ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಮ್ಮೆಯ ಕನ್ನಡಿಗ, ಪತ್ರಕರ್ತ ಎಂ.ವಿ.ಕಾಮತ್

By Staff
|
Google Oneindia Kannada News

M.V. Kamath with G.V.Kulkarniಎಮ್.ವಿ.ಕಾಮತ್‌ರ ಆತ್ಮಚರಿತ್ರೆ : ಎ ರಿಪೋರ್ಟರ್ ಎಟ್ ಲಾರ್ಜ್' (A Reporter at Large) ಸರಣಿ ರೂಪದಲ್ಲಿ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಲಿದೆ. ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳು ಪುಸ್ತಕದ ತುಂಬ ಹಾಸುಕೊಕ್ಕಾಗಿವೆ. ಇದು ಈಗಿನ ಪೀಳಿಗೆಯ ಪತ್ರಕರ್ತರು ಓದಲೇಬೇಕಾದ ಪುಸ್ತಕವೆಂದರೂ ತಪ್ಪಾಗಲಾರದು.

ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಪೀಠಿಕೆ:

ನಾನು ಪುಸ್ತಕಪ್ರಿಯ. ಇಂಗ್ಲೀಷಿನಲ್ಲಿ ಬಹಳ ಓದುವ ಚಟ ಇದ್ದವರಿಗೆ ಪುಸ್ತಕದಹುಳ' (bookworm) ಎನ್ನುತ್ತಾರೆ. ಉತ್ತಮ ಪುಸ್ತಕ ಓದುವವರಿಗೆ ಹಾಗೆ ಅನ್ನಲಾಗುವುದಿಲ್ಲ. ಅದಕ್ಕಾಗಿ ನಾನು ಒಂದು ಶಬ್ದ ಟಂಕಿಸಿದ್ದೇನೆ (ಕಾಯಿನ್ ಮಾಡಿದ್ದೇನೆ). ಅದು ಪುಸ್ತಕದಭ್ರಮರ' (bookbee). ನಾವು ಪುಸ್ತಕ-ಕುಸುಮದಿಂದ ಅದರ ಮಕರಂದ ಸವಿಯಬೇಕು. ತಾನು ಸವಿದ ಜೇನು ಇತರರಿಗೆ ಹಂಚಬೇಕು. ನನ್ನ ಒಬ್ಬ ಮಿತ್ರ ಹೇಳುತ್ತಿದ್ದ, ನಾನು ಒಪ್ಪತ್ತು ಊಟ ಬಿಡಬಹುದು, ಆದರೆ ಒಂದು ಒಳ್ಳೆಯ ಪುಸ್ತಕ ಕೈಗೆ ಸಿಕ್ಕರೆ ಅದನ್ನು ಬಿಡಲಾರೆ' ಎಂದು.

ಇತ್ತೀಚೆಗೆ ಐದು ದಿನಗಳ ಯೋಗ ಶಿಬಿರ ನಡೆಸಲು ಶಿರಸಿಗೆ ಹೋಗಿದ್ದೆ. ಅದನ್ನು ಅಯೋಜಿಸಿದವರು ಶಿರಸಿಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿ ವ್ಯಕ್ತಿ, ಜನಸೇವಕ ಹಾಗೂ ಕರ್ಮಯೋಗಿ ಎಸ್.ವಿ.ಸೋಂದೆ ಅವರು. ನೀವು ಮುಂಬೈಯ ಎಂ.ವಿ.ಕಾಮತರ ಆತ್ಮಚರಿತ್ರೆ ಓದಿದ್ದೀರಾ?' ಎಂದು ಕೇಳಿದರು. ಅದರ ಬಗ್ಗೆ ಕೇಳಿದ್ದೇನೆ, ಅದು ನನಗೆ ಸಿಕ್ಕಿಲ್ಲ.' ಎಂದೆ. ಸೋಂದೆ ಅಂದರು, ಅವರ ಆತ್ಮಚರಿತ್ರೆ ಎ ರಿಪೋರ್ಟರ್ ಎಟ್ ಲಾರ್ಜ' ಬಗ್ಗೆ ಒಂದು ಆಂಗ್ಲ ಪತ್ರಿಕೆಯಲ್ಲಿ ಓದಿದೆ. ನಮ್ಮ ಶಿರಸಿಯ ಪಂಡಿತ ಪಬ್ಲಿಕ್ ಲೈಬ್ರರಿಗೆ ತರಿಸಲು ಗ್ರಂಥಪಾಲರಿಗೆ ತಿಳಿಸಿದೆ. ಬಹಳ ಚೆನ್ನಾಗಿ ಇದೆ.' ಲೈಬ್ರರಿಯಿಂದ ತರಿಸಿ ಕೊಡುವುದಾಗಿ ಸೋಂದೆ ಹೇಳಿದರು. ಅದು ಲೈಬ್ರರಿಯಲ್ಲಿ ಇರಲಿಲ್ಲ. ಹುಬ್ಬಳ್ಳಿಯಲ್ಲಿದ್ದ ಸೋಂದೆ ಅವರ ಅಳಿಯ ಧಾಕಪ್ಪ ಓದಲು ಒಯ್ದಿದ್ದರು. ಮುಂಬೈಗೆ ಹೋದ ಮೇಲೆ ನೋಡುವೆ ಅಂದೆ. ನಂತರ ಧಾರವಾಡದಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮೂರು ದಿನಗಳ ಯೋಗಶಿಬಿರ' ನಡೆಸಲು ಬಂದಾಗ ನನಗೆ ಒಂದು ಅಚ್ಚರಿಯೇ ಕಾಯ್ದಿತ್ತು. ಕುರಿಯರ್ ಮೂಲಕ ಕಾಮತರ ಆತ್ಮಚರಿತ್ರೆ ನಾನು ಧಾರವಾಡದಲ್ಲಿ ತಂಗಿದ್ದ ಮನೆಗೆ ಬಂದಿತ್ತು. ಸೋಂದೆಯವರ ಕಾರ್ಯ ವೈಖರಿ ನೋಡಿ ಬೆರಗಾಗಿ ಅವರಿಗೆ ಫೋನು ಮಾಡಿ ಕೃತಜ್ಞತೆ ತಿಳಿಸಿದೆ.

ಇಷ್ಟು ಪೀಠಿಕೆ ಸಾಕು.

ಭಾರತದ ಪತ್ರಿಕಾ ಪ್ರಪಂಚದಲ್ಲಿ ಶಿರೋಭೂಷಣ ಪತ್ರಕರ್ತರೂ, ಪದ್ಮಭೂಷಣರೂ, ಹೆಮ್ಮೆಯ ಮುಂಬೈ ಕನ್ನಡಿಗರೂ ಆಗಿರುವ ಮಾಧವ ವಿಠ್ಠಲರಾವ ಕಾಮತ ಅವರ ಆತ್ಮಚರಿತೆ ಎ ರಿಪೋರ್ಟರ್ ಎಟ್ ಲಾರ್ಜ್' ಓದಲು ತೊಡಗಿದೆ. ಪುಸ್ತಕದ ತುಂಬೆಲ್ಲ ಅವರ ಕನ್ನಡಾಭಿಮಾನ, ಭಾರತಪ್ರೇಮ ಹಾಗೂ ಸನಾತನ ಮೌಲ್ಯಗಳ ಬಗ್ಗೆ ಅವರಿಗೆ ಇದ್ದ ಗೌರವಾದರಗಳನ್ನು ನಾನು ಬಹುವಾಗಿ ಮೆಚ್ಚತೊಡಗಿದೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ, ದಿ ಹಿಂದೂ' ಪತ್ರಿಕೆಯ ಸಂಪಾದಕ, ಎನ್.ರಾಮ್ ಬರೆಯುತ್ತಾರೆ,

"This is an extraordinary book, its appeal extending far beyond the community of journalists. It is indeed a reflective analysis of the history of modern India from a sensitive mind that could also observe the happenings from a vintage point. It offers insight into the world of diplomacy, politics and journalism in a way that has few parallels."

(ಇದೊಂದು ಅಸಾಧಾರಣ ಗ್ರಂಥ. ಇದು ಪತ್ರಕರ್ತರ ಕುಟುಂಬದ ಎಲ್ಲೆಗಳನ್ನು ಮೀರಿ ನಿಲ್ಲುವ ಪುಸ್ತಕ. ಇಲ್ಲಿ ಸೂಕ್ಷ್ಮಗ್ರಾಹಿ ಕುಶಾಗ್ರ ಮನವೊಂದು, ಮಹತ್ವದ ಸ್ಥಾನದಲ್ಲಿ ನಿಂತುಕೊಂಡು, ಭಾರತದ ಆಧುನಿಕ ಇತಿಹಾಸವನ್ನು, ಆಗುಹೋಗುಗಳನ್ನು ನಿರೀಕ್ಷಿಸಿದೆ ಮತ್ತು ಬಿಂಬಿಸುವಂತೆ ವಿಶ್ಲೇಷಿಸಿದೆ. ಇಲ್ಲಿರುವ ಒಳನೋಟ ಹೇಗಿದೆ ಎಂದರೆ ಮುತ್ಸದ್ದಿತನ, ರಾಜಕಾರಣ ಮತ್ತು ಪತ್ರಿಕೋದ್ಯಮಗಳ ಪ್ರಪಂಚದಲ್ಲಿಯೇ ಅಪರೂಪದ್ದಾಗಿದೆ ಎನ್ನಬಹುದು.)

ಉತ್ತಮ ಪುಸ್ತಕಗಳನ್ನು ಪ್ರಕಾಶಿಸುವಲ್ಲಿ ವಿಶ್ವಮಾನ್ಯತೆ ಪಡೆದ ಭಾರತೀಯ ವಿದ್ಯಾಭವನ'ದ ಹೆಮ್ಮೆಯ ಪ್ರಕಟನೆ ಇದಾಗಿದೆ. ಜಸ್ಟಿಸ್ ಛಾಗ್ಲಾ ಅವರ ರೋಸಸ್ ಇನ್ ಡಿಸೆಂಬರ್' (Roses in December)ನಿಂದ ಪ್ರಾರಂಭಿಸಿ ಇಲ್ಲಿಯ ವರೆಗೆ 48 ಆತ್ಮಚರಿತ್ರೆಗಳನ್ನು ಇವರು ಪ್ರಕಟಿಸಿದ್ದಾರೆ. ಅಲ್ಲದೆ 99 ಹಿರಿಯ ವ್ಯಕ್ತಿಗಳ ಜೀವನ ಚರಿತ್ರೆಗಳನ್ನೂ ಪ್ರಕಟಿಸಿದ್ದಾರೆ. ಅದರಲ್ಲಿ ಲೂಯಿ ಫಿಶರ್ ಬರೆದ, ಮಹಾತ್ಮಾ ಗಾಂಧಿ: ಹಿಸ್ ಲೈಫ್ ಅಂಡ್ ಟೈಮ್ಸ್' (Mahatma Gandhi: His Life and Times), ಸಚ್ಚಿದಾನಂದರು ಬರೆದ ಲೋಕನಾಯಕ ಜೆ.ಪಿ. ಮ್ಯಾನ್ ಆಫ್ ದಿ ಸೆಂಚುರಿ' (Lok Nayak J.P. Man of the century) ಕೂಡ ಇವೆ. ಶಿವರಾಮ ಕಾರಂತರ ಆತ್ಮಚರಿತ್ರೆ, ಹುಚ್ಚು ಮನಸ್ಸಿನ ಹತ್ತು ಮುಖಗಳು'(Ten Faces of a Crazy Mind)ನ್ನೂ ಪ್ರಕಟಿಸಿದ್ದಾರೆ.

ಭಾರತೀಯ ವಿದ್ಯಾ ಭವನದ ಪ್ರಕಾಶನಗಳ ಪ್ರಧಾನ ಸಂಪಾದಕರಾದ ರಾಮಕೃಷ್ಣ ಅವರು ಬರೆದ ಮುನ್ನುಡಿ ಇದೆ. ಅದರಲ್ಲಿ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ. 1946ರಲ್ಲಿ ಮೇ 14ರಂದು ಮಹಾತ್ಮಾ ಗಾಂಧಿಯವರು ತಮ್ಮ ಬಲಗೈ ಬಂಟನಂತಿದ್ದ ಸರದಾರ ವಲ್ಲಭಭಾಯಿ ಪಟೇಲರೊಂದಿಗೆ, ಸಿಮ್ಲಾದಲ್ಲಿ ನಡೆದ ಐತಿಹಾಸಿಕ ಸಭೆ (ಬ್ರಿಟಿಷ್ ಕ್ಯಾಬಿನೆಟ್ ಕಳಿಸಿದ ಮಿಷನ್ ಸದಸ್ಯರೊಡನೆ ಮೀಟಿಂಗ್) ಮುಗಿಸಿ ಸಿಮ್ಲಾದಿಂದ ಮುಂಬೈಗೆ ಬರಲಿರುವ ಟ್ರೇನಿನಲ್ಲಿ, ವಿಶೇಷ ಜನತಾ ಬೋಗಿಯಲ್ಲಿ, ಪ್ರವಾಸಿಸುತ್ತಿರುವಾಗ ಲೋಣಾವಳಾದ ಬಳಿ ಗಾಡಿ ಗಕ್ಕನೆ ನಿಂತಿತು. ಎಲ್ಲರೂ ತಲ್ಲಣಗೊಂಡರು. ಆದರೆ ಗಾಂಧಿ ಮಾತ್ರ ನಿರಾತಂಕವಾಗಿ ಮಲಗಿದ್ದರಂತೆ. ಗಾಡಿ ನಿಲ್ಲಲು ಕಾರಣ ಹಳಿಯ ಮೇಲೆ ಯಾರೋ ದುಷ್ಕರ್ಮಿಗಳು ಬಂಡೆಗಲ್ಲನ್ನು ಇರಿಸಿದ್ದರಂತೆ. ಇದು ಭಾರಿ ಸುದ್ದಿಯಾಯ್ತು. ಅದರ ಪ್ರತ್ಯಕ್ಷ ವರದಿ ಮಾಡಲು ದಾದರ ಸ್ಟೇಶನ್‌ಗೆ ತರುಣ ವರದಿಗಾರರೊಬ್ಬರು ಬಂದಿದ್ದರರಂತೆ. ಆ ತರುಣ ವರದಿಗಾರ ಬೇರೆಯಾರಲ್ಲ ಎಂ.ವಿ.ಕಾಮತ್ ಆಗಿದ್ದರು ಎಂದು (ಆ ಬೋಗಿಯಲ್ಲಿ ಉಪಸ್ಥಿತರಿದ್ದ) ರಾಮಕೃಷ್ಣ ಬರೆಯುತ್ತಾರೆ. ವಿಶೇಷ ವರದಿ ಪ್ರಕಟಿಸುವಲ್ಲಿ ಫೀ ಪ್ರೆಸ್ ಸಂಪಾದಕ ಸದಾನಂದರಲ್ಲಿ ಕಾಮತರು ಟ್ರೇನಿಂಗ್ ಪಡೆಯುತ್ತಿದ್ದರು. ವಿದೇಶದಲ್ಲಿ ಹಲವು ವರ್ಷ ದುಡಿದು ಭಾರತಕ್ಕೆ ಮರಳಿದ ಮೇಲೆ ಭಾರತೀಯ ವಿದ್ಯಾ ಭವನದವರು ನಡೆಸುತ್ತಿರುವ ಡಾ| ರಾಜೇಂದ್ರಪ್ರಸಾದ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಅಂಡ್ ಮ್ಯಾನೇಜ್‌ಮೆಂಟ್' (Institute of Communication and Management)ನ ಜರ್ನಲಿಸಂ ವಿಭಾಗದ ಮುಖ್ಯಸ್ಥರಾಗಿ ಎಮ್. ವಿ. ಕಾಮತ ಸೇವೆಸಲ್ಲಿಸಿದ ವಿಷಯವನ್ನೂ ನೆನೆಯುತ್ತಾರೆ.

ಕಾಮತರು ಪಿ.ಟಿ.ಐ.ವರದಿಗಾರರಾಗಿ ದುಡಿದಿದ್ದಾರೆ, ಇಪ್ಪತ್ತು ವರ್ಷ ಯುನೈಟೆಡ್ ನೇಶನ್ಸ್‌ನ ಮುಖ್ಯ ಕಚೇರಿಯಲ್ಲಿದ್ದು ವರದಿ ಕಳಿಸಿದ್ದಾರೆ, ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಬಾನ್(ಜರ್ಮನಿ), ಪ್ಯಾರಿಸ್(ಫ್ರಾನ್ಸ್), ವಾಶಿಂಗ್‌ಟನ್ ಡಿ.ಸಿ.(ಅಮೇರಿಕಾ)ಗಳಲ್ಲಿ ದುಡಿದಿದ್ದಾರೆ. ನಿವೃತ್ತಿ ಪೂರ್ವದಲ್ಲಿ ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದರು. ನಿವೃತ್ತಿಯ ನಂತರವೂ ಪ್ರಸಾರ ಮಾಧ್ಯಮಗಳ ಬಗ್ಗೆ ಪತ್ರಿಕೆಗಳಿಗೆ ಬರೆಯತ್ತಲೇ ಇದ್ದಾರೆ.

ಕಾಮತರು ಲೇಖಕನ ನುಡಿ'ಯಲ್ಲಿ ಒಂದು ಮಾತು ಹೇಳುತ್ತಾರೆ. ಇದು ಹಾಗೆ ನೋಡಿದರೆ ಆತ್ಮಚರಿತ್ರೆಯಲ್ಲ. ನನ್ನ ಜೀವನ ಹಾಗೂ ನಾನು ಜೀವಿಸಿದ ಕಾಲದ ಬಗ್ಗೆ ನಾನು ಬರೆದ ಸುದೀರ್ಘ ಟಿಪ್ಪಣಿ' ಎಂದು.ಅವರ ಆತ್ಮಚರಿತ್ರೆಯಲ್ಲಿ ಭಾರತದ ಇತಿಹಾಸವಿದೆ, ನಾಡಿನ ಮತ್ತು ವಿಶ್ವದ ಮಹಾನ್ ವ್ಯಕ್ತಿಗಳ ದರ್ಶನವಿದೆ, ಸಂದರ್ಶನವಿದೆ. ಈ ಗ್ರಂಥದಲ್ಲಿ ಏಳು ಅಧ್ಯಾಯಗಳಿವೆ.

ಮೊದಲನೆಯ ಅಧ್ಯಾಯ, ನನ್ನ ಎಲ್ಲಾ ನಿನ್ನೆಗಳು' (ALL MY YESTERDAYS). ಇದಕ್ಕೂ ಒಂದು ಮುನ್ನುಡಿ ಇದೆ. ಕಾಮತರು ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ ನೆಹರೂ ಅವರ ಆತ್ಮಚರಿತ್ರೆಗಳ ಬಗ್ಗೆ ಬರೆಯುತ್ತಾರೆ, ಅವುಗಳ ಅನನ್ಯತೆಯನ್ನು ಮೆಚ್ಚುತ್ತಾರೆ. ಜಸ್ಟಿಸ್ ಛಾಗ್ಲಾ ಅವರ ಆತ್ಮಚರಿತ್ರೆ ರೋಸಸ್ ಇನ್ ಡಿಸೆಂಬರ್'(Roses in December)ನ್ನು ಭಾರತೀಯ ವಿದ್ಯಾಭವನದವರು 1973ರಲ್ಲಿ ಪ್ರಕಟಿಸಿದರು. ಅದರ 12ನೇ ಸಂಸ್ಕರಣವು 2000ದಲ್ಲಿ ಪ್ರಕಟವಾಯಿತು. ಅವರ ಮಗ ಇಕ್ಬಾಲ್ ಮುನ್ನುಡಿ ಬರೆದಿದ್ದಾರೆ. ಮಗನೇ ಈ ಪುಸ್ತಕಕ್ಕೆ ಕಾರಣ ಆದುದನ್ನು ಮೆಚ್ಚುತ್ತಾರೆ. ನೆಹರು ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಮುಂಬೈ ರಾಜಕಾರಣಿ ಎಸ್.ಕೆ.ಪಾಟೀಲರ ಬಗ್ಗೆ ಬರೆಯುತ್ತಾರೆ. ಗಾಂಧಿಯವರರೇ ಇವರನ್ನು ಮುಂಬೈಯ ಅನಭಿಷಿಕ್ತ ದೊರೆ' (Uncrowned King) ಎಂದು ಕರೆದಿದ್ದರಂತೆ. ಮೂರು ಸಲ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಆಗುವ ಭಾಗ್ಯ ಇವರೊಬ್ಬರ ಹಿರಿಮೆಯಾಗಿತ್ತು. ಹಣ ಸಂಗ್ರಹಿಸುವುದರಲ್ಲಿ ಇವರು ನಿಸ್ಸೀಮರಾಗಿದ್ದರು. ಇವರು ತಮ್ಮ ಜೀವನದ ಬಗ್ಗೆ ಕೆಲವು ಟಿಪ್ಪಣಿಗಳನ್ನು ಬರೆದಿಟ್ಟಿದ್ದರಂತೆ. ಅವರ ಮಗ ಟಿಪ್ಪಣಿಗಳನ್ನು ಸಂಪಾದಿಸುವ ಕೆಲಸವನ್ನು ಕೈಕೊಳ್ಳಲು ಕಾಮತರನ್ನು ಕೇಳಿದಾಗ ಇವರು ಬಹಳ ಸಂತೋಷದಿಂದ ಒಪ್ಪಿ ಆ ಕೆಲಸ ಮಾಡಿದರಂತೆ. ಪತ್ರಕರ್ತರ ಆತ್ಮಚರಿತ್ರೆಗಳಲ್ಲಿ ಮಹತ್ವದ ಕೃತಿ ನ್ಯಾಶನಲ್ ಹೆರಾಲ್ಡ್ ಸಂಪಾದಕ ಎಮ್ ಚಲಪತಿರಾವ್ ಅವರದು ಎನ್ನುತ್ತಾರೆ.

ಒಮ್ಮೆ ಪ್ರಸಿದ್ಧ ಸಿನೆ ತಾರೆ ಶಬನಾ ಆಜ್ಮಿಯ ಆಮಂತ್ರಣದ ಮೇರೆಗೆ ಅವಳ ಮನೆಗೆ ಹೋಗಿದ್ದರಂತೆ. ಅವಳು ತನ್ನ ವೃದ್ಧ ತಂದೆ ತಾಯಿಗಳನ್ನು ಪರಿಚಯಿಸಿದಾಗ ಇವರು ಅವರ ಕಾಲು ಮುಟ್ಟಿ ನಮಸ್ಕರಿಸಿದರಂತೆ. ಅವಳ ತಂದೆ ಇದೆಲ್ಲ ಬೇಡ' ಎಂದಾಗ ಕಾಮತರು ಉತ್ತರಿಸಿದರಂತೆ, ಹಿರಿಯರ ಪಾದಸ್ಪರ್ಶಮಾಡಿ ನಮಸ್ಕರಿಸುವುದು ನಮ್ಮ ಮನೆತನದಲ್ಲಿ ಹರಿದು ಬಂದ ಸಂಸ್ಕೃತಿ' ಎಂದು. 2001ರಲ್ಲಿ ಬರೋಡ ವಿಶ್ವವಿದ್ಯಾಲಯದ ಸಮಾಜ ಸೇವಾ ತಂಡದ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಕಾಮತರು ಮಾತಾಡುತ್ತಿರುವಾಗ ಈ ಘಟನೆಯನ್ನು ನೆನೆದರಂತೆ. ಇವರ ಭಾಷಣ ಮುಗಿದ ನಂತರ ಒಬ್ಬ ಸುಂದರ ತರುಣಿ ಇವರೆಡೆಗೆ ಬಂದು ಇವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದಳಂತೆ. ಆಗ ಕಾಮತರು ಅವಳಿಗೆ, ಇದೆಲ್ಲ ಬೇಡ' ಎಂದರಂತೆ. ಆಗ ಅವಳು, ಸರ್, ನಾನು ಕೂಡಾ ನಿಮ್ಮ ಸಂಸ್ಕೃತಿಯಲ್ಲೇ ಬೆಳೆದು ಬಂದವಳು!' ಎಂದು ಉದ್ಗಾರ ತೆಗೆದಳಂತೆ.

ಇಂಥ ಸಣ್ಣ ಸಣ್ಣ ಘಟನೆಗಳು ಕೂಡ ಈ ಪುಸ್ತಕದ ಬೆಲೆಯನ್ನು ಹೆಚ್ಚಿಸುತ್ತವೆ. ತರುಣ ಪೀಳಿಗೆ ಕಾಮತರಿಂದ ಕಲಿಯುವುದು ಬಹಳ ಇದೆ. ಉಡುಪಿಯಲ್ಲಿ ಇವರ ನೆರೆಹೊರೆಯಲ್ಲಿ ಕ್ರಿಸ್ತೀಯರು ವಾಸವಾಗಿದ್ದರಂತೆ. ಅವರೊಂದಿಗೆ ಇವರು ಹೇಗೆ ಸಹಭಾವದಿಂದ ಬಾಳಿದರು ಎಂಬ ಬಗ್ಗೆ ಬರೆದಿದ್ದಾರೆ. ಜೊಕಿಂ ಆಳ್ವ, ಮಾರ್ಗರೆಟ್ ಆಳ್ವಾ ಅವರ ಬಗ್ಗೆ ಬರೆಯುತ್ತಾರೆ. ದೀಪಾವಳಿಯ ಸಮಯ ಇವರ ಮನೆಯವರು ಕೆಥೋಲಿಕ್ ಬಾಂಧವರ ಮನೆಗೆ ಸಿಹಿತಿಂಡಿ ಕಳಿಸಿಕೊಡುತ್ತಿದ್ದರಂತೆ. ಅದೇರೀತಿ ಇವರ ಕೆಥೋಲಿಕ್ ಮಿತ್ರರು ಇವರ ಮನೆಗೆ ಕ್ರಿಸ್‌ಮಸ್ ಸಮಯದಲ್ಲಿ ಕೇಕ್ ತಂದುಕೊಡುತ್ತಿದ್ದರಂತೆ. ಯಾವುದೇ ಸಂಪ್ರದಾಯದ ಜನರೇ ಇರಲಿ ಅವರೊಂದಿಗೆ ಕೊಂಕಣಿಯಲ್ಲಿ ಮಾತಾಡಿದಾಗ ಆಗುವ ಸುಖದ ಬಗ್ಗೆ ಬರೆಯುತ್ತಾರೆ. ಕಾಮತರು ಇಲ್ಲಿ ಒಂದು ಮಾತು ಹೇಳುತ್ತಾರೆ, ನಾನು ಯಾವಾಗಲೂ ಅಭಿಪ್ರಾಯಪಟ್ಟಿದ್ದೇನೆ, ಧರ್ಮವು ಒಂದುವೇಳೆ ವಿಂಗಡಿಸಿದರೆ, ಭಾಷೆ ಯಾವಾಗಲೂ ನಮ್ಮನ್ನು ಒಂದೆಡೆ ತಂದಿದೆ.' ಎಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X