ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮೋಹನ್ ಸಿಂಗ್ ಬಲಿಷ್ಠರಾ? ದುರ್ಬಲರಾ?

By Staff
|
Google Oneindia Kannada News

Manmohan Singh, Prime Minister of India
(ಹಿಂದಿನ ಪುಟದಿಂದ)

ರಾಜ್ಯಸಭೆ ಸದಸ್ಯರಾಗುವ ಮೂಲಕ ಪ್ರಧಾನಿಯಾದ ಇಂದಿರಾ ಗಾಂಧಿ, ದೇವೇಗೌಡ, ಗುಜ್ರಾಲ್ ಎದುರಿಸಿದ ಸನ್ನಿವೇಶಗಳೇ ಬೇರೆಯಾಗಿದ್ದವು. ಆಗಿನ ಸಂದರ್ಭವೇ ಹಾಗಿತ್ತು. ಹಾಗೆಯೇ ರಾಜ್ಯಸಭೆ ಸದಸ್ಯರಾಗಿದ್ದ ಡಾ. ಸಿಂಗ್ ಮೊದಲ ಬಾರಿಗೆ ಪ್ರಧಾನಿಯಾಗುವಾಗಲೂ ಇದ್ದ ಸನ್ನಿವೇಶವೇ ಬೇರೆಯಾಗಿತ್ತು. ಆಗ ಯಾರೂ ಸಹ, ಮೊದಲು ಲೋಕಸಭೆ ಚುನಾವಣೆ ಸೆಣಸಿ ಬನ್ನಿ ಎಂದು ಹೇಳುವಂತಿರಲಿಲ್ಲ. ಮೊದಲನೆಯದಾಗಿ, ಆಗ ಲೋಕಸಭೆ ಚುನಾವಣೆಗಳೆಲ್ಲ ಮುಗಿದು ಫಲಿತಾಂಶ ಹೊರಬಿದ್ದಿತ್ತು. ಸಂವಿಧಾನದ ವಿವಿಧಾನ ಪೂರೈಸಲೆಂಬಂತೆ ಅವರು ರಾಜ್ಯಸಭೆ ಸದಸ್ಯರೂ ಆಗಿದ್ದರು. ಆಗ ಈ ಪ್ರಶ್ನೆ ಗಾಢವಾಗಿ ಎದ್ದಿರಲಿಲ್ಲ. ಆದರೆ ಈಗ ಹಾಗಲ್ಲ. ದೇಶಕ್ಕೆ ದೇಶವೇ ಕುರುಕ್ಷೇತ್ರವಾಗಿದೆ. ಚುನಾವಣೆ ನಡೆಯದ ತಾಣ ಸಿಗಲಿಕ್ಕಿಲ್ಲ ಎಂಬಂತೆ ದೇಶ ಮತಸಮರಕ್ಕೆ ಸಿದ್ಧವಾಗಿದೆ. ರಾಜಕೀಯ ಪಕ್ಷಗಳ ನಾಯಕರಿರಲಿ, ಕಾರ್ಯಕರ್ತರೆಲ್ಲ ಮನೆಮಠ ಬಿಟ್ಟು ಆಗಲೇ ಹದಿನೈದು ದಿನಗಳಾದವು. ಚುನಾವಣೆ ಮುಗಿದ ಬಳಿಕವೇ ಅವರು ಹೆಂಡತಿ-ಮಕ್ಕಳ ಮುಖ ನೋಡೋದು. ಆ ಪರಿ ಅವರೆಲ್ಲ ಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಆರೋಗ್ಯ ಸರಿಯಿಲ್ಲದಿದ್ದರೂ, ವಯಸ್ಸು ತಮ್ಮ ಪರವಾಗಿಲ್ಲದಿದ್ದರೂ ಏನಂತೆ, ತಾನೇ ಹುಟ್ಟುಹಾಕಿದ ಪಕ್ಷ ತನಗೆ ಟಿಕೆಟ್ ನೀಡದಿದ್ದರೆ ಏನಂತೆ, ತಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಆರ್ಭಟಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜಾರ್ಜ್ ಫರ್ನಾಂಡಿಸ್ ಅವರ Fighting spirit ಎಲ್ಲಿ? ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ರಾಜ್ಯಸಭೆ ಸದಸ್ಯತ್ವ ಇದೆಯಲ್ಲ ಎನ್ನುತ್ತಿರುವ ಡಾ. ಸಿಂಗ್ ಎಲ್ಲಿ? ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ' ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾರ್ವಜನಿಕವಾಗಿ ವಾಗ್ದಾನ ಮಾಡಿದರೂ ಅದು ನನಗೆ ಬೇಡ, ಚುನಾವಣೆಯಲ್ಲೇ ಸೆಣಸಿ ತೀರುವೆ' ಎಂದು ಏಕೆ ಜಾರ್ಜ್ ಹೇಳಿದರು?

ಹಾಗೆಂದು ಡಾ. ಸಿಂಗ್ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪೇನರ್ರಾ? ಅದೂ ಇಲ್ಲ. ಕೆಲವೊಮ್ಮೆ ಪಕ್ಷದ ಸ್ಟಾರ್ ಕ್ಯಾಂಪೇನರ್‌ಗಳು ತಮಗೆ ದೇಶವೆಲ್ಲ ಸುತ್ತಬೇಕಾದ್ದರಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೆ ಒಪ್ಪಬಹುದು. ಅಂಥವರು ಸ್ಟಾರ್ ಕ್ಯಾಂಪೇನರ್ ಹೇಗಾಗಿರುತ್ತಾರೆಂದರೆ, ತಮ್ಮ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೊಗದೇ ಆರಿಸಿ ಬರುವ ಸಾಮರ್ಥ್ಯ ಹೊಂದಿರುತ್ತಾರೆ. ಡಾ. ಸಿಂಗ್ ಅಂಥ ವರ್ಗಕ್ಕೆ ಸೇರುವ ನಾಯಕರೂ ಅಲ್ಲ. ಅವರು ಬರುತ್ತಾರೆಂದರೆ ನೂರು ಮಂದಿಯೂ ಸೇರುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಡಾ. ಸಿಂಗ್ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಅವರು ಭಾಷಣ ಮಾಡಿದ್ದೆಲ್ಲಿ ಗೊತ್ತಾ? ಚೌಡಯ್ಯ ಸ್ಮಾರಕ ಸಭಾಭವನದಲ್ಲಿ. ಸಾವಿರ ಮಂದಿ ಸೇರಿಸುವ ಹೊತ್ತಿಗೆ ಕಾಂಗ್ರೆಸ್ ನಾಯಕರು ಬಸವಳಿದು ಹೋಗಿದ್ದರು.

ಮೊನ್ನೆ ಡಾ. ಸಿಂಗ್ ಕೇರಳದಲ್ಲಿ ಮೊದಲ ಬಾರಿಗೆ ಚುನಾವಣೆ ರ್‍ಯಾಲಿಯಲ್ಲಿ ಕಾಣಿಸಿಕೊಂಡಿದ್ದನ್ನು ನೀವು ಗಮನಿಸಿರಬಹುದು. ಬಹಿರಂಗ ಸಭೆಯಲ್ಲಿ ಯಾರೋ ಬರೆದುಕೊಟ್ಟ ಭಾಷಣವನ್ನು ನ್ಯೂಸ್‌ರೀಡರ್‌ಗಳ ಹಾಗೆ ಓದುತ್ತಿದ್ದರು! ಚುನಾವಣೆ ಕಾಲದಲ್ಲಿ ಸಣ್ಣಪುಟ್ಟ ಪುಢಾರಿಗಳೂ ಓಡಾಡುತ್ತಿರುತ್ತಾರೆ. ಆದರೆ ನಮ್ಮ ಪ್ರಧಾನಿಗೆ ಕೆಲಸವೇ ಇಲ್ಲ. ತಮಗಾಗಿಯಾದರೂ ಕೆಲಸ ಮಾಡಿ ಕೊಳ್ಳೋಣ ಅಂದ್ರೆ ಚುನಾವಣೆಗೇ ನಿಂತಿಲ್ಲ! ಇವನ್ನೆಲ್ಲ ಗಮನಿಸಿದರೆ, ಡಾ. ಮನಮೋಹನ್ ಸಿಂಗ್ ಕೇವಲ ದುರ್ಬಲ ಪ್ರಧಾನಿಯಷ್ಟೇ ಅಲ್ಲ, ಪರಮ ಹೇಡಿಯೂ ಹೌದು ಎಂದು ಎಂಥವನಿಗಾದರೂ ಅನಿಸದಿರದು. ಈ ಬಾರಿ ಅವರು ಚುನಾವಣೆಗೆ ಸ್ಪರ್ಧಿಸದಿರಲು ಕಾರಣಗಳೇ ಇರಲಿಲ್ಲ. ಸ್ವತಃ ಸೋನಿಯಾ ಅವರೇ ಡಾ. ಸಿಂಗ್ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ' ಎಂದು ಘೋಷಿಸಿದ್ದರು. ಪ್ರಧಾನಿ ಅಭ್ಯರ್ಥಿಯನ್ನು ಸೋಲಿಸುವುದುಂಟಾ? ಆದರೂ ಡಾ. ಸಿಂಗ್ ಧೈರ್ಯ ಮಾಡಲಿಲ್ಲ. ಪ್ರಧಾನಿಯವರೇಕೆ ರ್ಸ್ಪಸುತ್ತಿಲ್ಲ ಎಂದು ಬರೀ ಪ್ರತಿಪಕ್ಷಗಳ ನಾಯಕರು ಕೇಳುತ್ತಿಲ್ಲ. ಸ್ವತಃ ಕಾಂಗ್ರೆಸ್ ನಾಯಕರೇ ಕೇಳುತ್ತಿದ್ದಾರೆ. ಕೇರಳದ ಸಂಸತ್ಸದಸ್ಯ ಡಾ. ಸೆಬಾಸ್ಟಿಯನ್ ಪಾಲ್ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದ ನಂತರವೂ ಡಾ. ಸಿಂಗ್ ಅವರೇಕೆ ಲೋಕಸಭೆ ಚುನಾವಣೆಗೆ ರ್ಸ್ಪಸುತ್ತಿಲ್ಲ? ಪಕ್ಷದ ಅಧ್ಯಕ್ಷೆಯಾಗಿ ನೀವು ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಅವರನ್ನು ಚುನಾವಣೆಗೆ ನಿಲ್ಲಿಸದಿದ್ದರೆ ಅದಕ್ಕೆ ಕಾರಣವನ್ನು ಜನತೆಗೆ ತಿಳಿಸಬೇಕು" ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ''Apart from correcting a serious constitutional impropriety, the Prime Minister will get an opportunity to secure popular endorsement for his governance'' ಎಂದು ಹೇಳಿದ್ದಾರೆ. ಅದಕ್ಕೆ ಸೆಬಾಸ್ಟಿಯನ್ ಪಾಲ್ ಒಂದು ನಿದರ್ಶನ ಕೊಡುತ್ತಾರೆ. ಭಾರತ-ಅಮೆರಿಕ ಅಣುಬಂಧಕ್ಕೆ ಸಂಬಂಸಿದಂತೆ ಲೋಕಸಭೆಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಲು ವಿಫಲರಾದ ಡಾ. ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದಾಗ, ಮೇಲ್ಮನೆ (ರಾಜ್ಯಸಭೆ) ಸದಸ್ಯರ ಮೇಲೆ ಕ್ರಮ ಜರುಗಿಸುವ ಅಕಾರ ಈ ಸದನಕ್ಕಿಲ್ಲ ಎಂದು ಲೋಕಸಭೆ ಸ್ಪೀಕರ್ ಸೋಮನಾಥ ಚಟರ್ಜಿ ಹೇಳಿಬಿಟ್ಟರು. The inability of the Lok Sabha to challenge the Prime Minister on a point of privilege is a constitutionally incomprehensible irony ಅಂತಾರೆ ಪಾಲ್.

ಜೀವಮಾನದಲ್ಲಿ ಡಾ. ಸಿಂಗ್ ಅವರು ಲೋಕಸಭೆ ಸದಸ್ಯರಾದವರೇ ಅಲ್ಲ. ಹಾಗಾಗಿದ್ದರೆ ಅವರಿಗೆ ಜನತಂತ್ರದ ಮಹತ್ವ ಇನ್ನೂ ಚೆನ್ನಾಗಿ ಗೊತ್ತಾಗುತ್ತಿತ್ತು. ಜನರು ನೀಡುವ ಅಧಿಕಾರದ ಪ್ರಾಮುಖ್ಯ ತಿಳಿಯುತ್ತಿತ್ತು. ಅವರೆಂದೂ ಜನರನ್ನು ನೇರ ಎದುರಿಸಿದವರೇ ಅಲ್ಲ. ಹೀಗಾಗಿ ಅವರು indirect ಆಗಿ ಜನರಿಂದ ಗೌರವ ಪಡೆಯುವಂತಾಗಿದೆ. ದಿಲ್ಲಿಯ ಪವರ್ ಕಾರಿಡಾರ್‌ನಲ್ಲಿ ಒಂದು ತಮಾಷೆಯ ಮಾತಿದೆ. ಅದೇನೆಂದರೆ ಡಾ. ಸಿಂಗ್ presides, ಸೋನಿಯಾ decides. ಎಂಪಿಯಾಗುವವನು ಲೋಕಸಭೆ ಸದಸ್ಯನೇ ಆಗಿರಬೇಕೆಂಬುದು ನಿಯಮವಲ್ಲದಿದ್ದರೂ ಆಶಯ ಹಾಗೂ ಅಪೇಕ್ಷೆ. ಯಾಕೆಂದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪ್ರಜಾಪ್ರಭುತ್ವದ ಕಠಿಣತಮ ಪರೀಕ್ಷೆಯಲ್ಲಿ ಪಾಸಾಗಿರುತ್ತಾನೆ. ಒಂದು ವೇಳೆ ಚುನಾವಣೆಯಲ್ಲಿ ಸೋತು ಹೋದರೆ? ಎಂದು ಕೇಳಬಹುದು. ಎಂಪಿಯಾಗದವನು ಪಿಎಂ ಹೇಗಾದಾನು? ಚುನಾವಣೆಯಲ್ಲೇ ಸೋತವನು ಅಲ್ಲಿಯೇ ಅನರ್ಹ, ಅಯೋಗ್ಯ ಎಂಬುದು ಸಾಬೀತಾಗುತ್ತದೆ. ರಾಜ್ಯಸಭೆಯ ಸದಸ್ಯ ಕೆಲವೇ ಕೆಲವು ಶಾಸಕರ ಬೆಂಬಲ ಹಾಗೂ ಪಕ್ಷದ ಹೈಕಮಾಂಡ್ ಆಶೀರ್ವಾದದಿಂದ ಆರಿಸಿ ಬರುತ್ತಾನೆ. ಆದರೆ ಲೋಕಸಭೆಯ ಸದಸ್ಯ ಹಾಗಲ್ಲ, ಕನಿಷ್ಠ ನಾಲ್ಕು ಲಕ್ಷ ಮತದಾರರ ಆಶೀರ್ವಾದ ಪಡೆದು ಗೆಲ್ಲಬೇಕಾಗುತ್ತದೆ.

ನಮ್ಮ ಸಂವಿಧಾನಕ್ಕೆ ಬ್ರಿಟಿಷ್ ವ್ಯವಸ್ಥೆ ಹಾಗೂ ಅಲ್ಲಿನ ಆಚರಣೆಯೇ ಸೂರ್ತಿ ಹಾಗೂ ಪ್ರೇರಣೆ. ಸಾಮಾನ್ಯವಾಗಿ ನಮ್ಮ ಪ್ರಜಾತಂತ್ರದ ಬಗ್ಗೆ ಪ್ರಸ್ತಾಪಿಸುವಾಗ ಬ್ರಿಟಿಷ್ ಪದ್ಧತಿಯ ಬಗ್ಗೆ ಹೇಳುವುದು ಸಂಪ್ರದಾಯ. ಆ ದೇಶದಲ್ಲಿಯೂ ಮೇಲ್ಮನೆಯ ಸದಸ್ಯರು (House of Lords) ಪ್ರಧಾನಿಯಾಗುವ ಸಂಪ್ರದಾಯ ಇಲ್ಲವೇ ಇಲ್ಲ ಎನ್ನುವಷ್ಟರಮಟ್ಟಿಗೆ ನಿಯಮ ಆಚರಣೆಯಲ್ಲಿದೆ. 1923ರಲ್ಲಿ ಆರೋಗ್ಯದ ಕಾರಣ ನೀಡಿ ಬೋನರ್ ಲಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಹುದ್ದೆಗೆ ಇಬ್ಬರು ಆಕಾಂಕ್ಷಿಗಳಿದ್ದರು. ಮೊದಲನೆಯವರು ಹೌಸ್ ಆಫ್ ಲಾರ್ಡ್ಸ್ (ಮೇಲ್ಮನೆ) ಸದಸ್ಯ ಲಾರ್ಡ್ ಕರ್ಜನ್ ಹಾಗೂ ಎರಡನೆಯವರು, ಹೌಸ್ ಆಫ್ ಕಾಮನ್ಸ್ (ಕೆಳಮನೆ ಅಂದರೆ ಲೋಕಸಭೆ) ಸ್ಟಾನ್ಲೆ ಬಾಲ್ಢ್‌ವಿನ್. ಲಾರ್ಡ್ ಕರ್ಜನ್ ವೈಸ್ ರಾಯ್ ಹಾಗೂ ರಾಯಭಾರಿಯಾಗಿ ಕೆಲಸ ಮಾಡಿದ ಅನುಭವಿ. ಅವನ ಮುಂದೆ ಬಾಲ್ಡ್‌ವಿನ್ ಏನೇನೂ ಅಲ್ಲ. ಆದರೂ ಐದನೆ ಕಿಂಗ್ ಜಾರ್ಜ್, ಲಾರ್ಡ್ ಕರ್ಜನ್‌ನ ಉಮೇದುವಾರಿಕೆಯನ್ನು ಪುರಸ್ಕರಿಸಲಿಲ್ಲ. ಜನರಿಂದ ಚುನಾಯಿತರಾಗದವರು ಪ್ರಧಾನಿ ಯಾಗುವುದು ಉತ್ತಮ ಲಕ್ಷಣವಲ್ಲ ಎಂದು ಅವರು ಬಾಲ್ಡ್‌ವಿನ್ನನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದರು.

ಆ ಸಂಪ್ರದಾಯ ಚಾಚೂತಪ್ಪದೇ ಪಾಲಿಸಿಕೊಂಡು ಬರಲಾಗುತ್ತಿದೆ. 1923ರಲ್ಲಿ ತೆಗೆದುಕೊಂಡ ರಾಜಮನೆತನ(Royalty)ದ ನಿರ್ಧಾರದ ಪರಿಣಾಮ ಅದೆಷ್ಟು far reaching ಆಗಿದೆಯೆಂದರೆ ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯರಾಗಿರುವ ಎಂಥ ಪ್ರಭಾವಿ ನಾಯಕನಿಗೂ ಪ್ರಧಾನಿಯಾಗುವುದು ಸಾಧ್ಯವಾಗಿಲ್ಲ. 1963ರಲ್ಲಿ ಮಾತ್ರ ಈ ಸಂಪ್ರದಾಯ ಮುರಿದು ಬಿದ್ದಿದ್ದು. ಪ್ರಧಾನಿ ಹೆರಾಲ್ಡ್ ಮ್ಯಾಕ್‌ಮಿಲನ್ ಹಠಾತ್ ರಾಜೀನಾಮೆ ನೀಡಿದಾಗ ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯ ಲಾರ್ಡ್ ಡಗ್ಲಾಸ್ ಹೋಮ್ ಪ್ರಧಾನಿಯಾದರು. ಆದರೆ ಪ್ರಜಾತಂತ್ರದ ಸತ್ಸಂಪ್ರದಾಯವನ್ನು ಎತ್ತಿಹಿಡಿಯಲು ಹೋಮ್ ಹೌಸ್ ಆಫ್ ಲಾರ್ಡ್ಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆ ಸೆಣಸಿ ಹೌಸ್ ಆಫ್ ಕಾಮನ್ಸ್ ಸದಸ್ಯರಾದರು! 1923ರಿಂದ ಇಲ್ಲಿಯತನಕ ಹೌಸ್ ಆಫ್ ಲಾರ್ಡ್ಸ್ ಸದಸ್ಯನಿಗೆ ಪ್ರಧಾನಿಯಾಗುವುದು ಸಾಧ್ಯವಾಗಿಲ್ಲ. ಮೇಲ್ಮನೆಯ ಸದಸ್ಯ ಪ್ರಧಾನಿ ಪಟ್ಟದ ಮೇಲೆ ಕಣ್ಣುಹಾಕುವುದೇ ಅಪರಾಧ. ಅಷ್ಟರ ಮೇಲೂ ಪ್ರಧಾನಿಯಾಗಬಯಸಿದರೆ ಮೊದಲು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕು. ಇದು ಅಲ್ಲಿನ ಸಂಪ್ರದಾಯ. ಬ್ರಿಟಿಷ್ ಪದ್ಧತಿಯನ್ನೇ ಅನುಸರಿಸಿಕೊಂಡು ಬರುತ್ತಿರುವ ನಾವು ಮಾಡುತ್ತಿರುವುದೇನು? ಇದು ಸೋನಿಯಾಗಾಗಲಿ, ಸಿಂಗ್‌ಗಾಗಲಿ ಗೊತ್ತಿಲ್ಲವಾ?

ನಿಮಗೆ ಇನ್ನೊಂದು ಸಂಗತಿ ಗೊತ್ತಾ? ಈ ಸಲದ ಚುನಾವಣೆಯಲ್ಲಿ ಎಲ್ಲರೂ ಮತದಾನದಲ್ಲಿ ಭಾಗವಹಿಸಿಬೇಕೆಂದು ಸರಕಾರ ಜಾಹೀರಾತು ಕೊಟ್ಟು ಪ್ರಚಾರ ಮಾಡುತ್ತಿದೆ. ಅನೇಕ ಸ್ವಯಂಸೇವಾ ಸಂಸ್ಥೆಗಳಂತೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿವೆ. ಅಚ್ಚರಿಯೇನೆಂದರೆ ಪ್ರಧಾನಿ ಡಾ. ಸಿಂಗ್ ಅವರೇ ಈ ಸಲದ ಚುನಾವಣೆಯಲ್ಲಿ ಮತದಾನ ಮಾಡುತ್ತಿಲ್ಲ. ಅವರು ಹಾಗೂ ಅವರ ಪತ್ನಿಯ ವೋಟಿರುವುದು ಅಸ್ಸಾಮಿನಲ್ಲಿ. ಮೊನ್ನೆ ಏಪ್ರಿಲ್ ೬ರಂದು ಗುವಾಹಟಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸೋಟದಿಂದ ಭದ್ರತೆಯ ಕಾರಣ ನೀಡಿ ಅವರು ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 2006ರಲ್ಲಿ ನಡೆದ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲೂ ಅವರು ಮತ ಹಾಕಿರಲಿಲ್ಲ. ಆ ಮೂಲಕ ಒಬ್ಬ ನಾಗರಿಕನ ಪ್ರಾಥಮಿಕ ಕರ್ತವ್ಯವನ್ನೂ ಅವರು ನಿರ್ವಹಿಸುತ್ತಿಲ್ಲ. ಒಬ್ಬ ಪ್ರಧಾನಿಯೇ ಭದ್ರತೆಯ ನೆಪ ಹೇಳಿ ಮತದಾನದ ದಿನ ಮನೆಯಲ್ಲಿ ಕುಳಿತರೆ ಇನ್ನು ಸಾಮಾನ್ಯನ ಪಾಡೇನು? ತನ್ನ ಪ್ರಾಣಕ್ಕೇ ಅಂಜುತ್ತಿರುವ ವ್ಯಕ್ತಿ ನೂರುಕೋಟಿ ಭಾರತೀಯರ ಪ್ರಾಣವನ್ನು ಹೇಗೆ ರಕ್ಷಣೆ ಮಾಡಿಯಾರು? ಮತ್ತೆ ಭಾರತದ ಪ್ರಧಾನಿ ಎಂದು ಕಾಂಗ್ರೆಸ್ ಬಿಂಬಿಸುತ್ತಿರುವ ಹಾಲಿ ಪ್ರಧಾನಿ ಡಾ. ಸಿಂಗ್ ಅಂತೂ ವೋಟೂ ಹಾಕುತ್ತಿಲ್ಲ. ಚುನಾವಣೆಯಲ್ಲಿ ಸೆಣೆಸುತ್ತಲೂ ಇಲ್ಲ. ಇಂತಹವರು ಬರೀ ದುರ್ಬಲರಲ್ಲ, ಹೇಡಿಗಳೂ ಹೌದು ತಾನೇ?

ಅವರು ದುರ್ಬಲ ಮಾತ್ರವಲ್ಲ ಹೇಡಿಯೂ ಹೌದು!ಅವರು ದುರ್ಬಲ ಮಾತ್ರವಲ್ಲ ಹೇಡಿಯೂ ಹೌದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X