• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇತ್ರಚಿಕಿತ್ಸಾತಜ್ಞ ಡಾ|ಎಂ.ಎಂ. ಜೋಶಿಯವರ ಸಾಧನೆಯ ಹಾದಿ

By Staff
|

ಹುಬ್ಬಳ್ಳಿಯ ಹೊಸೂರಿನಲ್ಲಿ ಪದ್ಮನಯನಾಲಯಕ್ಕೆ ಈಗ 40 ವರ್ಷದ ಸಂಭ್ರಮ.75 ಬೆಡ್‌ಗಳಿರುವ, 43,000 ಚದರ ಫೂಟು ವ್ಯಾಪ್ತಿ ಪಡೆದ ಆಸ್ಪತ್ರೆ ಡಾ| ಜೋಶಿಯವರ ಯಶದ ಹೆಗ್ಗುರುತಾಗಿದೆ. ಪ್ರತಿದಿನ 250ರಿಂದ 300 ಕಣ್ಣಿನ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Dr.M.M.Joshi, Famous Eye Specialistಡಾ| ಎಂ.ಎಂ.ಜೋಶಿಯವರು ಕಾಖಂಡಕಿಯವರು. ಇದು ವಿಜಾಪುರದಿಂದ 30 ಕಿ.ಮೀ.ದೂರದಲ್ಲಿರುವ ಒಂದು ಕುಗ್ರಾಮ. 17ನೆಯ ಶತಮಾನದ ಪ್ರಸಿದ್ಧ ಅಪರೋಕ್ಷಜ್ಞಾನಿಗಳಾದ ಮಹಿಪತಿದಾಸರಿಂದಾಗಿ ಇದು ಸುಗ್ರಾಮವೂ ಪುಣ್ಯಗ್ರಾಮವೂ ಆಯಿತು. ಡಾ| ಜೋಶಿಯವರು, ಹಾಗೆ ನೋಡಿದರೆ, ಮಹಿಪತಿದಾಸರ ವಂಶಸ್ಥರು. ಅವರ ದೌಹಿತ್ರ ಸಂತತಿಯವರು. ಜೋಶಿಯವರದು ಜ್ಯೋತಿಷ್ಯ, ವೇದಾಧ್ಯಯನಕ್ಕೆ ಹೆಸರಾದ ಮೌನಭಾರ್ಗವ ಗೋತ್ರದ ವೈದಿಕ ಮನೆತನ. ಇವರ ತಂದೆಯ ಹೆಸರು ಮಧ್ವಾಚಾರ್ಯ. ತಾಯಿ ಪದ್ಮಾವತಿ ನಿಂಬಾಳದ ಗಂಡಮಾಲಿ ಎಂಬ ವೈದಿಕ ಮನೆತನದವಳು. ಡಾ| ಜೋಶಿಯವರ ಜನನ ಅವರ ತಾಯಿಯ ಮನೆಯಲ್ಲಿ, ನಿಂಬಾಳದಲ್ಲಿ, ಆಯಿತು. (10, ಮಾರ್ಚ 1935.) ಕಾಖಂಡಕಿ ಮಹಿಪತಿದಾಸರ ಭಕ್ತರಾದ ಇವರ ಮನೆತನದವರು ಇವರಿಗೆ ಮಹಿಪತಿ ಎಂಬ ಹೆಸರನ್ನೇ ಇಟ್ಟರು. ಇವರು ಜನಿಸಿದ ಊರು ನಿಂಬಾಳವೂ ಪುಣ್ಯಗ್ರಾಮ. ಗುರುದೇವ ರಾನಡೆಯವರ ಆಶ್ರಮ ಹೊಂದಿದ ನಿಂಬಾಳ ಒಂದು ಯಾತ್ರಾಸ್ಥಳವೇ ಆಗಿದೆ. ಮಹಿಪತಿ ಇನ್ನೂ ಐದು ವರ್ಷದ ಬಾಲಕನಾಗಿದ್ದಾಗ ತಾಯಿ ಪದ್ಮಾವತಿ ಸ್ವರ್ಗಸ್ಥರಾದರು. ಇವರಿಗೆ ಒಬ್ಬ ಅಕ್ಕ (ಶ್ಯಾಮಲಾ) ಇದ್ದಳು, ಇಬ್ಬರು ತಮ್ಮಂದಿರು ಇದ್ದರು. ಆದರೆ, ಅವರು ಹೆಚ್ಚು ಕಾಲ ಬದುಕಿರಲಿಲ್ಲ. ಅಕ್ಕ(ಶ್ಯಾಮಲಾ) ತಮ್ಮ(ಮಹಿಪತಿ) ಅಜ್ಜಿಯ ಮನೆಯಲ್ಲೇ, ನಿಂಬಾಳದಲ್ಲೇ ಬೆಳೆದರು. ಇವರ ತಾಯಿಯ ಅಜ್ಜ ಪಂ| ಹಯಗ್ರೀವಾಚಾರ್ಯರು ಋಷಿಸದೃಶ ಜೀವನ ನಡೆಸಿದ ಅಗ್ನಿಹೋತ್ರಿಗಳು. ವೇದಾಧ್ಯಯನದೊಂದಿಗೆ ಜ್ಯೋತಿಷ್ಯ, ಸಾಂಖ್ಯ, ಮೀಮಾಂಸೆಯಲ್ಲಿ ಉದ್ದಾಮ ಪಂಡಿತರು. 30-35 ವಿದ್ಯಾರ್ಥಿಗಳಿಗೆ ಅನ್ನ-ವಸ್ತ್ರ-ಆಶ್ರಯ ನೀಡಿ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದರು. ಮಹಿಪತಿಯವರ ತಾಯಿ ಪದ್ಮಾವತಿ ತಮ್ಮ ಅಜ್ಜನ ಸೇವೆ ಬಹಳ ಮಾಡಿದ್ದರು. ಅಜ್ಜ ಮುಪ್ಪಿನಕಾಲದಲ್ಲಿ ಕಣ್ಣು ಕಳೆದುಕೊಂಡಾಗ ವಿಶೇಷ ಸೇವೆ ಮಾಡಿದ್ದರಿಂದ, ಸಹಸ್ರಾರು ಜನರ ಕಣ್ಣುಗಳಿಗೆ ಬೆಳಕುಕೊಡುವ ಪುತ್ರನನ್ನು ನೀನು ಪಡೆಯುವೆ ಎಂದು ಅವರು ಹರಸಿದ್ದರಂತೆ. ಬಹುಶಃ ಈ ಕಾರಣದಿಂದಲೇ ಡಾ| ಜೋಶಿಯವರು ತಮ್ಮ ಕಣ್ಣಿನ ಆಸ್ಪತ್ರೆಗೆ ಪದ್ಮನಯನಾಲಯ ಎಂಬ ಸಾರ್ಥಕ ಹೆಸರನ್ನು ಇಟ್ಟಿದ್ದಾರೆ.

ಮಹಿಪತಿ ಸ್ಫುರದ್ರೂಪಿ, ಬುದ್ಧಿವಂತ ಮತ್ತು ತುಂಟ ಹುಡುಗನಾಗಿ, ಅಲ್ಲಿಯ ಪ್ರಮದೆಯರ ಅಚ್ಚುಮೆಚ್ಚಿನ ಬಾಲಕನಾಗಿ, ಅಜ್ಜನ ಮನೆಯಲ್ಲಿ ನಿಂಬಾಳದಲ್ಲಿ ಬೆಳೆದ. ರಾಮಚಂದ್ರ ಕುಲಕರ್ಣಿ ಎಂಬವರು ಡೊಮನಾಳ ಮಾಸ್ತರರೆಂದೇ ಪ್ರಸಿದ್ಧರಾದ ಶಿಕ್ಷಕರು. ಅವರ ಮಾರ್ಗದರ್ಶನದಲ್ಲಿ ಮಹಿಪತಿ ವಿದ್ಯಾಭ್ಯಾಸ ಮಾಡಿದ. ನಾಲ್ಕನೆಯ ಕ್ಲಾಸಿನ ವಿದ್ಯಾರ್ಥಿಗಳಿಗೆ ಸರಿ ಉತ್ತರ ಕೊಡಲು ಬರದೆ ಇದ್ದಾಗ ಡೊಮನಾಳ ಮಾಸ್ತರರು ಮೂರನೆಯ ಕ್ಲಾಸಿನ ಮಹಿಪತಿಯನ್ನು ಕರೆಸಿ, ಅವನಿಂದ ಸರಿ ಉತ್ತರ ಹೇಳಿಸಿ, ತಪ್ಪಿತಸ್ಥ ಹುಡುಗರಿಗೆ ಕಪಾಳಮೋಕ್ಷದ ಶಿಕ್ಷೆ ಇವನಿಂದ ಕೊಡಿಸುತ್ತಿದ್ದರಂತೆ! ಡೊಮನಾಳ ನಿಂಬಾಳಕ್ಕೆ ಸಮೀಪದಲ್ಲಿರುವ ಒಂದು ಹಳ್ಳಿ. (ಡೊಮನಾಳ ಎಂದೊಡನೆ ಡಾ| ಜೋಶಿಯವರು ನನಗೆ ಹೇಳಿದ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ಅವರು ಕಾರ್‌ನಲ್ಲಿ ವಿಜಾಪುರ ಸೊಲ್ಲಾಪುರ ಮಾರ್ಗದಲ್ಲಿ ಸಾಗುತ್ತಿದ್ದಾಗ ಮಧ್ಯದಲ್ಲಿ ಡೊಮನಾಳ ಎಂಬ ಫಲಕ ಕಾಣಿಸಿತಂತೆ. ಡ್ರೈವರನಿಗೆ ಆ ಊರಿನ ಕಡೆಗೆ ಹೊರಳಲು ಹೇಳಿದರಂತೆ. ಮುಖ್ಯ ರಸ್ತೆಯಿಂದ ಎರಡು ಕಿಲೋಮೀಟರ್ ಟಿಸಿಲುದಾರಿಯಲ್ಲಿ ಹೋಗಿ ಡೊಮನಾಳ ನೋಡಿ ಬಂದರಂತೆ. ಇಲ್ಲಿ ಕೆಲಸವಿತ್ತೇ? ಎಂದು ಚಾಲಕ ಕೇಳಿದಾಗ, ಇದು ನಮ್ಮ ಕವಿಮಿತ್ರ ಜೀವಿ ಜನಿಸಿದ ಊರು. ನೆನಪಾಯಿತು ಅಂತ ಈ ಊರು ನೋಡಲು ಬಂದೆ. ಎಂದರಂತೆ. ಮೈತ್ರಿಯೋಗ ಜೀವನದಲ್ಲಿ ಅಳವಡಿಸಿಕೊಂಡವರು ಡಾ| ಜೋಶಿಯವರು.)

Padmanayanalaya - Famous Eye Hospital in Hubliನಿಂಬಾಳಗ್ರಾಮ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ. ವಿಜಾಪುರದಿಂದ ಸೊಲ್ಲಾಪುರಕ್ಕೆ ರೈಲು ಮಾರ್ಗದಿಂದ ಹೋಗುವಾಗ ಇದು ಎರಡನೆಯ ಸ್ಟೇಶನ್. ಇದು ವಿಶ್ವವಿಖ್ಯಾತವಾಗಲು ಇಲ್ಲಿರುವ ಗುರುದೇವ ರಾನಡೆಯವರ ಆಶ್ರಮವೇ ಕಾರಣ. ಡಾ| ರಾನಡೆಯವರು ತತ್ತ್ವಜ್ಞಾನದ ಪ್ರಾಧ್ಯಾಪಕರಷ್ಟೇ ಅಲ್ಲ ಅನುಭಾವಿಗಳೂ ದಾರ್ಶನಿಕರೂ ಆಗಿದ್ದರು. ಇವರು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಇವರ ಆಶ್ರಮಕ್ಕೆ ಭೇಟಿ ನೀಡಲು ಆಗ ರಾಷ್ಟ್ರಪತಿಯಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಆಗಮಿಸಿದ್ದರು. ಗುರುದೇವ ರಾನಡೆಯವರು ಹಿಂದೀ ಸಂತರ ಅನುಭಾವ ಸಾಹಿತ್ಯ, ಮರಾಠೀ ಸಂತರ ಅನುಭಾವ ಸಾಹಿತ್ಯ, ಹಾಗೂ ಕರ್ನಾಟಕದ ಸಂತರ ಅನುಭಾವ ಸಾಹಿತ್ಯದ ಮೇಲೆ ಅಧಿಕಾರ ಮುದ್ರೆಯ ಬೃಹತ್ ಗ್ರಂಥ ಬರೆದಿದ್ದಾರೆ. ಮಹಿಪತಿ ಬಾಲಕನಾಗಿದ್ದಾಗ ಗುರುದೇವ ರಾನಡೆಯವರ ಆಶ್ರಮಕ್ಕೆ ಹೋಗುತ್ತಿದ್ದನು. ಹುಡುಗನ ಹೆಸರು ಮಹಿಪತಿ ಎಂದು, ಇವನು ಮಹಿಪತಿದಾಸರ ವಂಶಸ್ಥನೆಂದು ಹೇಳಿದಾಗ, ಗುರುದೇವರು ಮಹಿಪತಿದಾಸರ ಹಾಡೊಂದನ್ನು ಹಾಡಲು ಕೇಳಿದರಂತೆ. ಹುಡುಗ ಸುಶ್ರಾವ್ಯವಾಗಿ ಹಾಡಿ ಗುರುದೇವರ ಮೆಚ್ಚಿಗೆಯನ್ನು ಪಡೆದಿದ್ದನಂತೆ. (ಏಳಯ್ಯ ಆತ್ಮಾರಾಮ | ಯತಿಮುನಿಜನ ಪ್ರೇಮ | ಏಳಯ್ಯ ಘನಶ್ಯಾಮ | ಎನ್ನ ಪಾಲಿಸಯ್ಯ ಗುಣಧಾಮ|) ಪ್ರಾಥಮಿಕ ನಾಲ್ಕನೆಯ ಈಯತ್ತೆ ಪಾಸಾದ ಮೇಲೆ, ಬಬಲೇಶ್ವರದಲ್ಲಿ ಖಾಸಗಿಯಾಗಿ ಐದನೆಯ ಕ್ಲಾಸು ಮುಗಿಸಿ, ಆರನೆಯ (ಅಂದಿನ ಸೆಕೆಂಡ ಸ್ಟ್ಯಾಂಡರ್ಡ್‌ಗೆ) ವಿಜಾಪುರದ ದರ್ಬಾರ ಹೈಸ್ಕೂಲ್ ಸೇರಿದನು. ಸಂಬಂಧಿಕರ ಮನೆಯಲ್ಲಿ ವಾಸ. ಆ ಕಾಲದಲ್ಲಿ ಮೆಡಿಕಲ್, ಇಂಜಿನಿಯರಿಂದ ಅಭ್ಯಾಸ ಪ್ರಾಮುಖ್ಯತೆ ಪಡೆದಿರಲಿಲ್ಲ. ಅಂದಿನ ರಾಷ್ಟ್ರದ ನಾಯಕರಲ್ಲಿ ಹೆಚ್ಚಿನವರು ಕಾಯಿದೆಯ ಪದವೀಧರರಾಗಿದ್ದರು. (ಟಿಳಕ, ಗಾಂಧೀ, ನೆಹರು, ಪಟೇಲ ಮುಂ.) ಆದ್ದರಿಂದ ಮಹಿಪತಿಯನ್ನೂ ದೊಡ್ಡ ವಕೀಲನನ್ನಾಗಿಸುವುದು ಮನೆಯವರ ವಿಚಾರವಾಗಿತ್ತು. ವಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಇವನು ಪ್ರತಿಭಾವಂತ ವಿದ್ಯಾರ್ಥಿಯಾಗಿ ಮೆರೆದ. ಆಟಪಾಟದಲ್ಲಿ, ಭಾಷಣ ಲೇಖನ ಸ್ಪರ್ಧೆಯಲ್ಲಿ, ಪಠ್ಯೇತರ ಚಟವಟಿಕೆಯಲ್ಲಿ ಅಗ್ರಗಣ್ಯನಾಗಿ ಮೆರೆದ. ಒಂದು ವಾರ್ಷಕ ಸಭೆಯಲ್ಲಿ ಒಂಭತ್ತರಲ್ಲಿ ಏಳು ಬಹುಮಾನಗಳು ಮಹಿಪತಿ ಗೆದ್ದಿದ್ದ. 1953ರಲ್ಲಿ ಮೆಟ್ರಿಕ್ (ಎಸ್.ಎಸ್.ಎಲ್.ಸಿ.) ಪರೀಕ್ಷೆಯಲ್ಲಿ ಉತ್ತಮ ಗುಣ ಪಡೆದು ಪಾಸಾದ. ಎರಡು ವರ್ಷ ವಿಜ್ಞಾನದ ಅಭ್ಯಾಸ ಮಾಡಲು ಧಾರವಾಡಕ್ಕೆ ತೆರಳಿದ.

ವಿಜಾಪುರದಲ್ಲಿ ಕಾಲೇಜು ಇತ್ತು. ಆದರೆ ಧಾರವಾಡಕ್ಕೆ, ಅಲ್ಲಿ ಕೂಡ ಕರ್ನಾಟಕ ಕಾಲೇಜಿಗೆ ಹೆಚ್ಚಿನ ಖ್ಯಾತಿಯಿತ್ತು. ಗೋಕಾಕರು ಪ್ರಿನ್ಸಿಪಾಲರಾಗಿ ಬಂದದ್ದರಿಂದ ಕರ್ನಾಟಕ ಕಾಲೇಜು ಕೀರ್ತಿಯ ಶಿಖರವನ್ನೇ ತಲುಪಿತ್ತು. ಮಹಿಪತಿಯವರು ಮೊದಲು ಅರ್ಜುಣಗಿ ರಾಮಣ್ಣನವರ ಆದರ್ಶ ವಿದ್ಯಾರ್ಥಿ ನಿಲಯ ಸೇರಿದರು. ಅದು ಬಡ ಹುಡುಗರ ಉಚಿತ ಹಾಸ್ಟೆಲ್ ಆಗಿತ್ತು. ಅಲ್ಲಿ ನೀರು ಸೇದುವ, ಫಂಡ್ ಸಂಗ್ರಹಿಸುವ, ಕೆಲಸ ವಿದ್ಯಾರ್ಥಿಗಳೇ ಮಾಡಬೇಕಾಗುತ್ತಿತ್ತು. ಒಂದೆರಡು ತಿಂಗಳ ನಂತರ ಇವರಿಗಾಗಿ ಬೇರೆ ರೂಮಿನ ವ್ಯವಸ್ಥೆಯಾಯಿತು. ಇಂಟರ‌ಮಿಡಿಯೇಟ್‌ನಲ್ಲಿ ಉತ್ತಮ ಗುಣಪಡೆದರು. ಮೆಡಿಕಲ್ ಕಾಲೇಜಿಗೆ ಪ್ರಯತ್ನ ನಡೆಯಿತು. ಆಗ ಮುಂಬೈ ರಾಜ್ಯದಲ್ಲಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು, ಮಹಾರಾಷ್ಟ್ರ, ಗುಜರಾತ್ ಸೇರಿದ್ದವು. ಇವರಿಗೆ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರೆಯಿತು. ಅಲ್ಲಿ ಎಂ.ಬಿ.ಬಿ.ಎಸ್. ಮಾಡಲು ನಡೆದರು. ಇದರ ಲಾಭವೆಂದರೆ ಇವರಿಗೆ ಗುಜರಾತಿ ಭಾಷೆಯ ಪರಿಚಯವಾಯ್ತು. ಅಲ್ಲಿ ಕನ್ನಡ ಸಂಘದಲ್ಲಿ, ಗಣೇಶೋತ್ಸವದಲ್ಲಿ ಭಾವಹಿಸುವುದು ಲಾಭಕರವಾಯ್ತು. ಕನ್ನಡ, ಹಿಂದೀ, ಮರಾಠಿ ಮತ್ತು ಗುಜರಾತಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಲು ಅವಕಾಶ ದೊರೆಯಿತು. 1960ರಲ್ಲಿ ಬರೋಡಾ ವಿಶ್ವವಿದ್ಯಾಲಯಕ್ಕೆ ಮೂರನೆಯ ರ್‍ಯಾಂಕ್ ಪಡೆದು ಎಂ.ಬಿ.ಬಿ.ಎಸ್. ಡಿಗ್ರಿ ಪಡೆದರು. ಮೆಡಿಸಿನ್ ವಿಷಯದಲ್ಲಿ ಪ್ರಥಮ ರ್‍ಯಾಂಕ್ ಪಡೆದರು. ಇನ್ನು ಫಿಜೀಸಿಯನ್ ಆಗಬೇಕೆಂದಿದ್ದರು. ಆದರೆ ದೈವ ಅವರನ್ನು ಕಣ್ಣಿನ ಡಾಕ್ಟರರನ್ನಾಗಿ ರೂಪಿಸಿತು.

ಎರಡು ವರ್ಷ ಇಂಟರ್ನ್‌ಶಿಪ್ ನಡೆದಾಗ ಎಲ್ಲ ವಿಭಾಗದಲ್ಲೂ ಕೆಲಸ ಮಾಡಬೇಕಾಗಿ ಬಂತು. ಆ ಕಾಲದ ಪ್ರಸಿದ್ಧ ನೇತ್ರತಜ್ಞ ಡಾ| ಎನ್.ಟಿ.ಮಸ್ಕತಿಯವರ ಸಂಪರ್ಕ ಇವರಿಗೆ ಬಂತು. ಅವರ ಮಾರ್ಗದರ್ಶನದಲ್ಲಿ ಇವರು ಕಣ್ಣಿನ ಆಪರೇಶನ್ ಮಾಡಿದರು. ನಿಮ್ಮ ಕೈಗಳು ಕಣ್ಣಿನ ಆಪರೇಶನ್‌ಗೆ ಹೇಳಿ ಮಾಡಿಸಿದಂತಿವೆ ಎಂದು ಗುರುಗಳು ಉದ್ಗಾರ ತೆಗೆದರು. 1962ರಲ್ಲಿ ಎಂ.ಎಸ್ ಮಾಡಲು ಮುಂಬೈಗೆ ಬಂದರು. ಅಲ್ಲಿ ಖ್ಯಾತ ಕಣ್ಣಿನ ಸರ್ಜನ್ ಡಾ| ಡಿ.ಜಿ.ಮೋದಿ ಅವರ ಕೆಳಗೆ ಇವರು ಹೆಸರನ್ನು ನೋಂದಾಯಿಸಿದರು. ಅಲ್ಲಿ ಎನ್.ಟಿ ಮಸ್ಕತಿ ಅವರ ಸೋದರ ಡಾ| ಬಿ.ಟಿ.ಮಸ್ಕತಿ ಆನರರಿಯಾಗಿದ್ದರು. ಅಲ್ಲಿ ಮುಂಜಾನೆ 7ರಿಂದ ರಾತ್ರಿ 9ರ ವರೆಗೆ ಬಿಡುವಿಲ್ಲದ ಆಪರೇಶನ್ ಮಾಡುತ್ತಿದ್ದರು. ರಾತ್ರಿ ಕನ್ನಡಕದ ಅಂಗಡಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. 1965ರಲ್ಲಿ ಎಂ.ಎಸ್ ಡಿಗ್ರಿ ದೊರೆಯಿತು. ನಂತರ ಎಲ್ಲಿ ವೈದ್ಯಕೀಯ ಜೀವನ ನಡೆಸಬೇಕೆಂಬುದು ನಿರ್ಧಾರಿತವಾಗಿರಲಿಲ್ಲ. ಬೆಳಗಾವಿಯ ಮೆಡಿಕಲ್ ಕಾಲೇಜಿನ ಡೀನ್ ಡಾ| ಜೇರೆಯವರು ಇವರನ್ನು ಆಮಂತ್ರಿಸಿದರು. ಇವರು ಹುಬ್ಬಳ್ಳಿ ಸ್ಟೇಶನ್ ನೋಡಿದ್ದರೇ ಹೊರತು ಊರನ್ನು ನೋಡಿರಲಿಲ್ಲ. ಆದರೂ ಹುಬ್ಬಳ್ಳಿಯಲ್ಲಿ ವೃತ್ತಿಜೀವನ ಪ್ರಾರಂಭಿಸಲು ನಿಶ್ಚಯಿಸಿದರು.

ಮುಂಬೈಯಲ್ಲಿ ಕೆ.ಇ.ಎಂ.ಆಸ್ಪತ್ರೆಯ ನೇತ್ರವಿಭಾಗದ ಮುಖ್ಯಸ್ಥ, ಖಾಸಗೀಯಾಗಿಯೂ ಬಹಳ ಪ್ರಸಿದ್ಧ ಕಣ್ಣಿನ ಸರ್ಜನ್ ಎಂದು ಖ್ಯಾತಿ ಪಡೆದ ಡಾ| ಧುರಂಧರೆ ಅವರನ್ನು ಕಂಡು ಡಾ| ಜೋಶಿಯವರು ತಾವು ಹುಬ್ಬಳ್ಳಿಯಲ್ಲಿ ವೃತ್ತಿಜೀವನ ಪ್ರಾರಂಭಿಸುವ ನಿರ್ಧಾರ ತಿಳಿಸಿದಾಗ ಅವರಿಗೆ ಅಚ್ಚರಿಯೇ ಕಾದಿತ್ತು. ಡಾ| ಧುರಂಧರೆ ಹುಬ್ಬಳ್ಳಿಯ ಸಿದ್ಧಾರೂಡಸ್ವಾಮಿಗಳ ಭಕ್ತರಾಗಿದ್ದರು. ಇವರು ಹುಬ್ಬಳ್ಳಿಗೆ ಹೋಗುವ ವಿಚಾರ ಅವರಿಗೆ ಸಂತಸವನ್ನುಂಟುಮಾಡಿತ್ತು. ಜೋಶಿಯವರಿಗೆ ತಮ್ಮಲ್ಲಿದ್ದ ಅಮೂಲ್ಯವಾದ ಶಸ್ತ್ರ-ಉಪಕರಣಗಳನ್ನು ಕೊಟ್ಟರು. (ಜಾನ್ ವೀಸ್ ಡಾಯಥರ್ಮಿ ಫಾರ್ ರೆಟೀನಲ್ ಡಿಟ್ಯಾಚ್‌ಮೆಂಟ್ ಸರ್ಜರಿ, ಸ್ಲಿಟ್ ಲ್ಯಾಂಪ್ ಮುಂ.) ಇವಕ್ಕೆ ಎಷ್ಟು ಹಣ ಕೊಡಬೇಕೆಂದು ಕೇಳಿದಾಗ, ನೀನು ಸಿದ್ಧಾರೂಢರ ಊರಿಗೆ ಹೋಗುತ್ತಿರುವೆ. ನಿನಗೆ ಬೇಕಾದ ಎಲ್ಲ ಉಪಕರಣ ತೆಗೆದುಕೊಂಡು ಹೋಗು. ನೀನು ಯಾವುದೇ ಹಣ ಕೊಡಬೇಕಾಗಿಲ್ಲ. ಎಂದಿದ್ದರಂತೆ. ಈ ಸಂದರ್ಭವನ್ನು ಬಹಳ ಭಾವುಕತೆಯಿಂದ ಡಾ| ಜೋಶಿ ನೆನೆಯುತ್ತಾರೆ.

ಡಾ| ಜೋಶಿ ಅಪ್ಪಟ ದೇಶಾಭಿಮಾನಿ. ಅಂದೂ ಖಾದಿ ತೊಡುತ್ತಿದ್ದರು. ಇಂದು ಕೂಡ ಖಾದಿ ತೊಡುತ್ತಾರೆ. 1967ರಲ್ಲಿ ಇವರು ಒಂದು ಬಾಡಿಗೆಯ ಮನೆಯಲ್ಲಿ ಹುಬ್ಬಳ್ಳಿಯ ಜವಳಿ ಸಾಲಿನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಅವರು ಆರಿಸಿದ ದಿನ 26 ಜನೇವರಿ. ಆರು ಹಾಸಿಗೆಯಿಂದ ಇವರ ಆಸ್ಪತ್ರೆ ಪ್ರಾರಂಭಗೊಂಡಿತು. ಸರ್ ವಿಶ್ವೇಶರಯ್ಯನವರ ಶಿಷ್ಯರಾದ, ಬೆಂಗಳೂರಿನ ಪ್ರಸಿದ್ಧ ಇಂಜಿನಿಯರ್ ಶ್ರೀ ಎಂ.ಎಸ್.ಮೂರ್ತಿಯವರ ಮಗಳಾದ ಪ್ರಮೀಳಾದೇವಿಯನ್ನು ಇವರು 1968ರಲ್ಲಿ ವರಿಸಿದರು. ಅರ್ಧಾಂಗಿಯ ಸಹಕಾರ, ಸೋದರಮಾವಂದಿರಾದ ಗಂಡಮಾಲಿಯವರ ಸಹಾಯದಿಂದ, ಇವರ ಆಸ್ಪತ್ರೆ ಬೆಳೆಯಿತು, ಸ್ವಂತ ಕಟ್ಟಡವೂ ನಿರ್ಮಾಣಗೊಂಡಿತು. ಇಂದು ಹೊಸೂರಿನಲ್ಲಿ ಇವರ ಪದ್ಮನಯನಾಲಯಕ್ಕೆ 40 ವರ್ಷದ ಸಂಭ್ರಮ.75 ಬೆಡ್‌ಗಳಿರುವ, 43,000 ಚದರ ಫೂಟು ವ್ಯಾಪ್ತಿ ಪಡೆದ ಆಸ್ಪತ್ರೆ ಡಾ| ಜೋಶಿಯವರ ಯಶದ ಹೆಗ್ಗುರುತಾಗಿದೆ. ಪ್ರತಿದಿನ 250ರಿಂದ 300 ಕಣ್ಣಿನ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇದು ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X