• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೌಚಾಲಯವೆಂದರೆ ರೆಸ್ಟ್‌ರೂಮ್‌, ಎಂತಹ ಕಲ್ಪನೆ!

By * ವಿಶ್ವೇಶ್ವರ ಭಟ್
|

ಅಮೆರಿಕದ ಶೌಚಾಲಯಗಳು ಯಾಕೆ ಆಪ್ತವಾಗುತ್ತವೆಯೆಂದರೆ, ಅವೇ ಜನರನ್ನು ನಿರ್ದೇಶಿಸುತ್ತವೆ. ಅಲ್ಲಿ ಒಳಬರುವ ಜನರ ಮೇಲೆ ಅವು ಪ್ರಭಾವ ಬೀರುವಷ್ಟು ಕ್ಲೀನಾಗಿರುತ್ತವೆ. ಹೊಲಸು ಮಾಡಿ ಸ್ವಚ್ಛಗೊಳಿಸದೇ ಹೋಗಲು ಮನಸ್ಸಾಗದಷ್ಟು ಅವು ಬಳಕೆದಾರನನ್ನು ನಿಗ್ರಹಿಸುತ್ತವೆ. ಆ ರೀತಿಯಲ್ಲಿ ಅವುಗಳನ್ನು ರೂಪಿಸಲಾಗಿದೆ.

ಆಗಲೇ ಹೇಳಬೇಕಾಗಿದ್ದ ಮಾತೊಂದಿತ್ತು. ಅದೇನೆಂದರೆ ಅಮೆರಿಕದಲ್ಲಿ ಯಾರೂ ಅದಕ್ಕೆ ಟಾಯ್ಲೆಟ್, ಸಂಡಾಸ್, ಲೆವೆಟರಿ ಎಂದು ಕರೆಯುವುದಿಲ್ಲ. ಈ ಪದಗಳು ಸ್ಫುರಿಸುವ ಭಾವನೆಗಳಲ್ಲಿಯೇ ಗಲೀಜು ಇದೆ. ಅವು ಅಂಥ ಆಹ್ಲಾದಕರ ಅನುಭವವನ್ನು ಮೂಡಿಸುವುದಿಲ್ಲ. ಅಲ್ಲಿ ಅವುಗಳನ್ನು ರೆಸ್ಟ್‌ರೂಮ್‌ಗಳೆಂದು ಕರೆಯುತ್ತಾರೆ. ಎಂಥ ಸುಂದರ ಪದ, ಕಲ್ಪನೆ? ಅಂದರೆ ವಿಶ್ರಾಂತಿ ಪಡೆಯುವಂಥ ಶೌಚಾಲಯ, ಕೆಲಕಾಲ ವಿರಮಿಸುವ ತಾಣ, ಅಷ್ಟೊಂದು ಸ್ವಚ್ಛಂದ ಪ್ರದೇಶ. ಪದಗಳಲ್ಲಷ್ಟೇ ಅಲ್ಲ, ಅಕ್ಷರಶಃ ಅವು ರೆಸ್ಟ್‌ರೂಮುಗಳೇ. ಅಲ್ಲಿ ಬೆಡ್‌ಗಳಿರುವುದಿಲ್ಲ ಎನ್ನುವುದನ್ನು ಬಿಟ್ಟರೆ ಅವು ವಿಶ್ರಾಂತಿ ಕೊಠಡಿಗಳೇ. ಬಹುತೇಕ ರೆಸ್ಟ್‌ರೂಮುಗಳಲ್ಲಿ ಕುರ್ಚಿಗಳಿರುತ್ತವೆ. ಸಿಂಗಪುರದ ಸಾರ್ವಜನಿಕ ರೆಸ್ಟ್‌ರೂಮುಗಳಲ್ಲಿ ಪತ್ರಿಕೆ, ಮ್ಯಾಗಜಿನ್ ಗಳೂ ಇರುತ್ತವೆ. ಅದೊಂದು ಶೌಚ ಎಂಬ ಭಾವನೆ ಸ್ವಲ್ಪವೂ ಬರುವುದಿಲ್ಲ. ಅಲ್ಲಿ ದೇವರ ಫೋಟೊ, ವಿಗ್ರಹ ಇರುವುದಿಲ್ಲ ಎಂಬುದನ್ನು ಬಿಟ್ಟರೆ ಅವು (ದೇವ) ಆಲಯಗಳೇ. ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಸ್ವಚ್ಛ. ಅಮೆರಿಕದಲ್ಲಿ ಇಡೀ ದೇಶದುದ್ದಕ್ಕೆ ಪ್ರಯಾಣಿಸಿ, ಎಲ್ಲಿಯೂ ಒಂದೇ ಒಂದು ರೆಸ್ಟ್ ರೂಮ್, ನಮ್ಮ ಸಂಡಾಸಿನಂತೆ ಗೋಚರಿಸಲಿಕ್ಕಿಲ್ಲ.

ಇತ್ತೀಚೆಗೆ ಅಮೆರಿಕಕ್ಕೆ ಹೋದಾಗ ನನಗೊಂದು ಪುಸ್ತಕ ಸಿಕ್ಕಿತು. ಪುಸ್ತಕದ ಹೆಸರು The Great Speeches on Toilets. ಎಂಥೆಂಥ ಮಹಾಮಹಿಮರು ಟಾಯ್ಲೆಟ್ ಬಗ್ಗೆ ಮಾತಾಡಿದ್ದಾರೆ ಗೊತ್ತಾ? ಅಮೆರಿಕದ ರಾಷ್ಟ್ರಾಧ್ಯಕ್ಷರು, ಇಂಗ್ಲೆಂಡಿನ ಪ್ರಧಾನಿ, ಅರಿಸ್ಟಾಟಲ್, ಮಹಾತ್ಮ ಗಾಂಧಿಯವರೆಲ್ಲ ಈ ಬಗ್ಗೆ ಮಾತಾಡಿದ್ದಾರೆ. ಎರಡನೆ ಮಹಾಯುದ್ಧದ ಬಳಿಕ ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಭಾಷಣ ಮಾಡುತ್ತಾ ಟಾಯ್ಲೆಟ್ ಬಗ್ಗೆ ಹೀಗೆನ್ನುತ್ತಾನೆ- ದೇಶ ಕಟ್ಟುವುದೆಂದರೆ ಕಟ್ಟಡ, ರಸ್ತೆ, ಸೇತುವೆ, ಉದ್ಯಾನವನ ನಿರ್ಮಾಣವೊಂದೇ ಅಲ್ಲ. ಒಂದು ದೇಶ ಅಭಿವೃದ್ಧಿ ಹೊಂದಲು, ಪ್ರಗತಿ ಸಾಧಿಸಲು ಇವೆಲ್ಲ ಇರಬೇಕು. ಆದರೆ ದೇಶ ನಿರ್ಮಾಣವೆಂದರೆ ಕೇವಲ ಭೌತಿಕ ಕಟ್ಟಡವೊಂದೇ ಅಲ್ಲ. ಇಡೀ ದೇಶದಲ್ಲಿ ನೈರ್ಮಲ್ಯ, ಸ್ವಚ್ಛತೆ ಕಾಪಾಡುವುದೂ ಅಷ್ಟೇ ಮುಖ್ಯ. ಅವು ಆಂತರಿಕ ಸಂಸ್ಕಾರದಿಂದ ಬರುವಂಥವು. ಈ ಸಂಸ್ಕಾರ ಆರಂಭವಾಗುವುದು ಮನೆಯಿಂದ ಎಂಬ ಗ್ರಹಿಕೆ ಎಲ್ಲರಿಗೂ ಇರಬಹುದು. ಆದರೆ ನನ್ನ ಪ್ರಕಾರ, ಇದು ಆರಂಭವಾಗುವುದು ರೆಸ್ಟ್‌ರೂಮಿನಿಂದ. ಆದ್ದರಿಂದ ನಮ್ಮ ದೇಶದೆಲ್ಲೆಡೆ ಆಧುನಿಕವೆನಿಸುವ, ಸಕಲ ಸೌಲಭ್ಯಗಳಿರುವ, ಹಿತಕರವೆನಿಸುವ ರೆಸ್ಟ್‌ರೂಮುಗಳನ್ನು ನಿರ್ಮಿಸುವ ಅಗತ್ಯವಿದೆ. ಇವು ಕೇವಲ ಬಹಿರ್ದೆಸೆಯ ತಾಣಗಳಲ್ಲ. ನಮ್ಮ ಚಿಂತನೆ, ಕಲ್ಪನೆಗಳನ್ನು ಅರಳಿಸುವ ತಾಣಗಳೂ ಆಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ರೆಸ್ಟ್‌ರೂಮುಗಳ ಅಗತ್ಯವನ್ನು ನಾವು ಮನಗಾಣಬೇಕು.'

ಒಂದು ದೇಶದ ಅಧ್ಯಕ್ಷನಾದವನು ಶೌಚಾಲಯಗಳ ಬಗ್ಗೆ ಇಷ್ಟೊಂದು ಕಾಳಜಿಯಿಂದ, ಕಳಕಳಿಯಿಂದ, ಜನರನ್ನು ಪ್ರೇರೇಪಿಸುವಂಥ ಭಾಷಣ ಮಾಡಿದ್ದನ್ನು ಎಷ್ಟು ಮಂದಿ ಕೇಳಿದ್ದಾರೋ ಗೊತ್ತಿಲ್ಲ, ನಾನಂತೂ ಕೇಳಿಲ್ಲ.

ಟ್ರೂಮನ್ ರೀತಿಯಲ್ಲಿ ಅದಕ್ಕಿಂತ ಮುನ್ನ ಅಷ್ಟೇ ಗಟ್ಟಿಯಾಗಿ ಮಾತಾಡಿದವರು ಮಹಾತ್ಮ ಗಾಂಧಿ. ಸಾರ್ವಜನಿಕ ಶೌಚಾಲಯಗಳನ್ನು ನಮ್ಮ ಮನೆಯ ಶೌಚಾಲಯಗಳಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾದರೆ ಮೊದಲು ನಾವು ಅದನ್ನು ಸ್ವಚ್ಛಗೊಳಿಸಬೇಕು. ಶೌಚಾಲಯಗಳಲ್ಲಿ ದೇವರಿದ್ದಾನೋ ಇಲ್ಲವೋ, ಆದರೆ ಮನುಷ್ಯರು ಮಾತ್ರ ಇದ್ದೇ ಇರುತ್ತಾರೆ. ಹೀಗಾಗಿ ಮನುಷ್ಯರು ಇರುವಂಥ ಪರಿಸರವನ್ನು ಅಲ್ಲಿ ನಿರ್ಮಿಸಬೇಕು. ಈ ಕಾರಣದಿಂದ ಅದನ್ನು ಪವಿತ್ರಸ್ಥಳದಂತೆ ಕಾಪಾಡಬೇಕು. ಶೌಚಾಲಯವನ್ನು ಗಲೀಜು ಮಾಡಿ, ಕೆಟ್ಟದಾಗಿ ಇಟ್ಟುಕೊಳ್ಳುವುದೆಂದರೆ ಮಾನವನ ಮೇಲೆ ಎಸಗುವ ಕ್ರೌರ್ಯವಲ್ಲದೇ ಮತ್ತೇನೂ ಅಲ್ಲ.' ಅಂತಾರೆ ಮಹಾತ್ಮ ಗಾಂಧಿ. ಅವರು ತಾವು ಉಪಯೋಗಿಸಿದ ಶೌಚಾಲಯವನ್ನು ಸ್ವಚ್ಛಗೊಳಿಸದೇ ಬರುತ್ತಿರಲಿಲ್ಲ. ಅವರ ಆಶ್ರಮದಲ್ಲಿ ಎಲ್ಲರೂ ಶೌಚಾಲಯವನ್ನು ಕ್ಲೀನ್ ಮಾಡಲೇಬೇಕಿತ್ತು.

ಗಾಂಧೀಜಿ ಬಳಿಕ ಯಾವ ರಾಷ್ಟ್ರನಾಯಕರೂ ಶೌಚಾಲಯದ ಬಗ್ಗೆ ಮಾತಾಡಲಿಲ್ಲ. ಸ್ವಚ್ಛ ಶೌಚಾಲಯ ನಿರ್ಮಾಣ ಸಹ ರಾಷ್ಟ್ರ ನಿರ್ಮಾಣ ಎಂದು ಅಂದುಕೊಳ್ಳಲಿಲ್ಲ. ಈ ಕುರಿತು ದೇಶವಾಸಿಗಳಲ್ಲಿ ಅರಿವು, ಜಾಗೃತಿಯನ್ನು ಮೂಡಿಸಲಿಲ್ಲ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದ ಬಳಿಕ, ಎಲ್ಲರಿಗೂ ಶೌಚಾಲಯ ನೀಡುತ್ತೇವೆ ಎಂದು ನಮ್ಮ ನಾಯಕರು ಹೇಳುತ್ತಿದ್ದಾರಲ್ಲ, ಅಲ್ಲಿ ತನಕ ಲ್ಯಾಟ್ರಿನ್‌ಗೆ ಹೋಗದೇ ಕಾಯಲು ಆಗುತ್ತಾ? ಎಂಥ ದೇಶವಪ್ಪಾ!?

ಶೌಚಾಲಯ ಶಿಕ್ಷೆ ಮುಂದೆ ಜೈಲು ಶಿಕ್ಷೆಯೇ ವಾಸಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X