keyboard_backspace

ಒಲಾ- ಉಬರ್ ವಿರುದ್ಧ ಹೋರಾಟಕ್ಕೆ ಸಿಟಿ ಟ್ಯಾಕ್ಸಿ ಚಾಲಕರ ಸಂಘಟನೆಗಳ ತಯಾರಿ

Google Oneindia Kannada News

ಬೆಂಗಳೂರು, ಫೆಬ್ರವರಿ 22 : ರಾಜ್ಯದ ಎಲ್ಲಾ ನಗರ ಟ್ಯಾಕ್ಸಿಗಳಿಗೆ ಅನ್ವಯ ವಾಗುವಂತೆ ಸಿಟಿ ಟ್ಯಾಕ್ಸಿ ಬಾಡಿಗೆ ದರ ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿ ಇಪ್ಪತ್ತು ದಿನಗಳೇ ಕಳೆದಿವೆ. ಇದರಿಂದ ಸಿಟಿ ಟ್ಯಾಕ್ಸಿ ಚಾಲಕರಿಗೆ ನಯಾಪೈಸೆ ಲಾಭವಾಗುತ್ತಿಲ್ಲ. ಬದಲಿಗೆ ಇರುವ ವಹಿವಾಟು ಕಳೆದುಕೊಂಡು ಟ್ಯಾಕ್ಸಿ ಚಾಲಕರು ಬೀದಿಗೆ ಬಿದ್ದಿದ್ದಾರೆ. ಒಲಾ , ಉಬರ್ ಖಾಸಗಿ ಕ್ಯಾಬ್ ಸೇವೆ ಕಂಪನಿಗಳು ಇಂತಹ ಸಮಸ್ಯೆಗೆ ನಾಂದಿ ಹಾಡಿವೆ. ದೇವರು ವರ ಕೊಟ್ಟರೂ ಪೂಜಾರಿ ನೀಡಲಿಲ್ಲ ಎಂಬತಾಗಿದೆ ರಾಜಧಾನಿಯ ಸಿಟಿ ಟ್ಯಾಕ್ಸಿ ಚಾಲಕರ ಪರಿಸ್ಥಿತಿ. ಹೀಗಾಗಿ ಒಲಾ, ಉಬರ್ ಕಂಪನಿಗಳ ವಿರುದ್ಧ ತಿರುಗಿ ಬೀಳಲು ಚಾಲಕರು, ಚಾಲಕರ ಸಂಘಟನೆಗಳು ತಯಾರಿ ನಡೆಸಿವೆ.

 ಒಲಾ, ಉಬರ್ ಸಂಸ್ಥೆಗಳಿಗೆ ಅನ್ವಯ ಇಲ್ಲ:

ಒಲಾ, ಉಬರ್ ಸಂಸ್ಥೆಗಳಿಗೆ ಅನ್ವಯ ಇಲ್ಲ:

ಪೆಟ್ರೋಲ್ ಡೀಸಲ್ ದರ ಹೆಚ್ಚಳದಿಂದ ಕಂಗೆಟ್ಟಿದ್ದ ಸಿಟಿ ಟ್ಯಾಕ್ಸಿ ಚಾಲಕರು ಬಾಡಿಗೆ ದರ ಹೆಚ್ಚಿಸುವಂತೆ ಆಗ್ರಹಿಸಿ ಫೆ. 1 ರಂದು ಹದಿನೈದು ಸಾವಿರ ಚಾಲಕರು ರಾಜಧಾನಿಯಲ್ಲಿ ಮುಷ್ಕರ ಕೈಗೊಂಡಿದ್ದರು. ಇದಾದ ಮರು ದಿನವೇ ರಾಜ್ಯದ ಸಿಟಿ ಟ್ಯಾಕ್ಸಿ ಬಾಡಿಗೆ ದರ ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಆದೇಶದ ಪ್ರತಿ ಹಿಡಿದು ಟ್ಯಾಕ್ಸಿ ಚಾಲಕರು ಕುಣಿದು ಕುಪ್ಪಳಿಸಿದ್ದರು. ಯಾಕೆಂದರೆ ರಾಜ್ಯದ ಎಲ್ಲಾ ಎಲ್ಲಾ ಸಿಟಿ ಟ್ಯಾಕ್ಷಿ ಮತ್ತು ಇತರೆ ಕ್ಯಾಬ್ ಗಳಿಗೆ ಅನ್ವಯ ವಾಗುವಂತೆ ದರ ಪರಿಷ್ಕರಣೆ ಮಾಡಿತ್ತು. 2013ರಲ್ಲಿ ದರ ಪರಿಷ್ಕರಣೆ ಮಾಡಿದ ನಂತರ ಇದೀಗಷ್ಟೇ ಕ್ಯಾಬ್ ಚಾಲಕರ ಬೇಡಿಕೆ ಈಡೇರಿಸಿತ್ತು. ಎಸಿ ರಹಿತ ಸಿಟಿ ಟ್ಯಾಕ್ಸಿ ಪ್ರತಿ ನಾಲ್ಕು ಕಿ.ಮೀ. 75 ರೂ. ಬಾಡಿಗೆ, ನಂತರದ ಪ್ರತಿ ಕಿ.ಮೀ. ಗೆ 18 ರೂ. ನಿಗದಿಪಡಿಸಲಾಗಿತ್ತು. ಹವಾ ನಿಯಂತ್ರಿತ ಕ್ಯಾಬ್ ಗಳಿಗೆ ಪ್ರತಿ ನಾಲ್ಕು ಕಿ.ಮೀ ಪ್ರಯಾಣ ದರ 100 ರೂ. ಪ್ರತಿ ಕಿ.ಮೀ. ಹೆಚ್ಚುವರಿ ಪ್ರಯಾಣಕ್ಕೆ 24 ರೂ. ನಿಗದಿ ಮಾಡಲಾಗಿತ್ತು. ಮೊದಲ ಐದು ನಿಮಿಷ ಕಾಯುವಿಕೆ ಅವಧಿ ಉಚಿತವಾಗಿದ್ದು, ನಂತರದ ಪ್ರತಿ ನಿಮಿಷಕ್ಕೆ 1 ರೂ. ಕೊಡುವಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಲಗ್ಗೇಶ್ ಶುಲ್ಕ 120 ಕೆ.ಜಿ. ಉಚಿತವಾಗಿದ್ದು, ಉಳಿದ ಪ್ರತಿ ಇಪ್ಪತ್ತುಕೆ.ಜಿ. ಗೆ 7 ರೂ. ನಂತೆ ದರ ನಿಗದಿ ಮಾಡಲಾಗಿತ್ತು. ರಾತ್ರಿ 12 ರಿಂದ ಬೆಳಗ್ಗೆ 6 ಗಂಟೆ ವರೆಗೆ ರಾತ್ರಿ ಪಾಳಿ ಶೇ. 10 ರಷ್ಟು ಹೆಚ್ಚುವರಿ ದರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಪರಿಷ್ಕೃತ ಬಾಡಿಗೆ ದರದಿಂದ ಒಲಾ, ಉಬರ್ ಕ್ಯಾಬ್ ಸೇವೆ ಹೊರಗಿಡಲಾಗಿತ್ತು.

ಟ್ಯಾಕ್ಸಿ ಸೇವೆ ಪಾತಾಳಕ್ಕೆ :

ಟ್ಯಾಕ್ಸಿ ಸೇವೆ ಪಾತಾಳಕ್ಕೆ :

ಸಿಟಿ ಟ್ಯಾಕ್ಷಿಗಳ ಪರಿಷ್ಕೃತ ಬಾಡಿಗೆ ದರ ಒಲಾ, ಉಬರ್ ಕ್ಯಾಬ್ ಗಳಿಗೆ ಅನ್ವಯವಾಗಿಲ್ಲ. ಹೀಗಾಗಿ ಒಲಾ, ಉಬರ್ ಸಂಸ್ಥೆಗಳು ಮೊದಲಿನ ಹಳೇ ಶುಲ್ಕಕ್ಕೆ ( ಕಿ. ಮೀ. 10 ರೂ. ಸಂದರ್ಭಾನುಸಾರ ) ಕ್ಯಾಬ್ ಸೇವೆ ಒದಗಿಸುತ್ತಿದೆ. ಏರ್ ಪೋರ್ಟ್ ಮತ್ತು ಇತರೆ ಟ್ಯಾಕ್ಸಿ ಸೇವೆ ದರಕ್ಕೆ ಹೋಲಿಸಿದರೆ ಒಲಾ, ಉಬರ್ ಕ್ಯಾಬ್ ಬಾಡಿಗೆ ದರ ತೀರಾ ಕಡಿಮೆ. ಏರ್‌ ಪೋರ್ಟ್ ಟ್ಯಾಕ್ಷಿ, ಸಿಟಿ ಟ್ಯಾಕ್ಸಿ ಬಳಸುತ್ತಿದ್ದ ಪ್ರಯಾಣಿಕರು ಕೂಡ ಪರಿಷ್ಕೃತ ದರ ನೀಡದೇ ಒಲಾ, ಉಬರ್ ಸೇವೆಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರು ಇಲ್ಲದೇ ಟ್ಯಾಕ್ಸಿ ಚಾಲಕರು ಪರಿತಪಿಸುವಂತಾಗಿದೆ. ಸತತವಾಗಿ ಇಂಧನ ಬೆಲೆ ಹೆಚ್ಚಳದಿಂದ ಸಂಕಷ್ಟದಲ್ಲಿ ಸಿಲುಕಿರುವ ಕ್ಯಾಬ್ ಚಾಲಕರು ಪರಿಷ್ಕೃತ ದರ ನಂಬಿದರೆ ಪ್ರಯಾಣಿಕರು ಸಿಗಲ್ಲ. ಕಡಿಮೆ ದರಕ್ಕೆ ಟ್ಯಾಕ್ಸಿ ಸೇವೆ ಒದಗಿಸಿದರೆ ವರ್ಕೌಟ್ ಆಗಲ್ಲ. ಒಲಾ, ಉಬರ್ ಖಾಸಗಿ ಕ್ಯಾಬ್ ಸೇವೆ ಇಂತಹ ಸವಾಲು ತೊಂದೊಡ್ಡಿದೆ. ಇದು ಟ್ಯಾಕ್ಸಿ ಚಾಲಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕೇಳಿದರೂ ಡೋಂಟ್ ಕೇರ್ :

ಕೇಳಿದರೂ ಡೋಂಟ್ ಕೇರ್ :

ಸರ್ಕಾರದ ಪರಿಷ್ಕೃತ ಬಾಡಿಗೆ ದರಕ್ಕೆ ಕ್ಯಾಬ್ ಸೇವೆ ಒದಗಿಸುವಂತೆ ಟ್ಯಾಕ್ಸಿ ಚಾಲಕರ ಸಂಘಟನೆಗಳು ಒಲಾ ಮತ್ತು ಉಬರ್ ಸೇವೆಗಳಿಗೆ ಮನವಿ ಮಾಡಿವೆ. ಆದರೆ ನಮ್ಮ ಸೇವೆ ಕೇಂದ್ರ ಸರ್ಕಾರದ ತೀರ್ಮಾನಗಳಿಗೆ ಅನ್ವಯಿಸುವಂತದ್ದು. ಪರಿಷ್ಕೃತ ದರಕ್ಕೆ ನಾವು ಕ್ಯಾಬ್ ಸೇವೆ ಒದಗಿಸುವುದಿಲ್ಲ. ಇರುವ ದರವನ್ನೇ ಮುಂದುವರೆಸುತ್ತೇವೆ ಎಂದು ಖಾಸಗಿ ಕ್ಯಾಬ್ ಕಂಪನಿಗಳು ಕಡ್ಡಿ ಮುರಿದಂತೆ ಹೇಳಿವೆ. ಟ್ಯಾಕ್ಸಿ ಸೇವೆ ಬಾಡಿಗೆ ದರ ಪರಿಷ್ಕರಣೆಯಾದರು ಅದರ ಪ್ರಯೋಜನ ಪರೋಕ್ಷವಾಗಿ ಒಲಾ, ಉಬರ್ ಗೆ ಆಗುತ್ತಿದೆ. ಕಡಿಮೆ ಬಾಡಿಗೆ ದರ ಎನ್ನುವ ಕಾರಣಕ್ಕೆ ಟ್ಯಾಕ್ಸಿ ನಂಬಿದ್ದವರು ಕೂಡ ಇದೀಗ ಒಲಾ , ಉಬರ್ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ರಾಜಧಾನಿಯ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಲಾ, ಉಬರ್ ಈ ಪರಿಷ್ಕೃತ ದರ ಅಳವಡಿಸಿಕೊಳ್ಳದ ಹೊರತೂ ಸಿಟಿ ಟ್ಯಾಕ್ಷಿಗಳಿಗೆ ಯಾವ ಆಯಾಮದಲ್ಲೂ ಪ್ರಯೋಜನ ಆಗಲಾರದ ಸಮಸ್ಯೆ ತಲೆದೋರಿದೆ. ಒಂದು ಒಲಾ, ಉಬರ್ ದರಕ್ಕಿಂತಲೂ ಕಡಿಮೆ ದರ ಇಳಿಸಬೇಕು. ಇಲ್ಲವೇ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಟ್ಯಾಕ್ಸಿ ಚಾಲಕರು ಮತ್ತೆ ಬೀದಿಗೆ :

ಟ್ಯಾಕ್ಸಿ ಚಾಲಕರು ಮತ್ತೆ ಬೀದಿಗೆ :

ಸಾರಿಗೆ ಇಲಾಖೆ ಆದೇಶದಂತೆ ಪರಿಷ್ಕೃತ ಬಾಡಿಗೆ ದರ ಒಲಾ, ಉಬರ್ ಗೆ ಅನ್ವಯವಾಗುವಂತೆ ಪರಿಷ್ಕೃತ ಆದೇಶ ಮಾಡುವಂತೆ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘಟನೆಗಳು ಸಾರಿಗೆ ಇಲಾಖೆ ಆಯುಕ್ತರಿಗೆ ಮನವಿ ಮಾಡಿವೆ. ದರ ಪರಿಷ್ಕರಣೆಯಾದರೂ ಅದರ ಪ್ರಯೋಜನ ಸಿಟಿ ಟ್ಯಾಕ್ಸಿ ಚಾಲಕರಿಗೆ ಆಗುತ್ತಿಲ್ಲ. ಪರಿಷ್ಕೃತ ದರ ಒಲಾ, ಉಬರ್ ಗೂ ಅನ್ವಯವಾಗುವಂತೆ ಆದೇಶ ಮಾಡಬೇಕು. ಇಲ್ಲದಿದ್ದರೆ, ಸಿಟಿ ಟ್ಯಾಕ್ಷಿ ಸೇವೆ ಸ್ಥಗಿತಗೊಳಿಸಬೇಕಾದ ಸಂಕಷ್ಟ ಎದುರಾಗಲಿದೆ. ಸದ್ಯ ಬಾಡಿಗೆ ದರ ಪರಿಷ್ಕರಣೆಯಾದ ದಿನದಿಂದ ಟ್ಯಾಕ್ಸಿ ನಂಬಿದ್ದ ಪ್ರಯಾಣಿಕರು ಒಲಾ, ಉಬರ್ ನತ್ತ ಮುಖ ಮಾಡಿದ್ದಾರೆ. ಟ್ಯಾಕ್ಸಿ, ಕ್ಯಾಬ್ ಗಳಿಗೆ ಏಕ ರೂಪದ ದರ ಅನ್ವಯ ವಾಗುವಂತೆ ಪರಿಷ್ಕೃತ ಆದೇಶ ಮಾಡುವಂತೆ ಕೋರಿ ಭಾರತ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಗ್ರೂಪ್ ರಾಜ್ಯಾಧ್ಯಕ್ಷ ಜಯಣ್ಣ ಸಾರಿಗೆ ಇಲಾಖೆ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಕರ್ನಾಟಕ ಚಾಲಕರ ಒಕ್ಕೂಟ ಕೂಡ ಈ ಪ್ರಸ್ತಾಪಕ್ಕೆ ಧ್ವನಿಗೂಡಿಸಿವೆ.

ಚಾಲಕರ ರಕ್ತ ಹೀರುತ್ತಿವೆ :

ಚಾಲಕರ ರಕ್ತ ಹೀರುತ್ತಿವೆ :

ಚಾಲಕರ ಪರಿಸ್ಥಿತಿ ನೋಡಿ ಸರ್ಕಾರ ಟ್ಯಾಕ್ಸಿ ಬಾಡಿಗೆ ದರ ಪರಿಷ್ಕರಣೆ ಮಾಡಿದ್ದು ಸಂತೋಷ ತಂದಿದೆ.ಆದರೆ ಅದು ಚಾಲಕರಿಗೆ ಸಿಗುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಒಲಾ, ಉಬರ್ ಕಡಿಮೆ ದರಕ್ಕೆ ಸೇವೆ ಒದಗಿಸುತ್ತಿವೆ. ಹೀಗಾಗಿ ಟ್ಯಾಕ್ಸಿ ಸೇವೆ ಬಳಕೆ ಕ್ರಮೇಣ ಕಡಿಮೆಯಾಗುತ್ತಿದೆ. ಒಂದು ಒಲಾ, ಉಬರ್ ಗೆ ಶರಣಾಗತಿಯಾಗಬೇಕು. ಇಲ್ಲದಿದ್ದರೆ ಖಾಸಗಿ ಕಂಪನಿ ಒಡ್ಡುವ ಸ್ಪರ್ಧೆ ಎದುರಿಸಬೇಕು. ಹೆಚ್ಚುತ್ತಿರುವ ಇಂಧನ ದರ, ತೆರಿಗೆಗಳ ಹೆಚ್ಚಳದಿಂದ ಕಡಿಮೆ ದರಕ್ಕೆ ಟ್ಯಾಕ್ಸಿ ಸೇವೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಒಲಾ, ಉಬರ್ ಸಂಸ್ಥೆಯಲ್ಲಿ ನೊಂದಣಿ ಮಾಡಿರುವ ಚಾಲಕರು ಕೂಡ ಪರಿಷ್ಕೃತ ದರ ಕೊಡುವಂತೆ ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ಒಲಾ, ಉಬರ್ ಸಂಸ್ಥೆ ಪರಿಷ್ಕೃತ ಬಾಡಿಗೆ ಆದೇಶ ಪಾಲಿಸಬೇಕು. ಇಲ್ಲದಿದ್ದರೆ ಮೊದಲ ಹಂತದಲ್ಲಿ ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕುತ್ತೇವೆ. ಅದಕ್ಕೂ ಸ್ಪಂದನೆ ಸಿಗದಿದ್ದರೆ, ಒಲಾ,ಉಬರ್ ಕಚೇರಿಗಳಿಗೆ ಮತ್ತಿಗೆ ಹಾಕಿ ಹೋರಾಟ ಆರಂಭಿಸುತ್ತೇವೆ ಎಂದು ಭಾರತ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಗ್ರೂಪ್ ರಾಜ್ಯಾಧ್ಯಕ್ಷ ಜಯಣ್ಣ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಅಂತೂ ರಾಜ್ಯದಲ್ಲಿ ಟ್ಯಾಕ್ಸಿ ಓಡಿಸಿಕೊಂಡು ಸ್ವತಂತ್ರ್ಯ ಜೀವನ ಮಾಡುತ್ತಿದ್ದವರು ಕೂಡ ಇದೀಗ ಒಲಾ, ಉಬರ್ ನಂತರಹ ಖಾಸಗಿ ಸಂಸ್ಥೆಗಳು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಿಲ್ಲುವಂತ ಸ್ಥಿತಿ ನಿರ್ಮಾಣವಾಗಿದೆ. ಇದು ದುರ್ದೈವದ ಸಂಗತಿ ಅಲ್ಲವೇ ?

English summary
Taxi drivers association demanded to Ola, Uber to fallow the Government Revised taxi fare
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X