• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಂತರಿಕ ಭದ್ರತೆ ?ನಗೆಪಾಟಲು!

By * ವಿಶ್ವೇಶ್ವರ ಭಟ್
|
ಸರಿಯಾಗಿ ಒಂದು ವರ್ಷವಾಯಿತು! ಆ ಘಟನೆ ಅಂಗಿಯ ಮೇಲಿನ ಕಲೆಯಂತೆ ಇನ್ನೂ ದಿಟ್ಟಿಸುತ್ತಿದೆ. ಹಿಂದಿನ ವರ್ಷ ಇದೇ ಸಮಯಕ್ಕೆ ಮುಂಬಯಿ ಮಹಾನಗರಿ ಕೇವಲ ಹತ್ತು ಮಂದಿ ಪಡಪೋಶಿ ಭಯೋತ್ಪಾದಕರ ಪುಂಡಾಟಕ್ಕೆ ಸಿಕ್ಕು ನರಳಿದಾಗ ಇಡೀ ದೇಶಕ್ಕೆ ದೇಶವೇ ಮೂಕಪ್ರೇಕ್ಷಕನಂತೆ ಅಸಹಾಯವಾಗಿ ದಿಟ್ಟಿಸುತ್ತಿತ್ತು. ಒಂದು ದೇಶವಾಗಿ ನಾವು ನರಪೇತಲರಂತೆ ವರ್ತಿಸಿಬಿಟ್ಟೆವು.

ಆ ಘಟನೆಯ ನಂತರದ ವಿದ್ಯಮಾನಗಳನ್ನು ಗಮನಿಸಿದರೆ, ಅದು ಘಟನೆಗಿಂತ ಹೆಚ್ಚು ಬೇಸರ ಹಾಗೂ ನೋವು ತರಿಸುತ್ತದೆ. ಮುಂಬಯಿ ದಾಳಿಯ ನಂತರ ನಾವು ನಡೆದುಕೊಂಡ ರೀತಿ ನಿಜಕ್ಕೂ ತಲೆತಗ್ಗಿಸುವಂಥದು. ಈ ಘಟನೆ ಆರಂಭದಲ್ಲಿ ಹುಟ್ಟಿಸಿದ ಆಕ್ರೋಶವನ್ನು ನಾವು ಬಹಳ ದಿನಗಳವರೆಗೆ ಜೀವಂತವಾಗಿ ಇಟ್ಟುಕೊಳ್ಳಲೇ ಇಲ್ಲ. ನಮ್ಮ ಹೋರಾಟ, ಹಾರಾಟ,ಪ್ರತಿಭಟನೆ, ವೀರಾವೇಶ, ಸಿಟ್ಟು, ಸೆಡವು ಗಳೆಲ್ಲ ಕೆಲವೇ ದಿನಗಳಲ್ಲಿ ಸಪಾಟಾಗಿ ಹೋದವು. ಒಂದು ಆಕ್ರೋಶದ ಅಗ್ನಿಗೆ ನೆಟ್ಟಗೆ ಹದಿನೈದು ದಿನ ಎಣ್ಣೆ ಹಾಕಿ ಅದು ಪ್ರಜ್ವಲಿಸುವಂತೆ ಮಾಡುವ ದಿವ್ಯತೆಯಾಗಲಿ, ಕಿಚ್ಚಾಗಲಿ ನಮ್ಮಲ್ಲಿ ಇರಲಿಲ್ಲ. ನಮ್ಮನ್ನು ಮಣ್ಣಿಗೆ ಕೆಡವಿ ಕುತ್ತಿಗೆ ಮೆಟ್ಟಿದವರ ಜತೆ ಕೂಡ ಸ್ನೇಹಕ್ಕೆ ಕುಳಿತುಬಿಡುವ ಜಾಯಮಾನ ನಮ್ಮದು. ಹೀಗಾಗಿ ಯಾವ ಭಯಂಕರ ಅಥವಾ ಕರಾಳ ಘಟನೆಯೂ ಹೊಟ್ಟೆಯಲ್ಲಿ ಬೆಂಕಿಬೀಳುವಂತೆ ಮಾಡುವುದಿಲ್ಲ. ಸಮಾಧಾನ, ನಿಷ್ಕ್ರಿಯತೆಯ ಲ್ಲಿಯೇ ನಾವು ಸಮಸ್ಯೆಗೆ ಪರಿಹಾರ ಕಂಡುಕೊಂಡುಬಿಡುತ್ತೇವೆ.

ಭಯೋತ್ಪಾದಕ ಘಟನೆ ನಮಗೆ ಹೊಸತಲ್ಲ. ಬಾಂಬು, ಸೋಟ, ಸರಣಿಸೋಟ, ಆರ್‌ಡಿಎಕ್ಸ್, ಕಾರ್‌ಬಾಂಬ್, ಎಕೆ-47 ನಮಗೆ ಹೊಸತಲ್ಲವೇ ಅಲ್ಲ. ನಮ್ಮ ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ಭಯೋತ್ಪಾದಕ ಘಟನೆಗಳು ಸಂಭವಿಸಿವೆ. ಇವು ನಮ್ಮಲ್ಲಿ ಈಗ ಭಯವನ್ನು ಉತ್ಪಾದಿಸುವುದಿಲ್ಲ'. ಅಷ್ಟರಮಟ್ಟಿಗೆ ನಾವು ಇಂಥ ಕೃತ್ಯಗಳೊಂದಿಗೆ ಹೊಂದಿಕೊಂಡುಬಿಟ್ಟಿದ್ದೇವೆ. ಗುವಾಹಟಿ, ಜೈಪುರಗಳಂಥ ನಗರಗಳನ್ನೂ ಭಯೋತ್ಪಾದಕರು ಬಿಟ್ಟಿಲ್ಲ. ದಿಲ್ಲಿ, ಮುಂಬಯಿಯಂಥ ನಗರಗಳು ಅವೆಷ್ಟು ಬಾಂಬ್‌ಸೋಟಗಳನ್ನು ಕೇಳಿಸಿಕೊಂಡು ಸುಮ್ಮನಾಗಿಲ್ಲ ಹೇಳಿ? 1993ರಲ್ಲಿ ದೇಶ ಹಿಂದೆಂದೂ ಕಂಡು ಕೇಳರಿಯದಂಥ ಸರಣಿ ಬಾಂಬ್‌ಸೋಟ ಮುಂಬಯಿಯಲ್ಲಾಯಿತು. ಅನಂತರ ದೇಶದ ವಾಣಿಜ್ಯ ಮಹಾನಗರಿಯಲ್ಲಿ 24 ಬಾಂಬ್‌ಸೋಟದ ಘಟನೆಗಳಾದವು. ಸಾಲದೆಂಬಂತೆ 26/11ರ ಘಟನೆ. ಇಷ್ಟಾಗಿಯೂ ಇಂಥ ಘಟನೆಗಳು ಮುಂದೆ ಜರುಗುವುದಿಲ್ಲ ಎಂದಿಲ್ಲ. ಯಾವ ಸಂದರ್ಭದಲ್ಲಾದರೂ, ಎಲ್ಲಿಯಾದರೂ ವಿಧ್ವಂಸಕ ಕೃತ್ಯಗಳು ಸಂಭವಿಸಬಹುದು. ಮುಂಬಯಿ ಅಷ್ಟೊಂದು ದುರ್ಬಲ. ಆದರೆ ನಾವು ಮಾತ್ರ ನಿರಾಳ!

ಹದಿನಾರು ವರ್ಷಗಳಾದವು ಮುಂಬಯಿ ಸರಣಿಸೋಟ ಸಂಭವಿಸಿ. ಇನ್ನೂ ಆ ಸೋಟದ ಮುಖ್ಯ ರೂವಾರಿಯಾದ ದಾವೂದ್ ಇಬ್ರಾಹಿಂನನ್ನು ಹಿಡಿಯಲು ಆಗಿಲ್ಲ. ಆ ಪಾತಕಿ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ, ಅವನಿಗೆ ಆಶ್ರಯಕೊಟ್ಟಿರುವವರು ಯಾರು, ಅವನ ಚಲನವಲನಗಳೇನು, ಅವನ ಅಸಲಿಯತ್ತೇನು, ಅವನು ಇಂದಿಗೂ ಭಾರತದ ಮೇಲೆ ನಿಯಂತ್ರಣ ಹೊಂದುವುದು ಹೇಗೆ ಸಾಧ್ಯವಾಗಿದೆ, ಮುಂಬಯಿಯಲ್ಲಿ ಅವನ ಪರವಾಗಿ ಇಂದಿಗೂ ಯಾರು ಕೆಲಸ ಮಾಡುತ್ತಿದ್ದಾರೆ,ಇಂದಿಗೂ ದಾವೂದ್ ಅಂದ್ರೆ ಮುಂಬಯಿ ಬೆಚ್ಚುವುದೇಕೆ ಎಂಬೆಲ್ಲ ಸಂಗತಿಗಳೂ ಗೊತ್ತು. ಇಂಟರ್‌ನೆಟ್‌ನಲ್ಲಿ ದಾವೂದ್ ಇಬ್ರಾಹಿಂ ಬಗ್ಗೆ ಲಕ್ಷಾಂತರ ಪುಟಗಳ ಮಾಹಿತಿಯಿವೆ. ಆತನ ಕಾರ್ಯಚಟುವಟಿಕೆ ವಿವರಿಸುವ ಬ್ಲಾಗ್ ಗಳಿವೆ, ವೆಬ್‌ಸೈಟ್‌ಗಳಿವೆ. ಆದರೂ ಪಾಕ್ ಸರಕಾರಕ್ಕೆ ಆತ ಎಲ್ಲಿದ್ದಾನೆಂಬುದು ಗೊತ್ತಿಲ್ಲ. ಅದನ್ನು ಭಾರತ ಸರಕಾರ ಕೇಳಿಕೊಂಡು ಸುಮ್ಮನಿದೆ. ದಾವೂದ್ ಬದುಕಿರುವವರೆಗೆ ರಾಜಾಶ್ರಯ ಪಡೆದಿರುತ್ತಾನೆ. ಅಲ್ಲಿಯತನಕ ಮುಂಬಯಿ ಮೇಲೆ ನಿಯಂತ್ರಣ ಹೊಂದಿರುತ್ತಾನೆ. ಭಾರತ ರಾಜತಾಂತ್ರಿಕವಾಗಿ ಅದೆಷ್ಟೇ ಕಸರತ್ತು ಮಾಡಲಿ, ಅವನನ್ನು ಜೀವಂತವಾಗಿ ಸೆರೆಹಿಡಿಯುವುದು ಸಾಧ್ಯವೇ ಇಲ್ಲ. ಆತ ಯಾರಿಗೂ ಗೊತ್ತಾಗದಂತೆ ಮುಂಬಯಿಗೆ ಬಂದುಹೋದರೂ ಅಚ್ಚರಿಯಿಲ್ಲ.

ಏಕೆಂದರೆ 26/11ರ ಮುಖ್ಯ ಆರೋಪಿ ಅಜ್ಮಲ್ ಕಸಬ್ ಕರಾಚಿಯಿಂದ 550 ಕಿಮಿ ಸಮುದ್ರದಲ್ಲಿ ತನ್ನ ಸಹಚರರೊಂದಿಗೆ ಮುಂಬಯಿಗೆ ರಾಜಾರೋಷವಾಗಿ ಆಗಮಿಸಿದ. ನೌಕಾಪಡೆಯ ಒಂದೇ ಒಂದು ಹಡಗಾಗಲಿ, ಒಬ್ಬನೇ ಒಬ್ಬ ಸೈನಿಕ ಅಥವಾ ಪೇದೆಯಾಗಲಿ ಅವನನ್ನು ಅಡ್ಡಹಾಕಲಿಲ್ಲ. ಆತ ಕರಾಚಿಯಿಂದ ಒಂದೇ ದಿನದಲ್ಲಿ ಬಂದಿದ್ದಲ್ಲ. ಮೂರು ದಿನ ತೆಗೆದುಕೊಂಡಿದ್ದಾನೆ.ಆದರೆ ಯಾರೂ ಅವನನ್ನು ಗಮನಿಸಲಿಲ್ಲ. ಮುಂಬಯಿಗೆ ಬಂದವನು ಆತ ಎಲ್ಲೋ ಅಡಗಿ ಕುಳಿತುಕೊಳ್ಳಲಿಲ್ಲ. ಜನನಿಬಿಡ ಕಫ್‌ಪರೇಡ್ ಪ್ರದೇಶಕ್ಕೆ ಬಂದಿಳಿದಿದ್ದಾನೆ ಒಂಬತ್ತು ಮಂದಿಯೊಂದಿಗೆ. ಬರುವಾಗ ಖಾಲಿ ಕೈಯಲ್ಲೂ ಬಂದಿಲ್ಲ. ಬೋಟ್ ತುಂಬಾ ಬಂದೂಕು, ಆರ್‌ಡಿಎಕ್ಸ್, ಸೋಟಕ, ಹತ್ಯಾರಗಳನ್ನು ತುಂಬಿಕೊಂಡೇ ಬಂದಿದ್ದಾನೆ. ಯಾರೂ ನೋಡಿಲ್ಲ ಅಂದ್ರೆ ಏನರ್ಥ? ಆದರೆ ಮುಂಬೈಯ ಮೂಲೆಮೂಲೆಯನ್ನೂ ಬಲ್ಲ ದಾವೂದ್ ಬರಲಿಕ್ಕಿಲ್ಲ ಅಂದ್ರೆ ನಂಬುವುದು ಕಷ್ಟ. ಆತ ಈ ಅವಧಿಯಲ್ಲಿ ಬರದಿರಬಹುದು. ಅದು ಬೇರೆ ಮಾತು. ಬರಲೇಬೇಕೆಂದು ನಿರ್ಧರಿಸಿದರೆ ಆತನಿಗೆ ಅದೇನೂ ಕಷ್ಟದ ಕೆಲಸವೇನಲ್ಲ.

2001ರ ಡಿಸೆಂಬರ್ 13ರಂದು ಭಾರತದ ಸಂಸತ್ತಿನ ಮೇಲಿನ ದಾಳಿ ಪ್ರಕರಣವನ್ನು ನೆನಪಿಸಿಕೊಳ್ಳಿ. ಈ ದಾಳಿಯ ನೇತೃತ್ವವಹಿಸಿದ ಅಫ್ಜಲ್‌ಗುರು ತಪ್ಪಿತಸ್ಥನೆಂದು ರುಜುವಾತಾಯಿತು. ಅವನನ್ನು ಗಲ್ಲಿಗೇರಿಸುವಂತೆ 2004ರಲ್ಲಿಯೇ ಸುಪ್ರೀಂಕೋರ್ಟ್ ಆದೇಶಿಸಿತು. ಐದು ವರ್ಷಗಳಾದವು. ಇನ್ನೂ ಆತನನ್ನು ಗಲ್ಲಿಗೇರಿಸಲು ಸಾಧ್ಯವಾಗಿಲ್ಲ. ಅದಕ್ಕೆ ಅಂದಿನ ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್ ನೀಡಿದ ಉತ್ತರವೇನು? ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದರೆ ನೆರೆ ರಾಷ್ಟ್ರವಾದ ಪಾಕಿಸ್ತಾನಕ್ಕೆ ಬೇಸರವಾಗುತ್ತದೆ. ಇದರಿಂದ ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆಗೆ ಭಂಗವುಂಟಾಗುತ್ತದೆ.' ಎಂಥಾ ಬೇಜವಾಬ್ದಾರಿ ಹೇಳಿಕೆ! ಅಫ್ಜಲ್‌ಗುರುವನ್ನು ಗಲ್ಲಿಗೇರಿಸ ಬೇಕೆಂದು ದೇಶಕ್ಕೆ ದೇಶವೇ ಒಕ್ಕೊರಲಿನಿಂದ ಕೂಗಿತು. ಆದರೆ ಸರಕಾರ ಮಾತ್ರ ಕ್ಯಾರೇ' ಎನ್ನಲಿಲ್ಲ. ಹಾಗೆ ನೊಡಿದರೆ, ಪಾರ್ಲಿ ಮೆಂಟ್ ಮೇಲಾದ ದಾಳಿ ಮುಂದೆ ಮುಂಬಯಿ ದಾಳಿ(26/11) ಏನೇನೂ ಅಲ್ಲ. ಅದು ಕೇವಲ ಪಾರ್ಲಿಮೆಂಟ್ ಮೇಲಿನ ದಾಳಿ ಆಗಿರಲಿಲ್ಲ. ನಮ್ಮ ದೇಶದ ಸಾರ್ವಭೌಮತ್ವದ ಮೇಲಿನ ಆಕ್ರಮಣ. ಬೇರೆ ದೇಶಗಳಲ್ಲಾಗಿದ್ದರೆ ತಪ್ಪಿತಸ್ಥರ ಹುಟ್ಟಡಗಿಸಿಬಿಡುತ್ತಿದ್ದರು. ಆತ ಅದೆಷ್ಟು ಪ್ರಭಾವಶಾಲಿಯೇ ಆಗಿರಲಿ, ಯಾವ ಧರ್ಮಕ್ಕೇ ಸೇರಿದವನಾಗಿರಲಿ, ಅವನನ್ನು ಗಲ್ಲಿಗೇರಿಸುತ್ತಿದ್ದರು. ಆದರೆ ನಮ್ಮ ದೇಶದಲ್ಲಿ ದೇಶದ್ರೋಹಿ ಗಳಿಗೂ ಮಾಫ್!

ಅಮೆರಿಕದಲ್ಲಿ ವಿಶ್ವವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳು ಭಯೋತ್ಪಾದಕ ದಾಳಿಗೆ ನೆಲಸಮವಾದ ಬಳಿಕ ಆ ದೇಶ 'ಭಯೋತ್ಪಾದನೆ ವಿರುದಟಛಿ ಸಮರ'ವನ್ನೇ ಸಾರಿತು. ಮೊದಲು ಇಡೀ ದೇಶವನ್ನು ಭಯೋತ್ಪಾದಕರಿಂದ ಸಾಫ್ ಸ್ವಚ್ಛಗೊಳಿಸಿತು. ದೇಶದ ಗಡಿಯನ್ನು ಬಂದೋಬಸ್ತ್ ಮಾಡಿತು.Inland securityಯನ್ನು ಭದ್ರಗೊಳಿಸಿತು. ಒಸಾಮಾ ಬಿನ್ ಲಾಡೆನ್‌ಗಾಗಿ ಇನ್ನಿಲ್ಲದ ಶೋಧ ಕಾರ್ಯ ಮುಂದುವರಿಸಿತು. ಈ ಎಲ್ಲ ವಿಧ್ವಂಸಕ ಕೃತ್ಯಗಳ ಹಿಂದೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಇದ್ದಿರಬಹುದೆಂಬ ವಾಸನೆ ಬಡಿದಿದ್ದೇ ತಡ, ಇರಾಕ್‌ನಂಥ ಶ್ರೀಮಂತ ದೇಶದ ಇಂಚಿಂಚು ಭೂಮಿಯನ್ನೂ Weapon of Mass Destructionಗಾಗಿ ಶೋಸಿತು. ಅನಂತರ ಅಧ್ಯಕ್ಷ ಸದ್ದಾಂನನ್ನು ಗಲ್ಲಿಗೇರಿಸಿ, ಇಡೀ ದೇಶವನ್ನು ತನ್ನ ಕಬ್ಜಕ್ಕೆ ತೆಗೆದುಕೊಂಡಿತು. ತನ್ನ ದೇಶದೆಡೆ ಕಣ್ಣಿಟ್ಟ ಒಂದೇ ಒಂದು ದೇಶವನ್ನೂ ಅಮೆರಿಕ ವಿಚಾರಿಸಿಕೊಳ್ಳದೇ ಬಿಡಲಿಲ್ಲ. ಪರಿಣಾಮವೇನಾಯಿತೆಂದರೆ, 2001ರಿಂದ ಇಲ್ಲಿಯತನಕ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆದಿಲ್ಲ. ಆ ದೇಶದೊಳಗೆ ಉಗ್ರಗಾಮಿಗಳು ನುಸುಳಲು ಸಾಧ್ಯವೇ ಇಲ್ಲ.

ಜಗತ್ತಿನಲ್ಲಿ ಭಯೋತ್ಪಾದಕ ಕೃತ್ಯಗಳಿಂದ ಭಾರತ ಅತ್ಯಂತ ವಿಪರೀತವಾಗಿ ನೋವು, ಹಾನಿ ಅನುಭವಿಸಿದರೂ ನಾವು ಮಾತ್ರ ಪಾಠ ಕಲಿತಿಲ್ಲ. ಮುಂಬಯಿ ದಾಳಿಯ ನಂತರ ದೇಶ ವ್ಯಾಪಿ ಪ್ರತಿಭಟನೆ,ಪ್ರತಿರೋಧ ಕೇಳಿಬಂತು. ಕೇಂದ್ರ ಗೃಹಮಂತ್ರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ, ಗೃಹಮಂತ್ರಿ ರಾಜೀನಾಮೆ ಕೊಡಬೇಕಾಯಿತು. ದೇಶದ ಗಡಿಭದ್ರತೆ ಬಗ್ಗೆ ಕಳವಳ ವ್ಯಕ್ತವಾ ಯಿತು. ದೇಶದೆಲ್ಲೆಡೆ ಈ ಘಟನೆ ತಲ್ಲಣವನ್ನುಂಟುಮಾಡಿದ್ದು ಸುಳ್ಳಲ್ಲ. "Enough is enough' ಎಂಬುದು ಘೋಷವಾಕ್ಯವಾಯಿತು. ಎಲ್ಲೆಡೆ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳಲಾ ಯಿತು.

ಫುಲ್‌ಸ್ಟಾಪ್!ಮುಂದೆ ಏನೂ ಆಗಲಿಲ್ಲ. ಸರಕಾರ, ಸೆಕ್ಯುರಿಟಿ ಏಜೆನ್ಸಿಗಳು ತಿಪ್ಪೆಸಾರಿಸಿದವು. ಹಾಗೇ ಸಾರ್ವಜನಿಕರೂ ಸಹ. ಮುಂಬಯಿ ದಾಳಿ ನಡೆದ 48 ಗಂಟೆಗಳೊಳಗೆ ಸಾವಿರಾರು ಬ್ಲಾಗ್, ವೆಬ್‌ಸೈಟ್‌ಗಳು ಹುಟ್ಟಿಕೊಂಡವು. ಇವುಗಳಲ್ಲಿ ಪ್ರಮುಖವಾಗಿದ್ದು Bombay United. ಈಗ ಆ ವೆಬ್‌ಸೈಟ್ ತೆರೆದರೆ Site is under construction ಎಂಬ ಸಾಲು ಕಾಣಿಸುತ್ತದೆ. ಇದು ಮುಂಬಯಿ ದಾಳಿಗೆ ನಮ್ಮ ಈಗಿನ ಪ್ರತಿಕ್ರಿಯೆ ಹಾಗೂ ಮನಸ್ಥಿತಿಯೇನು ಎಂಬುದನ್ನು ತೋರಿಸುತ್ತದೆ. ಯಾಕೆಂದರೆ ನಮ್ಮ ದೃಷ್ಟಿಯಲ್ಲಿ ಇದು ಈಗ ಚರ್ಚೆಯ ವಸ್ತು ಸಹ ಅಲ್ಲ. ಆ ಘಟನೆ ನಮ್ಮಲ್ಲಿ ಒಂದು ಹಿಡಿ ಸಿಟ್ಟನ್ನಾಗಲಿ, ಆಕ್ರೋಶವನ್ನಾಗಲಿ ಹುಟ್ಟಿಸುವು ದಿಲ್ಲ. ಯಾವ ಮುಂಬಯಿ ಉಗ್ರರ ದಾಳಿಗೆ ತುತ್ತಾಗಿತ್ತೋ, ಆ ಕ್ಷೇತ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ. 43.3 ರಷ್ಟು ಮತದಾನವಾಗಿತ್ತು. 2004ರ ಚುನಾವಣೆಗಿಂತ ಶೇ.1ರಷ್ಟು ಕಡಿಮೆ ಮತದಾನ! ಬೇರೆಯವರನ್ನು ಬಿಡಿ, ಆ ಕ್ಷೇತ್ರದ ಜನತೆಯಲ್ಲೂ ಉಗ್ರರ ದಾಳಿ ಬಿಸಿಮುಟ್ಟಿಸಿರಲಿಲ್ಲ ಅಂದ್ರೆ ಏನರ್ಥ? ಜನರೇ ಈ ರೀತಿ ವರ್ತಿಸಿದರೆ ಸರಕಾರ ಹೇಗಿದ್ದಿರಬಹುದು? ಉಗ್ರರ ದಾಳಿ ನಡೆದ ಒಂದು ವಾರದಲ್ಲಿ ರಾಜ್ಯ-ಕೇಂದ್ರ ಸರಕಾರ ಹೇಳಿದ್ದೇನು? ಮಾಡಿದ್ದೇನು? ಬಂದವರೆಲ್ಲ ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ, ಕಡಿದು ಕಟ್ಟೆಕಟ್ತೇವೆ ಎಂದು ಬೊಬ್ಬಿರಿದರು. ಟಿವಿ ಸ್ಟುಡಿಯೋಗಳಲ್ಲಿ ಗಂಟಲು ಹರಿದುಕೊಂಡರು. ಆದರೆ ಆಗಿದ್ದೇನು?

ಏನೂ ಇಲ್ಲ. ಉಗ್ರರ ದಾಳಿ ನಡೆಯುವಾಗ ಆದ ಲೋಪ ದೋಷಗಳ ಕುರಿತ ತನಿಖೆಗೆ ಮಹಾರಾಷ್ಟ್ರ ಸರಕಾರ ರಾಮಪ್ರಧಾನ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಅದು ವರದಿ ಕೊಟ್ಟರೂ ಸರಕಾರ ಇಲ್ಲಿತನಕ ಅದನ್ನು ಬಹಿರಂಗಪಡಿಸಿಲ್ಲ ಏಕೆ? ನ್ಯಾಷನಲ್ ಸೆಕ್ಯುರಿಟಿ ಗಾರ್ಡ್, ಫೋರ್ಸ್ ಒನ್, ಆಂಟಿ-ಟೆರರಿಸ್ಟ್ ಸ್ಕ್ವಾಡ್, ಕೋಸ್ಟ್‌ಗಾರ್ಡ್ ಹಾಗೂ ನೇವಿ ನಡುವೆ ಸಮನ್ವಯ ಸಾಸುವ ಸಂಸ್ಥೆ ರಚಿಸುವುದಾಗಿ ಹೇಳಿದರೂ ಇನ್ನೂ ಸಾಧ್ಯವಾಗಿಲ್ಲ ಏಕೆ? ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಹಾಗೂ ಫೋರ್ಸ್ ಒನ್‌ಗೆ ಕಚೇರಿ ತೆರೆಯಲು ಒಂದು ವರ್ಷ ಹಿಡಿದಿದ್ದೇಕೆ? ಉಗ್ರರ ದಾಳಿಯಲ್ಲಿ ಬದುಕುಳಿದ 403ಮಂದಿ ಪೈಕಿ ಕೇವಲ 118 ಮಂದಿಗೆ ಪರಿಹಾರ ನೀಡಲಾಗಿದೆ.ಉಳಿದವರಿಗೇಕೆ ಕೊಟ್ಟಿಲ್ಲ? ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಮಾದರಿಯಲ್ಲಿ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಸ್ಥಾಪಿಸಲು ಕಳೆದ ಡಿಸೆಂಬರ್‌ನಲ್ಲಿಯೇ ಸಂಸತ್ತು ಒಪ್ಪಿಗೆ ನೀಡಿದ್ದರೂ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಏಕೆ? ಆಂಟಿ-ಟೆರರಿಸ್ಟ್ ಸ್ಕ್ವಾಡ್‌ಗೆ ಮುಖ್ಯಸ್ಥರನ್ನು ನೇಮಕ ಮಾಡಿ ಎಂದು ಹೈಕೋರ್ಟ್ ಹೇಳುವತನಕ ಸುಮ್ಮನೆ ಕುಳಿತಿದ್ದೇಕೆ? ಮುಂಬಯಿ ಇನ್ನೊಮ್ಮೆ ಇಂಥದೇ ದಾಳಿಗೆ ತುತ್ತಾಗುವುದಿಲ್ಲ ಎಂಬುದಕ್ಕೆ ಗ್ಯಾರಂಟಿಯೇನು?

ಅಂಥ ದಾಳಿ ನಡೆಯದಂತೆ ಏನೇನು ಕ್ರಮ ಕೈಗೊಂಡಿದ್ದೇವೆ? ಇದು ಕೇವಲ ಮುಂಬಯಿ ಒಂದೇ ಅಲ್ಲ ಬೆಂಗಳೂರೂ ಸೇರಿ, ಯಾವುದೇ
ಊರಿನಲ್ಲೂ ಹೀಗಾಗದು ಎಂದು ಹೇಳುವಂತಿಲ್ಲ. ಪ್ರತಿ ಘಟನೆಯೂ ಮುಂದಿನದಕ್ಕೆ ಬೀಜಬಿತ್ತಿದರೂ ನಾವು ಇನ್ನೂ ಪಾಠ ಕಲಿತಿಲ್ಲ. (ಇಪ್ಪತ್ತೆರಡು ಲಕ್ಷ ಚದರ ಮೈಲಿ ವಿಸ್ತೀರ್ಣದ ಮುಂಬಯಿಯಂಥ ನಗರವನ್ನು ಗಸ್ತು ತಿರುಗಲು ಇರುವುದು 50 ಹಡಗುಗಳು ಹಾಗೂ 40 ಸಣ್ಣ ಬೋಟ್‌ಗಳು. ಆ ಪೈಕಿ ಅರ್ಧದಷ್ಟು ಕೆಟ್ಟು ನಿಂತಿರುತ್ತವೆ! ಕೋಸ್ಟ್‌ಗಾರ್ಡ್ ಮೂರು ಸಾವಿರ ಮಂದಿಯನ್ನು ನೇಮಿಸಿಕೊಂಡಿದೆ. ಆದರೆ ಅವರಿಗೆ ಬೋಟ್‌ಗಳೇ ಇಲ್ಲ. ಪ್ರಯೋಜನವೇನು ಬಂತು?)

ಮುಂಬಯಿ ದಾಳಿ ನಡೆದು ಒಂದು ವರ್ಷದ ಬಳಿಕ ನಾವು ಹೆಮ್ಮೆಪಡಬಹುದಾದ ಸಂಗತಿಯೇನಾದರೂ ಇದ್ದರೆ ಅದು ನಮ್ಮ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಅಷ್ಟೆ. ದಾಳಿಯ ರೂವಾರಿ ಡೆವಿಡ್ ಕೋಲ್‌ಮನ್ ಹೆಡ್ಲಿ 2006ರಿಂದ 2009ರವರೆಗೆ ಒಂಬತ್ತು ಸಲ ನಮ್ಮ ದೇಶಕ್ಕೆ ಬಂದಿದ್ದು ನಮಗೆ ಗೊತ್ತಾಗಲಿಲ್ಲ.2008ರ ಜುಲೈವರೆಗೆ ಮುಂಬಯಿಯಲ್ಲಿ ವಿಸಾ ಏಜೆನ್ಸಿ ಹೊಂದಿದ್ದು ಗೊತ್ತಾಗಲಿಲ್ಲ. ದೇಶದ ಏಳು ನಗರಗಳಿಗೆ ಭೇಟಿ ನೀಡಿದ್ದೂ ಗೊತ್ತಾಗಲಿಲ್ಲ. ಆತ ತನ್ನ ಹೆಸರು ದಾವುದ್ ಗಿಲಾನಿ ಎಂದಿದ್ದದ್ದನ್ನುಡೆವಿಡ್ ಹೆಡ್ಲಿ ಎಂದು ಬದಲಿಸಿಕೊಂಡಿದ್ದು ಗೊತ್ತಾಗಲಿಲ್ಲ.ಇವೆಲ್ಲವನ್ನೂ ಅಮೆರಿಕದ ಎಫ್‌ಬಿಐ ಹೇಳಬೇಕಾಯಿತು.ನಾವು ಇನ್ನೂ ಯಾವ ಜಮಾನದಲ್ಲಿದ್ದೇವೆ ಎಂಬುದೇ ಅರ್ಥವಾಗುವುದಿಲ್ಲ.

ಒಂದು ಬಾಟಲಿ ಸ್ಕಾಚ್‌ಗೆ, ಒಂದು ಸಾಮಾನ್ಯ ಬೆಲೆವೆಣ್ಣಿಗೆ ದೇಶದ ಸುರಕ್ಷತೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಶತ್ರುದೇಶಗಳಿಗೆ ನೀಡುವ ನಿಷ್ಠಾವಂತ' ಅಧಿಕಾರಿಗಳು ಇದ್ದಾರೆ. ಇಂಥವರನ್ನು ಪೊರೆಯುವ ರಾಜಕಾರಣಿಗಳಿದ್ದಾರೆ.ಅವರಿಗೆ ಶ್ರೀರಕ್ಷೆ ನೀಡುವ ಸರಕಾರವಿದೆ. ಹೀಗಿರುವಾಗ ದೇಶರಕ್ಷಣೆ ಬಗ್ಗೆ ಮಾತಾಡುವುದೇ ಒಂದು ಕ್ರೂರ ಅಣಕ" ಎಂದು ಸಿಬಿಐನ ಮಾಜಿ ನಿರ್ದೇಶಕ ಜೋಗಿಂದರ್ ಸಿಂಗ್ ಒಮ್ಮೆ ಹೇಳಿದ್ದರು. ಬಿಡಿ, ಮತ್ತೊಂದು ಭಯೋತ್ಪಾದಕ ದಾಳಿ ಆಗುವ ತನಕ ನಾವೆಲ್ಲ ಸುರಕ್ಷಿತ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more