುವಂತಹದೇನಿಲ್ಲ.

ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಏಕೆ ಮಹತ್ವದ್ದಾಗಿದೆ ಎಂದರೆ ಇತರ ಮೂರು ಆಶ್ರಮಗಳಿಗೆ ಇದು ಪೋಷಕವಾಗಿ ನಿಂತಿದೆ. ಸಂನ್ಯಾಸಿ ಕೂಡ ಜನಿಸಬೇಕಾಗುತ್ತದೆ, ಅದಕ್ಕೆ ಗ್ರಹಸ್ಥರಾದ ತಂದೆತಾಯಿ ಬೇಕು. ಆದ್ದರಿಂದ ಧನ್ಯೋಹಿ ಗೃಹಸ್ಥಾಶ್ರಮಃ ಎಂದಿರಬೇಕು. ಜನ್ಮದಿಂದಲೇ ಬ್ರಹ್ಮಣನಾಗಿ ಜನಿಸಿದವನಿಗೆ ಮೂರು ಋಣಗಳ ಭಾರದ ಹೊರೆ ಇರುತ್ತದೆ. 1) ಋಷಿಋಣವನ್ನು (ಬ್ರಹ್ಮಚರ್ಯ, ವೇದಾಧ್ಯಯನ, ಶಾಸ್ತ್ರಾಭ್ಯಾಸದಿಂದ), 2) ದೇವಋಣವನ್ನು (ಪಂಚಕರ್ಮಾದಿ ಸತ್ಕರ್ಮಾನುಷ್ಠಾನದಿಂದ), 3) ಪಿತೃಋಣವನ್ನು (ಸತ್ಪುತ್ರರನ್ನು ಪಡೆಯುವುದರಿಂದ) ಅವನು ತೀರಿಸಬೇಕು. ವಿವಾಹದ ಬಗ್ಗೆ ಬರೆಯುವಾಗ ಪ್ರತಿ ವರನು ಶ್ರೀ ನಾರಾಯಣ ರೂಪನಾಗಿದ್ದರೆ ವಧುವು ಲಕ್ಷ್ಮೀ ರೂಪಳಾಗಿರುತ್ತಳೆ. ಲಕ್ಷ್ಮೀರೂಪಾಂ ಇಮಾಮಾಂ ಕನ್ಯಾಂ ಪ್ರದದೇ ವಿಷ್ಣುರೂಪಿಣೇ| ಎಂದು ಅಶ್ವಲಾಯನಸ್ಮೃತಿಯಲ್ಲಿ ಹೇಳಲಾಗಿದೆ. ವಿವಾಹಕಾಲಕ್ಕೆ ಪಠಿಸುವ ಮಂತ್ರಗಳಲ್ಲಿ ಸೂರ್ಯಸೂಕ್ತ ಪಾರಾಯಣವೂ ಮಹತ್ವದ್ದು. ಲಕ್ಷ್ಮೀನಾರಾಯಣರ ವಿವಾಹಕಾಲದಲ್ಲಿ ಬ್ರಹ್ಮಾದಿ ದೇವತೆಗಳು ಸೂರ್ಯಸೂಕ್ತವನ್ನು ಪಠಿಸಿದರು ಎಂಬ ಉಲ್ಲೇಖ ಭಾಗವತದಲ್ಲಿದೆ ಎಂದಮೇಲೆ ಇದರ ಮಹತ್ವ ಎಷ್ಟು ಎಂದು ವಿದಿತವಾಗುವುದು.

ಯಾವುದೇ ಮಂತ್ರವನ್ನಾಗಲೀ, ಸ್ತೋತ್ರವನ್ನಾಗಲಿ ಅರ್ಥಾನುಸಂಧಾನಪೂರ್ವಕ ಪಠಿಸಿದಾಗ ಅದು ಅನಂತಫಲದಾಯಕವಾಗುವುದಾಗಿ ಜ್ಞಾನಿಗಳು ಹೇಳಿದ್ದಾರೆ. ಋಗ್ವೇದದಲ್ಲಿ ಬರುವ ಸೂರ್ಯಾವರ್ಗದ ಋಕ್‌ಗಳಲ್ಲಿ ಮುಖ್ಯವಾಗಿ ಅನಂತಕಲ್ಯಾಣಗುಣಪರಿಪೂರ್ಣ, ದೋಷದೂರ, ಶಾಸ್ತ್ರೈಕಗಮ್ಯನಾದ ಶ್ರೀಲಕ್ಷ್ಮೀನಾರಾಯಣನ ಮಹಿಮೆ, ಪಾತಿವ್ರತ್ಯಧರ್ಮ, ಸುಖಮಯಜೀವನೋಪಾಯ, ದಾಂಪತ್ಯ ಜೀವನದ ಸಾರ್ಥಕ್ಯ, ಸತ್ಸಂತತಿಯ ಇವೇ ಮೊದಲಾದ ವಿಷಯಗಳು ಪ್ರತಿಪಾದಿತವಾಗಿವೆ. ಆದುದರಿಂದಲೇ ವಿವಾಹಕಾಲ ದಲ್ಲಿ ವಧೂವರರ ಸುಖಮಯ ದಾಂಪತ್ಯಜೀವನ, ಸಂತಾನಪ್ರಾಪ್ತಿ ಹಾಗೂ ಶ್ರೀಲಕ್ಷ್ಮೀನಾರಾಯಣರ ಅನುಗ್ರಹಕ್ಕಾಗಿ ಈ ಸೂರ್ಯವರ್ಗದ ಪಾರಾಯಣವನ್ನು ಬ್ರಾಹ್ಮಣರ ಮೂಲಕ ಪಠಿಸುವ ಸಂಪ್ರದಾಯ ಬೆಳೆದುಬಂದಿದೆ ಎನ್ನುತ್ತಾರೆ ಕೃಷ್ಣಾಪುರಮಠದ ಶ್ರೀಶ್ರೀ ವಿದ್ಯಾಸಾಗರತೀರ್ಥ ಸ್ವಾಮಿಗಳು.

ಸೂರ್ಯವರ್ಗಾಃದಲ್ಲಿ ಸೋಮನಾಮಕ ಭಗವಂತನ ವರ್ಣನೆ ಬರುತ್ತದೆ. ಸತ್ಯೇನೋತ್ತಭಿತಾ ಭೂಮಿಃ ಸೂರ್ಯೇಣೋತ್ತಭಿತಾ ದೌಃ | ಋತೇನಾದಿತ್ಯಾಸ್ತಿಷ್ಠಂತಿ ದಿವಿ ಸೋಮೋ ಅಧಿ ಶ್ರೀತಃ || (ಹಿರಣ್ಯಾಕ್ಷನು ಭೂಮಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿದ್ದಾಗ ಸತ್ಯಸಂಕಲ್ಪನಾದ ಭಗವಂತನು ವರಾಹಾವತಾರ ತಾಳಿ, ಹಿರಣ್ಯಾಕ್ಷನನ್ನು ಕೊಂದು, ಭೂಮಿಯನ್ನು, ಮೇಲಕ್ಕೆತ್ತಿ ಸ್ವಸ್ಥಾನದಲ್ಲಿರಿಸಿದನು. ಮುಂದೆ ಸೋಮನಾಮಕ ಭಗವಂತನ ವರ್ಣನೆ ಬರುತ್ತದೆ. ಆಚ್ಛದ್ವಿಧಾನೈರ್ಗುಪಿತೋ ಬಾರ್ಹತೈಃ ಸೋಮ ರಕ್ಷಿತಃ- ಪರಮಾತ್ಮನು ವೇದಗಳಿಂದ ಆಚ್ಛಾದಿತನಾಗಿದ್ದಾನೆ, ಗೂಢನಾಗಿದ್ದಾನೆ, ರಕ್ಷಿಸಲ್ಪಟ್ಟಿದ್ದಾನೆ. ವೇದಗಳಲ್ಲಿ ಮೇಲ್ನೋಟಕ್ಕೆ ತೋರುವ ಅರ್ಥವೇ ಬೇರೆ, ಗೂಢಾರ್ಥವೇ ಬೇರೆ. ವೇದಗಳ ಯಾಥಾರ್ಥಜ್ಞಾನ ಲಭ್ಯವಾಗಬೇಕಾದರೆ ಮೊದಲು ಜ್ಞಾನಾರ್ಜನೆ ಮಾಡಬೇಕೆಂಬ ಕಳಕಳಿಬೇಕು, ನಂತರ ಉತ್ತಮ ಗುರುಗಳನ್ನು ಸಂಪಾದಿಸಬೇಕು, ಅವರ ಶುಶ್ರೂಷೆ ಮಾಡಬೇಕು, ಅವರ ಅನುಗ್ರಹ ಪಡೆಯಬೇಕು. ಎಲ್ಲದಕ್ಕೂ ಭಗವದನುಗ್ರಹ ಅತಿಮುಖ್ಯ. ಮುಂದೆ ಸೂರ್ಯಾದೇವಿಯು ತನ್ನ ರಮಣನಾದ ಭಗವಂತನನ್ನು ಸ್ತುತಿಸಿದ ವರ್ಣನೆ ಇದೆ. ಸೂರ್ಯಾದೇವಿಯ ವಿವಾಹವೈಭವದ ವರ್ಣನೆ ಇದೆ. ಲಕ್ಷ್ಮೀದೇವಿಯು ಸರ್ವಜ್ಞಳು, ವೇದಾದಿ ಸಕಲಶಾಸ್ತ್ರಗಳಿಗೆ ಅಭಿಮಾನಿ. ಲಕ್ಷ್ಮೀನಾರಾಯಣರಿಗೆ ವಿಯೋಗವೆಂಬುದಿಲ್ಲ, ಅವರ ದಾಂಪತ್ಯವು ಅನಾದಿನಿತ್ಯ. ಲಕ್ಷ್ಮೀದೇವಿಯು ತನ್ನ ಪತಿಯನ್ನು ಸ್ತುತಿಸುತ್ತಾ ದ್ಯುಮಾರ್ಗದಲ್ಲಿ, ಸಕಲ ವೈಭವಗಳೋಂದಿಗೆ, ತನ್ನ ಪತಿಯ ಬಳಿಗೆ ತೆರಳುತ್ತಿದ್ದಾಗ, ಆಕಾಶದಲ್ಲಿದ್ದ ಸೂರ್ಯನು, ಅಶ್ವಿನೀ ದೇವತೆಗಳ ಜೊತೆಗೂಡಿ, ಮಹಾಮಾತೆಯ ವೈಭವವನ್ನು ನೋಡಿ ನಮಸ್ಕರಿಸಿ, ಮನಃಪೂರ್ವಕ ಭಕ್ತಿಯಿಂದ ಲಕ್ಷ್ಮೀದೇವಿಯನ್ನು ಪರಮಾತ್ಮನಿಗೆ ಸಮರ್ಪಿಸಿದನು. ಕಾಲವು ಅನಾದಿ ನಿತ್ಯ. ಪ್ರಕೃತಿನಾಮಕಳಾದ ಲಕ್ಷ್ಮಿಯೂ ಅನಾದಿನಿತ್ಯೆ. ಭೂತ-ಭವಿಷ್ಯತ್-ವರ್ತಮಾನ ಎಂಬುದು ಕಾಲದ ಮೂರು ಘಟ್ಟಗಳು. ಕಾಲಚಕ್ರವು ಉರುಳುತ್ತಾ ಇರುತ್ತದೆ. ಮುಂದಿನ ಭವಿಷ್ಯವು ಇಂದಿಗೆ ವರ್ತಮಾನವಾಗಿ ನಾಳೆಗೆ ಭೂತವಾಗುತ್ತದೆ. ಇವೇ ಮೂರು ಚಕ್ರಗಳು. ತ್ರಿಚಕ್ರೇಣ ಆಯಾತಂ ಅಂದರೆ ಈ ಮೂರು ಕಾಲಗಳಲ್ಲಿ ಸಂಚರಿಸುವವಳಾದ್ದರಿಂದ ಲಕ್ಷ್ಮೀದೇವಿಯ ರಥಕ್ಕೆ ಮೂರು ಚಕ್ರಗಳೆಂಬ ಅಭಿಪ್ರಾಯವಿದೆ.

ಭಗವಂತನೂ ಅನಾದಿನಿತ್ಯ. ಭಗವಂತನ ಪ್ರಿಯಪತ್ನಿಯಾದ ಲಕ್ಷ್ಮೀದೇವಿಯೂ ಅನಾದಿನಿತ್ಯೆ. ಇವರಿಬ್ಬರ ದಾಂಪತ್ಯವೂ ಅನಾದಿನಿತ್ಯ. ಅವ್ಯಾಕೃತ ಗೃಹಸ್ಥ-ಗೃಹಿಣಿಯರಾದ ಲಕ್ಷ್ಮೀನಾರಾಯಣರು ತಮ್ಮ ಮಕ್ಕಳು ಮೊಮ್ಮಕ್ಕಳಾದ ದೇವತೆಗಳಿಗೆ ಮುದವನ್ನುಂಟುಮಾಡಲು ತಮ್ಮ ವಿವಾಹಮಹೋತ್ಸವವನ್ನು ಆಚರಿಸುತ್ತಾರೆ.

ಮಾನವರು ನಡೆಸುವ ವಿವಾಹ ಮಹೋತ್ಸವದಲ್ಲಿ ನಡೆಯಬೇಕಾದ ಜಗಜ್ಜನನೀ-ಜನಕರಿಗೆ ದೇವತೆಗಳ ಪ್ರಣಾಮ, ಸೂರ್ಯ-ಚಂದ್ರರ ಕ್ರೀಡೆ, ಭಗವಂತನಲ್ಲಿ ಕನ್ಯಾಪಿತನ ಪ್ರಾರ್ಥನೆ, ಭಗವಂತನಲ್ಲಿ ಕನ್ಯಾಬಂಧುಗಳ ಪ್ರಾರ್ಥನೆ, ಸಕಲ ದೇವತೆಗಳಲ್ಲಿ ಕನ್ಯಾಬಂಧುಗಳೆಲ್ಲರ ಪ್ರಾರ್ಥನೆ, ವಧುವಿಗೆ ಪಿತನ ಉಪದೇಶ, ವಧುವಿಗೆ ಉಪದೇಶ ಹಾಗೂ ಭಗವಂತನಲ್ಲಿ ಪ್ರಾರ್ಥನೆ, ವಧುವಿಗೆ ಆಶೀರ್ವಚನ, ಮುಂತಾದ ಮಂತ್ರಗಳ ಅರ್ಥವಿವರಣೆ ಇದೆ. ವರನಲ್ಲಿ ಶ್ರೀಧರರೂಪವನ್ನೂ ವಧುವಿನಲ್ಲಿ ಶ್ರೀರೂಪವನ್ನೂ ಚಿಂತಿಸಿ ವಧೂವರರ ವಿವಾಹವನ್ನು ಲಕ್ಷ್ಮೀನಾರಾಯಣರ ಕಲ್ಯಾಣ ಮಹೋತ್ಸವವನ್ನಾಗಿ ಆಚರಿಸುವುದು ಶಾಸ್ತ್ರವಿಧಿ.

ಖಿಲಸೂಕ್ತಾನಿ ಎಂಬ ಭಾಗದ ವಿವರಣೆಯಲ್ಲಿ ಅಪುತ್ರಸ್ಯಗತಿರ್ನಾಸ್ತಿ ಎಂಬುದರ ಅರ್ಥವನ್ನು ಕೊಡುತ್ತಾರೆ. ಇಲ್ಲಿ ಪುತ್ರ ಇದಕ್ಕೆ ಅಪತ್ಯ ಎಂಬ ಅರ್ಥ ಕೊಡುತ್ತಾರೆ. ಅದು ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಕೊನೆಗೆ ಬಳಿತ್ಥಾಸೂಕ್ತದ ಅರ್ಥವಿವರಣೆಯನ್ನೂ ಕೊಡಲಾಗಿದೆ. ಇಂಥ ಪುಸ್ತಕಗಳು ಹೆಚ್ಚು ಬರಬೇಕು. ಬರೆಯುವವರೂ, ಬರೆಸುವವರೂ ಬೇಕು. ಓದುವವರೂ ಬೇಕು. (ಸೂರ್ಯಾವರ್ಗಾಃ, ಮರುದಂಶ ಪ್ರಕಾಶನ, ಚಂದ್ರಗಿರಿ, ಹಳೆಯಂಗಡಿ, ದ.ಕ. (0824)2295686 ಬೆಲೆ ರೂ.60/-)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು mumbai ಸುದ್ದಿಗಳುView All

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more