ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಷ್ಟಾಂಗ ಯೋಗ

By Staff
|
Google Oneindia Kannada News

K. Pattabhi Joisವಾಯುವಿನ ಮೇಲೆ ನಿಯಂತ್ರಣವಿದ್ದರೆ ಮನವನ್ನು ನಿರೋಧಿಸಬಹುದು. ಗಾಳಿಯು ಸಂಚರಿಸುತ್ತಿದ್ದರೆ ಮನವು ಚಂಚಲವಾಗುವುದು. ಮನವನ್ನು ಒಂದೆಡೆ ತಡೆಗಟ್ಟಬೇಕಾದರೆ ಪ್ರಾಣವನ್ನು(ಉಸಿರನ್ನು) ತಡೆಗಟ್ಟಬೇಕು. ತಡೆಗಟ್ಟಿದ ಮನವನ್ನು ಅಂತರಾತ್ಮನ ಕಡೆಗೆ ತಿರುಗಿಸುವ ವಿಧಾನವೇ ಹಠಯೋಗ. ಈ ಹಠಯೋಗದಿಂದ ಮನವು ಆತ್ಮಾಭಿಮುಖವಾದರೆ ಅದೇ ರಾಜಯೋಗ. ಕೆ. ಪಟ್ಟಾಭಿ ಜೋಯಿಸ್ ಅವರು ಬರೆದಿರುವ 'ಯೋಗಮಾಲಾ' ಪುಸ್ತಕ ಪರಿಚಯ.

ಅಂಕಣಕಾರ : ಡಾ. 'ಜೀವಿ' ಕುಲಕರ್ಣಿ, ಮುಂಬಯಿ

* ಯೋಗಾಂಗ ಸಾಧನೆ ನಮ್ಮ ಆರ್ಯರಿಗೆ ಹೊಸದಲ್ಲ. ಹಿಂದೆ ಭಾರತ ದೇಶದ ಮೂಲೆಮೂಲೆಗಳಲ್ಲಿಯೂ ಯೋಗ ಸಾಧನೆಯನ್ನು ಮಾಡುವವರು ಅಧಿಕವಾಗಿದ್ದರು. ಈಗ ಭೋಗ ಸಾಧನವೇ ವಿನಾ ಯೋಗ ಸಾಧನೆಯಿಲ್ಲ. ಭೋಗದಿಂದ ರೋಗವು (ಬರುವುದು) ಖಂಡಿತ. ಒಂದುಕಾಲಕ್ಕೆ ನೈಷ್ಠಿಕ ಬ್ರಹ್ಮಚಾರಿಗಳಿಗೆ, ಸನ್ಯಾಸಿಗಳಿಗೆ ಉಪಯುಕ್ತವಾದವು ಆಸನ ಪ್ರಣಾಯಾಮಗಳು ಎಂದು ತಿಳಿಯಲಾಗಿತ್ತು. ಇಂದು ಮಾನ್ಯ ಜನರಿಗೂ ಇದರ ಅವಶ್ಯಕತೆ ಇದೆ.

* ಯೋಗ ಶಬ್ದಕ್ಕೆ ಅನೇಕಾರ್ಥಗಳಿವೆ. ಸಂಬಂಧ, ಉಪಾಯ, ಸನ್ನಹನ, ಜ್ಞಾನ, ಸಂಗತಿ, ಯುಕ್ತಿ ಇತ್ಯಾದಿ. ಈಗ ಪ್ರಕೃತ ಉಪಕ್ರಮಿಸಿದ ಅರ್ಥ ಉಪಾಯ, ಹೋಗುವ ದಾರಿ ಅಥವಾ ಹೊಂದುವ ದಾರಿ. ಅಂದರೆ ಮನವು ಉತ್ತಮವಾದುದನ್ನು ಹೊಂದಬೇಕು. ಸೇವಕನು ರಾಜನನ್ನು ಹೊಂದುವಂತೆ, ಅಥವಾ ಶಿಷ್ಯನು ಗುರುವನ್ನು ಹೊಂದುವಂತೆ. ಸದ್ಗುಣಿಯೂ ಸುಶೀಲೆಯೂ ಆದ ಸತಿ ಪತಿಪಾರಾಯಣೆಯಾದರೆ ಸತಿಪತಿಗಳಲ್ಲಿ ಅಭೇದ ತೋರುವಂತೆ, ಮನವು ಆತ್ಮನಲ್ಲಿ ನೆಲಸಿದರೆ, ಅಂದರೆ ಆತ್ಮವನ್ನು ಹೊಂದಿದರೆ, ಆತ್ಮನಿಗಿಂತಲೂ ಭಿನ್ನವಾದ ಮನವು ತೋರುವುದಿಲ್ಲ. ಆದ್ದರಿಂದ ಆ ಆತ್ಮನಲ್ಲಿ ಮನವು ನಿಲ್ಲುವಂತೆ ಮಾಡುವ ಉಪಾಯವೇ ಯೋಗ ಎಂಬುದಾಗಿ ತಿಳಿಯಬೇಕು. ಅದನ್ನೇ ಯೋಗಶಾಸ್ತ್ರಕ್ಕೆ ಮೂಲಭೂತರಾದ ಪತಂಜಲಿ ಮಹರ್ಷಿಗಳು ಯೋಗಃ ಚಿತ್ತವೃತ್ತಿ ನಿರೋಧಃ" ಎಂಬ ಸೂತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಮನಸ್ಸು ಎಲ್ಲ ಇಂದ್ರಿಯಗಳ ವ್ಯಾಪಾರಕ್ಕೂ ಕಾರಣ. ಅಂಥ ಮನಸ್ಸನ್ನು ವಿಷಯಾಂತರಗಳಲ್ಲಿ ಹೋಗದಂತೆ ತಡೆಗಟ್ಟಿ ಆತ್ಮಾಭಿಮುಖವಾಗುವಂತೆ ಮಾಡುವ ಸಾಧನವನ್ನೇ ಯೋಗ ಎಂಬುದಾಗಿ ಹೇಳುವರು. ಇದೇ ವಿಷಯವು ಕಠೋಪನಿಷತ್ತಿನಲ್ಲಿ "ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮಿಂದ್ರಿಯ ಧಾರಣಾಃ" ಎಂಬ ಮಂತ್ರದಲ್ಲಿ ಹೇಳಲ್ಪಟ್ಟಿದೆ. ಶಾಸ್ತ್ರ ನಮಗೆ ಸರಿಯಾದ ಮಾರ್ಗವನ್ನು ತಿಳಿಸುತ್ತದೆ. ಅದನ್ನು ಅನುಷ್ಠಾನಕ್ಕೆ ತರಬೇಕು.

ಈಗ ಪರಮಾತ್ಮನನ್ನು ಕಾಣಲು ಮನವು ಒಂದೆಡೆ ನಿಲ್ಲುವುದು ಹೇಗೆ? ಇದನ್ನೇ ಅಷ್ಟಾಂಗ ಯೋಗವು ನಿರೂಪಿಸುವುದು. ಅಷ್ಟಾಂಗ ಎಂದರೆ ಎಂಟು ಮೆಟ್ಟಿಲುಗಳು. ಯಮ, ನಿಯಮ, ಆಸನ, ಪ್ರಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ.

ಯಮವೆಂದರೆ : 1)ಅಹಿಂಸಾ, 2)ಸತ್ಯ, 3)ಅಸ್ತೇಯ, 4)ಬ್ರಹ್ಮಚರ್ಯ ಮತ್ತು 5)ಅಪರಿಗ್ರಹ. ಈ ಐದು ಅಂಗಗಳಿಗೆ ಯಮ ಎನ್ನುತ್ತಾರೆ.
ಅಹಿಂಸಾ : ಕಾಯಾ, ವಾಚಾ, ಮನಸಾ ಶಾಸ್ತ್ರವಿರುದ್ಧವಾದ ಹಿಂಸೆಯನ್ನು ಯಾವುದೇ ಪ್ರಾಣಿಗೂ ಮಾಡದಿರುವುದು ಅಹಿಂಸಾ. ("ಅಹಿಂಸಾಪ್ರತಿಷ್ಠಾಯಂ ತತ್ಸನ್ನಿಧೌ ವೈರತ್ಯಾಗಃ"- ಪತಂಜಲಿ).
ಸತ್ಯ : ಕಾಯಾ, ವಾಚಾ, ಮನಸಾ ಸತ್ಯವನ್ನು ನುಡಿಯುವುದು ಸತ್ಯ. ಅದು ಮತ್ತೊಬ್ಬರಿಗೆ ಪ್ರಿಯವಾಗಿರಬೇಕು. ಅಪ್ರಿಯವಾದ ಸತ್ಯ ನುಡಿಯಬಾರದು.(ಸತ್ಯ ಪ್ರತಿಷ್ಠಾಯಾಂ ಕ್ರಿಯಾ ಫಲಾಶ್ರಯತ್ವಂ- ಪತಂಜಲಿ).
ಅಸ್ತೇಯ : ಮತ್ತೊಬ್ಬರ ವಸ್ತುವನ್ನು ಅಪಹರಿಸದಿರುವುದು ಅಸ್ತೇಯ. ಇದನ್ನು ಅಭ್ಯಸಿಸಿದರೆ ರತ್ನರಾಶಿಯೇ ದೊರೆಯುವುದು. (ಅಸ್ತೇಯ ಪ್ರತಿಷ್ಠಾಯಾಂ ಸರ್ವರತ್ನೋಪಸ್ಥಾನಂ- ಪತಂಜಲಿ).
ಬ್ರಹ್ಮಚರ್ಯ : ಎಂದರೆ ಕೇವಲ ವೀರ್ಯಸ್ಥಂಭನ ಎಂದರ್ಥವಲ್ಲ. ಗೃಹಸ್ಥಾಶ್ರಮಿಗಳು ತಮ್ಮ ಆಶ್ರಮಧರ್ಮ ಪಾಲಿಸಿಯೂ ಬ್ರಹ್ಮಚರ್ಯ ಸಾಧಿಸಬಹುದು. ಬ್ರಹ್ಮಚರ್ಯದಿಂದ ದೀರ್ಘಾಯುಗಳಾಗಿ ಬಾಳಬಹುದು, ಮೃತ್ಯುವನ್ನು ಗೆಲ್ಲಬಹುದು, ತನ್ನ ನಿಜಸ್ವರೂಪವನ್ನು ತಿಳಿಯಬಹುದು. ಇದರಲ್ಲಿ ವೀರ್ಯಲಾಭ ಮಹತ್ವದ್ದು. (ಬ್ರಹ್ಮಚರ್ಯ ಪ್ರತಿಷ್ಠಾಯಾಂ ವೀರ್ಯಲಾಭಃ- ಪತಂಜಲಿ). ಅಮಾವಾಸ್ಯೆ, ಪೂರ್ಣಿಮಾ, ಸಂಕ್ರಮಣ, ಚತುರ್ದಶೀ, ಅಷ್ಟಮಿ- ಈ ದಿವಸಗಳನ್ನು ಬಿಟ್ಟು ಬಾಕಿ ದಿನಗಳಲ್ಲಿ ಋತುಕಾಲವನ್ನೂ, ಹಗಲು ರಾತ್ರಿಗಳನ್ನೂ ನಿರ್ಣಯಿಸಿ ಸತ್ಪ್ರಜಾಸಂಪತ್ತಿಗಾಗಿಯೇ ತನ್ನ ಧರ್ಮಪತ್ನಿಯಲ್ಲಿಯೇ ಸಂಗವನ್ನು ಬಯಸಬೇಕು. ವಿಧಿನಿಯಮಗಳನ್ನು ಅನುಸರಿಸುವ ಗೃಹಸ್ಥನನ್ನು ಬ್ರಹ್ಮಚಾರಿ ಎಂದೇ ಭಾವಿಸಬೇಕೆಂದು ಶ್ರಾಸ್ತ್ರಜ್ಞರು ತಿಳಿಸುತ್ತಾರೆ. ನಾಯಮಾತ್ಮಾ ಬಲಹೀನೇನ ಲಭ್ಯಃ ಇದು ಶ್ರುತಿವಾಕ್ಯ. ಬ್ರಹ್ಮಚರ್ಯದಿಂದ ಬಲವರ್ಧನೆ ಸಾಧ್ಯ.
ಅಪರಿಗ್ರಹ : ಎಂದರೆ ಈ ಜಡ ಶರೀರಕ್ಕೆ ಬೇಕಾದ ಭೋಗವಸ್ತುಗಳನ್ನು ಬಯಸದಿರುವುದು. ಅಪರಿಗ್ರಹವನ್ನು ಅಭ್ಯಸಿಸಿದರೆ ಕಳೆದ ಜನ್ಮ ಹಾಗೂ ಮುಂದಿನ ಜನ್ಮಗಳ ಕಥೆಗಳು ಯೋಗಿಗೆ ಗೋಚರವಾಗುವವು. (ಅಪರಿಗ್ರಹಸ್ಥೈರ್ಯೆ ಜನ್ಮಕಥಾಂತಾ ಸಂಬೋಧಃ-ಪತಂಜಲಿ).

ನಿಯಮ : 1) ಶೌಚ, 2) ಸಂತೋಷ, 3) ತಪಸ್ಸು, 4) ಸ್ವಾಧ್ಯಾಯ ಮತ್ತು 5) ಈಶ್ವರಪ್ರಣಿಧಾನ. ಈ ಐದು ಅಂಗಗಳಿಗೆ ನಿಯಮವೆನ್ನುತ್ತಾರೆ.
ಶೌಚ : ಇದರಲ್ಲಿ ಎರಡು ಬಗೆ. ಬಹಿಃಶೌಚವೆಂದರೆ ದೇಹದ ಹೊರಭಾಗವನ್ನು ಮೃತ್ತಿಕೆಯಿಂದ ತೊಳೆಯುವುದು. ಎರಡನೆಯದು ಅಂತಃಶೌಚ. ಇತರರನ್ನು ಮೈತ್ರಿಭಾವದಿಂದ ಕಾಣುವುದು. ಸಕಲವೂ ಪರಮಾತ್ಮನಸ್ವರೂಪವೇ ಎಂದು ಭಾವಿಸುವುದು. ಶರೀರವು ಶುದ್ಧವಾಗಿದ್ದರೆ ಪಾಪಾಚರಣೆಮಾಡಲು ಜಿಗುಪ್ಸೆಯುಂಟಾಗುತ್ತದೆ, (ಮನ) ಹಿಂಜರಿಯುತ್ತದೆ. (ಶೌಚಾತ್ಸ್ವಾಂಗಜುಗುಪ್ಸಾ ಪರೈರಸಂಸರ್ಗಃ -ಪತಂಜಲಿ).
ಸಂತೋಷ : ಆಕಸ್ಮಿಕ ಲಾಭದಿಂದ ಸಂತೋಷ ಉಂಟಾಗುತ್ತದೆ. ಆದರೆ ಇದು ಕ್ಷಣಿಕವೆಂದು ಅರಿತು ಲಾಭವಾಗದಿದ್ದರೂ ವಿಷಾದ ಹೊಂದದೇ ಇರುವುದು ನಿಜವಾದ ಸಂತೋಷ. ಆ ಮನಸ್ಥಿತಿಯಿಂದ ನಿಜವಾದ ಸುಖ ದೊರೆಯುವುದು. (ಸಂತೋಷಾದನುತ್ತಮಸುಖಲಾಭಃ- ಪತಂಜಲಿ).
ತಪಸ್ಸು : ಇಂದ್ರಿಯಗಳನ್ನು ಶೋಷಣೆ ಮಾಡಲು ಆಚರಿಸುವ ವ್ರತಗಳು. ಇವುಗಳ ಆಚರಣೆಯಿಂದ ಅಶುದ್ಧಿ ನಾಶವಾಗಿ ಅಂತಃಕರಣವು ಶುದ್ಧವಾಗುತ್ತದೆ. (ಕಾರ್ಯೇಂದ್ರಿಯಸಿದ್ಧಿರಶುದ್ಧಿಕ್ಷಯಾಸ್ತಪಸಃ-ಪತಂಜಲಿ).
ಸ್ವಾಧ್ಯಾಯ : ವೇದಮಂತ್ರಗಳನ್ನು ಸ್ವರಾಕ್ಷರಪದವರ್ಣ ಲೋಪವಾಗದಂತೆ ಅಧ್ಯಯನ ಮಾಡುವುದು. ವೈದಿಕಮಂತ್ರಗಳ ಅರ್ಥಾನುಸಂಧಾನದಿಂದ ಮಂತ್ರಾಭಿಮಾನಿ ದೇವತೆಗಳು ಸಿದ್ಧಿಯನ್ನು ಕೊಡುವರು. ಮಂತ್ರರಹಸ್ಯ ಅರಿಯಲು ಸದ್ಗುರುವಿನ ಆಶ್ರಯ ಅವಶ್ಯ. (ಸ್ವಾಧ್ಯಾಯಾದಿಷ್ಟದೇವತಾ ಸಂಪ್ರಯೋಗಃ-ಪತಂಜಲಿ).
ಈಶ್ವರಪ್ರಣಿಧಾನ : ಸಕಲಕ್ರಿಯಾದಿಗಳ ಫಲವನ್ನು ಅಪೇಕ್ಷಿಸದೇ ಈಶ್ವರನಲ್ಲಿ ಅರ್ಪಣೆ ಮಾಡುವುದು. "ಕಾಮತೋಕಾಮತೋವಾಪಿ ಯತ್ಕರೋಮಿ ಶುಭಾಶುಭಂ | ತತ್ಸರ್ವಂ ತ್ವಯಿ ವಿನ್ಯಸ್ಯ ತ್ವತ್ಪ್ರಯುಕ್ತಃ ಕರೋಮ್ಯಹಂ ||" ಅಂದರೆ, ಆಸೆಯಿಂದಲೋ ಆಥವಾ ಆಸೆ ಇಲ್ಲದೆಯೋ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಅವೆಲ್ಲವನ್ನೂ ಅವನಲ್ಲಿ ಅರ್ಪಿಸಿ ಅವನ ಪ್ರಯುಕ್ತವೇ ಅಂದರೆ ಭಗವಂತನಿಗಾಗಿಯೇ ನಾನು ಎಲ್ಲ ಕರ್ಮಗಳನ್ನೂ ಮಾಡುತ್ತೇನೆ ಎಂದು ಈಶ್ವರನಲ್ಲಿ ಕಾಯಾ, ವಾಚಾ, ಕರ್ಮಣಾ ಅರ್ಪಣೆ ಮಾಡುವುದು. ಇದರಿಂದ ಸಮಾಧಿಯು ಸಿದ್ಧಿಸುವುದು. (ಸಮಾಧಿಸಿದ್ಧಿರೀಶ್ವರಪ್ರಣಿಧಾನಾತ್- ಪತಂಜಲಿ).

ಪಟ್ಟಾಭಿ ಜೋಯಿಸರು ಇನ್ನೂ ವಿವರವಾಗಿ ಹೇಳುತ್ತಾರೆ. ಬ್ರಹ್ಮಚರ್ಯದ ಬಗ್ಗೆ ಬಹಳ ವಿವರವಾಗಿ ಬರೆಯುತ್ತಾರೆ. ಇಂಥ ವಿವರ ಅನ್ಯತ್ರ ದೊರೆಯುವುದು ಕಡಿಮೆ ಎನ್ನಬಹುದು. ಯೋಗದಲ್ಲಿ ತಳಪಾಯದಂತಿರುವ ಯಮನಿಯಮಗಳ ಅಂಗ ಉಪಾಂಗಗಳನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು ಅನ್ನುತ್ತಾರೆ. ಅದಕ್ಕೆ ಮೊದಲು ಶರೀರವು ರೋಗ, ಋಣ, ದಾರಿದ್ರ್ಯಗಳಿಗೆ ಬಲಿಯಾಗದಂತೆ ನೋಡಬೇಕು ಎನ್ನುತ್ತಾರೆ. ಸ್ವಾತ್ಮಾರಾಮರ (ಹಠಯೋಗಪ್ರದೀಪಿಕೆಯ ಕರ್ತೃ) ನುಡಿಯನ್ನು ಉದಾಹರಿಸುತ್ತಾರೆ. "ಹಠಸ್ಯ ಪ್ರಥಮಾಂಗತ್ತ್ವಾದಾಸನಂ ಪೂರ್ವಮುಚ್ಚತೇ | ತಸ್ಮಾತ್ತದಾಸನಂ ಕುರ್ಯಾದಾರೋಗ್ಯಂಚಾಂಗಲಾಘವಂ ||". 'ಹ' ಎಂಬ ಶಬ್ದಕ್ಕೆ ಸೂರ್ಯನಾಡಿ ಎಂದೂ 'ಠ' ಎಂಬ ಶಬ್ದಕ್ಕೆ ಚಂದ್ರನಾಡಿ ಎಂಬ ಹೆಸರಿದೆ. ನಮ್ಮ ಮೂಗಿನ ಬಲ ರಂಧ್ರಕ್ಕೆ ಸೂರ್ಯನಾಡಿ ಎಂದೂ ಎಡ ರಂಧ್ರಕ್ಕೆ ಚಂದ್ರನಾಡಿ ಎಂಬ ಹೆಸರು. ವಾಯುವಿನ ಮೇಲೆ ನಿಯಂತ್ರಣವಿದ್ದರೆ ಮನವನ್ನು ನಿರೋಧಿಸಬಹುದು. "ಚಲೇ ವಾತೇ ಚಲಂ ಚಿತ್ತಂ | ನಿಶ್ಚಲೇ ನಿಶ್ಚಲಂ ಭವೇತ್ ||" ಗಾಳಿಯು ಸಂಚರಿಸುತ್ತಿದ್ದರೆ ಮನವು ಚಂಚಲವಾಗುವುದು. ಮನವನ್ನು ಒಂದೆಡೆ ತಡೆಗಟ್ಟಬೇಕಾದರೆ ಪ್ರಾಣವನ್ನು(ಉಸಿರನ್ನು) ತಡೆಗಟ್ಟಬೇಕು. ತಡೆಗಟ್ಟಿದ ಮನವನ್ನು ಅಂತರಾತ್ಮನ ಕಡೆಗೆ ತಿರುಗಿಸುವ ವಿಧಾನವೇ ಹಠಯೋಗ. ಈ ಹಠಯೋಗದಿಂದ ಮನವು ಆತ್ಮಾಭಿಮುಖವಾದರೆ ಅದೇ ರಾಜಯೋಗ.

"ಯೋಗಮಾಲಾ"(ಪ್ರಥಮ ಪುಷ್ಪ) ಎಂಬ ಚಿಕ್ಕ ಹೊತ್ತಿಗೆಯ ಪ್ರಕಾಶಕರು- ಅಷ್ಟಾಂಗ ಯೋಗನಿಲಯ (235, 8ನೆಯ ಕ್ರಾಸ್, ಗೋಕುಲಂ 3ನೆಯ ಹಂತ, ಮೈಸೂರು- 570 002). ಈ ಪುಸ್ತಕದ ಬೆಲೆ ತಿಳಿಸಿಲ್ಲ. ಪುಟಗಳು 8+93+(42 ಪುಟ ಯೋಗಾಸನಗಳ ಚಿತ್ರಗಳು ಇವೆ). ಹಾಗೆ ನೋಡಿದರೆ ಆಕಾರದಲ್ಲಿ ಪುಸ್ತಕ ಕಿರಿಯದು. ಆದರೆ ಲೇಖಕರ ಪಾಂಡಿತ್ಯ ಹಾಗೂ ಅನುಭವಗಳ ಎರಕ ಇದರಲ್ಲಿದೆ. ಇದೊಂದು ಸಂಗ್ರಾಹ್ಯವಾದ ಪುಸ್ತಕ.

ಯೋಗಾಸನ ವಿಶಾರದ ಕೆ. ಪಟ್ಟಾಭಿ ಜೋಯಿಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X