keyboard_backspace

ರಾಜ್ಯ ಸರ್ಕಾರದ ಎಡವಟ್ಟು, ಬಿಬಿಎಂಪಿ ವಾರ್‌ ರೂಮ್ ಗೊಂದಲದ ಗೂಡು

Google Oneindia Kannada News

ಬೆಂಗಳೂರು, ಏಪ್ರಿಲ್ 27: ಕೊರೊನಾ ಸೋಂಕಿತರ ಜೀವ ಉಳಿಸಲು ಪ್ರಾರಂಭಿಸಿರುವ "ಕೋವಿಡ್ ವಾರ್ ರೂಮ್‌ಗಳು" ಕಿರಿಕಿರಿ ಸೆಂಟರ್ ಗಳಾಗಿವೆ. ಕೋವಿಡ್‌ಗೆ ಆಕ್ಸಿಜನ್ ಅಥವಾ ರೆಮ್ಡಿಸಿವಿಆರ್ ಕೇಳಿಕೊಂಡು ವಾರ್ ರೂಮ್‌ಗಳಿಗೆ ಕೇಳಿದರೆ ಅಲ್ಲಿನ ಸಿಬ್ಬಂದಿ ಕೇಳುವ ಪ್ರಶ್ನೆಗಳಿಗೆ ತಲೆ ತಿರುಗುತ್ತದೆ. ದೂರದೃಷ್ಟಿ ಇಲ್ಲದೇ ರಾಜ್ಯ ಸರ್ಕಾರ ಮಾಡಿರುವ ಎಡವಟ್ಟಿನಿಂದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಟೀಕೆಗೆ ಗುರಿಯಾಗುತ್ತಿದ್ದಾರೆ. ವಾರ್ ರೂಮ್‌ಗಳಿಂದ ಪುಕ್ಕಟ್ಟೆ ಸಲಹೆ ಬಿಟ್ಟರೆ ನಿಮಗೆ ಅಲ್ಲಿ ಬೇರೆ ಏನೂ ಸಿಗಲ್ಲ ! ಬೇಕಾದ್ರೆ ಟೆಸ್ಟ್ ಮಾಡಿ ನೋಡಿ.

ರಾಜ್ಯದಲ್ಲಿ ಕೊರೋನಾ ಸೋಂಕು ಎರಡನೇ ಅಲೆ ತಾಂಡವಾಡುತ್ತಿದೆ. ನೆರೆ ರಾಜ್ಯ ಆಂಧ್ರಪ್ರದೇಶ ಮಾದರಿಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಕೊರೋನಾ ಸೋಂಕಿತರಿಗೆ ಅರ್ಧ ತಾಸಿನಲ್ಲಿ ಹಾಸಿಗೆ ಸಿಗುತ್ತಿತ್ತು. ಹಾಸಿಗೆ ಸಿಕ್ಕಿದ ಕೂಡಲೇ ವೈದ್ಯರ ಹಾರೈಕೆ ಸಿಗುತ್ತಿತ್ತು. ಅಲ್ಲಿ ಹಳ್ಳಿ ಜನರು ಉಚ್ಚಾರಣೆ ಮಾಡಲು ಆಗದ ರೆಮ್‌ಡಿಸಿವಿರ್ ಔಷಧ ಕೇಳಿಕೊಂಡು ಅಲೆಯುವ ಸ್ಥಿತಿಯೂ ಇರುತ್ತಿರಲಿಲ್ಲ. ಆಕ್ಸಿಜನ್ ಕೇಳಿಕೊಂಡು ರೋಡಲ್ಲಿ ನಿಂತು ಅಳುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ರಾಜ್ಯದಲ್ಲಿ ಆಗಿದ್ದೇ ಬೇರೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟಗೊಂಡಿತ್ತು. ಸ್ಫೋಟಗೊಳ್ಳುತ್ತಿದ್ದಂತೆ ಇದು ಬಿಬಿಎಂಪಿ ಜವಾಬ್ಧಾರಿ ಎಂದು ಬೆಂಗಳೂರಿನ ಕೊರೋನಾ ಪೀಡಿತರ ಬಗ್ಗೆ ಸರ್ಕಾರ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಮೊದಲೇ ಭ್ರಷ್ಟಾಚಾರ ಕೂಪದಲ್ಲಿ ಸಿಲುಕಿರುವ ಬಿಬಿಎಂಪಿಗೆ ಕೊರೋನಾ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ಸಿಗುವ ಮಾದರಿಯಲ್ಲಿ ಯೋಜನೆ ರೂಪಿಸುವುದು ಹೊಳೆಯಲೇ ಇಲ್ಲ.

ನಿಜವಾದ ರೋಗಿಗಳು ಪರದಾಡುವಂಥ ಸ್ಥಿತಿ

ನಿಜವಾದ ರೋಗಿಗಳು ಪರದಾಡುವಂಥ ಸ್ಥಿತಿ

ಆರ್‌ಟಿ- ಪಿಸಿಆರ್ ಟೆಸ್ಟ್, ಬೋಗಸ್ಟ್ ಟೆಸ್ಟ್ ಗಳಲ್ಲಿ ದುಡ್ಡು ನೋಡಲು ಅಧಿಕಾರಿಗಳು ಮುಂದಾಗಿದ್ದೇ ಬಹುದೊಡ್ಡ ಅವಘಡಕ್ಕೆ ಕಾರಣವಾಯಿತು. ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿರುವ ಆಸ್ಪತ್ರೆಗಳ ಹಾಸಿಗೆಗಳು ಏ. 10 ರಿಂದ 16 ರೊಳಗೆ ಭರ್ತಿ ಆಗಿ ಬಿಟ್ಟಿದ್ದವು. ಇದರ ಮರ್ಮ ಯಾರಿಗೂ ಗೊತ್ತಾಗಲಿಲ್ಲ. ಏ. 16 ರಂದು ಹಾಸಿಗೆಗಳು ಇಲ್ಲದೇ ಕೋವಿಡ್ ರೋಗಿಗಳು ಪರದಾಡುವಂತಾಯಿತು. ಕೋವಿಡ್ ಪಾಸಿಟಿವ್ ಎಂದು ವರದಿ ಬಂದವರೆಲ್ಲರನ್ನೂ ಹಾಸಿಗೆಗಳ ಮೇಲೆ ಮಲಗಿಸಿದ್ದೇ ಹಾಸಿಗೆ ಇಲ್ಲದೇ ನಿಜವಾದ ರೋಗಿಗಳು ಪರದಾಡುವಂತಾಯಿತು ಇಂದು ಬಿಬಿಎಂಪಿ ಕೋವಿಡ್ ವಾರ್ ರೂಮ್‌ನಲ್ಲಿ ಕೆಲಸ ಮಾಡುತ್ತಿರುವ ಚಾಲಕರೊಬ್ಬರು ಸತ್ಯವನ್ನು ಬಹಿರಂಗ ಪಡಿಸಿದರು.

ಬಿಯು ನಂಬರ್ ಕಿರಿಕಿರಿ

ಬಿಯು ನಂಬರ್ ಕಿರಿಕಿರಿ

ಕೊರೊನಾ ಪಾಸಿಟಿವ್ ಪರೀಕ್ಷೆಗಳ ಬಗ್ಗೆ ಬಿಬಿಎಂಪಿ ಮಾಡಿದ ಬಹುದೊಡ್ಡ ಎಡವಟ್ಟು ಬಿಯು ನಂಬರ್ ಕ್ರಿಯೇಷನ್. ಆರ್‌ಟಿ ಪಿಸಿಆರ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಅಂಥವರಿಗೆ ಬಿಬಿಎಂಪಿಯಿಂದ ಬಿಯು ನಂಬರ್ ನೀಡಲಾಗುತ್ತದೆ. ಆದರೆ, ಆರ್‌ಟಿ- ಪಿಸಿಆರ್ ಟೆಸ್ಟ್‌ನಲ್ಲಿ ನೆಗಟಿವ್ ಬಂದು ಕೊರೊನಾ ಸೋಂಕಿಗೆ ಒಳಗಾದವರನ್ನು ಬಿಬಿಎಂಪಿ ಅಧಿಕಾರಿಗಳು ಪರಿಗಣಿಸಲೇ ಇಲ್ಲ.

ಇನ್ನೊಂದಡೆ ಬಿಯು ನಂಬರ್ ಕ್ರಿಯೇಷನ್ ಮಾಡುವಲ್ಲಿ ಕೆಲವು ಲ್ಯಾಬ್‌ಗಳು ಲೋಪಗಳನ್ನು ಎಸಗಿದ್ದವು. ಹೀಗಾಗಿ ಕೊರೋನಾ ಪಾಸಿಟಿವ್ ಇದ್ದರೆ ಬಿಯು ನಂಬರ್ ಪಡೆಯಲಾಗದೆ ಬಿಬಿಎಂಪಿ ಹಾಳೆಗಳಲ್ಲಿ ಉಲ್ಲೇಖವಾಗಿದ್ದ ಸೌಲಭ್ಯ ಪಡೆಯಲಾಗದೆ ಕೊರೊನಾ ಸೋಂಕಿತರು ಪರದಾಡುವಂತಾಗಿದೆ. ಈಗಲೂ ಸಹ ಬಿಬಿಎಂಪಿ ಬಿಯು ನಂಬರ್ ಪಡೆಯಬೇಕಾದರೆ ಕೊರೊನಾ ಸೋಂಕಿತ ಮೂರು ದಿನ ಪರದಾಡಬೇಕಾದ ಪರಿಸ್ಥಿತಿ ಮುಂದುವರೆದಿದೆ.

ಬಿಬಿಎಂಪಿ ವಾರ್ ರೂಮ್ ಕ್ವಾಟ್ಲೆ

ಬಿಬಿಎಂಪಿ ವಾರ್ ರೂಮ್ ಕ್ವಾಟ್ಲೆ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಊಹೆಗೂ ಮೀರಿ ವರದಿ ಆಯಿತು. ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ಬಿಬಿಎಂಪಿ ಬಹುದೊಡ್ಡ ಜವಾಬ್ದಾರಿ ನಿಭಾಯಿಸುವ ನಿಟ್ಟಿನಲ್ಲಿ ರೂಪಿಸಿದ ಕೋವಿಡ್ ವಾರ್ ರೂಂಗಳು ಕಿರಿಕಿರಿ ಕೇಂದ್ರಗಳಾಗಿ ರೂಪಾಂತರಗೊಂಡಿವೆ. ಆಕ್ಸಿಜನ್ ಕೊರತೆ ರೆಮಿಡಿಸಿವಿಆರ್ ಕೊರತೆ ಎಂದು ಬಿಬಿಎಂಪಿ ವಾರ್ ರೂಮ್‌ಗೆ ಕರೆ ಮಾಡಿದರೆ ಮೊದಲು ಕೇಳುವುದೆ ಬಿಯು ನಂಬರ್.

ಆದರೆ ಯಾವ ರೋಗಿಗಳಿಗೆ ಆರ್‌ಟಿ- ಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬಂದಿರುತ್ತೋ ಅಂಥ ರೋಗಿಗಳಿಗೆ ಬಿಯು ನಂಬರ್ ರಚನೆ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಬಿಬಿಎಂಪಿ ಮಾಡಿರುವ ಈ ಎಡವಟ್ಟಿನಿಂದ ಕೊರೊನಾ ಸೋಂಕಿತರೇ ನರಳುವಂತಾಗಿದೆ. ಹಾಸಿಗೆ, ವ್ಯಾಕ್ಸಿನ್, ರೆಮ್‌ಡೆಸಿವಿರ್ ಚುಚ್ಚು ಮದ್ದು ಸಿಗದೇ ಎಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿ, ವಾರ್ ರೂಮ್‌ಗಳು ಎಲ್ಲವೂ ಎಡವಿ ಬಿದ್ದಿವೆ. ಮುಂದಾಲೋಚನೆ ಇಲ್ಲದೇ ರೂಪಿಸಿದ ಯೋಜನೆಯ ಭಾಗವಾಗಿದ್ದ ವಾರ್ ರೂಮ್‌ಗಳಲ್ಲಿ ಜನ ಸಾಮಾನ್ಯರ ಕರೆಗಳಿಗೆ ಉತ್ತರಿಸಲಾಗದೇ ಕೆಲವರು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಸೆಂಟ್ರಲ್ ವಾರ್ ರೂಮ್

ಸೆಂಟ್ರಲ್ ವಾರ್ ರೂಮ್

ಕೊರೋನಾ ನಿರ್ವಹಣೆಯಲ್ಲಿ ಮಾನ ಕಳೆದುಕೊಂಡ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ ಔಷಧ ನಿಯಂತ್ರಣ ಅಧಿಕಾರಿಗಳನ್ನು ಒಳಗೊಂಡ ಸೆಂಟ್ರಲ್ ವಾರ್ ರೂಮ್ ಪ್ರಾರಂಭಿಸಿದೆ. ಮೂರು ಪಾಳಿಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಅಲ್ಲಿಗೆ ನಾಲ್ಕು ಮಂದಿಗೆ ಕರೆ ಮಾಡಿದರೆ ಒಂದು ಕರೆಗೆ ನಿಮಗೆ ಉತ್ತರ ಸಿಗಬಹುದು. ಆಕ್ಸಿಜನ್ ಮತ್ತು ರೆಮ್‌ಡೆಸಿವಿರ್ ಚುಚ್ಚು ಮದ್ದು ಅಗತ್ಯ ಇರುವರಿಗೆ ಪೂರೈಕೆ ಮಾಡುವ ಉದ್ದೇಶದಿಂದ ಈ ಕೊವಿಡ್ ಸೆಂಟ್ರಲ್ ವಾರ್ ರೂಮ್ ಪ್ರಾರಂಭಿಸಲಾಗಿದೆ. ವಿಪರ್ಯಾಸವೆಂದರೆ ಅಲ್ಲಿ ಕೂಡ ಅಷ್ಟೇ ನೀವು ಕರೆ ಮಾಡಿದರೆ, ಮತ್ತೆ ಕಾಲ್ ಸೆಂಟರ್‌ಗೆ ಕರೆ ಮಾಡಿ ಹೆಸರು ನೋಂದಣಿ ಮಾಡಬೇಕು. ಬಿಯು ನಂಬರ್ ಕೊಡಬೇಕು, ಇಲ್ಲವೇ ಎಸ್‌ಟಿಆರ್‌ಎಫ್ ನಂಬರ್ ಕೊಡಬೇಕು. ಇಲ್ಲದಿದ್ದರೆ ಕೊರೋನಾ ರೋಗಿಗೆ ಸೆಂಟ್ರಲ್ ವಾರ್ ರೂಮ್ ನಿಂದಲೂ ಏನೂ ಪ್ರಯೋಜನವಿಲ್ಲ ಎಂಬಂಥ ಸ್ಥಿತಿ ಇದೆ.

ಇನ್ನೂ ವಿಶೇಷ ಅಂದ್ರೆ, ಸೆಂಟ್ರಲ್ ವಾರ್ ರೂಮ್‌ಗೆ ಕರೆ ಮಾಡಿದರೆ, ಪೇಶೆಂಟ್ ಕಂಡೀಷನ್ ನೋಡಿಕೊಂಡು ಹೋಮ್ ಕ್ವಾರೆಂಟೈನ್ ಮಾಡಿಕೊಳ್ಳಿ. ಸುಮ್ಮನೇ ಆಸ್ಪತ್ರೆಗೆ ಹೋಗಬೇಡಿ. ಒಂದು ವೇಳೆ ಆಸ್ಪತ್ರೆಗೆ ದಾಖಲಾಗಿದ್ದರೆ, ಪಾಸಿಟಿವ್ ಬಗ್ಗೆ ಎಲ್ಲಾ ವಿವರಗಳನ್ನು ಸಲ್ಲಿಸಿ. ಸದ್ಯಕ್ಕೆ ರೆಮ್‌ಡೆಸಿವಿರ್ ಸಿಗುತ್ತಿಲ್ಲ. ಬೆಡ್ ಬಗ್ಗೆ ಬೇಕಾದರೆ ನೋಡೋಣ ಎಂಬ ಉತ್ತರ ಸಿಗುತ್ತದೆ ಅಷ್ಟೇ.

English summary
BBMP Covid war room employees not giving proper information to people. They giving unnecessary information to people.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X