ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವರೋಗ, ಭವರೋಗ ನಿವಾರಕ ಸ್ತೋತ್ರ

By Staff
|
Google Oneindia Kannada News

Aralumallige Parthasarathi
ಧಾರ್ಮಿಕ ಆಚರಣೆಗಳಲ್ಲಿನ ನಂಬಿಕೆಯ ವಿಚಾರ ಅವರವರ ಭಾವ ಭಕುತಿ ಬಿಟ್ಟ ವಿಚಾರ. ಇಲ್ಲಿ ಧಾರ್ಮಿಕ ಆಚರಣೆಗಿಂತ ನಂಬಿಕೆ ಮುಖ್ಯ. ಸಮುದ್ರತೀರದಲ್ಲಿ ಸಿಹಿನೀರು ಬಂದರೆ ಪವಾಡ ಅನ್ನುವವರಿದ್ದಾರೆ, ಒಂದು ಕಣ್ಣಲ್ಲಿ ನೀರು, ಇನ್ನೊಂದು ಕಣ್ಣಲ್ಲಿ ರಕ್ತ ಬಂದರೂ ಪವಾಡ ನಡೆಯಿತು ಅಂತಾರೆ. ಶ್ರದ್ಧೆಯಿಂದ ಕಲಿತರೆ ಫ್ರೆಂಚ್ ಕೂಡ ಒಂದೇ ವಾರದಲ್ಲಿ ಒಲಿಯುತ್ತದೆ. ಶ್ರದ್ಧೆಯಿಂದ ಪ್ರಯತ್ನಿಸದೇ ಮೊಂಡು ವಾದ ಮಾಡುತ್ತಾ ಕುಳಿತರೆ ಯಾವುದೂ ಒಲಿಯಲಾರದು.

* ಡಾ. 'ಜೀವಿ' ಕುಲಕರ್ಣಿ, ಮುಂಬೈ

2008 ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು ಆಸ್ಟ್ರೇಲಿಯಾ ದೇಸದ ಪ್ರವಾಸದಲ್ಲಿದ್ದರು. ಅಲ್ಲಿಯ ಅವರ ರೋಚಕ ಅನುಭವಗಳನ್ನು ಕೇಳಿದಾಗ ವಿಷ್ಣುಸಹಸ್ರನಾಮದ ಪಾರಾಯಣದ ಬಗ್ಗೆ ಇದ್ದ ನನ್ನ ವಿಶ್ವಾಸ ಇಮ್ಮಡಿಯಾಯಿತು.

ಋಷೀಕೇಶದ ಡಿವೈನ್ ಲೈಫ್ ಸೊಸೈಟಿಯನ್ನು ಸ್ಥಾಪಿಸಿದ ಸ್ವಾಮಿ ಶಿವಾನಂದರ ಹೆಸರು ಕೇಳದ ಭಾರತೀಯರು ವಿರಳ. ಅವರ ತರುವಾಯ ಅವರ ಪೀಠ ಅಲಂಕರಿಸಿದವರು ಸ್ವಾಮಿ ಚಿದಾನಂದರು. ಒಮ್ಮೆ ಸ್ವಾಮಿ ಚಿನ್ಮಯಾನಂದರು ಪ್ರವಚನ ಮಾಡುತ್ತಿದ್ದರಂತೆ. ವಿಷಯ ಶಂಕರಾಚಾರ್ಯರ ವಿವೇಕ ಚೂಡಾಮಣಿ. ಅಲ್ಲಿ ಜೀವನ್ಮುಕ್ತರ ವಿಷಯ ಚರ್ಚೆಗೆ ಬಂದಾಗ ಸಭಿಕರೊಬ್ಬರು ಸ್ವಾಮಿಗಳಿಗೆ ಒಂದು ಪ್ರಶ್ನೆ ಕೇಳಿದರಂತೆ. ತಾವು ಜೀವನ್ಮುಕ್ತರನ್ನು ಕಂಡಿದ್ದೀರಾ? ಎಂದು. ಆಗ ಸ್ವಾಮಿಗಳು, ನಾನು ಜೀವನ್ಮುಕ್ತನ ಅವಸ್ಥೆಗೆ ತಲುಪಿಲ್ಲ. ಆದರೆ ಜೀವನ್ಮುಕ್ತರನ್ನು ನಾನು ನೋಡಿದ್ದೇನೆ. ಅವರು ಡಿವೈನ್ ಲೈಫ್ ಸೊಸೈಟಿಯ ಸ್ವಾಮಿ ಚಿದಾನಂದರು. ಎಂದು ಉತ್ತರಿಸಿದರು. ಸ್ವಾಮಿ ಚಿದಾನಂದರ ಅಧ್ಯಕ್ಷತೆಯ ಕೆಳಗೆ ಕಾರ್ಯದರ್ಶಿಯಾಗಿ 25 ವರ್ಷ ಕೆಲಸಮಾಡಿದವರು ಸ್ವಾಮಿ ಸ್ವರೂಪಾನಂದರು. ಅವರನ್ನು ಅರಳುಮಲ್ಲಿಗೆಯವರು ಸಿಡ್ನಿಯಲ್ಲಿ ಭೆಟ್ಟಿಯಾಗಿದ್ದರು. ಇವರ ವಿಷ್ಣುಶಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವರೂಪಾನಂದ ಸ್ವಾಮಿಗಳಿಗೆ ಬಹಳ ಆನಂದವಾಗಿತ್ತಂತೆ. ಅವರು ಸಿಡ್ನಿಯಿಂದ ಮೆಲ್‌ಬೋರ್ನಿಗೆ ಹೊರಟಿದ್ದರು. ಅಲ್ಲಿಗೆ ಕೆಲ ದಿನಗಳ ನಂತರದಲ್ಲಿ ಪಾರ್ಥಸಾರಥಿಯವರೂ ಹೋಗುವವರಿದ್ದರು. ಇಬ್ಬರೂ ಜೊತೆಗೂಡಿ ವಿಷ್ಣುಸಹಸ್ರನಾಮದ ಕಾರ್ಯಕ್ರಮ ನಡೆಸುವುದಾಗಿ ನಿಶ್ಚಯಿಸಿದ್ದರು.

ಆದರೆ, ದುರ್ದೈವದ ವಿಷಯವೆಂದರೆ, ಸ್ವಾಮಿಗಳು ಅಲ್ಲಿ ತಲುಪಿದ ಮರುದಿನವೇ ಅವರಿಗೆ ಹೃದಯಾಘಾತವಾಯಿತು, ಅಲ್ಲಿಯ ಆಸ್ಪತೆಯನ್ನು ಸೇರಬೇಕಾಯ್ತು. ಕೂಡಲೇ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುವುದೆಂದು ಅಲ್ಲಿಯ ಡಾಕ್ಟರರು ಅಭಿಪ್ರಾಯಪಟ್ಟರು. ಅದಕ್ಕೆ ಲಕ್ಷಾವಧಿ ಡಾಲರ್ ವೆಚ್ಚವಾಗುತ್ತದೆ ಎಂದು ತಿಳಿಯಿತು. ಸುದೈವದಿಂದ ಸ್ವಾಮಿಗಳು ಹೆಲ್ಥ್ ಇನ್ಶುರೆನ್ಸ್ ಮಾಡಿಸಿದ್ದರು. ಅವರಿಗೆ ಅವಶ್ಯಕವಾದ ಹಣ ಇನ್ಶುರೆನ್ಸ್ ಕಂಪನಿಯವರು ಭರಿಸುತ್ತಾರೆಂದು ತಿಳಿಯಿತು. ಆದರೆ ಸ್ವಾಮಿಗಳಿಗೆ ಪರದೇಶದಲ್ಲಿ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ಮನಸ್ಸಿರಲಿಲ್ಲ. ಹೆಚ್ಚುಕಡಿಮೆ ಆದರೆ ಅದು ತನ್ನ ದೇಶ ಭಾರತದಲ್ಲಿ ಆಗಲಿ ಎಂಬುದು ಅವರ ಇಚ್ಛೆಯಾಗಿತ್ತು. ಆಪರೇಶನ್ನಿಗಿಂತ ಮೊದಲು ಡಾ| ಪಾರ್ಥಸಾರಥಿಯವರನ್ನು ನೋಡಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಪಾರ್ಥಸಾರಥಿಯವರನ್ನು ಸಂಪರ್ಕಿಸಿದಾಗ ಅವರು ಸಿಡ್ನಿಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ತೊಡಗಿದ್ದರು. ಸ್ವಾಮಿಗಳ ಕರೆ ಬಂದಿದ್ದರಿಂದ ಕಾರ್ಯಕ್ರಮವನ್ನು ಮುಂದುವರಿಸಲು ಅಲ್ಲಿಯ ಸ್ಥಳೀಯ ಮಿತ್ರರಿಗೆ ಹೇಳಿ, ಸ್ವಾಮಿಗಳನ್ನು ಕಾಣಲು ಅಲ್ಲಿಂದ ಹೊರಟು ಮೆಲ್‌ಬೋರ್ನಿಗೆ ಬಂದರು. ಆಸ್ಪತ್ರೆಯಲ್ಲಿದ್ದ ಸ್ವಾಮಿಗಳು ಪಾರ್ಥಸಾರಥಿಯವರಿಗೆ ವಿನಂತಿಸಿದರು. ತಾವು ನನ್ನ ಕಿವಿಯಲ್ಲಿ ವಿಷ್ಣುಸಹಸ್ರನಾಮವನ್ನು ಒಮ್ಮೆ ಪಠಿಸಬೇಕು ಎಂದು. ಸ್ವಾಮಿಗಳ ಕಿವಿಯಲ್ಲಿ ವಿಷ್ಣುಸಹಸ್ರನಾಮ ಪಠಿಸಿದರು. ಮರುದಿನ ಅರಳುಮಲ್ಲಿಗೆಯವರು ಅಲ್ಲಿಯ ಭಾರತೀಯ ಕೆಲವು ಭಕ್ತರನ್ನು ಸೇರಿಸಿ, ಆಸ್ಪತ್ರೆಯ ಹಾಲ್‌ನಲ್ಲಿ, ಸ್ವಾಮಿಗಳ ಆರೋಗ್ಯಕ್ಕಾಗಿ ಸಾಮೂಹಿಕವಾಗಿ ವಿಷ್ಣುಸಹಸ್ರನಾಮದ ಪಾರಾಯಣವನ್ನು ಏರ್ಪಡಿಸಿದರು. ಸ್ವಾಮಿಗಳು ವೀಲ್‌ಚೇರ್ ಮೇಲೆ ಬಂದು ಎಲ್ಲರ ಮಧ್ಯದಲ್ಲಿ ಕುಳಿತುಕೊಂಡರು. ವಿಶ್ವಾಸೋ ಫಲದಯಕಃ ಎಂಬಂತೆ ಅವರ ಸ್ಥಿತಿ ಸುಧಾರಿಸಿತು. ಮರುದಿನ ಹಿರಿಯ ಸರ್ಜನರು ಬಂದು, ಆಪರೇಶನ್ ಕೈಕೊಳ್ಳುವ ಮೊದಲು ಮತ್ತೊಮ್ಮೆ ಟೆಸ್ಟ್ ಮಾಡೋಣ ಎಂದರು. ನಂತರ ರಿಪೋರ್ಟ್ ಬಂದಾಗ ಡಾಕ್ಟರರಿಗೆ ಆಶ್ಚರ್ಯವಾಗಿತ್ತು. ಎಲ್ಲ ನಾರ್ಮಲ್ ಇದೆಯಲ್ಲ, ಈಗ ಆಪರೇಶನ್ ಅವಶ್ಯವಿಲ್ಲ. ಎಂದರಂತೆ. ಡಾಕ್ಟರರ ಮಾತನ್ನು ಕೇಳಿದಾಗ ನೆರೆದ ಎಲ್ಲ ಭಕ್ತರ ಮೈಯಲ್ಲಿ ರೋಮಹರ್ಷವಾಯಿತಂತೆ.

ಅತ್ಯಧಿಕ ದೇಶಗಳಲ್ಲಿ, ಅತ್ಯಧಿಕ ಸಲ ಪ್ರವಾಸ ಮಾಡಿ, ಕನ್ನಡ ದಾಸರ ಬಗ್ಗೆ, ಭಾರತೀಯ ವೇದಾಂತದ ಹಿರಿಮೆಯ ಬಗ್ಗೆ ಪ್ರವಚನ ನೀಡಿದ ಕನ್ನಡಿಗರೆಂದರೆ ಡಾ| ಅರಳುಮಲ್ಲಿಗೆಯವರು. ಅವರ ಪ್ರವಚನಗಳಿಗೆ ವಿದೇಶೀಯರು, ಇತರ ಮತಾನುಯಾಯಿಗಳು, ಉಪಸ್ಥಿತರಾಗಿರುವುದು ಗಮನಾರ್ಹ ಸಂಗತಿ. 1999ರಲ್ಲಿ ಇವರ ಪ್ರವಚನ ಬೆಹರಿನ್‌ನಲ್ಲಿ ನಡೆದಿತ್ತು. ಇವರ ಪ್ರವಚನದ ಬಗ್ಗೆ ಕೇಳಿದ್ದ ಮೊಹಮ್ಮದ ರಫಿ ಎಂಬ ಅತ್ಯಂತ ಶ್ರೀಮಂತ ಚಿನ್ನದ ವ್ಯಾಪಾರಿ ಇವರ ಪ್ರವಚನವನ್ನು ತನ್ನ ಮನೆಯಲ್ಲಿ ಏರ್ಪಡಿಸಿದ್ದ. ಅಲ್ಲಿಯ ಶೇಖ್ ಪರಿವಾರದವರು, ಹೆಚ್ಚಿನ ಮುಸ್ಲಿಂ ಬಾಂಧವರು ಸೇರಿದ್ದರು. ಅರಳುಮಲ್ಲಿಗೆಯವರು ಪುರಂದರ ದಾಸರ ಮಹಿಮೆಯ ಬಗ್ಗೆ ಮಾತಾಡಿದರು. ಹದಿನೈದನೆಯ ಶತಮಾನದ ಶ್ರೀಮಂತ ವ್ಯಾಪಾರಿಯಾದ, ನವಕೋಟಿನಾರಾಯಣ ಎಂಬ ಖ್ಯಾತಿಯನ್ನು ಪಡೆದ ಚಿನ್ನದ ವ್ಯಾಪಾರಿಯ ಆಸ್ತಿ ಲೆಕ್ಕಹಾಕಿದರೆ ಇಂದಿನ ಶ್ರೀಮಂತ ಬಿಲ್ ಗೇಟ್‌ನಿಗಿಂತ ಅಧಿಕವಾಗಿತ್ತು. ಆದರೆ ಎಲ್ಲ ಸಂಪತ್ತನ್ನು ದಾನಮಾಡಿ ವಿರಕ್ತನಾಗಿ ದೇವರ ನಾಮಸಂಕೀರ್ತನೆಯಲ್ಲಿ ಜೀವನ ಕಳೆದ. ಇಂಥ ಉದಾಹರಣೆ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದರು. ಮೊಹಮ್ಮದ ರಫಿಯವರು ಅರಳುಮಲ್ಲಿಗೆಯವರ ಸನ್ಮಾನ ಮಾಡಿ ಮಾನಪತ್ರ ಕೊಟ್ಟಿದ್ದಾರೆ. ಅದರಲ್ಲಿ ಪುರಂದರದಾಸರ ಆಸ್ತಿ ಹಾಗೂ ಬಿಲ್ ಗೇಟ್‌ನ ಆಸ್ತಿವಿವರ ಗಣಕಯಂತ್ರದ ಮೂಲಕ ತಯಾರಿಸಿ ಅಚ್ಚುಹಾಕಿಸಿದ್ದಾರೆ. ಅದನ್ನು ನಾನು ಅವರ ಮನೆಯಲ್ಲಿ ಕಂಡಿದ್ದೇನೆ, ಅಚ್ಚರಿಪಟ್ಟಿದ್ದೇನೆ.

ಯಾವುದೇ ಸ್ತೋತ್ರವನ್ನು ಪಾರಾಯಣ ಮಾಡುವಾಗ ಅದರ ಅರ್ಥ ತಿಳಿದುಕೊಂಡು ಪಾರಾಯಣ ಮಾಡಿದರೆ ಅದಕ್ಕೆ ವಿಶೇಷ ಲಾಭವಿದೆ. ಡಾ| ಅರಳುಮಲ್ಲಿಗೆ ಪಾರ್ಥಸಾರಥಿಯವರು ತಮ್ಮ ಪುಸ್ತಕದಲ್ಲಿ ಸಾವಿರ ನಾಮಗಳ ಅರ್ಥವಿವರಣೆ ಮಾಡಿದ್ದಾರೆ. ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು, ಕಾಯಶುದ್ಧಿಮಾಡಿಕೊಂಡ ನಂತರ, ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ ಎನ್ನುತ್ತಾರೆ. ಇದರ ಫಲಶ್ರುತಿಯಲ್ಲಿ ಹೇಳಿದಂತೆ ಇದರಿಂದ ಉದಾತ್ತ ವಿಚಾರಗಳು ಬರುತ್ತವೆ, ಧನಧಾನ್ಯ ಆರೋಗ್ಯ ಪ್ರಾಪ್ತಿಯೊಂದಿಗೆ ಮಾನಸಿಕ ಶಾಂತಿ ದೊರೆಯುತ್ತದೆ. ರೋಗ ಕಾಯಿಲೆಗಳು ದೂರ ಸರಿಯುತ್ತವೆ, ಭಯ, ಆತಂಕ, ಒತ್ತಡ, ತಲ್ಲಣಗಳಿಂದ ಮುಕ್ತಿ ದೊರೆಯುತ್ತದೆ. ಗುಣಪೂರ್ಣನೂ, ದೋಷರಹಿತನೂ, ಸರ್ವಸ್ವತಂತ್ರನೂ ಆದ ಮಹಾವಿಷ್ಣುವಿನ ಸಹಸ್ರನಾಮ ಪಠನದಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ಚರಕಸಂಹಿತೆಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣದಿಂದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ಉಲ್ಲೇಖವಿದೆ ಎಂದು ಬರೆಯುತ್ತಾರೆ.

ಡಾ| ಅರಳುಮಲ್ಲಿಗೆಯವರು ಇಂಗಿಷ್‌ನಲ್ಲಿ ಬರೆದ ವಿಷ್ಣುಸಹಸ್ರನಾಮ ಪುಸ್ತಕದ ಮೊದಲ ಬಿಡುಗಡೆ ಮುಂಬೈಯಲ್ಲಿ ನಡೆಯಿತು. ಬಂಟರ ಭವನದಲ್ಲಿ, ಶ್ರೀಸುಗುಣೇಂದ್ರತೀರ್ಥ ಸ್ವಾಮಿಗಳ ಪರ್ಯಾಯ ಪೂರ್ವದ ಸನ್ಮಾನ ಕಾರ್ಯಕ್ರಮದಲ್ಲಿ ಜಸ್ಟಿಸ್ ಕೃಷ್ಣ ಅವರು ಇದರ ಬಿಡುಗಡೆ ಮಾಡಿದರು. ಎರಡನೆಯ ಬಿಡುಗಡೆಯ ಸಮಾರಂಭವು ಉಡುಪಿಯಲ್ಲಿ ನಡೆಯಿತು. ಪರ್ಯಾಯಪೀಠವನ್ನೇರಿದ ಪುತ್ತಿಗೆ ಮಠದ ಶ್ರೀಗಳು ರಾಜಾಂಗಣದಲ್ಲಿ ಇದರ ಬಿಡುಗಡೆ ಮಾಡಿ ಲೇಖಕರನ್ನು ಸತ್ಕರಿಸಿದರು. ನಂತರ ಮೆಲ್ಬೋರ್ನ್, ಔಕ್ ಲ್ಯಾಂಡ್, ಹಾಂಗಕಾಂಗ್, ವಾಷಿಂಗ್ಟನ್, ಲಿವರ್ ಪೂಲ್, ಸಿಂಗಪುರ ಮೊದಲಾದ ಆರು ಕಡೆ ಈ ಪುಸ್ತಕದ ಬಿಡುಗಡೆಯಾಗಿದೆ.

ಕೆಲವು ಶ್ಲೋಕಗಳ ಪಟ್ಟಿ ಮಾಡಿದ್ದಾರೆ, ಅವುಗಳನ್ನು ನಿತ್ಯ ಹನ್ನೊಂದುಸಲ ಪಾರಾಯಣ ಮಾಡಿದರೆ ಯಾವ್ಯಾವ ಪೀಡೆಗೆ ಪರಿಹಾರ ದೊರೆಯುತ್ತದೆ ಎಂಬುದನ್ನು ಸೂಚಿಸಿದ್ದಾರೆ. ವಿದ್ಯಾರ್ಜನೆ ಮಾಡುವವರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ- ಸರ್ವಗಃ. . .ವೇದವಿತ್ಕವಿಃ (14), ಜಠರಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ- ಭ್ರಾಜಿಷ್ಣು . .ಪುನರ್ವಸು (16), ಕುಶಾಗ್ರಬುದ್ಧಿ ಪಡೆಯಲು, ಗಣಿತದಲ್ಲಿ ಪರಿಣತಿ ಗಳಿಸಲು -ಮಹಾಬುದ್ಧಿ . . .ಮಹಾದ್ರಿಧೃಕ್ (19), ಕಣ್ಣಿಗೆ ಸಂಬಂಧಿಸಿದ ರೋಗನಿವಾರಣೆಗೆ ಅಗ್ರಣೀರ್ಗಾಮಣೀ. . . ಸಹಸ್ರಪಾತ್ (24), ಉದ್ದೇಶಗಳನ್ನು ಸಾಧಿಸಲು-ಅಸಂಖ್ಯೇಯೋ. . .ಸಿದ್ಧಿಸಾಧನಃ (27), ಮದುವೆಗೆ ಸಂಬಂಧಿಸಿದ ಸಮಸ್ಯಾಪರಿಹಾರಕ್ಕೆ- ಭೂತಭವ್ಯಭವನ್ನಾಥಃ . . .ಪ್ರಭುಃ (32), ಉದ್ಯೋಗದಲ್ಲಿ ಪ್ರಗತಿಗಾಗಿ, ಉನ್ನತಿಗಾಗಿ- ವ್ಯವಸಾಯೋ. . .ಶುಭೇಕ್ಷಣಃ (42), ತೀವ್ರಕಾಯಿಲೆಯಿಂದ ಬಳಲುವ ವೃದ್ಧರು ಶಾಂತಿಯುತ ಕೊನೆಯನ್ನು ಬಯಸಿದಾಗ-ವೈಕುಂಠಃ. . .ವಾಯುರಧೋಕ್ಷಜಃ (44), ಆರ್ಥಿಕ ಸ್ವಾವಲಂಬನೆಗಾಗಿ- ವಿಸ್ತಾರಃ. . .ಮಹಾಧನಃ (46), ಜ್ಞಾನಾರ್ಜನೆಗೆ, ಯಾವುದೇ ವಿಷಯದಲ್ಲಿ ತಜ್ಞತೆಯನ್ನು ಗಳಿಸಲು- ಯಜ್ಞ. . .ಜ್ಞಾನಮುತ್ತಮಮ್ (48), ಕುಟುಂಬದ ಸುಖಶಾಂತಿಗೆ- ಅನಿವರ್ತೀ. . .ಶ್ರೀಮತಾಂವರಃ (64), ಪರಮಾತ್ಮ ಹೃದಯಸ್ಥನಾಗಿ ಜೀವನಸೂತ್ರ ವಹಿಸುವಂತೆ ಬೇಡಿಕೊಳ್ಳುವಾಗ-ಶ್ರೀದಃ . . .ಲೋಕ್ತ್ರಯಾಶ್ರಯಃ(65), ರೋಗ ಮನಸ್ತಾಪ ಆತಂಕ ಒತ್ತಡ ನಿವಾರಣೆಗೆ- ಉದೀರ್ಣಃ. . .ಶೋಕನಾಶನಃ (67), ಮುಕ್ತಿಪಡೆಯಲು-ಸದ್ಗತಿಃ. . .ಸುಯಾಮುನಃ (75), ವೈರಿಗಳನ್ನು ಜಯಿಸಲು, ತಪ್ಪುತಿಳಿವಳಿಕೆ ನಿವಾರಿಸಲು- ಸುಲಭಃ. . .ನಿಷೂದನಃ (88), ಮಾನಸಿಕ ಭಯ ಆತಂಕ ಹಾಗೂ ಚಿಂತೆ ಪರಿಹರಿಸಲು- ಸಹಸ್ರಾರ್ಚಿಃ. . .ಭಯನಾಶನಃ (89), ಕೈಕೊಂಡ ಕಾರ್ಯ ತೃಪ್ತಿಕರವಾಗಿ ಮುಗಿಸಲು- ಸನಾತ್ಸನಾತನತಮಃ. . .ದಕ್ಷಿಣಃ (96), ದುಃಸ್ವಪ್ನ ನಿದ್ರಾಹೀನತೆಯ ಪರಿಹಾರಕ್ಕೆ- ಉತ್ತಾರಣೋ. . .ಪಯುವಸ್ಥಿತಃ (99), ಪೂರ್ವಜನ್ಮದ ಪ್ರ್ಸತುತ ಜನ್ಮದ ಪಾಪಪರಿಹಾರಕ್ಕೆ- ಆತ್ಮಯೋಃ. . .ಪಾಪನಾಶನಃ (106).

ಸರ್ವರೋಗ, ಭವರೋಗ ನಿವಾರಕ ಸ್ತೋತ್ರ ವಿಷ್ಣುಸಹಸ್ರನಾಮ (ಭಾಗ 1)ಸರ್ವರೋಗ, ಭವರೋಗ ನಿವಾರಕ ಸ್ತೋತ್ರ ವಿಷ್ಣುಸಹಸ್ರನಾಮ (ಭಾಗ 1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X