ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಹಿಂದು : ಮುಖ್ಯವಾಹಿನಿಗೇಕೆ ಸಿಡಿಮಿಡಿ?

By * ವಿಶ್ವೇಶ್ವರ ಭಟ್
|
Google Oneindia Kannada News

Internet Hindu : what is it?
(ಹಿಂದಿನ ಪುಟದಿಂದ...)

ಇಂಟರ್‌ನೆಟ್ ಹಿಂದುಗಳನ್ನು ಮೂಲಭೂತವಾದಿಗಳು, ಹಿಂದು ತಾಲಿಬಾನಿಗಳು ಎಂದೆಲ್ಲ ಜರೆಯುವ ಲೇಖನಗಳು ಪ್ರಕಟವಾಗುತ್ತಿವೆ. ಇಂಥ ಹೆಚ್ಚಿನ ಟೀಕೆಗಳೆಲ್ಲ ವ್ಯಕ್ತವಾಗುತ್ತಿರುವುದು ಎಡಪಂಥೀಯ ಒಲವಿನ ಹಾಗೂ ಮಾಧ್ಯಮದ ಹಿಡಿತ ಹೊಂದಿರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿರುವ ಪತ್ರಕರ್ತರಿಂದ. ದಿಲ್ಲಿ ಮೂಲದ ಹಾಗೂ ಹೈ ಫೈ ಸಮಾಜವಾದಿಗಳ ಬಳಗದೊಂದಿಗೆ ಹೆಗಲು ತಿಕ್ಕಿಕೊಂಡಿರುವ ಇವರಿಗೆ ಇಂಟರ್‌ನೆಟ್ ಹಿಂದು ಪಾಳಯದ ಅಭಿಪ್ರಾಯಗಳು ಸಾರ್ವಜನಿಕ ಸಾರಿಗೆಯಲ್ಲಿ ತಾವು ಪ್ರಯಾಣಿಸುವುದನ್ನು ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯವಿಲ್ಲವೋ ಅಷ್ಟೇ ಮಟ್ಟಿಗೆ ವರ್ಜ್ಯ ಎನಿಸಿದೆ. ಇಂಟರ್‌ನೆಟ್ ಹಿಂದುಗಳಿಂದ ಆಗುವ ಪರಿಣಾಮವೇನೂ ಇಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಆದರೆ ಇವ್ಯಾವುದೂ ಇಂಟರ್‌ನೆಟ್ ಹಿಂದುಗಳ ಉಮೇದನ್ನು ಕಳೆಗುಂದಿಸಿಲ್ಲ' ಎಂದು ಕಾಂಚನ್ ಗುಪ್ತ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಯಾವುದಾದರೂ ವಾಹಿನಿ ಗಲಭೆಯೊಂದರ ವರದಿಗೆ ತೆರಳಿ ತನ್ನ ಮೂಗಿನ ನೇರಕ್ಕೆ ವರದಿ ಮಾಡುತ್ತಿದ್ದರೆ ಅಂತರ್ಜಾಲ ಸಾಧನವಾದ ಟ್ವಿಟ್ಟರ್‌ನಲ್ಲಿ ಸಂದೇಶ ಉಲಿಯಲು ಪ್ರಾರಂಭವಾಗುತ್ತದೆ. ಇವರು ಸುಳ್ಳು ಹೇಳುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ನಾನಿದ್ದೆ. ಅಲ್ಲಿನ ಹಿಂಸೆಗೆ ಕಾರಣ ಬೇರೆ ' ಎಂಬ ಸಂಕ್ಷಿಪ್ತ ಸಂದೇಶಗಳು ಅಪ್ಪಳಿಸಲು ಶುರುವಾಗುತ್ತದೆ. ತಮ್ಮ ಪರವಾಗಿ ಬಂದ ಶ್ಲಾಘನೆಯ ಪತ್ರಗಳನ್ನು ಮಾತ್ರ ಆರಿಸಿ ಪ್ರಕಟಿಸುತ್ತಿದ್ದವರಿಗೆ ಅಂತರ್ಜಾಲ ತಾಣಗಳಲ್ಲಿ ತಮ್ಮ ನಿಲುವುಗಳನ್ನು ತಾರ್ಕಿಕವಾಗಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಹಾಗೂ ಇಂಥ ಪ್ರತಿಪ್ರಶ್ನೆಗಳಿಗೆ ನೆಟ್ಟಿಜನ್‌ಗಳ ಭಾರಿ ಬೆಂಬಲ ವ್ಯಕ್ತವಾಗುತ್ತಿರುವುದು ಮುಖ್ಯವಾಹಿನಿಯವರ ತಲೆ ಕೆಡಿಸುತ್ತಿದೆ ಎನ್ನುತ್ತಾರೆ ಅಂತರ್ಜಾಲ ವಿಶ್ಲೇಷಕರು. ಮಾಧ್ಯಮದ ನಿರೂಪಕರನ್ನು, ಅಭಿಪ್ರಾಯ ರೂಪಣೆಯ ಕೇಂದ್ರ ಸ್ಥಾನದಲ್ಲಿರುವವರನ್ನು ಎಗ್ಗಿಲ್ಲದೇ ಪ್ರಶ್ನಿಸಬಹುದಾದ ಅವಕಾಶವನ್ನು ಇಂಟರ್ನೆಟ್ ತೆರೆದಿರಿಸಿದೆ.

ಆನ್‌ಲೈನ್ ಸಮೀಕ್ಷೆ ಹೊರಗೆಡವಿದ್ದೇನು? ಆನ್‌ಲೈನ್ ಹಿಂದುಗಳಿಗೆಂದೇ ಒಂದು ಸಮೀಕ್ಷೆ ನಡೆಸಲಾಯಿತು. ಅದರಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ - 88.9 ಶೇಕಡ ಮಂದಿ ತಾವು ಇಂಟರ್ನೆಟ್ ಹಿಂದುಗಳೆಂದು ಗುರುತಿಸಿಕೊಳ್ಳುವುದಾಗಿಯೂ ಆ ಬಗ್ಗೆ ಯಾವುದೇ ಮುಜುಗರ ಪಟ್ಟುಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಹೀಗೆ ಪ್ರತಿಕ್ರಿಯಿಸಿದವರಲ್ಲಿ ಶೇ 4ರಷ್ಟು 20 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯೋಮಾನದವರು. 30 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯೋಮಾನದವರು ಶೇ. 55. 40 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯೋಮಾನದವರು ಶೇ 31, 40 ವರ್ಷಕ್ಕಿಂತ ಹೆಚ್ಚಿನವರು ಶೇ. 10ರಷ್ಟು ಮಾತ್ರ. ಹೀಗಾಗಿ ಪ್ರತಿಕ್ರಿಯಿಸಿದವರಲ್ಲಿ ಶೇ. 90ರಷ್ಟು ಯಂಗ್ ಹಿಂದುಸ್ಥಾನ!

ಇನ್ನು, ಪ್ರತಿಕ್ರಿಯಿಸಿದವರ ಶೈಕ್ಷಣಿಕ ಅರ್ಹತೆ ಗಮನಿಸುವುದಾದರೆ- ಶೇ. 43ರಷ್ಟು ಪದವೀಧರರು (ಹೆಚ್ಚಿನವರು ಎಂಜಿನಿಯರಿಂಗ್, ವಿಜ್ಞಾನ, ವೈದ್ಯಕೀಯ ಹಾಗೂ ಹಲ ಬಗೆಯ ಉನ್ನತ ಶಿಕ್ಷಣ ಮೂಲದವರು). ಶೇ. 46ರಷ್ಟು ಮಂದಿ ಸ್ನಾತಕೋತ್ತರ ಪದವಿ ಹೊಂದಿದವರು. (ಹೆಚ್ಚಿನವರು ಎಂಬಿಎ ಡಿಗ್ರಿ). ಶೇ.11ರಷ್ಟು ಪಿಎಚ್‌ಡಿ ಪಡೆದವರು. ಯಾವುದೇ ಉದ್ಯೋಗ ಹೊಂದಿರದೇ ವ್ಯಾಸಂಗದಲ್ಲಿರುವವರು ಶೇ. 17.3. ಆರ್ಥಿಕ ಸ್ಥಿತಿ ಬಗ್ಗೆ ಹೇಳುವುದಾದರೆ, ಶೇ. 82.7ರಷ್ಟು ಉದ್ಯೋಗಿಗಳಲ್ಲಿ ಶೇ. 3.1ರಷ್ಟು ಮಂದಿ ವಾರ್ಷಿಕ 2 ಲಕ್ಷ ರೂ. ದುಡಿಯುತ್ತಾರೆ. ಶೇ. 18.4ರಷ್ಟು ಮಂದಿ ವಾರ್ಷಿಕ 6 ಲಕ್ಷ ರೂ ದುಡಿಯುವವರು. 34.7 ಶೇ. ಮಂದಿಯ ವಾರ್ಷಿಕ ಆದಾಯ 12 ಲಕ್ಷ ರೂ.ಗಳಾಗಿದ್ದರೆ, 26.5 ಶೇಕಡ ಮಂದಿ ವರ್ಷಕ್ಕೆ 24 ಲಕ್ಷ ರೂ.ಗಳಿಗಿಂತ ಹೆಚ್ಚು ದುಡಿಯುತ್ತಾರೆ.

ಇವರು ಹೇಳೋದೇನಂದ್ರೆ.. ಹಿಂದು ಐಡೆಂಟಿಟಿ ಹೊಂದಲು ಮುಸ್ಲಿಮರನ್ನು ದೂಷಿಸಬೇಕಿಲ್ಲ. ಇಂಟರ್ನೆಟ್ ಹಿಂದುಗಳೆಂದರೆ ಬಿಜೆಪಿ ಬೆಂಬಲಿಗರೂ ಅಂತಲೂ ಅಲ್ಲ. ಬಿಜೆಪಿ ನೀತಿಗಳನ್ನು ಟೀಕಿಸುವವರೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಸುಶಿಕ್ಷಿತರು, ಪ್ರಖರ ವಿಚಾರವಂತರು ಹಾಗೂ ರಾಷ್ಟ್ರೀಯ ವಿದ್ಯಮಾನಗಳ ಕುರಿತು ಉತ್ತಮ ಮಾಹಿತಿ-ತಿಳಿವಳಿಕೆ ಹೊಂದಿರುವವರು.' ಇದೊಂದು ಆತ್ಮಜಾಗೃತಿಯ ಅಭಿಯಾನವಷ್ಟೆ. ಅರುಂಧತಿ ರಾಯ್ ಮಾವೋವಾದಿಗಳ ಬಗ್ಗೆ ಅನುಕಂಪದಿಂದ ಬರೆದ ಲೇಖನ ಪ್ರಕಟಿಸುವವರಿಗೆ ನಮ್ಮೊಂದಿಗಿರುವ ಸಮಸ್ಯೆ ಏನು?'.

ಎಡಪಂಥೀಯ ಮಾಧ್ಯಮ ವಲಯ ಹಿಂದು ಅಸ್ಮಿತೆಯನ್ನು ಕಾಲಡಿಗೆ ಮಾಡಲು ಮೊದಲಿನಿಂದಲೂ ಪ್ರಯತ್ನಿಸಿಕೊಂಡು ಬಂದಿದೆ. ಇದೀಗ ಇಂಟರ್ನೆಟ್ ಬಂದು ಆಟದ ನಿಯಮಗಳನ್ನೇ ಬದಲಿಸುತ್ತದೆ. ಜವಾಬ್ದಾರಿಯುತ ಇಂಟರ್ನೆಟ್ ಹಿಂದು ಆಗಲು ನಿಯಮಗಳು ಬ್ಲಾಗ್‌ಗಳಲ್ಲಿ ಕಾಮೆಂಟ್ ಮಾಡುವಾಗ ಬೈಗುಳದ ಭಾಷೆ ಬಳಸದಿರಿ. ಬ್ಲಾಗರ್ ಬರೆದ ಅಭಿಪ್ರಾಯದ ಬಗ್ಗೆ ನಿಮಗೆಷ್ಟೇ ವಿರೋಧವಿದ್ದರೂ ಅದನ್ನು ತಾರ್ಕಿಕವಾಗಿ ಮಂಡಿಸಿ. ಇಷ್ಟಕ್ಕೂ ಹಿಂದು ಧರ್ಮ ಗುರುತಿಸಿಕೊಳ್ಳುವುದೇ ಸಹಿಷ್ಣುತೆಯಿಂದ. ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳದೇ ತಾರ್ಕಿಕವಾಗಿ ವಿಷಯ ಮಂಡಿಸಿದ್ದೇ ಆದರೆ, ವಿರೋಧಿಗಳು ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಿರಲಿ. ಗುಂಪು ಗುಂಪಾಗಿ ಬ್ಲಾಗರ್ ಮೇಲೆ ಮುಗಿಬೀಳಬೇಡಿ. ಇದು ನಿಯೋಜಿತ ದಾಳಿಯಂತೆ ಕಾಣುತ್ತದೆ. ಕಾಮೆಂಟ್ ಮಾಡಿದವರಲ್ಲಿ ಯಾರಾದರೂ ಈ ಮೊದಲೇ ನೀವು ಹೇಳಬೇಕಾದ್ದನ್ನು ಹೇಳಿದ್ದರೆ, ಮತ್ತೆ ಕಾಮೆಂಟ್ ಮಾಡುವುದರಿಂದ ದೂರವಿರಿ. ನರೇಂದ್ರ ಮೋದಿ ಇಂಟರ್ನೆಟ್ ಹಿಂದುಗಳ ನಾಯಕ ಆಗಿರಲಿ; ಹೀರೊ ಆಗಬೇಕಿಲ್ಲ. ಅವರ ಸಾಮರ್ಥ್ಯದ ಬಗ್ಗೆ ಹೊಗಳಿಕೆ ಜತೆಗೆ ಕೊರತೆಯ ಕುರಿತ ಚರ್ಚೆಗೂ ಜಾಗವಿರಲಿ. ದೇವಿಯ ಪರಿಕಲ್ಪನೆಗಳು ಢಾಳಾಗಿರುವ ಹಿಂದು ಧರ್ಮ, ಮಹಿಳೆಗೆ ಅಗೌರವ ತೋರುವುದನ್ನು ಎಲ್ಲೂ ಹೇಳಿಲ್ಲ. ಹೀಗಾಗಿ, ವಿಚಾರವನ್ನು ವಿರೋಧಿಸುವ ಭರದಲ್ಲಿ ಮಹಿಳೆಯರ ಅವಹೇಳನಕ್ಕೆ ಮುಂದಾಗಬೇಡಿ.

ಇಷ್ಟು ದಿನ ಅವರೆಲ್ಲ ನ್ಯೂಸ್‌ರೂಮ್ ಎಂಬ ಅಖಾಡದಲ್ಲಿ ನಡೆಯುತ್ತಿದ್ದ ಅಭಿಪ್ರಾಯದ ಕುಸ್ತಿಯನ್ನು ದೂರದಿಂದಲೇ ನೋಡುತ್ತಿದ್ದರು. ಅಲ್ಲಿ ಬಹಳಷ್ಟು ವೇಳೆ ವ್ಯಕ್ತವಾಗುತ್ತಿದ್ದ ವ್ಯರ್ಥ ಉದ್ರೇಕಗಳು, ಶಾಣ್ಯಾತನದ ಹುಸಿಗರ್ವ ಹೊತ್ತ ಶತಮೂರ್ಖ ವಾದ-ವಿನೋದಾವಳಿಗಳನ್ನೆಲ್ಲ ಥತ್ತೆರಿಕೆ ಎಂದು ಕೈ ಕೈ ಹಿಸುಕಿಕೊಂಡು ಸಹಿಸಿಕೊಳ್ಳುತ್ತಿದ್ದರು. ಅದಕ್ಕೆ ಹೊರತಾದ ಆಯ್ಕೆಗಳು ಅವರ ಮುಂದಿರಲಿಲ್ಲ. ಅಬ್ಬಬ್ಬ ಎಂದರೆ, ಏಕೆ ಏನೆನೆಲ್ಲ ಬರಿತಿದೀರ, ಮಾತಾನಾಡ್ತಿದೀರ ಎಂದು ವಾಚಕರ ಇಲ್ಲವೇ ವೀಕ್ಷಕರ ವಿಭಾಗಕ್ಕೆ ಪತ್ರ ಬರೆದು ಕೋಪ ಹೊರಹಾಕಿಕೊಳ್ಳಬಹುದಿತ್ತು. ಆ ಆಕ್ರೋಶ ಸಂಬಂಧಪಟ್ಟವರಿಗೆ ತಲುಪಿದ್ದು ಸಹ ಸರಿಯಾಗಿ ತಿಳಿಯುತ್ತಿರಲಿಲ್ಲ. ಇದೀಗ ಇಂಟರ್‌ನೆಟ್ ಜಮಾನಾದಲ್ಲಿ ಓದಿಕೊಂಡಿರುವ, ಮಾಹಿತಿ ಶ್ರೀಮಂತ ವರ್ಗವೇ ಒಂದು ಅಖಾಡ ಸೃಷ್ಟಿಸಿಬಿಟ್ಟಿದೆ. ಮಾಧ್ಯಮಗಳಲ್ಲಿ ಕುಳಿತ ಅಭಿಪ್ರಾಯ ನಿರೂಪಕರು ಒಂದಿಲ್ಲೊಮ್ಮೆ ಕಾಲಿಡಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಯಾವುದೋ ಉನ್ಮಾದದ ಸಂಘಟನೆ ಮಾಧ್ಯಮಗಳನ್ನು ಕರೆಸಿಕೊಂಡು ಅವರೆದುರು ಪೌರುಷ ತೋರಿಸುತ್ತದೆ. ಅದನ್ನು ಬಿತ್ತರಿಸಿ ಪುಂಡರಿಗೆ ನೈತಿಕತೆ ಪಾಠ ಹೇಳಲು ಹೊರಟ ಅಭಿಪ್ರಾಯ ನಿರೂಪಕರಿಗೆ ಇಂಟರ್‌ನೆಟ್ ಮಾಧ್ಯಮದಲ್ಲಿ ಪ್ರಶ್ನೆಗಳು ಬಂದು ಇರಿಯುತ್ತವೆ. ಪೊಲೀಸರಿಗೆ ಮಾಹಿತಿ ನೀಡುವ ಬದಲು ನೀವ್ಯಾಕೆ ಅಲ್ಲಿಗೆ ಓಡಿದಿರಿ? ನಿಮ್ಮ ಉದ್ದೇಶವಾದರೂ ಏನು ಎಂದು ವಿಚಾರಣೆಯ ಭರ್ಜಿಗಳು ಇರಿಯುತ್ತವೆ.

ಯಾರನ್ನೋ ಸುಮ್ಮನೇ ಬಯ್ದುಕೊಂಡು ಹೀರೊ ಆಗಿಬಿಡೋಣ ಎಂಬ ನಿರೂಪಕರ ಚಾಳಿಗೆ ಬ್ರೇಕು ಬೀಳುತ್ತಿರುವುದೂ ಇವರಿಂದಲೇ. ಒಬ್ಬ ವ್ಯಕ್ತಿಯ ನಿಲುವುಗಳು ಸರಿಯಿಲ್ಲ ಎಂದು ಬಯ್ದುಕೊಂಡು ಬಂದಿರುತ್ತಾರೆ. ಆ ವ್ಯಕ್ತಿ ಬದಲಾಗುವುದೇ ಇಲ್ಲ ಎಂಬಂತೆ ದೂಷಣೆ ಮಾಡುತ್ತಿರುವ ಸಂದರ್ಭದಲ್ಲೇ ಆತನ ನಿಲುವುಗಳು ಮೃದುವಾಗುತ್ತವೆ. ಆಗ ಆ ವ್ಯಕ್ತಿ ಸರಿಯಾದನಲ್ಲ ಎಂದು ಯಾವ ಅಭಿಪ್ರಾಯ ನಿರೂಪಕನೂ ನಿಟ್ಟುಸಿರಿಡುವುದಿಲ್ಲ. ನೋಡಿದ್ರಾ ಅವನ ಯು' ಟರ್ನ್...' ಎಂದು ಮತ್ತೆ ಭಾವೋನ್ಮಾದದ ವಿಶ್ಲೇಷಣೆಗಿಳಿಯುತ್ತಾನೆ. ಈ ಸಂದರ್ಭದಲ್ಲೇ ಇಂಥ ಇಂಟರ್ನೆಟ್ ಗುಂಪುಗಳು, ಏನು ಮಾಡಿದರೂ ತಪ್ಪು ಅಂತೀಯಲ್ಲ? ಹೋಗ್ಲಿ, ಈ ವಿಷಯದಲ್ಲಿ ನಿನ್ನ ನಿಲುವು ಏನು ಅಂತ ಮೊದಲು ಹೇಳು' ಎಂದು ಜಾಡಿಸುತ್ತವೆ. ಹಾಗಂತ ಈ ವೇದಿಕೆಯಲ್ಲೂ ಕೆಸರೆರಚಾಟದ, ಅತಿರೇಖದ ಸಾಧ್ಯತೆಗಳು ಇಲ್ಲದೇ ಇಲ್ಲ. ಆದರೆ ಇಲ್ಲಿ ಇರದೇ ಇರುವುದು ಅಂದ್ರೆ ಏಕಸ್ವಾಮ್ಯದ ಅಪಾಯ. ಮುಖ್ಯವಾಹಿನಿಯ ಹದಿನೈದಿಪ್ಪತ್ತು ಮಂದಿ ಮಾತ್ರ ಅಭಿಪ್ರಾಯ ನಿರೂಪಕರು ಎಂಬಂತಿದ್ದ ಸನ್ನಿವೇಶವನ್ನು ಈ ಹೊಸಗುಂಪು ಚಿಕ್ಕದಾಗಿ ಅಲ್ಲಾಡಿಸಿದೆ. ಮುಖ್ಯವಾಗಿ ಟಿವಿ ವಾಹಿನಿಗಳ ಸೆಟ್‌ನಲ್ಲಿ ಕುಳಿತು, ನಮ್ಮ ವಿಚಾರಧಾಟಿಯೇ ದೇಶದ ಒಟ್ಟಾರೆ ಮನೋಮಿಡಿತ ಎಂಬಂತೆ ಮಾತನಾಡುತ್ತಿದ್ದವರಲ್ಲಿ, ಇಂಟರ್‌ನೆಟ್ ಹಿಂದುಗಳ ಕುರಿತು ಇರುವ ಸಿಟ್ಟೇ ಇದಕ್ಕೆ ನಿದರ್ಶನ. ಸುಶಿಕ್ಷಿತ ವಲಯದಲ್ಲಿ ತೆರೆದುಕೊಳ್ಳುತ್ತಿರುವ ಈ ಅಭಿಯಾನವನ್ನು ನಿರ್ಲಕ್ಷಿಸುವ ಹಾಗಂತೂ ಇಲ್ಲ.

ಅವರೆಲ್ಲರ ಇಷ್ಟು ದಿನಗಳ ಹತಾಶೆಗೆ ಒಂದು ಅಖಾಡ ಸಿಕ್ಕಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X