ಝೀರೋ ಟ್ರಾಫಿಕ್ ಬೇಡ ಎಂದ ಸಿಂಪಲ್ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆ. 14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ತಾನು ಕೂಡ ಶ್ರೀ ಸಾಮಾನ್ಯ ಸಿಎಂ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ವಿಶ್ವ ಅಂಗಾಂಗ ದಿನಾಚರಣೆ ಅಂಗವಾಗಿ ತನ್ನ ದೇಹವನ್ನು ದಾನ ಮಾಡುವ ಮೂಲಕ ತಾನೊಬ್ಬ ಸರಳ ಸಿಎಂ ಎಂಬುದಕ್ಕೆ ನಿನ್ನೆಯಷ್ಟೇ ಬೊಮ್ಮಾಯಿ ನಾಂದಿ ಹಾಡಿದ್ದರು. ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹಾದಿ ತುಳಿದಿರುವ ಬೊಮ್ಮಾಯಿ ನನಗೂ ಸಹ ಝೀರೋ ಟ್ರಾಫಿಕ್ ಬೇಡ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ಬೇಡ ಎಂದು ನಿರಾಕರಿಸಿರುವ ಬಸವರಾಜ ಬೊಮ್ಮಾಯಿ ಅವರು, ತಮ್ಮ ಸಂಚಾರದ ವೇಳೆ ಸಿಗ್ನಲ್ ಮಾತ್ರ ಫ್ರೀ ಮಾಡಿಕೊಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಒಂದು ವೇಳೆ ತಾನು ಸಂಚರಿಸುವ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಬಂದಲ್ಲಿ, ಮೊದಲು ಆಂಬ್ಯುಲೆನ್ಸ್ ಸಂಚಾರಕ್ಕೆ ದಾರಿ ಮಾಡಿಕೊಡಬೇಕು ಎಂದು ಸೂಚನೆ ನೀಡಿದ ಬೆನ್ನಲ್ಲೇ ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ.
ಜೊಲ್ಲೆ ಝೀರೋ ಟ್ರಾಫಿಕ್: ಕೋಳಿ ಮೊಟ್ಟೆ ಡೀಲ್ ಆರೋಪಕ್ಕೆ ಗುರಿಯಾಗಿದ್ದ ಶಶಿಕಲಾ ಜೊಲ್ಲೆ ಸಚಿವ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು. ಇನ್ನೇನು ಸಚಿವ ಸ್ಥಾನ ಸಿಗುವುದು ಖಾಯಂ ಆಗುತ್ತಿದ್ದಂತೆ ಮಂತ್ರಿಯಾಗುವ ಮೊದಲೇ ಶಶಿಕಲಾ ಜೊಲ್ಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನವರೆಗೂ ಝೀರೋ ಟ್ರಾಫಿಕ್ ಸೌಲಭ್ಯ ಪಡೆದು ಸುದ್ದಿಯಾಗಿದ್ದರು.

ಝೀರೋ ಟ್ರಾಫಿಕ್ ನಿರಾಕರಿಸಿದ ಜ್ಞಾನೇಂದ್ರ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು ಶಿವಮೊಗ್ಗದ ಮೂಲದ ಶಾಸಕ ಆರಗ ಜ್ಞಾನೇಂದ್ರ. ತಾನೊಬ್ಬ ಸರಳ ವ್ಯಕ್ತಿ. ಜನ ಸಾಮಾನ್ಯರಿಗೆ ತೊಂದರೆ ಕೊಡುವ ಝೀರೋ ಟ್ರಾಫಿಕ್ ಸೌಲಭ್ಯ ನನಗೆ ಬೇಕಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮೊದಲು ನಿರಾಕರಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಝೀರೋ ಟ್ರಾಫಿಕ್ ನನಗೂ ಬೇಡ. ಆದರೆ ಮುಖ್ಯಮಂತ್ರಿಯಾಗಿರುವ ಕಾರಣ ತುರ್ತು ಪ್ರಯಾಣ, ಪ್ರವಾಸ ಕಾರ್ಯಕ್ರಮಗಳಿರುತ್ತವೆ. ಈ ವೇಳೆ ಸಿಗ್ನಲ್ ಫ್ರೀ ಕೊಟ್ಟರೆ ಸಾಕು. ಒಂದು ವೇಳೆ ನಾನು ಬರುವ ಹಾದಿಯಲ್ಲಿ ಆಂಬ್ಯುಲೆನ್ಸ್ ಬರುತ್ತಿದ್ದಲ್ಲಿ, ಮೊದಲು ಅದರ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸೂಚನೆ ನೀಡಿದ್ದಾರೆ. ಈ ಮೂಲಕ ತಾನೊಬ್ಬ ಜನಪರ ಕಾಳಜಿಯುಳ್ಳ ಸರಳ ಸಿಎಂ ಎಸನಿಕೊಳ್ಳಲು ಸಮೀಪವಾಗುತ್ತಿದ್ದಾರೆ.

ನಿನ್ನೆಯಷ್ಟೇ ಅಂಗಾಗ ದಾನ ಮಾಡಿದ್ದ ಬೊಮ್ಮಾಯಿ
ವಿಶ್ವ ಅಂಗಾಂಗ ದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವರಾಜ ಬೊಮ್ಮಾಯಿ ಮೊದಲು ಮಾಡಿದ ಘೋಷಣೆ ನನ್ನ ಅಂಗಾಂಗವೂ ದಾನ ಮಾಡುತ್ತೇನೆ. ನಮ್ಮಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದರೆ ಅದನ್ನು ಮಣ್ಣು ಮಾಡಿ ಅಥವಾ ಸುಟ್ಟು ಸಾಧಿಸುವುದೇನು ಎಂಬ ವೈಜ್ಞಾನಿಕ ವಿಚಾರಧಾರೆಯ ನಿರ್ಧಾರ ಪ್ರಕಟಿಸಿದರು. ಇದು ರಾಜ್ಯದೆಲ್ಲೆಡೆ ದೊಡ್ಡ ಮುಟ್ಟದ ಚರ್ಚೆಗೆ ನಾಂದಿ ಹಾಡಿದೆ. ಮಾತ್ರವಲ್ಲ ಅಂಗಾಂಗ ದಾನ ಮಾಡುವಂತೆ ಕೇವಲ ಭಾಷಣ ಮಾಡುವುದು ಅಲ್ಲ, ಮಾಡಿ ತೋರಿಸಬೇಕು ಎಂಬ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡೇ ಈ ತೀರ್ಮಾನ ಪ್ರಕಟಿಸಿದ್ದು ಜನರ ಮನಸಲ್ಲಿ ಅಚ್ಚಳಿಯದ ಹೆಜ್ಜೆ ಇಟ್ಟಿದ್ದಾರೆ.

ಗಾರ್ಡ ಆಫ್ ಆನರ್ ಗೂ ತಿಲಾಂಜಲಿ
ಇನ್ನು ಪ್ರತಿ ಬಾರಿ ಜಿಲ್ಲೆಗೆ ಭೇಟಿ ನೀಡುವಾಗ ಮುಖ್ಯಮಂತ್ರಿಗೆ ನೀಡುವ "ಗಾರ್ಡ್ ಆಫ್ ಆನರ್ " ಪದ್ಧತಿಯನ್ನು ರದ್ದು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಪೊಲೀಸ್ ಕಾರ್ಯಕ್ರಮ ಮತ್ತು ವಿಶೇಷ ಸಂದರ್ಭಗಳಿಗೆ ಮಾತ್ರ ಈ ಸಂಪ್ರದಾಯ ಮುಂದುವರೆಸುವದಾಗಿ ಹೇಳಿದ್ದರು. ಮುಖ್ಯಮಂತ್ರಿಗಳ ಈ ನಿರ್ಧಾರದ ಬೆನ್ನಲ್ಲೇ ಗಾರ್ಡ್ ಆಫ್ ಆನರ್ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊಸ ಆದೇಶ ಹೊರಡಿಸಿದ್ದರು. ಇದೀಗ ಝೀರೋ ಟ್ರಾಫಿಕ್ ಕೂಡ ಬೇಡ ಎಂದಿದ್ದಾರೆ.

ಹೂ ಗುಚ್ಛಕ್ಕೂ ಬ್ರೇಕ್ ಹಾಕಿದ್ದ ಬೊಮ್ಮಾಯಿ
ಸರ್ಕಾರಿ ಕಾರ್ಯಕ್ರಮದಲ್ಲಿ ತನ್ನನ್ನು ಸೇರಿದಂತೆ ಯಾರಿಗೂ ಹೂಗುಚ್ಛ, ಉಡುಗೊರೆ, ನೆನಪಿನ ಕಾಣಿಕೆ ನೀಡುವುದನ್ನು ಬಿಟ್ಟು ಕೇವಲ ಕನ್ನಡ ಪುಸ್ತಕವನ್ನು ನೀಡುವಂತೆ ಬಸವರಾಜ ಬೊಮ್ಮಾಯಿ ಅವರು ಅದೇಶಿಸಿದ್ದರು. ಈ ಮೂಲಕ ಅನಾವಶ್ಯಕ ಹಾಗೂ ತೋರಿಕೆಯ ಸಂಪ್ರದಾಯಕ್ಕೆ ಕಡಿವಾಣ ಹಾಕಿ ಕನ್ನಡ ಪುಸ್ತಕ ಪ್ರೇಮ ಮೆರೆದು ಮೊದಲ ಸರಳ ಹೆಜ್ಜೆ ಇಟ್ಟಿದ್ದನ್ನು ಗಮನಿಸಬಹುದು.

ಆಕಸ್ಮಿಕ ಸಿಎಂ ಈಗ ಸರಳ ಸಿಎಂನತ್ತ ಹೆಜ್ಜೆ
ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಸಿಎಂ ರೇಸ್‌ನಲ್ಲಿ ಅನೇಕರಿದ್ದರು. ಯಡಿಯೂರಪ್ಪ ಬಲಗೈ ಬಂಟನಂತಿದ್ದ ಬೊಮ್ಮಾಯಿ ಅವರು ಏಕಾಏಕಿ ಸಿಎಂ ಪಟ್ಟ ಅಲಂಕರಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಬೊಮ್ಮಾಯಿ ಸರ್ಕಾರವನ್ನು ಅಲ್ಪಾವಧಿ ಸರ್ಕಾರ ಎಂದೇ ಹಂಗಿಸುತ್ತಿದ್ದಾರೆ. ಆದರೆ, ಆಡಳಿತದಲ್ಲಿ ಬಿಗಿ ಪಟ್ಟು ನಿರ್ಧಾರ ತೆಗೆದುಕೊಳ್ಳುವ ಮೂಲಕ ಭಿನ್ನ ರೀತಿಯ ಆಡಳಿತ ನಡೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ಜನ ಸಾಮಾನ್ಯರು ಇಷ್ಟ ಪಡುವ ಸರಳತೆಯನ್ನು ಮೈಗೂಡಿಸಿಕೊಂಡು "ನಾನು ಕರ್ನಾಟಕದ ಸಿಂಪಲ್ ಸಿಎಂ" ಎಂಬುದನ್ನು ಸಾಬೀತು ಮಾಡಲು ಹೊರಟಿದ್ದಾರೆ. ಅದರ ಭಾಗವಾಗಿಯೇ ಅಂಗಾಂಗ ದಾನ ಮಾಡಿದ್ದಾರೆ.
ದೇಶದ ರಾಜಕಾರಣದಲ್ಲಿ ಅತಿ ಸರಳತೆಗೆ ಹೆಸರಾಗಿರುವ ರಾಜಕಾರಣಿ ಕೆ. ಕಾಮರಾಜ್. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ವೇಳೆಯೂ ತನ್ನ ಬಳಿ ಇದ್ದ ಎರಡು ಅಂಗಿಗಳನ್ನೇ ಬಳಸುತ್ತಿದ್ದರು ಎಂಬುದು ರಾಜಕೀಯ ಇತಿಹಾಸದಲ್ಲಿ ಉಲ್ಲೇಖವಾಗಿದೆ. ಇನ್ನೂ ಇತ್ತೀಚೆಗೆ ಅತಿ ಸರಳ ಸಿಎಂ ಎನಿಸಿಕೊಂಡವರಲ್ಲಿ ಮೊದಲಿಗರು ಗೋವಾದ ಮಾಜಿ ಸಿಎಂ ಮನೋಹರ್ ಪರಿಕ್ಕರ್. ಕರ್ನಾಟಕ ಪಾಲಿಕೆ ಸರಳ ಸಿಎಂ ಎಂಬುದು ಇತ್ತೀಚಿನ ದಿನಮಾನದಲ್ಲಿ ಕಂಡಿದ್ದೇ ಇಲ್ಲ. ಸಿಎಂ ಅಲ್ಲ, ರಾಜ್ಯದಲ್ಲಿ ಡಿಸಿಎಂಗಳು ಕೂಡ ಸಿಎಂ ಮಾದರಿ ದರ್ಬಾರಿಗೆ ಫೇಮಸ್ ಆಗಿ ಬಿಟ್ಟಿದ್ದರು. ಅದೆಲ್ಲದ್ದಕ್ಕೂ ತಿಲಾಂಜಲಿ ಇಟ್ಟು ಸರಳಾತಿ ಸರಳ ಸಿಎಂ ಆಗಿ ಗುರುತಿಸಿಕೊಳ್ಳಲು ಹೊರಟಿರುವುದು ಅವರು ಇಡುತ್ತಿರುವ ಹೆಜ್ಜೆಗಳಲ್ಲಿ ಗೋಚರಿಸುತ್ತಿದೆ.

ಝೀರೋ ಟ್ರಾಫಿಕ್ ಅಂದ್ರೆ ಎಲ್ಲರಿಗೂ ಇಷ್ಟ
ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಪ್ರಮುಖ ಸಚಿವರಿಗೆ ಝೀರೋ ಟ್ರಾಫಿಕ್ ಸೌಲಭ್ಯ ನೀಡಲಾಗುತ್ತದೆ. ಝೀರೋ ಟ್ರಾಫಿಕ್ ಸೌಲಭ್ಯ ಪಡೆದ ಮಂತ್ರಿ ಅಥವಾ ಮುಖ್ಯಮಂತ್ರಿ ಬರುವ ಮೊದಲೇ ಅವರು ಸಂಚರಿಸುವ ಮಾರ್ಗದ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ಈ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಝೀರೋ ಟ್ರಾಫಿಕ್ ಸೌಲಭ್ಯ ಉಳ್ಳವರು ಹೋಗುವರೆಗೂ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಸಾಮಾನ್ಯವಾಗಿ ಝೀರೋ ಟ್ರಾಫಿಕ್ ಮಾಡುವುದರಿಂದ ವಾಹನ ಸವಾರರು ಕಾಯುವುದರಿಂದ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವುದು ಸಾಮಾನ್ಯ.












Click it and Unblock the Notifications