• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)

By Staff
|
ಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ ವಿರಾಟ ಸ್ವರೂಪ ಎಂಬ ಮೊದಲನೆಯ ಲೇಖನವು ಬೇಂದ್ರೆಯವರು ಶಿವಮೊಗ್ಗ ಸಾಹಿತ್ಯ ಸಮ್ಮೇಲನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ. ಈ ಭಾಷಣಕ್ಕೆ ಐತಿಹಾಸಿಕ ಮಹತ್ವವಿದೆ. ಈ ಭಾಷಣದಿಂದ ನಾರಾಯಣಾಚಾರ್ಯರು 14 ಸೂತ್ರಗಳನ್ನು ಆರಿಸಿದ್ದಾರೆ. ಈ ಗ್ರಂಥದ ಇತರ ಲೇಖನಗಳಿಂದ 18 ಸೂತ್ರಗಳನ್ನು ಆರಿಸಿದ್ದಾರೆ. ನಾರಾಯಣಾಚಾರ್ಯರ ಗ್ರಂಥದಲ್ಲಿ** 8 ಅಧ್ಯಾಯಗಳು ಇವೆ. ಅಧ್ಯಾಯ 1) ಸಾಹಿತ್ಯದ ಧ್ವನಿ (ಸೂತ್ರ-1), ಅಧ್ಯಾಯ 2) ರಸಾನುಭೂತಿ ಏನನ್ನು ಮಾಡಬಲ್ಲದು (ಸೂತ್ರ 2), ಅಧ್ಯಾಯ 3) ಸಾಹಿತ್ಯ ಎದುರಿಸಬೇಕಾದ ಸವಾಲು (ಸೂತ್ರ 3), ಅಧ್ಯಾಯ 4) ಶಬ್ದಾರ್ಥಗಳ ದಾಂಪತ್ಯ ರಹಸ್ಯ ಕುರಿತು (ಸೂತ್ರ 4ರಿಂದ 7), ಅಧ್ಯಾಯ 5) ಸಾಹಿತ್ಯರಸ, ಯೋಗ, ಆನಂದ ಇತ್ಯಾದಿ (ಸೂತ್ರ 8 ರಿಂದ 13), ಅಧ್ಯಾಯ 6) ಕನ್ನಡ ಸಾಹಿತ್ಯದಲ್ಲಿ ಆಗಬೇಕಾದುದು (ಸೂತ್ರ 14 ರಿಂದ 20), ಅಧ್ಯಾಯ 7) ಕಾವ್ಯಾಭ್ಯಾಸ, ಕಾವ್ಯವಿಧಾನ, ಕಾವ್ಯಧರ್ಮ, ಕಾವ್ಯಾಯುಷ್ಯ, ಕಾವ್ಯಸ್ಥಾಯೀಭಾವ, ಕಾವ್ಯದ ಅರಿವು, ಇರವು, ಹರವು, ಕವಿಪ್ರಮುಖರು, ಅನುಭಾವ ಕುರಿತು (ಸೂತ್ರ 21 ರಿಂದ 26), ಅಧ್ಯಾಯ 8) ಸಹೃದಯತೆ, ವಿಮರ್ಶೆ, ಕಾವ್ಯಾಯುರ್ವೇದ, ತಂತ್ರಚತುರ್ಮುಖ, ಹೃದಯಸಂಪನ್ನತೆ, ಕಾವ್ಯ ವ್ಯಾಖ್ಯೆಯ ಮಿತಿ, ಕಾವ್ಯ ವಿಶ್ವರೂಪ, ಭಾವ-ಅನುಭಾವ ಕುರಿತು (ಸೂತ್ರ 27 ರಿಂದ 32).

ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಕನ್ನಡ, ಸಂಸ್ಕೃತ, ಪಾಶ್ಚಾತ್ಯ ವಿಮರ್ಶಕರನ್ನು ಉದಾಹರಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಖಾರವಾದ ಟೀಕಾಪ್ರಹಾರವನ್ನೇ ಮಾಡುತ್ತಾರೆ, ಸಾತ್ವಿಕ ಸಂತಾಪವನ್ನು ಸೂಚಿಸುತ್ತಾರೆ. ವಿಮರ್ಶಾಲೋಕದಲ್ಲಿ ಆವರಿಸಿದ ಗ್ರಹಣದ ಬಗ್ಗೆ ಮಾತಾಡುತ್ತಾರೆ.

ಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಬೇಂದ್ರೆಯವರ ವಿಮರ್ಶಾಸೂತ್ರಗಳಲ್ಲಿರುವ ಕೆಲವು ವೈಚಾರಿಕ ಕಿಡಿಗಳು ಇಂತಿವೆ:

* ಒಂದನ್ನೊಂದು ತಿಂದು ಬದುಕುವುದು ಬದುಕಲ್ಲ, ಸಾವು. ಒಂದನ್ನೊಂದು ತಿಳಿದು ಬದುಕುವುದು ಬಾಳು ಎಂದು ಸಾಹಿತ್ಯ ಸಾರುತ್ತದೆ. ಪ್ರಾಣಿಗಳಂತೆ ಬದುಕಬೇಡಿರಿ, ಜೀವಿಗಳಂತೆ ಬಾಳಿರಿ. ಪ್ರಾಣಹಿಂಡಿ ಜೀವ ತಿನ್ನಬೇಡಿ; ಜೀವಕ್ಕೆ ಜೀವ ಕೊಟ್ಟು ಜೀವಿಸಿರಿ. ಇದು ಸಾಹಿತ್ಯದ ಧ್ವನಿ.

* ತಾಳ್ಮೆ, ಸೈರಣೆ, ಧಾರಣೆ, ಪ್ರಾಣದ ಅಸಹನೆಯಿಂದ ವಿವೇಕ ಹದಗೆಡುವುದು, ರಸ ವಿರಸವಾಗುವುದು.

* ಸಾಹಿತ್ಯವು ಶೈಲಿಯ ಸೊಗಸಲ್ಲ, ರಂಜನೆಯ ರಸವಲ್ಲ, ಸಿಂಗಾರದ ಸಡಗರವಲ್ಲ; ಮಹಾಪುರುಷ, ಮಹಾಪ್ರಕೃತಿಯ ಆತ್ಮರತಿ, ಆತ್ಮಕ್ರೀಡೆಯ, ಮಹಾರಸಗಳ ನಲಿದಾಟ, ಒಲಿದಾಟ, ವಿಶ್ವಸಾಹಿತ್ಯದ ಅಚ್ಚುಕೂಟ ಇಲ್ಲಿದೆ. ಸತ್ಯವು ಅಮೃತವಾಗುವುದು ಇಲ್ಲಿ. ಈ ಸತ್ಯೋಪಾಸನೆಯೂ ಬೇಕು, ನಿತ್ಯೋಪಾಸನೆಯೂ ಬೇಕು.

* ಸಾಹಿತ್ಯದೊಳಗಿನ ತತ್ವಜ್ಞಾನವು ಅದರ ಅಂಗಭೂತವಾಗಿರುತ್ತದೆ. ಅದು ಸಾಹಿತ್ಯವನ್ನು ಪಶುವೆಂದು ಬಗೆದು ತನ್ನ ಪಶುಪತಿತ್ವವನ್ನು ಮೆರೆಯಿಸುವುದಿಲ್ಲ.

* ಹುಟ್ಟಿದ ಸಾಹಿತ್ಯವು ಓದುವವರನ್ನು ಮುಟ್ಟುವುದರಲ್ಲಿಯೇ ಸಾರ್ಥಕತೆ ಇದೆ.

* ಸಾಹಿತ್ಯವೆಂಬುದು ಶಬ್ದದಿಂದ ಜಡವಾಗಿದ್ದರೂ ಅರ್ಥದಿಂದ ಅಮರವಾಗಿರುವುದು.

* ಸಾಹಿತ್ಯವು ಹಠಯೋಗವಲ್ಲ, ರಸಯೋಗ. ರಸ ಮತ್ತು ಜನನ ಬೇರೆಯಲ್ಲ, ವಿರಸ ಮತ್ತು ಮರಣ ಬೇರೆಯಲ್ಲ.

* ಸಾಹಿತ್ಯದ ನೀರು ರಸ, ಅಮೃತ. ಸೋಹಂ ಎಂಬ ಅಹಂಭಾವವಿಲ್ಲ, ಕೋಹಂ ಎಂಬ ಸಂಶಯವಿ. ರಸೋಹಂ ಎಂಬ ಸಂತತ ಪ್ರೀತಿಯೇ ಸಾಹಿತ್ಯದ ಜೀವಾಳ.

* ನಿಜವಾದ ವಿಮರ್ಶಕನಿಗೆ ಸಹೃದಯತೆಯು ಬೇಕು. ದೂರದರ್ಶಕ ಯಂತ್ರವಿರದೆ ಜ್ಯೋತಿರ್ಮಂಡಲವನ್ನು ಹುಡುಕಾಡುವುದು, ಹೃದಯವಿರದೆ ಕಾವ್ಯಸಾಗರವನ್ನು ಕಲಕಾಡುವುದು ಒಂದೇ.

* ಉಪಸಂಹಾರದಲ್ಲಿ ನಾರಾಯಣಾಚಾರ್ಯರು ಕೆಲವೊಂದು ಮಹತ್ವದ ಮಾತುಗಳನ್ನು ಹೇಳುತ್ತಾರೆ. ಬೇಂದ್ರೆ ಬರೆದುದೆಲ್ಲವೂ ಸೂತ್ರಾತ್ಮಕವೇ. ಗದ್ಯವಿರಲಿ, ಪದ್ಯವಿರಲಿ, ಅವರ ಸುಕ್ತಿ ಶೈಲಿಯೇ ಹಾಗೆ. ಅನನ್ಯ, ಅನುಪಮ ಎನ್ನುತ್ತಾರೆ.

ಬೇಂದ್ರೆ ಸೂತ್ರಗಳನ್ನು ಆಧರಿಸಿ ಪ್ರತಿಭಾವಂತ ತರುಣ ಅಧ್ಯಯನಶೀಲರು ಬರೆಯಬಹುದಾದ ಪ್ರಬಂಧಗಳ ವಿಷಯ ಸೂಚಿಸುತ್ತಾರೆ.

1) ಬೇಂದ್ರೆ ಸಾಹಿತ್ಯ ವಿಮರ್ಶೆ ಪರಿಭಾಷೆ.

2) ಬೇಂದ್ರೆ ಸಾಹಿತ್ಯ ಸೂತ್ರಗಳ ಸಮಗ್ರತೆ, ಪೂರ್ಣತೆ, ವ್ಯಾಪ್ತಿ.

3) ಬೇಂದ್ರೆ ಸಾಹಿತ್ಯ ಸೂತ್ರಗಳು ಪಶ್ಚಿಮದ ಕಾವ್ಯಗಳಿಗೆ ಎಷ್ಟರಮಟ್ಟಿಗೆ ಅನ್ವಯಿಸಲು ಸಾಧ್ಯ.

4) ಬೇಂದ್ರೆ ಸಾಹಿತ್ಯ ಸೂತ್ರಗಳ ವೈಶಿಷ್ಟ್ಯ.

5) ಬೇಂದ್ರೆ ಸಾಹಿತ್ಯ ಸೂತ್ರಗಳ ಪ್ರಧಾನ ನೆಲೆ.

6) ಬೇಂದ್ರೆ ಸಾಹಿತ್ಯ ಸೂತ್ರಗಳಲ್ಲಿ ತತ್ತ್ವಶಾಸ್ತ್ರದ ಪ್ರಭಾವ.

7) ಬೇಂದ್ರೆ ಸಾಹಿತ್ಯ ಸೂತ್ರಗಳ ನವೋನವತೆ, ಪ್ರಾಚೀನತೆಯ ಹಿನ್ನೆಲೆ.

8) ಬೇಂದ್ರೆ ಸಾಹಿತ್ಯ ಸೂತ್ರಗಳಲ್ಲಿ ನಿಷ್ಪಕ್ಷಪಾತದ ನಿಲವು.

9) ಸಮಕಾಲೀನ ವಿಮರ್ಶಾ ಗೊಂದಲದಲ್ಲಿ ಬೇಂದ್ರೆ ಸಾಹಿತ್ಯ ಸೂತ್ರಗಳ ಪ್ರಸ್ತುತತೆ.

10) ಬೇಂದ್ರೆ ಸಾಹಿತ್ಯ ಸೂತ್ರಗಳ ಭವಿಷ್ಯ ಸ್ಥಾನ.

** (ಕವಿವರ್ಯ ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು- ಲೇಖಕರು: ಡಾ| ಕೆ.ಎಸ್.ನಾರಾಯಾಣಾಚಾರ್ಯ, ಪ್ರಕಾಶಕರು: ಶ್ರೀಮಾತಾ ಪ್ರಕಾಶನ, ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003, ಬೆಲೆ-ರೂ.230, ಪುಟ 40+240).

ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು (ಭಾಗ 1)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more