• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹವ್ಯಕ ವಧುಗಳಿಗೆ ಬರಗಾಲ;ಒಂಟಿಯಾದನೆ ಹುಡುಗ

By * ವಿಶ್ವೇಶ್ವರ ಭಟ್
|

ಮೊನ್ನೆ ಪುಸ್ತಕದ ಅಂಗಡಿಯಲ್ಲಿ ಇಡೀ ಒಂದು ದಿನ ಕಳೆದು ಹೊರಬರುವಾಗ, ಸುಮಾರು ಮೂವತ್ತು ಪುಸ್ತಕಗಳಿಂದ ನನ್ನ ದೇಹದ ತೂಕ ಜಾಸ್ತಿಯಾಗಿತ್ತು. ಮೊದಲೆಲ್ಲ ಪುಸ್ತಕದ ಅಂಗಡಿಗೆ ಹೋದರೆ, ಕೈ ಹಾಕಿ ಪುಸ್ತಕ ತೆಗೆಯಲು, ಓದಲು ಆಗುತ್ತಿರಲಿಲ್ಲ. ನಮಗೆ ಬೇಕಾದ ಮಾತ್ರೆ ಪ್ರಿಸ್ಕ್ರಿಪ್ಶನ್ ಕೊಟ್ಟರೆ ಮೆಡಿಕಲ್ ಸ್ಟೋರ್ಸ್‌ನಲ್ಲಿ ಔಷಧ ಕೊಡುತ್ತಾರಲ್ಲ, ಹಾಗೇ ಪುಸ್ತಕದ ಅಂಗಡಿಗಳಲ್ಲಿ ಪುಸ್ತಕ ಕೊಡುತ್ತಿದ್ದರು.

ಈಗಂತೂ ಪುಸ್ತಕದಂಗಡಿಗಳ ಚಹರೆಯೇ ಬದಲಾಗಿ ಬಿಟ್ಟಿದೆ. ದಿನವಿಡೀ ಪುಸ್ತಕದಂಗಡಿಯಲ್ಲಿ ಕುಳಿತು ಸಂಗೀತ ಆಲಿಸುತ್ತಾ ಕೈಗೆ ಸಿಕ್ಕಿದ ಇಷ್ಟದ ಪುಸ್ತಕವನ್ನು ಎತ್ತಿಕೊಂಡು ಮೆತ್ತನೆಯ ಸೋಫಾದ ಮೇಲೆ ಕುಳಿತು ಓದಿ ಮುಗಿಸಿ ಬರಬಹುದು. ಅಷ್ಟು ಹೊತ್ತು ಕಳೆದಿದ್ದಕ್ಕಾಗಿ ಬರುವಾಗ ಪುಸ್ತಕ ಖರೀದಿಸಲೇಬೇಕೆಂದಿಲ್ಲ. ಲೈಬ್ರರಿಗಿಂತಲೂ ಅದ್ಭುತ ವಾತಾವರಣ ಪುಸ್ತಕದಂಗಡಿಗಳಲ್ಲಿ ಸಿಗುತ್ತದೆ. ಕೆಲವು ಕಡೆ ಪುಸ್ತಕದಂಗಡಿಗೆ ಲಗತ್ತಾಗಿ ಹೋಟೆಲ್, ಕೆಫೆ ಕಾಫಿ ಡೇ ಸಹ ಇರುವುದರಿಂದ, ಅಲ್ಲಿನ ಓದಿನ ಸುಖವನ್ನು ಅತ್ಯಂತ ಮಜಾ ಆಗಿ ಅನುಭವಿಸಬಹುದು.

ಅಮೆರಿಕದ ಪ್ರಖ್ಯಾತ ಪುಸ್ತಕದಂಗಡಿಗಳಾದ ಬಾರ್ಡರ್‍ಸ್, ಬರ್ನ್ಸ್ ಆಂಡ್ ನೋಬಲ್ಸ್‌ನಲ್ಲಿ ಹಣ ಕೊಟ್ಟು ಪುಸ್ತಕ ಖರೀದಿಸಿದ ಬಳಿಕ, ಓದುತ್ತಾ ಓದುತ್ತಾ ಹೋದಂತೆ ಆ ಪುಸ್ತಕ ನಿಮಗೆ ರುಚಿಸಲಿಲ್ಲ ಎಂದಿಟ್ಟುಕೊಳ್ಳಿ, ಅದನ್ನು ಅಂಗಡಿಗೆ ಬಂದು ವಾಪಸ್ ಮಾಡಿದರೆ ನಿಮಗೆ ಹಣವನ್ನು ವಾಪಸ್ ಕೊಡುತ್ತಾರೆ.ನಮ್ಮ ದೇಶದಲ್ಲಿ ಅಂಥ 'ಧೈರ್ಯ"ಕ್ಕೆ ಯಾರೂ ಇನ್ನೂ ಮುಂದಾಗದಿದ್ದರೂ ಅಂಥ ಕಾಲ ಬರಬಹುದು.

ಇಂದು ಪುಸ್ತಕಗಳಲ್ಲೂ ಅದೆಂಥ ಬದಲಾವಣೆ ಗಳಾಗಿವೆಯೆಂದರೆ, ಒಂದೇ ಪುಸ್ತಕ ಹತ್ತಾರು ವಿಧಗಳಲ್ಲಿ, ಬೆಲೆಯಲ್ಲಿ ದೊರೆಯುತ್ತದೆ. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ Ignited Mind ಪುಸ್ತಕವನ್ನೇ ತೆಗೆದುಕೊಳ್ಳಿ, ಅದು ಅಗ್ಗದಮುದ್ರಣದಲ್ಲಿ ಸಿಗುವಂತೆ ದುಬಾರಿ ಬೆಲೆಯಲ್ಲೂ ಲಭ್ಯ. ಪೇಪರ್‌ಬ್ಯಾಕ್ ಆವೃತ್ತಿಯಲ್ಲಿ ಸಿಗುವಂತೆ, ಕ್ಯಾಲಿಕೋ, ಹಾರ್ಡ್‌ಬೌಂಡ್, ಸ್ಪೈರಲ್ ರೂಪದಲ್ಲೂ ದೊರೆಯುತ್ತದೆ. ಲೈಟ್‌ವೇಟ್ ಪೇಪರ್‌ನಲ್ಲಿಯೂ ಮುದ್ರಣಗೊಂಡಿರುವ ಆ ಕೃತಿ, ಉತ್ಕೃಷ್ಟ ಗುಣಮಟ್ಟದ ಜಿಎಸ್ಸೆಂ, ಮ್ಯಾಪ್‌ಲಿತೊ ಕಾಗದಗಳಲ್ಲೂ ಸಿಗುತ್ತದೆ. ಈ ಪುಸ್ತಕವನ್ನು ಸಿಡಿ ಮೂಲಕ ಕಂಪ್ಯೂಟರ್‌ನಲ್ಲೂ ಓದಬಹುದು. ಆಡಿಯೋ ಸಿಡಿ ಮೂಲಕ ಕೇಳಲೂಬಹುದು. ಅಂಧರಿಗಾಗಿ ಬ್ರೈಲ್ ಲಿಪಿಯಲ್ಲೂ ಈ ಪುಸ್ತಕ ಬರುವುದಂತೆ. ಒಂದೇ ಪುಸ್ತಕ ಅವೆಷ್ಟು ಅವತಾರಗಳಲ್ಲಿ ಬಂದಿದೆಯೆಂದರೆ ವಿಸ್ಮಯವೆನಿಸುತ್ತದೆ.

ಇದು ಕೇವಲ ಪುಸ್ತಕಕ್ಕೆ ಮಾತ್ರ ಅಲ್ಲ, ಪ್ರತಿಯೊಂದು ವಸ್ತು, ಸಂಗತಿಗೂ ಅನ್ವಯ. ನಮ್ಮ ಮುಂದೆ ದಿಗಿಲುಹುಟ್ಟಿಸುವಂಥ ಆಯ್ಕೆಗಳ ಮಹಾಸಾಗರವೇ ತೆರೆದುಕೊಳ್ಳುತ್ತಿದೆ. option ಗಂತೂ ಮಿತಿಯೇ ಇಲ್ಲ. sky is the limit ಅಂತಾರಲ್ಲ, ಅದನ್ನೂ ಸುಳ್ಳು ಮಾಡುವಂಥ, ಆಗಸದಾಚೆಯೂ ಬೇಲಿ ವಿಸ್ತರಿಸುವಂಥ ವೈವಿಧ್ಯಮಯ ಆಯ್ಕೆಗಳು ನಮ್ಮ ಕಣ್ಮುಂದೆಯೇ ಅನಾವರಣಗೊಳ್ಳುತ್ತಿವೆ. ಮೊದಲಾದರೆ ಎರಡೇ ಕಾರಿತ್ತು. ದೊಡ್ಡ ಕುಟುಂಬಕ್ಕೆ ಅಂಬಾಸಿಡರ್, ಪುಟ್ಟ ಸಂಸಾರಕ್ಕೆ ಫಿಯೆಟ್. ಹೀಗಾಗಿ ಗ್ಯಾರೇಜ್‌ಗಳು ಹೆಚ್ಚು ಇರಲಿಲ್ಲ. ಈಗ ಏನಿಲ್ಲವೆಂದರೂ ಐವತ್ತಕ್ಕೂ ಜಾಸ್ತಿ ಕಂಪನಿ ಕಾರುಗಳು, ನೂರಾರು ಮಾಡೆಲ್‌ಗಳು. ಇದರ ಪರಿಣಾಮ ರಸ್ತೆಯುದ್ದಕ್ಕೂ ಗ್ಯಾರೇಜ್‌ಗಳು. ಮಾರುತಿ ಕಂಪನಿಯೊಂದೇ ಹದಿನೈದಕ್ಕೂ ಹೆಚ್ಚು ಬೇರೆ ಬೇರೆ ಮಾಡೆಲ್ ಕಾರುಗಳನ್ನು ಉತ್ಪಾದಿಸುತ್ತದೆ- mind boggling ಅಂತಾರಲ್ಲ ಆ ರೀತಿಯಲ್ಲಿ ನಮ್ಮ ಮುಂದೆ ಆಯ್ಕೆಗಳ ತೆರೆ ಸರಿಯಲಾರಂಭಿಸುತ್ತದೆ. ಪ್ರಾಯಶಃ ಇಂಥ ಆಯ್ಕೆ ಸ್ವಾತಂತ್ರ್ಯ ಹಿಂದೆಂದೂ ಇರಲಿಲ್ಲ.

ಅಂಗಿ ಅಥವಾ ಕೋಟಿನ ಬಟನ್(ಗುಂಡಿ)ಗಳಲ್ಲಿ ಅದೆಂಥ ವೈವಿಧ್ಯವಿದೆಯೆಂದರೆ 'ಅಬ್ಬಾ" ಎಂದೆನಿಸಬಹುದು. ಬೆಂಗಳೂರಿನಲ್ಲಿ ಎನ್.ಕೆ. ಡಿಸ್ಟ್ರಿಬ್ಯೂಟರ್‍ಸ್ ಎಂಬ ಕಂಪನಿಯಿದೆ. ನಮ್ಮ ರಾಜ್ಯಕ್ಕೆ ಬಟನ್‌ಗಳನ್ನು ಪೂರೈಸುವ ದೊಡ್ಡ ವಿತರಕರು. ಅದರ ಮಾಲೀಕರಾದ ಶಾಂತಿಲಾಲ್ ಅಗರವಾಲಾರನ್ನು ಕುತೂಹಲದಿಂದ ಕೇಳಿದೆ- “ನೀವು ಎಷ್ಟು ವಿಧದ ಬಟನ್‌ಗಳನ್ನು ಮಾರುತ್ತೀರಿ?" “ಶರ್ಟು, ಟಿ-ಶರ್ಟು, ಕುರ್ತಾ, ಕೋಟ್‌ಗೆ ಬಳಸುವ ಬಟನ್‌ಗಳನ್ನು ಲೆಕ್ಕ ಹಾಕಿದರೆ ಏನಿಲ್ಲವೆಂದರೂ ಒಂದು ಲಕ್ಷಕ್ಕೂ ಹೆಚ್ಚಿನ ವೆರೈಟಿ ಸಿಗಬಹುದು" ಎಂದರು. ಅವರ ಪ್ರಕಾರ ಪ್ರತಿದಿನ ಎಷ್ಟು ಹೊಸ ವಿಧದ ಬಟನ್‌ಗಳು ತಯಾರಾಗುತ್ತವೋ ಗೊತ್ತಿಲ್ಲ, ಆದರೆ ಅವರಿಗಂತೂ ಐವತ್ತಕ್ಕೂ ಹೆಚ್ಚು ನಮೂನೆಯ ಬಟನ್‌ಗಳು ಬರುತ್ತವೆ.

ಅಂದರೆ ಕೇವಲ ಬಟನ್ ಉದ್ಯಮದಲ್ಲೊಂದೇ ಅದೆಂಥ ಆಯ್ಕೆ ಕ್ರಾಂತಿಯಾಗುತ್ತಿದೆಯೆಂದು ಊಹಿಸಬಹುದು. ರೇಡಿಯೊ, ಟಿವಿ, ಫ್ರಿಡ್ಜ್, ವಾಷಿಂಗ್‌ಮೆಶೀನ್, ಮಿಕ್ಸರ್, ಗ್ರೈಂಡರ್, ಟೇಪ್ ರೆಕಾರ್ಡರ್, ಕುಕ್ಕರ್, ವಾಷ್‌ಬೇಸಿನ್, ಟೈಲ್ಸ್, ಪೇಂಟ್, ಕಂಪ್ಯೂಟರ್, ಡಿವಿಡಿ, ವಿಸಿಡಿ, ಐಪೋಡ್, ವಾಕ್‌ಮನ್... ಹೀಗೆ ಯಾವುದೇ ಉಪಕರಣಗಳ ಖರೀದಿಗೆ ಮುಂದಾದರೆ ಕನಿಷ್ಠ ಐವತ್ತು ವೆರೈಟಿಗಳು ಸಿಗುತ್ತವೆ. ಏಷಿಯನ್ ಹಾಗೂ ಬರ್ಜರ್ ಪೇಂಟ್ ಕಂಪನಿಗಳ ಕ್ಯಾಟಲಾಗ್‌ಗಳನ್ನು ನೋಡಬೇಕು. ಅವು ಏನಿಲ್ಲವೆಂದರೂ ನೂರಕ್ಕೂ ಜಾಸ್ತಿ ಬೇರೆ ಬೇರೆ ಬಣ್ಣಗಳ ಪೇಂಟ್‌ಗಳನ್ನು ತಯಾರಿಸುತ್ತವೆ.

ಈ ಮೊದಲು ನಮಗೆ ಗೊತ್ತಿದ್ದುದೇನೆಂದರೆ ಬಣ್ಣಗಳು ಇರುವುದೇ ಏಳು ಎಂದು. ಆದರೆ ಒಂದೊಂದು ಪೇಂಟ್ ಕಂಪನಿಯೂ ನೂರಕ್ಕೂ ಹೆಚ್ಚು ಪೇಂಟ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಇತ್ತೀಚೆಗೆ ಸೋನಿ ಕಂಪನಿ ಬಿಡುಗಡೆ ಮಾಡಿರುವ ಬ್ರೇವಿಯಾ ಸೀರಿಸ್‌ನ ಟಿವಿ ಸೆಟ್‌ನ ಜಾಹೀರಾತನ್ನು ಗಮನಿಸಬೇಕು. ಆ ಟಿವಿಯಲ್ಲಿ 64 ದಶಲಕ್ಷ ಕಲರ್‌ಗಳನ್ನು ನೋಡಬಹುದಂತೆ! ಆ ಬಣ್ಣಗಳ ಹೆಸರೇನು? ಅವನ್ನು ಏನಂತ ಕರೆಯುವುದು? ಗೊತ್ತಿಲ್ಲ.

ಮೊಬೈಲ್ ಫೋನಿನ ಉಸಾಬರಿಗೆ ಹೋಗದಿರುವುದೇ ಕ್ಷೇಮ. ಯಾಕೆಂದರೆ ಒಂದೊಂದು ಕಂಪನಿ ದಿನಕ್ಕೆ ಹತ್ತಾರು ಮಾಡೆಲ್‌ಗಳನ್ನು ಬಿಡುತ್ತದೆ. ನೋಕಿಯಾ ಕಂಪನಿಯೊಂದೇ ಎಷ್ಟು ಮಾಡೆಲ್‌ಗಳನ್ನು ಹೊಂದಿದೆಯೋ? ಎರಡು ದಿನಗಳಲ್ಲೇ ಮಾಡೆಲ್‌ಗಳು ಹಳತಾಗಿಬಿಡುತ್ತವೆ. ಪ್ರತಿದಿನವೂ ಹೊಸ ಹೊಸ ಮಾಡೆಲ್‌ನ್ನು ಬಿಡುಗಡೆ ಮಾಡುವುದು ಆ ಕಂಪನಿ ಉದ್ದೇಶ. ಹಾಗೆ ಮಾಡುವಷ್ಟು ಹೊಸ ಮಾಡೆಲ್‌ಗಳು ಅದರ ಬತ್ತಳಿಕೆಯಲ್ಲಿದೆ. ಆದರೆ ಮಾರ್ಕೆಟಿಂಗ್ ಕಾರಣದಿಂದ ಹಾಗೆ ಮಾಡುತ್ತಿಲ್ಲ. ಇವೆಲ್ಲ ಹೋಗಲಿ, ಪ್ರತಿನಿತ್ಯ ನಾವು ಕುಡಿಯುವ ಚಹಾದಲ್ಲಿ ಎಷ್ಟೊಂದು ವೆರೈಟಿಗಳಿವೆ ಗೊತ್ತಾ? ಇತ್ತೀಚೆಗೆ ನಾನು ಮೈಕೆಲ್ ಪೆನ್ ಬರೆದ ಮೆಗಾಟ್ರೆಂಡ್ಸ್ ಎಂಬ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರೊಂದು ಸಂಗತಿ ಪ್ರಸ್ತಾಪಿಸಿದ್ದರು-1773ರಲ್ಲಿ ನಡೆದ ಐತಿಹಾಸಿಕ ಬೋಸ್ಟನ್ ಟೀ ಪಾರ್ಟಿ ಸಂದರ್ಭದಲ್ಲಿ ಎಷ್ಟು ವಿಧದ ಚಹಾಗಳಿದ್ದಿರಬಹುದು?

ಅಮೆರಿಕ ಕ್ರಾಂತಿಗೆ ಕಿಡಿಯೆಬ್ಬಿಸಿದ ಈ ಘಟನೆಯಲ್ಲಿ ಸುಮಾರು 45 ಟನ್ ಚಹಾವನ್ನು ಸಮುದ್ರಕ್ಕೆಸೆಯಲಾಯಿತು. ಸುಮಾರು ಒಂದು ವಾರ ಕಾಲ ಬೋಸ್ಟನ್ ಸಮುದ್ರ ತೀರ ಚಹಾಪುಡಿಯಿಂದ ಆವೃತ್ತವಾಗಿತ್ತಂತೆ. ಸಮುದ್ರದ ನೀರು ಚಹಾದ ಬಣ್ಣಕ್ಕೆ ತಿರುಗಿತ್ತಂತೆ. ಸಮುದ್ರಕ್ಕೆಸೆದ ಟೀ ಪೌಡರ್ ಒಂದೇ ರೀತಿಯಾಗಿದ್ದಿರಬಹುದು. ಹೆಚ್ಚೆಂದರೆ ಮೂರ್ನಾಲ್ಕು ವಿಧದ ಚಹಾಪುಡಿಗಳಿದ್ದಿರಬಹುದೆಂದು ಮೈಕೆಲ್ ಪೆನ್ ಹೇಳುತ್ತಾನೆ.

ಈ ಘಟನೆ ಸಂಭವಿಸಿ 235 ವರ್ಷಗಳಾಗಿವೆ. ಶ್ರೀಲಂಕಾದ ಯಾವುದೇ ಪಂಚತಾರಾ ಹೋಟೆಲ್‌ಗೆ ಹೋಗಿ, ಅಲ್ಲಿ ನಿಮಗೆ ಕನಿಷ್ಠ ನೂರು ವಿಧದ ಚಹಾ ಸಿಗುತ್ತವೆ. ಶಾಂಘೈನ ಮಂಡಾರಿನ್ ಹೋಟೆಲ್ ಚಹಾಕ್ಕೆ ಪ್ರಸಿದ್ಧ. ಅಲ್ಲಿ ಏನಿಲ್ಲವೆಂದರೂ ಐನೂರು ವಿಧಗಳ ಚಹಾ ಸಿಗುತ್ತವೆ. ಬ್ಲ್ಯಾಕ್ ಟೀ, ಲೆಮನ್ ಟೀ, ಜಿಂಜರ್ ಟೀ, ಕಾರ್ಡಮಮ್ ಟೀ, ಪೆಪ್ಪರ್ ಟೀ, ಕ್ಯಾಶ್ಯೂ ಟೀ, ಮ್ಯಾಂಗೋ ಟೀ, ಮಲಯ ಟೀ, ಲಂಕಾ ಟೀ..... ಅಬ್ಬಬ್ಬ, ಚಹಾಪುಡಿಯ ಪೊಗರು ನೋಡಿ, ಅದಕ್ಕೆ ಎಷ್ಟೊಂದು ರೂಪ, ರುಚಿ, ರುಬಾಬು? ಸಿಂಗಪುರದ ತಕಶಿಮಯಾ ಎಂಬ ಮಾಲ್‌ಗೆ ಹೋದರೆ ಕನಿಷ್ಠ ನೂರು ಬ್ರ್ಯಾಂಡ್‌ಗಳ ವಾಚ್, ಬೂಟು, ಬೆಲ್ಟ್, ಶರ್ಟ್, ಸುಗಂಧ ದ್ರವ್ಯ ಸಿಗುತ್ತದೆ.

ಇದು optionಗಳ ಯುಗ. ಯಾರು ಹೆಚ್ಚು ಹೆಚ್ಚು ಆಯ್ಕೆಗಳನ್ನು ರೂಪಿಸುತ್ತಾನೋ ಅವನೇ ಪೈಪೋಟಿಯಲ್ಲಿ ಬದುಕುತ್ತಾನೆ. ಮೊದಲಾದರೆ ವಿಮಾನ ಅಂದ್ರೆ ಇಂಡಿಯನ್ ಏರ್‌ಲೈನ್ಸ್ ಇತ್ತು. ಈಗ ಡೆಕ್ಕನ್, ಕಿಂಗ್‌ಫಿಶರ್, ಜೆಟ್, ಸ್ಪೈಸ್ ಜೆಟ್, ಜೆಟ್‌ಲೈಟ್, ಗೋ ಏರ್, ಪ್ಯಾರಾಮೌಂಟ್, ಇಂಡಿಗೋ.... ನೀನಲ್ಲ ಅಂದ್ರೆ ಅವನು. ಅವನೂ ಇಲ್ಲ ಅಂದ್ರೆ ಮತ್ತೊಬ್ಬ. ಮತ್ತೊಬ್ಬನೂ ಇಲ್ಲ ಅಂದ್ರೆ ಮಗದೊಬ್ಬ ಕಾದಿರುತ್ತಾನೆ.

ಇಂಥ ಆಯ್ಕೆ ಮುಕ್ತ ಸಮಾಜದಲ್ಲಿ ಆಯ್ಕೆಯೇ ಇಲ್ಲದೇ ಬದುಕು ಬರಡು ಮಾಡಿಕೊಂಡು ಜೀವನ ಸಾಗಿಸುವ ಒಂದು ದೊಡ್ಡ ಗುಂಪು ನಮಗರಿವಿಲ್ಲದಂತೆ ಜೀವನ ಸಾಗಿಸುತ್ತಿದೆ. ಇವರ ಪಾಡೇ ಅಯ್ಯೋ ಪಾಪ ! ಜೆಸ್ಸಿಕಾ ವಿಲಿಯಮ್ಸ್ ಬರೆದಿರುವ “50 facts that would change the world" ಎಂಬ ಪುಸ್ತಕದಲ್ಲಿ 'ಚೀನಾದಲ್ಲಿ ಐದು ಕೋಟಿ ಗಂಡಸರಿಗೆ ಹೆಂಡತಿಯರೇ ಇಲ್ಲ" ಎಂದು ಬರೆದಿದ್ದಾಳೆ.

ಚೀನಾದಲ್ಲಿ 2000ರಲ್ಲಿ ಪ್ರತಿ 100 ಹೆಣ್ಣಿಗೆ 116 ಗಂಡು ಶಿಶುಗಳಿದ್ದವು. ಕಳೆದ ಎರಡು ವರ್ಷಗಳಲ್ಲಿ ಈ ಅಂತರ ಎರಡರಷ್ಟು ಹೆಚ್ಚಿದೆ. ಈ ಅಂತರ ವರ್ಷದಿಂದ ವರ್ಷಕ್ಕೆ ಹಿರಿದಾಗುತ್ತಾ ಹೋದರೆ ಐದು ಕೋಟಿ ಯುವಕರಿಗೆ ಮದುವೆಗೆ ಹುಡುಗಿಯರೇ ಸಿಗಲಿಕ್ಕಿಲ್ಲ. ಹೀಗಾದರೆ ಕತೆಯೇನು? ಆ ದೇಶದ ಕುಟುಂಬ ವ್ಯವಸ್ಥೆ ಏನಾಗಬೇಕು? ಈ ಐದು ಕೋಟಿ ಜನ ಮಾಲ್‌ಗೆ ಹೋಗಿ ಏನೆಲ್ಲ ಖರೀದಿಸಬಹುದು, ಸಾವಿರ ಮೊಬೈಲ್ ಸೆಟ್ ನೋಡಿ ಒಂದನ್ನು ಕೊಂಡುಕೊಳ್ಳಬಹುದು. ಆಯ್ಕೆ ಮಾತಿರಲಿ, ಒಬ್ಬಳೇ ಒಬ್ಬಳು ಜೀವನ ಸಂಗಾತಿ ಪಡೆಯಲು ಅವರಿಗೆ ಆಗುತ್ತಿಲ್ಲ. ಅವರ ಮುಂದೆ option ಗಳೇ ಇಲ್ಲ. ಇದ್ದರೂ ಇರಬಹುದಾದ option ಒಂದೇ. ಅದೇನೆಂದರೆ ಜೀವನವಿಡೀ ಅವಿವಾಹಿತನಾಗಿಯೇ ಇರುವುದು !

ಇದು ಕೇವಲ ಚೀನಾದ ಕತೆಯಲ್ಲ. ನಮ್ಮಲ್ಲಿನ ವ್ಯಥೆಯೂ ಹೌದು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಹೆಚ್ಚಾಗಿರುವ ಹವ್ಯಕ ಬ್ರಾಹ್ಮಣರ ಮನೆಗಳಲ್ಲಿನ ಗಂಡಸರಿಗೆ ಇಂದು ಮದುವೆಗೆ ಹೆಣ್ಣು ಮಕ್ಕಳೇ ಸಿಗುತ್ತಿಲ್ಲ. ಐನೂರು ಜನಸಂಖ್ಯೆಯಿರುವ ಊರಿನಲ್ಲಿ ಕನಿಷ್ಠ ಐವತ್ತು ಹುಡುಗರಾದರೂ ಸಿಗುತ್ತಾರೆ (ಮದುವೆಯಾಗದಿರುವವರು) ಹೆಣ್ಣು ಸಿಗದವರು! ಹಾಗೆಂದು ಇವರು ಇಂದು ಹುಡುಗರಾಗಿ ಉಳಿದಿಲ್ಲ. ಅವರಲ್ಲಿ ಬಹುತೇಕ 'ಹುಡುಗ"ರಿಗೆ 40-45 ವರ್ಷ ಗಳಾಗಿವೆ. ಸೂಕ್ತ ವಧುವಿಗೆ ಕಾದು ಕಾದು, ಇನ್ನು ಹುಡುಗಿ ಸಿಗುವುದಿಲ್ಲವೆಂದು ಖಾತ್ರಿಯಾಗಿ ಅವರೆಲ್ಲ ಮದುವೆ ಆಸೆಗೇ ಡೈವೋರ್ಸ್ ನೀಡಿ ಬಿಟ್ಟಿದ್ದಾರೆ.

ಅದರಲ್ಲೂ ಹಳ್ಳಿಯಲ್ಲಿಯೇ ಉಳಿಯುವವರಿಗೆ, ತೋಟ, ಮನೆ ನೋಡಿಕೊಳ್ಳುವ ಹುಡುಗರಿಗೆ ಹೆಣ್ಣೇ ಕೊಡುವುದಿಲ್ಲ, ಹುಡುಗರಿಗೆ ತನ್ನ ಜೀವನ ಸಂಗಾತಿ ಆಯ್ಕೆಗೆ option ಗಳೇ ಇಲ್ಲ. ಇದು ಕೇವಲ ಹವ್ಯಕರದ್ದೊಂದೇ ಅಲ್ಲ, ಶಿವಳ್ಳಿ, ಕೋಟ, ಬ್ರಾಹ್ಮಣರಿರಬಹುದು, ಬಂಟರು, ಬಣಜಿಗರು, ಬಲಿಜ, ಗಾಣಿಗ... ಹೀಗೆ ಪ್ರತಿಯೊಂದು ಜಾತಿಯ ಗಂಡಸರೂ ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆ.

ಒಂದು ಕಾಲವಿತ್ತು. ಹಿರಿಯರು ನಿಶ್ಚಯಿಸುವ ವಿವಾಹ ಗಳಲ್ಲಿ ವರನೊಬ್ಬ ಕನಿಷ್ಠ 20-30 ಹೆಣ್ಣುಗಳನ್ನು ನೋಡಿ, ಅನಂತರ ಆಯ್ಕೆ ಮಾಡಿ ಒಬ್ಬಳನ್ನು ಮದುವೆಯಾಗುತ್ತಿದ್ದ. ಕೆಲವರು ಇದನ್ನೇ ಚಾಳಿ ಮಾಡಿಕೊಂಡು 250-300 ಹುಡುಗಿಯರನ್ನು ನೋಡುತ್ತಿದ್ದರು. (ಕೊನೆಗೆ ವಿಚಿತ್ರ ಸ್ವರೂಪದವಳನ್ನೇ ಮದುವೆಯಾಗುತ್ತಿದ್ದುದು ಬೇರೆ ಮಾತು). ಆದರೆ ಈಗ option ಗಳೇ ಇಲ್ಲ. ಕರ್ನಾಟಕ ದಲ್ಲಿ ಪ್ರತಿ ಸಾವಿರ ಗಂಡಸಿಗೆ ಕೇವಲ 964 ಹೆಣ್ಣು ಮಕ್ಕಳಿ ದ್ದಾರಂತೆ. ಉಳಿದ 36 ಗಂಡಸಿನ ಕತೆ ಏನಾಗಬೇಡ? ಇಂಥ ಕುಟುಂಬಗಳಲ್ಲಿ ಮುಂದೊಂದು ದಿನ ದ್ರೌಪದಿಯಂಥ ಹೆಂಡತಿ ಜತೆಯಲ್ಲಿ ಬಾಳ್ವೆ ಮಾಡಬೇಕಾದ ಪರಿಸ್ಥಿತಿ ಬಹಳ ದೂರವಿಲ್ಲ, ನೋಡ್ತಾ ಇರಿ. ಆಗ ಇರುವ ಆಯ್ಕೆ ಅದೇ ಆಗಿರುತ್ತದೆ. ಹಾಗಾದರೆ, ಹುಡುಗಿಯರಿಗೂ ಬಂತಾ ರೇಶನ್ನು? (ಸ್ನೇಹ ಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is the world of unlimited options. But, brahmin boy community in karnataka facing critical shortage of eligible girls. The marriage and family planning crisis deepens more so with havyaka brahmins. Havyakas hail mainly from coastal karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more