• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 8

By Staff
|

*ಡಾ.‘ಜೀವಿ’ ಕುಲಕರ್ಣಿ

ವಿಶ್ವ ಸಮ್ಮೇಳನದ ಪ್ರತಿಬಿಂಬ‘ಸ್ಪಂದನ’ದಲ್ಲೊಂದು ಕೆಟ್ಟ ಲೇಖನ

Spandana Cover Page‘ಸ್ಪಂದನ’ ಸ್ಮರಣ ಸಂಚಿಕೆಯ ಇನ್ನಷ್ಟು ಬರಹಗಳನ್ನು ಪರಿಶೀಲಿಸೋಣ.

ಈ ಸಲದ ಸಂಚಿಕೆಯಲ್ಲಿ ಕವಿತೆಗಳು ಕಡಿಮೆ ಇವೆ, ಇದ್ದ ಕವಿತೆಗಳ ಮಟ್ಟ ಹೇಳಿಕೊಳ್ಳುವಂತಿಲ್ಲ. ಮೊದಲನೆಯ ಕವನ ‘ಸ್ಪಂದನ’ ಕುಂಭಾಸಿ ಶ್ರೀನಿವಾಸ ಭಟ್‌ ಅವರು ಬರೆದ ಆಶಯ ಕವನ. ಅದರಲ್ಲಿ ನಾಲ್ಕನೆಯ ಚರಣ ಹೀಗಿದೆ:

‘ಹೃದಯ ಸ್ಪಂದನವಿಲ್ಲಿ ಅಮೇರಿಕದಲ್ಲಿದ್ದರೂ

ಮನಸ ಸ್ಪಂದನ ಕನ್ನಡ ನಾಡಲಿ

ಜಗದಂತರವ ಮೇರೆ ಮೀರಿ ಹರಿಯುವ ಒಲವ

ನೆನಪ ತರುತಿದೆ ಸ್ಪಂದನದ ಬಂಧನ’

ಒಂದೆರಡು ಪದ್ಯಗಳು ಓದುಗರ ಗಮನವನ್ನು ಸೆಳೆಯುತ್ತವೆ. ಹಿರಿಯರ ಇಚ್ಛೆಗೆ ಮಣಿದು ಮದುವೆಯಾಗಿ, ಕೀರುತಿಗೊಬ್ಬ ಮಗನನ್ನು, ಆರತಿಗೊಬ್ಬ ಮಗಳನ್ನು ಹೆತ್ತು, ಆದರ್ಶ-ತ್ಯಾಗಗಳಿಂದ ಜೀವನವನ್ನು ಸುಖಮಯಗೊಳಿಸಿದ ಮಡದಿ ಅಗಲಿದಾಗ ತೋಡಿಕೊಂಡ ಭಾವನೆಗಳನ್ನು ಬಿ.ಎನ್‌.ಸೋಮಸುಂದರರಾವ್‌(ನ್ಯೂಯಾರ್ಕ್‌) ಬರೆದ ‘ಮೊರೆ’ ಪದ್ಯ ಚಿತ್ರಿಸುತ್ತದೆ. ‘ಹದಿಹರಯದಾದಿಯಲೆ ಹದಿಬದೆಯ ಹೊಣೆಹೊತ್ತು/ಹದುಳದಿಂ ಬಾಳ್ನೊಗಕೆ ಹೆಗಲನಿತ್ತೆ’ ಎಂದು ಪ್ರಾರಂಭವಾಗುವ ಪದ್ಯ ಹೀಗೆ ಕೊನೆಗೊಳ್ಳುತ್ತದೆ:

‘ಬಾಳಡೋಣಿಯನಿಂತು ಚುಕ್ಕಾಣಿ ಹಿಡಿದುನೀ

ನಡೆಯಿಸಿದೆ ಏತರದ ಖತಿಬಾರದಂತೆ

ದಡವ ಮುಟ್ಟಿಸಿ ಪರದ ಕಡೆಗೆ ನೀ ಪಯಣಿಸಿದೆ

ಆ ನಿನ್ನ ಚೇತನಕೆ ಸಿಗಲಿ (ಚಿರ)ಶಾಂತಿ’

ಇನ್ನೊಂದು ಮೆಚ್ಚಬಹುದಾದ ಕವಿತೆ ಕವಿ ಡಾ.ಗುಡ್ಡೆ ರಾಘವ ಗೌಡ (ಒಹಾಯಾ) ಬರೆದ ‘ಪರದೇಶಿ ಕಂದನಾ ಮರೆಯದಿರು ಮಾತೆ’ ಎಂಬುದು. ಕನ್ನಡ ನಾಡಿನ ಬಗ್ಗೆ ಇರುವ ಕವಿಗಳ ಪ್ರೇಮವೇ ಈ ಕವಿತೆಯ ವಸ್ತು.

‘ಕಲ್ಲು ಸಕ್ಕರೆಗಿಂತ ಸವಿಯು ಕನ್ನಡ ನುಡಿ

ಗಂಧ ಲೇಪನದಿಂದ ಘಮಿಸುತಿದೆ ನಿನ್ನ ಅಡಿ

ಹಚ್ಚ ಹಸುರಿನ ಬನವೆ ನಿನಗೊಪ್ಪುವ ಉಡುಗೆ

ಭಾರತಿಯ ಪ್ರಿಯ ತನುಜೆ, ಮಣಿವೆ ನಿನ್ನಡಿಗೆ.’

ಡಾ.ಮೈ.ಶ್ರೀ ನಟರಾಜ ಅವರ ಅತ್ಯಧಿಕ ಕವಿತೆಗಳು ಈ ಸಂಚಿಕೆಯಲ್ಲಿವೆ. ಅವರ ‘ಅಯ್ಯೋ ಮುಗಿಯಿತೆ ಮಧುಚಂದ್ರ?’ ಪದ್ಯದಲ್ಲಿ - ಎಚ್‌-ಒನ್‌ ವೀಸಾ ಪಡೆದು ಆರು ವರ್ಷ ಮಧುಚಂದ್ರ ನಡೆಸಿದ ಜೋಡಿಯ ಕಥನವಿದೆ. ಇಲ್ಲಿ ಹಾಸ್ಯಕ್ಕಿಂದ ಅಪಹಾಸ್ಯವೇ ಹೆಚ್ಚು ಇದ್ದಂತೆ ಕಂಡು ಅಂಥವರ ಬಗ್ಗೆ ಅನುಕಂಪ ಇದ್ದವರ ಮನ ನೋಯುತ್ತದೆ.

ಗದ್ಯ ಲೇಖನಗಳಲ್ಲಿ ಪಿ.ಎಸ್‌.ಬಾಲಕೃಷ್ಣನ್‌ ಅವರು ಬರೆದ ‘ಕನ್ನಡ ಜನಪದ ಸಾಹಿತ್ಯದಲ್ಲಿ ತಾಯಿ-ಮಗು’ ಎಂಬ ಲೇಖನ ಚೆನ್ನಾಗಿದೆ. 40 ವರ್ಷ ಮೈಸೂರಿನ ಆಹಾರ ಸಂಶೋಧನಾಲಯದಲ್ಲಿ ಕೆಲಸ ಮಾಡಿ ನಿವೃತ್ತರಾದ ಈ ವಿಜ್ಞಾನಿ ‘ಗರತಿಯ ಹಾಡು’ ಮೊದಲಾದ ಏಳು ಗ್ರಂಥಗಳನ್ನು ಪರಿಶೀಲಿಸಿ ಒಳ್ಳೆಯ ಲೇಖನ ಬರೆದಿದ್ದಾರೆ. ಅವರು ಬರೆದ ‘ಅಡುಗೆ ಮನೆಯಲ್ಲಿ ವಿಜ್ಞಾನ’ ಎಂಬ ಪುಸ್ತಕ ವಿಶ್ವ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು.

ನಿಸಾರ ಅಹಮದರ ‘ಕಥೆ ಕೇಳು ಗುಬ್ಬಕ್ಕ..’ ಲೇಖನದಲ್ಲಿ ಪಕ್ಷಿಸಂಕುಲದ ಅಳಿವು-ಉಳಿವಿನ ಬಗ್ಗೆ ಚಿಂತನೆಯಿದೆ. ಇದೊಂದು ಅವರ ಹಳೆಯ ಲೇಖನ.

ಪ್ರಕಾಶ ಹೇಮಾವತಿ (ಶಿಕಾಗೊ) ಅವರು ‘ಕರ್ನಾಟಕದ ಚಾಲುಕ್ಯರು’ ಎಂಬ ದೀರ್ಘ ಲೇಖನದಲ್ಲಿ ಇತಿಹಾಸದ ಬಗ್ಗೆ ಇರುವ ತಮ್ಮ ಆಸಕ್ತಿಯನ್ನು ಪ್ರದರ್ಶಿಸಿದ್ದಾರೆ. ಡಾ ಎಚ್‌.ವೈ.ರಾಜಗೋಪಾಲ್‌ ಅವರು ‘ಪುತಿನ ಅವರ ಗೋಕುಲಾಷ್ಟಮಿ ಮತ್ತು ಕಪ್ಪೆ’ ಎಂಬ ಪ್ರಬಂಧದಲ್ಲಿ, ಪು.ತಿ.ನ. ಅವರ ಜೀವನ ದೃಷ್ಟಿ ಹಾಗೂ ಕಾವ್ಯ ದೃಷ್ಟಿ ಅರ್ಥ ಮಾಡಿಕೊಳ್ಳಲು ಅವರ ಗದ್ಯ ಬರವಣಿಗೆ ಹೇಗೆ ಸಹಾಯಕವಾಗುವುದು ಎಂಬುದನ್ನು ತೋರಿಸಿದ್ದಾರೆ.

ಯೂನಿವರ್ಸಿಟಿ ಆಫ್‌ ಪೆನ್‌ಸಿಲ್ವೇನಿಯಾದಲ್ಲಿ ರೇಡಿಯಾಲಜಿ(ಮೆಡಿಕಲ್‌ ಇಮೇಜಿಂಗ್‌) ವಿಭಾಗದ ಮುಖ್ಯಸ್ಥರಾದ ಡಾ. ಜಯರಾಮ ಉಡುಪರು ‘ಕನ್ನಡ ದಲ್ಲಿ ಕೈಲಿಪಿ’ (ಕ್ಯಾಲಿಗ್ರಫಿ) ಎಂಬ ಲೇಖನ ಚೆನ್ನಾಗಿದೆ.

ಭಾರತೀಯ ವಿಮಾನಪಡೆಯಲ್ಲಿ 36 ವರ್ಷ ಕೆಲಸಮಾಡಿ, ರಾಷ್ಟ್ರಪತಿಯಿಂದ ಸುವರ್ಣಪದಕ ಪಡೆದು, ಈಗ ನಿವೃತ್ತಿ ಪಡೆದು ಈಗ ಮಕ್ಕಳೊಂದಿಗೆ ಅಮೇರಿಕೆಯಲ್ಲಿರುವ ಶ್ರೀನಿವಾಸ ಮೂರ್ತಿಯವರ ಲೇಖನ ‘ಏರ್‌ಫೋರ್ಸಿನ ಸವಿನೆನಪುಗಳು’ ವಾಚನೀಯವಾಗಿದೆ.

‘ಮಧ್ಯ ವಯಸ್ಸಿನಲ್ಲಿ ಮನೋದ್ವಂದ್ವತೆ’ ಎಂಬ ಕುಂಭಾಸಿ ಶ್ರೀನಿವಾಸ ಭಟ್ಟರ ಲೇಖನ ಚೆನ್ನಾಗಿದೆ. ದೇವರನ್ನು ನಂಬದ ಶಿವರಾಮ ಕಾರಂತರ ಹಾಗೂ ಅ.ಸು.ಮೂರ್ತಿರಾಯರ ವಿಚಾರ ಸರಣಿ ಇವರಿಗೆ ಹಿಡಿಸಿದೆ. ಈ ಚರ್ಚೆಯ ಸಂದರ್ಭದಲ್ಲಿ ಅವರು ಉದ್ಧರಿಸಿದ ಒಂದು ಸಂಸ್ಕೃತ ಶ್ಲೋಕ ಮನೋಜ್ಞವಾಗಿದೆ.

‘ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥ ಕೋಟಿಷು/

ಪರೋಪಕಾರಂ ಪುಣ್ಯಾಯ ಪಾಪಾಯ ಪರಪೀಡನಂ’

(ಕೋಟಿ ಗ್ರಂಥಗಳಲ್ಲಿ ಹೇಳಿದ ತತ್ವವನ್ನು ಅರ್ಧ ಶ್ಲೋಕದಲ್ಲಿ ಹೇಳುತ್ತೇನೆ: ಇತರರಿಗೆ ಮಾಡುವ ಉಪಕಾರವೇ ಪುಣ್ಯ, ಇತರರಿಗೆ ಮಾಡುವ ಹಿಂಸೆಯೇ ಪಾಪ.)

ವಿಶ್ವೇಶ್ವರ ದೀಕ್ಷಿತರು ಟೆಲಿಫೋನ್‌ ಮಾಡುವಾಗ ‘ಹಲೋ’ ಎನ್ನುವುದಕ್ಕೆ ಪರ್ಯಾಯವಾಗಿ ‘ನಮೋ’ ಎನ್ನಲು ಹೇಳುತ್ತಾರೆ. ಪತ್ರದ ಪ್ರಾರಂಭ ಹಾಗೂ ಮುಕ್ತಾಯ ಕೂಡ ‘ನಮೋ’ ಶಬ್ದದಿಂದ ಮಾಡಬಹುದು ಅನ್ನುತ್ತಾರೆ.

ಡಾ. ಎಂ. ಜೈರಾಮ ಸುಬ್ಬರಾವ್‌ ಅವರ ‘ನಾನು ಸರ್ಜನ್‌ ಆದೆ’ ಎಂಬ ಲೇಖನ ಬಹಳೇ ಸ್ವಾರಸ್ಯಕರವಾಗಿದೆ. ಅವರು ಒಳ್ಳೆಯ ಡಾಕ್ಟರರಷ್ಟೇ ಅಲ್ಲ ಒಳ್ಳೆಯ ಲೇಖಕರೆಂಬುದನ್ನು ತೋರಿಸಿದ್ದಾರೆ.

ಡಾ. ಕುಸುಮ ಭಟ್‌(ಕ್ಯಾಲಿಫೋರ್ನಿಯಾ) ಅವರ ‘ಭವಾನಿ’ ಎಂಬ ಲೇಖನ ಓರ್ವ ಡಾಕ್ಟರರ ಜೀವನದ ಚಿತ್ರವಾಗಿದೆ. ಯಾರನ್ನೋ ಉಳಿಸಲು ಹೋದಾಗ ತಮ್ಮ ಮಗುವಿಗೆ ಗಂಡಾಂತರ ಒದಗಿದ ದುರ್ಧರ ಪ್ರಸಂಗ. ‘ಉಳಿಸುವರು ಯಾರೊ, ಅಳಿಸುವರು ಯಾರೊ!’ ಎಂಬ ಕೊನೆಯ ಉದ್ಗಾರ ಅರ್ಥಪೂರ್ಣವಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್‌ ಅವರ ‘ಯಾತ್ರೆ’ ಎಂಬ ಕಥೆ ಒಂದು ಉತ್ತಮ ಕಥೆ. ಅಡ್ಡ ದಾರಿಯನ್ನೇ ಹೊಸದಾರಿಯೆಂದು ತಿಳಿದು ಮುಂದೆ ಸಾಗಿದ ಆಧುನಿಕ ಮಹಿಳೆಯ ಜೀವನದ ಚಿತ್ರಣ ಇಲ್ಲಿದೆ. ಒಂದು ದೀಪಾವಳಿ ವಿಶೇಷಾಂಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ.

ಗುಡ್ಡೆ ರಾಘವ ಗೌಡ (ಒಹಾಯಾ) ಅವರು ಪ್ರೊ. ವೈ.ಆರ್‌.ಮೋಹನರು ಬರೆದ ‘ನೆನಪುಗಳು’ ಎಂಬ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿಯನ್ನು ಚೆನ್ನಾಗಿ ಪರಿಚಯಿಸಿದ್ದಾರೆ. ಪಾರ್ಕಿನ್‌ಸನ್‌ ರೋಗದಿಂದ ಬಳಲುತ್ತಿರುವ ಅಮೇರಿಕೆಯಲ್ಲಿ ನೆಲಸಿದ ಮೋಹನರು, ‘ನನ್ನ ನೆನಪುಗಳ ಬರೆಹಗಳ ಮುಖ್ಯ ಉದ್ದೇಶ- ಪಾರ್ಕಿನ್‌ಸನ್‌ ರೋಗ ನನ್ನ ಸ್ಮರಣೆ ಸ್ಮೃತಿಗಳನ್ನು ಅಳಿಸಿಹಾಕುವ ಮೊದಲೇ ಜಾರುತ್ತಿರುವ ನೆನಪುಗಳನ್ನು ಹಾಳೆಯ ಮೇಲೆ ಮೂಡಿಸುವುದು..’ ಎಂದಿದ್ದಾರೆ. ಈ ಕಾಯಿಲೆಯ ಬಗ್ಗೆ ಕೂಡ ಮೋಹನರು ಅಪೂರ್ವ ಪುಸ್ತಕ ಬರೆದಿದ್ದಾರೆ. ‘ಪಾರ್ಕಿನ್‌ಸನ್‌ ಕಾಯಿಲೆಯ ಕ್ರೂರ ದಾಳಿಗೆ ಸಿಲುಕಿ ನಾನು 65 ವರ್ಷದ ಮಗುವಾಗಿದ್ದೇನೆ’ ಎಂದೂ ಬರೆಯುತ್ತಾರೆ. ‘ನೆನಪುಗಳು’ ಪುಸ್ತಕದಲ್ಲಿ, ತಮ್ಮ ಇತಿಹಾಸದ ಅಧ್ಯಾಪಕರು ಶಹಾಜಹಾನನ ಬಗ್ಗೆ ಹೇಳಿದ್ದನ್ನು, ಹೀಗೆ ಬರೆಯುತ್ತಾರೆ :

‘..ಷಹಜಹಾನನ ಹೆಸ್ರು ಉಳ್ದಿರೋದು ತಾಜಮಹಲ್‌ ಕಟ್ಟಡದಿಂದ ಕಣ್ರಲೇ... ಹತೊಂಬತ್ತು ವರ್ಷದ ಹರೇದ ಹುಡ್ಗಿ ಮಮ್ತಾಜ ಬೀಬಿನ್ನ ಇಳಿವಯಸ್ಸಿನ ಈ ಷಹಜಹಾನ ನಿಖಾ ಮಾಡ್ಕಂಡ. ಅವ್ಳು ತೆಳ್ಳನೆ ಬೆಳ್ಳನೆ ಚೆಂದೊಳ್ಳಿ ಹೆಣ್ಣು. ಪಾಪ, ಆಕಿಗೆ ಈ ಮುದ್ಕ ಪುರುಸೊತ್ತು ಕೊಡ್ದೆ ಒಂದಾದ್ಮೇಲೆ ಒಂದ್ರಂತೆ ಹದಿನಾಲ್ಕು ಮಕ್ಳು ಮಾಡ್ದ. ಹದಿನಾಕ್ನೆ ಕೂಸಿನ ಹೆರಿಗೇಲಿ ಆಕಿ ಸತ್ತಾಗ ವಯಸ್ಸು ಮುವ್ವತೊಂಬತ್ತು ತುಂಬಿರಲಿಲ್ಲ ! ಪಾಪ ಆಕಿ ನಿಖಾ ಆದ್ಮೇಲೆ ಇಪ್ಪತ್ತು ವರ್ಷ ಪೂರ್ತ ಕಾಣ್ಲಿಲ್ಲ. ಮಕ್ಳು ಹೆತ್ತು ಹೆತ್ತು ಸುಸ್ತಾಗಿ ಸತ್ಲು ಕಾಣ್ರಲೆ. ನನ್ನ ಕೇಳಿದ್ರೆ ಈ ಷಹಜಹಾನನೇ ಆಕಿನ್ನ ಕೊಂದಿದ್ದು! ಆಕೀನ ಕೊಂದು ಆಕಿ ಹೆಸ್ರಲ್ಲಿ ತಾಜಮಹಲ್‌ ಕಟ್ಟಿಸ್ದ. ಆಕಿ ಇದ್ದಾಗ ಆರಾಂ ಕೊಡದೆ ಆಕೀ ಆರೋಗ್ಯ ಕೆಡ್ಸಿ ಸತ್ತಮೇಲೆ ತಾಜಮಹಲ್‌ ಕಟ್ಸಿ ಏನು ಪ್ರಯೋಜ್ನ ಆತು ಹೇಳ್ರೆಪ್ಪಾ...’’

ಈ ಸಂಚಿಕೆಯಲ್ಲಿ ಎರಡು ಪರಿಚಯ ಲೇಖನಗಳಿವೆ. ಎರಡೂ ಚೆನ್ನಾಗಿವೆ. ಒಂದು ವಿದ್ಯಾವಾಚಸ್ಪತಿ ಬನ್ನಂಜೆಯವರ ಬಗ್ಗೆ ಬರೆದದ್ದು. ಇನ್ನೊಂದು ಬರಹದ ಕರ್ತೃ ವಾಸು ಅವರ ಬಗ್ಗೆ ಬರೆದದ್ದು. ವಿಶ್ವನಾಥ ಮರವಂತೆ(ಕ್ಯಾಲಿಫೋರ್ನಿಯ) ಅವರು ‘ಬನ್ನಂಜೆ ಎಂಬ ಜ್ಞಾನ ಸೂರ್ಯ’ ಎಂಬ ಲೇಖನದಲ್ಲಿ ಸಂಸ್ಕೃತ ಪ್ರಕಾಂಡ ಪಂಡಿತರೂ, ಶ್ರೇಷ್ಠ ವಾಗ್ಮಿಗಳೂ ಆದ ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಬಹಳ ಅತ್ಮೀಯವಾಗಿ ಬರೆಯುತ್ತಾರೆ. ಅವರು ತಳೆದ ದಿಟ್ಟ ಧೋರಣೆಗಳ ಬಗ್ಗೆ ಕೂಡ ಬರೆಯುತ್ತಾರೆ. ಅವರ ಪ್ರಕಾರ:

ಹೆಣ್ಣುಮಕ್ಕಳು ಓಂಕಾರ ಹೇಳುವದು ತಪ್ಪಲ್ಲ / ಸಹಗಮನವನ್ನು ಧರ್ಮಶಾಸ್ತ್ರಗಳಲ್ಲೆಲ್ಲೂ ಹೇಳಿಲ್ಲ /ವಿಧವೆಯರಿಗೆ ಕೇಶಮುಂಡನ, ಕೆಂಪು ವಸ್ತ್ರ ಇವು ಧರ್ಮ ವಿಧಿಸಿದ ಕಡ್ಡಾಯವಲ್ಲ / ದುರ್ಯೋಧನನಿಗೆ ರಾಜಕಾರಣ ಕಲಿಸಿದ ಗಾಂಧಾರ ದೇಶದ ‘ಕಣಂಕಿ’ ಅವನ ನೀತಿ ಹಾಗು ವಿದುರನೀತಿಯ ಉದಾಹರಣೆಗಳು ಇಲ್ಲಿವೆ. ಇದನ್ನು ನೋಡಿದರೆ ಆಧುನಿಕ ರಾಜಕಾರಣಿಗಳು ದುರ್ಯೋಧನನ ಹಾದಿ ಹಿಡಿದಿರುವುದು ಸ್ಪಷ್ಟವಾಗುತ್ತದೆ.

ಬರಹ ತಂತ್ರಾಂಶವನ್ನು ಕನ್ನಡ ನಾಡಿಗೆ, ವಿಶ್ವಕ್ಕೇ ಉಚಿತವಾಗಿ ನೀಡಿದ ಶೇಷಾದ್ರಿ ವಾಸು ಅವರ ಪರಿಚಯ ಲೇಖನವನ್ನು ವಾದಿರಾಜ ಭಟ್‌ (ಕ್ಯಾಲಿಫೋರ್ನಿಯಾ) ಬರೆದಿದ್ದಾರೆ. ವಾಸು ಅವರು ಬಾಲ್ಯದಿಂದಲೇ ಕುಶಗ್ರಮತಿಗಳಾಗಿದ್ದನ್ನು ಇಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಸುವರ್ಣ ಪದಕ ಪಡೆದಿದ್ದರು ಎನ್ನುವುದನ್ನು, ಬಾಲ್ಯದಿಂದಲೂ ಅವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು ಎಂಬುದನ್ನು ಬರೆದು ಅವರು ತಮ್ಮ ತಂತ್ರಾಂಶ ‘ಬರಹ’ವನ್ನು ಪರಿಷ್ಕರಿಸಿ ‘ಬರಹ 4.0’ ಮತ್ತು ‘ಬರಹ 5.0’ ಇವುಗಳಲ್ಲಿ ಮಾಡಿದ ಸಾಧನೆಯ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಅವರಿಗೆ ಈ ಕೆಲಸದಲ್ಲಿ ಅವರ ಧರ್ಮಪತ್ನಿ ಜಯಂತಿಯವರು ನೀಡಿದ ಸಹಾಯದ ಬಗ್ಗೆ ಕೂಡ ಬರೆದಿದ್ದಾರೆ.

Sahitya Goshti fame Vishwanath Hulikalಅಮೇರಿಕೆಯ ಬಗ್ಗೆ ಬರಿ ಒಳ್ಳೆಯ ವಿಷಯಗಳನ್ನೇ ಓದುತ್ತೇವೆ. ಅಮೇರಿಕನ್ನರ ದೋಷಗಳೇನು ಎಂಬುದರ ಬಗ್ಗೆ ಶ್ರೇಷ್ಠ ಅಮೇರಿಕನ್‌ ಸಾಹಿತಿ, ನೋಬೆಲ್‌ ಬಹುಮಾನ ಗಳಿಸಿದ ಲೇಖಕ, ಜಾನ್‌ ಸ್ಟೈನ್‌ಬೆಕ್‌ ನ ವಿಚಾರಗಳನ್ನು ಕ್ಯಾಲಿಫೋರ್ನಿಯಾದ ವಿಶ್ವನಾಥ್‌ ಹುಲಿಕಲ್‌ ಅವರು ಅನುವಾದಿಸಿದ್ದಾರೆ. ಮೂಲ ಲೇಖನ Paradox and Dreams ಇದರ ಅನುವಾದ ‘ವಿರೋಧಾಭಾಸ ಮತ್ತು ಕನಸು’. ಅದರಲ್ಲಿಯ ಕೆಲವು ಅವತರಣಿಕೆ ನೋಡಬಹುದು:

‘ಅಮೇರಿಕನ್ನರ ಬಗ್ಗೆ ಸಾರ್ವತ್ರಿಕವಾಗಿ ಗುರುತಿಸುವ ವಿಶೇಷಣವೆಂದರೆ, ನಾವು ಅಶಾಂತ, ಅತೃಪ್ತ ಹಾಗೂ ಏನನ್ನೋ ಅರಸಿಕೊಂಡು ಹೋಗುವಂತಹ ವ್ಯಕ್ತಿಗಳು. ನಾವು ಅಸಫಲರಾದಾಗ ಹತೋಟಿಯಲ್ಲಿರುತ್ತೇವೆ ಮತ್ತು ಯಶಸ್ಸಿನ ಉತ್ತುಂಗ ಶಿಖರದಲ್ಲಿದ್ದಾಗಲೂ ಅತೃಪ್ತಿಯಿಂದ ತೊಳಲಾಡುತ್ತೇವೆ. ಜೀವನದಲ್ಲಿ ಭದ್ರತೆಯನ್ನು ಹುಡುಕಿಕೊಂಡು ಹೋಗುತ್ತೇವೆ; ಆದರೆ ಅದು ದೊರಕಿದಾಗ ಅದನ್ನು ದ್ವೇಷಿಸುತ್ತೇವೆ. ಸಾಮಾನ್ಯವಾಗಿ ನಾವು ಏನು ಮಾಡಿದರೂ, ಅತಿರೇಕಕ್ಕೆ ಹೋಗುವಷ್ಟು ಮಾಡುತ್ತೇವೆ: ಅತಿಯಾಗಿ ತಿನ್ನುವುದು, ಮಿತಿಮೀರಿ ಕುಡಿಯುವುದು, ವಿಪರೀತ ವಿಷಯಾಸಕ್ತರಾಗಿರುವುದು, ಇತ್ಯಾದಿ. ...’

ಈ ಬಗೆಯ ಅತಿರೇಕದ ಪರಿಣಾಮವೆಂದರೆ, ನಾವು ಅನುಗಾಲವೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಶಾಂತಿಯಿಂದ ಒದ್ದಾಡುತ್ತಿರುತ್ತೇವೆ. ನಮ್ಮ ಸರ್ಕಾರ ದುರ್ಬಲ, ಮೂರ್ಖ, ಅಪ್ರಾಮಾಣಿಕ, ಅಸಮರ್ಥ ಹಾಗೂ ಉದ್ಧಟವೆಂದು ನಂಬುತ್ತೇವೆ; ಆದರೆ ಅದೇ ಕಾಲದಲ್ಲಿ, ನಮ್ಮ ಸರ್ಕಾರ ಈ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗಿಂತ ಅತ್ಯುತ್ತಮವಾದುದೆಂಬುದೇ ನಮ್ಮ ಅಚಲ ಅಭಿಪ್ರಾಯ! ಅಷ್ಟೇ ಅಲ್ಲ, ನಮ್ಮ ಸರ್ಕಾರವನ್ನು ವಿಶ್ವದ ಎಲ್ಲಾ ನಾಗರೀಕರ ಮೇಲೆ ಹೇರಲು ಸಾಕಷ್ಟು ಶ್ರಮಿಸುತ್ತೇವೆ.

‘ಯಾವುದನ್ನು ‘ಹೊನ್ನಿನ ಕುಡಿಕೆ’ ಎಂದು ಭಾವಿಸುತ್ತೇವೋ, ಅಂತಹ ಭದ್ರತೆಯನ್ನು ಅರಸಿಕೊಂಡು ಎಂತಹ ದುರ್ಗಮವಾದ ಮಾರ್ಗದಲ್ಲಿ ಪಯಣಿಸಲು ನಾವು ಸದಾ ಸಿದ್ಧರು; ನಮಗೆ ಅಡ್ಡ ಬಂದ ಬಂಧು-ಮಿತ್ರರು ಮತ್ತು ಆಗಂತುಕರನ್ನು ನಿಸ್ಸಂಕೋಚವಾಗಿ ತುಳಿದುಹಾಕಿ, ಗುರಿ ಸಾಧನೆ ಮಾಡಿಕೊಳ್ಳುತ್ತೇವೆ. ನಮ್ಮ ಮನೋಭಿಲಾಷೆ ಪೂರ್ತಿಯಾದಾಗ, ನಾವೇಕೆ ಅಸುಖಿಗಳಾಗಿದ್ದೇವೆ ಎಂದು ತಿಳಿಯಲು, ಮನಃಶಾಸ್ತ್ರಜ್ಞರ ಬಳಿ ಓಡುತ್ತೇವೆ. ಅಂತಿಮವಾಗಿ, ನಮ್ಮ ಬಳಿ ಹೇರಳವಾಗಿ ಧನವಿದ್ದರೆ, ದೇಶ ಮತ್ತು ಸಮಾಜಕ್ಕೆ ದಾನದ ರೂಪದಲ್ಲಿ ಕೊಟ್ಟುಬಿಡುತ್ತೇವೆ.

‘ಹಟ ಹಿಡಿದು ಒಳಗೆ ಬರುತ್ತೇವೆ, ಒಳಗೆ ಬಂದಕೂಡಲೇ ಹೊರಗೆ ಹೋಗಲು ಸರ್ವ ಪ್ರಯತ್ನ ಮಾಡುತ್ತೇವೆ. ನಾವು ಪ್ರಜ್ಞಾವಂತರು, ಜೀವನದಲ್ಲಿ ಭರವಸೆ ಮತ್ತು ಕುತೂಹಲ ಹೊಂದಿದ ವ್ಯಕ್ತಿಗಳು; ಹೀಗಿದ್ದರೂ ನಾವು ಇತರರಿಗಿಂತ ಜಾಸ್ತಿ ‘ಡ್ರಗ್ಸ್‌’ ಸೇವಿಸುತ್ತೇವೆ! ನಾವು ಸರ್ವ ಸಮರ್ಥರು ಹಾಗೂ ಏಕಕಾಲದಲ್ಲಿ ಸಂಪೂರ್ಣವಾಗಿ ಅವಲಂಬಿತರು; ನಾವು ಆಕ್ರಮಣಶೀಲರು ಮತ್ತು ಅಶಕ್ತರು. ‘ಈ ಸಮಾಜವನ್ನು ಸಮಗ್ರವಾಗಿ ಅವಲೋಕಿಸಿದಾಗ, ಅಮೇರಿಕನ್ನರು ಇಂತಹ ವಿರೋಧಾಭಾಸಗಳಿಂದಲೇ ಬಾಳಿ, ಬದುಕಿ ಕಾರ್ಯಶೀಲರಾಗಿದ್ದಾರೇನೋ ಎಂದು ಭಾಸವಾಗುತ್ತದೆ; ನಾವು ಯಾವುದರಲ್ಲಿ ಅತಿ ಹೆಚ್ಚು ವಿರೋಧಾಭಾಸಗಳನ್ನು ಕಾಣುತ್ತೇವೋ, ಅವು ನಾವೇ ಕಲ್ಪಿಸಿಕೊಂಡ, ಅತಿಭಾವೋದ್ದೀಪ್ತವಾಗಿ ನಂಬುವ ಅಂಶಗಳೇ ಆಗಿವೆ. ನಾವು ನಮ್ಮನ್ನು ಹುಟ್ಟಿನಿಂದಲೇ ಮೂಡಿದ ತಂತ್ರಜ್ಞರೆಂದು (ಮೆಕ್ಯಾನಿಕ್‌) ಪರಿಭಾವಿಸುತ್ತೇವೆ. ನಮ್ಮ ಜೀವನದ ಬಹು ಭಾಗವನ್ನು ಕಾರಿನಲ್ಲಿ ಕಳೆದರೂ, ರಸ್ತೆಯ ಮಧ್ಯದಲ್ಲಿ ಕಾರು ನಿಂತರೆ, ಇಂಧನ ಇದೆಯೋ ಇಲ್ಲವೋ ಎಂದು ನೋಡುವಷ್ಟು ಸಾಮಾನ್ಯ ಜ್ಞಾನವೂ ನಮಗಿರುವುದಿಲ್ಲ. ನಮ್ಮ ಇಂದಿನ ಜೀವನವು ವಿದ್ಯುತ್‌ಶಕ್ತಿ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ ; ಅಕಸ್ಮಾತ್‌ ಮನೆಯಲ್ಲಿ ಅದರ ಸರಬರಾಜು ನಿಂತಾಗ, ‘ಫ್ಯೂಜ್‌’ಅನ್ನು ಪರೀಕ್ಷಿಸಬೇಕೆನ್ನುವಷ್ಟು ತಾಂತ್ರಿಕತೆಯೂ ನಮ್ಮಲ್ಲಿ ಅನೇಕರಿಗೆ ಇಲ್ಲ.’

ಅನೇಕ ಅಡಚಣೆಗಳ ಮಧ್ಯದಲ್ಲಿ ಈ ಸಂಚಿಕೆಯನ್ನು ಹೊರತಂದಿರುವಾಗ ಕೆಲವು ದೋಷಗಳ ಬಗ್ಗೆ ಬರೆಯುವುದು ಅಷ್ಟೊಂದು ಉಚಿತವಾಗಲಾರದು. ಆದರೆ ಈ ಸಂಚಿಕೆಗೆ ಕಲಂಕಪ್ರಾಯವಾದ ಒಂದು ಲೇಖನ ಸಂಪಾದಕ ಮಂಡಲಿಯ ಅಚಾತುರ್ಯದಿಂದ ಪ್ರಕಟವಾಗಿದೆ. ಅದರ ಬಗ್ಗೆ ಬರೆಯಬೇಕಾಗಿದೆ. ಅದುವೆ ‘ಪ್ರಶ್ನೋತ್ತರ’ ಎಂಬ ಲೇಖನ. ಇದರ ಲೇಖಕ ‘ಅನಾಮಿಕ’. ತಾನೇ ಪ್ರಶ್ನೆ ಕೇಳಿ ಉತ್ತರವನ್ನೂ ಪ್ರಕಟಿಸಿದ್ದಾನೆ. ಇವು silly ಆಗಿವೆಯೆಂದೂ (ಪೀಠಿಕೆಯಲ್ಲಿ) ಒಪ್ಪಿಕೊಳ್ಳುತ್ತಾನೆ. ವಿಶ್ವ ಮಟ್ಟದ ಸಮ್ಮೇಳನದ ಪ್ರತಿಬಿಂಬವಾಗಿರಬೇಕಾದ ಈ ಸಂಚಿಕೆಗೆ ಕಲಂಕಪ್ರಾಯವಾಗಿದೆ ಈ ಲೇಖನ. ಒಂದು ಉದಾಹರಣೆ ಕೊಡಬೇಕೆಂದರೆ ದ್ರೌಪದಿ ಮಧ್ಯರಾತ್ರಿ ಹನ್ನೆರಡಕ್ಕೆ ಸ್ನಾನ ಮಾಡುವಾಗ ಅವಳು ಮೂರ್ಛೆಹೋದ ಸನ್ನಿವೇಶದ ಬಗ್ಗೆ ಒಂದು ದೀರ್ಘ ಪ್ರಶ್ನೆಯಿದೆ. ಪೋಲಿ ಪ್ರಶ್ನೆಗೆ ತಕ್ಕ ಪೋಲಿ ಉತ್ತರವಿದೆ. ಒಟ್ಟು 34 ಪ್ರಶ್ನೆಗಳು, ತಕ್ಕ ಉತ್ತರಗಳು. ಹೆಚ್ಚಿನವು ಕೆಳಮಟ್ಟದವು. ಮೂರುವರೆ ಪುಟ ದಂಡವಾಗಿದೆ.

ಕೆನಡಾದ ಪ್ರೊ. ಡಾ. ಎಮ್‌.ಎನ್‌.ವಿಜಯಕುಮಾರ್‌(ಕೆನಡಾ) ಅವರು ನನಗೆ ಫೋನಿನಲ್ಲಿ ಮಾತಾಡುವಾಗ ತಮ್ಮ ‘ಸ್ನೇಹ-ಸೇತುವೆ-ಜಾಲ’ ಓದಿದಿರಾ ಎಂದು ಕೇಳಿದರು. ನನಗೆ ಸರಿಯಾಗಿ ಅರ್ಥವಾಗಲಿಲ್ಲ ಎಂದೆ. ಹ್ಯೂಸ್ಟನ್‌ ಸಮ್ಮೇಳನದಲ್ಲಿ ಓರ್ವ ಸಾಹಿತ್ಯ ಪ್ರೇಮಿಯ ಸ್ನೇಹವಾಯಿತಂತೆ, ಅವರು ಕ್ಯಾಲಿಫೋರ್ನಿಯಾವಾಸಿ. ಸಾಹಿತ್ಯ ಚರ್ಚೆ ‘ಅಂತರ್‌ಜಾಲ’ (ಇ-ಮೇಲ್‌) ಮುಖಾಂತರ ಬೆಳೆಯಿತು. ಅವರ ಪಿಎಚ್‌ಡಿ ಸಂಶೋಧನೆಗೆ ಇವರಿಂದ ಸಹಾಯವಾಯ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಬರೆದ ಪದ್ಯವಿದು ಎಂದಾಗ, ‘ಒಂದು ಟಿಪ್ಪಣಿ ಅಥವಾ ಸಂದರ್ಭ ಸೂಚಿ ಬರೆಯಬಹುದಾಗಿತ್ತಲ್ಲ’ ಎಂದು ನಾನು ಕೇಳಿದಾಗ, ಅವರೆಂದರು, ‘ಟಿಪ್ಪಣಿ ಬರೆದಿದ್ದೆವು. ಈ ಕವನದ ಮೇಲೆ ಇಬ್ಬರ ಹೆಸರೂ ಪ್ರಕಟಗೊಂಡಿದೆ. ಸ್ಥಳಾಭಾವದ ಮೂಲಕ ಸಂಪಾದಕ ಮಂಡಲಿಯವರು ಅದನ್ನು ತೆಗೆದು ಹಾಕಿದರು.’ ಎಂದರು. ಆಗ ನಾನು, ‘ಒಬ್ಬ ಲೇಖಕನ ಹಲವಾರು ಲೇಖನ ಪ್ರಕಟಿಸಲು, ಪ್ರಶ್ನೋತ್ತರಗಳು’ ದಂತಹ ಲೇಖನ ಪ್ರಕಟಿಸಲು ಸ್ಥಳ ಎಲ್ಲಿಂದ ಬಂತು? ಎಂದು ನೀವು ಕೇಳಬೇಕಾಗಿತ್ತು’ ಎಂದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more