Weekly Horoscope: ಈ ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ಪಂಚಮಿಯಿಂದ ಏಕಾದಶಿಯವರೆಗೆ
ಈ ವಾರದ ಚಂದ್ರನ ಸಂಚಾರ ಪುನರ್ವಸು ನಕ್ಷತ್ರದಿಂದ ಹಸ್ತಾ ನಕ್ಷತ್ರದವರೆಗೆ
12/05/2024-18/05/2024 ವಾರ ಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮೇ 12ರಿಂದ ಮೇ 18ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ
ಎರಡನೇ ಮನೆಯಲ್ಲಿ ಗುರು ಶುಕ್ರ ಸೂರ್ಯ ನಿಮ್ಮ ರಾಶಿಯಲ್ಲೇ ಬುಧ ಸಮಯ ತುಂಬಾ ಚೆನ್ನಾಗಿದೆ. ಧನಲಾಭ, ಉದ್ಯೋಗ ಲಾಭ, ಬಡ್ತಿ, ಪ್ರವಾಸ, ಮನಸ್ಸಿಗೆ ಹಿತ ಸುಖ ಕೊಡುವ ಸಂಗತಿಗಳನ್ನು ನೋಡುತ್ತೀರಿ. ನೀವು ಮಾಡಬೇಕೆಂದುಕೊಂಡ ಅರ್ಧಕ್ಕೆ ವಿಘ್ನ ಬಂದ ಕೆಲಸಗಳೆಲ್ಲ ಈಗ ಚಟುವಟಿಕೆಯಿಂದ ನಡೆಯುತ್ತದೆ. ವ್ಯಯಸ್ಥಾನದಲ್ಲಿ ಕುಜ ರಾಹು ಇದ್ದಾರೆ ಇದು ಕೊಂಚ ಒಳ್ಳೆಯದಲ್ಲ. ಸುಬ್ರಹ್ಮಣ್ಯನ ದೇವಾಲಯದಲ್ಲಿ ಪೂಜೆ ಮಾಡಿಸಿ ಉದ್ದು- ತೊಗರಿಯನ್ನು ದಾನ ಕೊಡಿ.

ವೃಷಭ ರಾಶಿಯ ವಾರ ಭವಿಷ್ಯ
ನಿಮ್ಮ ರಾಶಿಯಲ್ಲೇ ಗುರು ಸೂರ್ಯ ಇದ್ದರೂ ನಿಮ್ಮ ರಾಶಿಯ ಅಧಿಪತಿ ಶುಕ್ರ ಸಹ ಅಲ್ಲೇ ಇದ್ದಾನೆ. ಹಾಗಾಗಿ ಶುಕ್ರನಿಂದ ನಿಮಗೆ ರಕ್ಷೆ ಇದೆ. ಹನ್ನೊಂದರಲ್ಲಿ ರಾಹು ಮತ್ತು ಕುಜ ಧನಲಾಭ ಕೊಡುತ್ತಾರೆ. ಇಬ್ಬರೂ ವೈರಿ ಗ್ರಹಗಳಾದರೂ ಲಾಭಸ್ಥಾನದಲ್ಲಿ ಇರುವುದರಿಂದ ದೋಷವಿಲ್ಲ. ಮನಸ್ಸನ್ನು ಕೆಡಿಸುವ ಸಂಗತಿಗಳು ನಡೆಯುತ್ತದೆ. ನೀವು ಸಮಾಧಾನ ಚಿತ್ತದಿಂದ ಇರಬೇಕು. ಎಲ್ಲವನ್ನು ಸಮಭಾವದಲ್ಲಿ ಸ್ವೀಕರಿಸಿ.

ಮಿಥುನ ರಾಶಿಯ ವಾರ ಭವಿಷ್ಯ
ಹನ್ನೊಂದನೇ ಮನೆಯಲ್ಲಿ ಬುಧ ಧನಲಾಭ ಕೊಟ್ಟರೂ ವ್ಯಯಸ್ಥಾನದಲ್ಲಿ ಗುರು, ಶುಕ್ರ, ಸೂರ್ಯ ಅಧಿಕ ಖರ್ಚುಗಳನ್ನು ಕೊಡುತ್ತಾರೆ. ವೃತ್ತಿ ಸ್ಥಾನದಲ್ಲಿ ಕುಜ ರಾಹು ಇರುವುದು ವೃತ್ತಿ ಸಂಬಂಧವಾಗಿ ಅಷ್ಟು ಒಳ್ಳೆಯದಲ್ಲ. ವರ್ಗಾವಣೆ, ಅಥವ ಮೇಲಧಿಕಾರಿಗಳ ಕಿರುಕುಳ ಆಗಬಹುದು. ಆದಷ್ಟು ಶಾಂತವಾಗಿ ಪರಿಸ್ಥಿತಿ ನಿಭಾಯಿಸಿ.

ಕಟಕ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಗುರುಬಲ ಬಂದಿರುವುದರಿಂದ ಕೊಂಚ ನಿರಾಳತೆ. ನಿಂತುಹೋಗಿದ್ದ ಕೆಲಸಗಳು ಚಾಲನೆ ಪಡೆದುಕೊಳ್ಳುತ್ತದೆ. ಅವಿವಾಹಿತರಿಗೆ ವಿವಾಹದ ಪ್ರಸ್ಥಾಪಗಳು ಬರುತ್ತದೆ. ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿಇದೆ. ವಿದೇಶಯಾತ್ರೆ ಮಾಡ ಬಯಸುವವರಿಗೆ ಅವಕಾಶಗಳು ಒದಗಿ ಬರುತ್ತದೆ. ಒಂಬತ್ತನೇ ಮನೆಯಲ್ಲಿ ಕುಜ ರಾಹು ಇರುವುದು ಕೊಂಚ ದೋಷಕರವಾಗಿದೆ. ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಮಾಡಿಸಿ ಉದ್ದು ತೊಗರಿಯನ್ನು ದಾನ ಕೊಡಿ.

ಸಿಂಹ ರಾಶಿಯ ವಾರ ಭವಿಷ್ಯ
ಈಗೀಗ ಕೊಂಚ ಎಲ್ಲ ಸಂಗತಿಗಳಲ್ಲೂ ಬಿಸಿ ತಾಕುತ್ತಿದೆ ನಿಮಗೆ. ಮನೆಯಲ್ಲಿ ವಿರೋಧದ ವಾತಾವರಣ, ಬಿಡುವಿಲ್ಲದ ಕೆಲಸಕಾರ್ಯಗಳು, ಊಟ ನಿದ್ರೆಗೂ ಅವಕಾಶವಿಲ್ಲದಂತೆ ಅಲೆದಾಟ, ವೃತ್ತಿ ಸ್ಥಾನದಲ್ಲಿ ಕಿರಿಕಿರಿ ಹಣದ ಅಡಚಣೆ ಎಲ್ಲವೂ ಇರುತ್ತದೆ. ಈಗ ನೀವು ಕತ್ತಿಯ ಮೇಲೆ ನಡೆದಂತೆ ಎಚ್ಚರಿಕೆಯಿಂದ ನಡೆಯಬೇಕು. ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಆದಷ್ಟು ಶಾಂತವಾಗಿರಲು ಪ್ರಯತ್ನ ಮಾಡಿ. ಧ್ಯಾನದಲ್ಲಿ ಮನಸ್ಸು ಕೇಂದ್ರೀಕರಿಸಿ. ಖರ್ಚುಗಳ ಮೇಲೆ ಹಿಡಿತ ಇರಲಿ. ಅತಿಯಾಗಿ ಯಾವುದನ್ನೂ ಮನಸ್ಸಿಗೆ ಹಚ್ವಿಕೊಳ್ಳಬೇಡಿ

ಕನ್ಯಾ ರಾಶಿಯ ವಾರ ಭವಿಷ್ಯ
ಗುರುಬಲದ ಅನುಭವ ಆಗುತ್ತಿದೆ ಈಗ ನಿಮಗೆ. ಕಷ್ಟಕರ ಅಂದುಕೊಂಡ ಕೆಲಸಗಳು ಸಲೀಸಾಗಿ ಆಗುತ್ತಿದೆ. ಧನಲಾಭವಂತೂ ಹೇರಳ. ಎಲ್ಲ ಕಡೆಯಿಂದಲೂ ಅವಕಾಶ ಅದೃಷ್ಟದ ಮಹಾಪೂರ. ಅವಿವಾಹಿತರಿಗೆ ವಿವಾಹದ ಪ್ರಸ್ತಾಪಗಳು ಬರುತ್ತಿವೆ. ಹೊಸ ನೌಕರಿ ಬಡ್ತಿ ಎಲ್ಲವೂ ಇದೆ. ಈಗ ಅದೃಷ್ಟ ಇರುವ ಐದು ರಾಶಿಗಳಲ್ಲಿ ನೀವೂ ಒಬ್ಬರು. ಬಂಧುಗಳೊಡನೆ ಸ್ನೇಹಿತರೊಡನೆ ವೈಮನಸ್ಯ ಇದ್ದರೆ ಪರಿಹಾರವಾಗುತ್ತದೆ. ಪದವಿ ಅಧಿಕಾರ ದೊರೆಯುವ ಯೋಗ.

ತುಲಾ ರಾಶಿಯ ವಾರ ಭವಿಷ್ಯ
ನಿಮಗೆ ಈಗ ಗುರುಬಲ ಇಲ್ಲ ಪಂಚಮ ಶನಿ ನಡೆಯುತ್ತಿದೆ. ಪಂಚಮ ಶನಿ ಆರೋಗ್ಯ ಮತ್ತು ಮರ್ಯಾದೆ ಗೌರವದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ. ನೀವು ಏನೋ ಮಾಡಲು ಹೋಗಿ ಮತ್ತೇನೋ ವಿವಾದ ಆಗಬಹುದು. ಯಾರಿಗೋ ಸಹಾಯ ಮಾಡಲು ಹೋಗಿ ನಿಮ್ಮ ಮರ್ಯಾದೆಗೆ ಧಕ್ಕೆ ಆಗಬಹುದು. ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು. ನೀವು ಏನೇ ಮಾಡಿದರೂ ಜಾಗರೂಕತೆಯಿಂದ ಒಂದಲ್ಲ ನಾಲ್ಕು ಬಾರಿ ಯೋಚಿಸಿ ಮುಂದುವರೆಯಿರಿ. ನಿಮ್ಮ ಯಾವುದೋ ಒಂದು ಗುರಿ ಮುಟ್ಟಬೇಕೆಂಬ ತವಕ ಅಥವಾ ನಿಮ್ಮ ಅತಿ ಉತ್ಸಾಹ ನಿಮ್ಮನ್ನು ಹಳ್ಳಕ್ಕೆ ದೂಡಬಹುದು.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇದೆ. ನಿಮ್ಮ ಸಮಸ್ಯೆಗಳಿಗೆಲ್ಲ ಒಂದು ಪರಿಹಾರದ ದಾರಿ ಕಾಣುತ್ತದೆ. ಕತ್ತಲೆಯ ದಾರಿಯಲ್ಲಿ ಗುರುಬಲ ಕೈದೀವಿಗೆಯಂತೆ ನಿಮ್ಮನ್ನು ಕಾಪಾಡುತ್ತದೆ. ಅರ್ಹರಿಗೆ ವಿವಾಹ ಪ್ರಸ್ಥಾಪಗಳು ಬರುತ್ತದೆ. ಹೊಸನೌಕರಿ ಬಡ್ತಿ ವಿಹಾರ ವಿದೇಶಯಾತ್ರೆ ಆಸ್ತಿ ಕೊಳ್ಳುವುದು ಮಾರುವುದು ಎಲ್ಲವೂ ಈಗ ನಿರ್ವಿಘ್ನವಾಗಿ ನೆರವೇರುತ್ತದೆ. ನೆನೆಗುದಿಗೆ ಬಿದ್ದ ಕೆಲಸಗಳೆಲ್ಲ ಈಗ ಚಾಲನೆ ಪಡೆದುಕೊಳ್ಳುತ್ತದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಈಗ ಗುರುಬಲ ಇಲ್ಲ. ಸಮಸ್ಯೆಗಳ ರಾಶಿಯೇ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ನಿಮಗಿರುವುದೆಲ್ಲ ಈಗ ಶನಿ ಬಲ. ಧನಾದಾಯ ಚೆನ್ನಾಗಿದೆ ಆದರೆ ಮಾನಸಿಕ ಕಿರಿಕಿರಿ ಖರ್ಚು ನೌಕರಿಯಲ್ಲಿ ಕಿರಿಕಿರಿ ಇರುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ತಾಯಿಯೊಂದಿಗೆ ವಿರೋಧ ಕೊಡುತ್ತಾನೆ. ವೃಥಾ ಮನಸ್ಸಿಗೆ ಕಿರುಕುಳ ಕೊಟ್ಟು ಸುಖ ಶಾಂತಿ ನೆಮ್ಮದಿ ಗಳನ್ನು ಕೆಡಿಸುತ್ತಾನೆ. ನೀವು ಎಲ್ಲವನ್ನೂ ಎದುರಿಸಿ ನಿಲ್ಲುತ್ತೀರಿ ಆದರೂ ಒಮ್ಮೊಮ್ಮೆ ಕುಸಿಯುವಂತೆ ಆಗುತ್ತದೆ.

ಮಕರ ರಾಶಿಯ ವಾರ ಭವಿಷ್ಯ
ಈಗ ನಿಮಗೆ ಸಾಡೆಸಾತಿ ಶನಿಯಿಂದ 95 % ಬಿಡುಗಡೆ ಆಗಿದೆ. ಈಗ ಗುರುಬಲ ರಾಹುಬಲ ಇದೆ. ನೀವು ಈಗ ಏನನ್ನಾದರೂ ಸಾಧಿಸಬಹುದು. ಉತ್ತಮ ಆರೋಗ್ಯ ಕೌಟುಂಬಿಕ ಸುಖಶಾಂತಿ, ಮನೆಯಲ್ಲಿ ಸಂಭ್ರಮ ಎಲ್ಲವೂ ಅನುಭವಿಸುತ್ತೀರಿ. ಅರ್ಹರಿಗೆ ವಿವಾಹಯೋಗ ಇದೆ. ಹೊಸ ನೌಕರಿ ಸಿಗಲಿದೆ. ಪದವಿ ಅಧಿಕಾರ ಸಿಗುತ್ತದೆ. ಹೊಸ ವಾಹನ ಖರಿದಿಸುತ್ತೀರಿ. ಆಸ್ತಿ ಖರೀದಿ ಯೋಗವೂ ಇದೆ. ಇನ್ನೇಲ್ಲ ಶುಭಸಂಗತಿಗಳೇ ನಡೆಯುತ್ತದೆ. ಭಾಗ್ಯೋದಯದ ಸಮಯ.

ಕುಂಭ ರಾಶಿಯ ವಾರ ಭವಿಷ್ಯ
ನಾಲ್ಕನೇ ಮನೆಯ ಗುರು ಸ್ವಲ್ಪ ಒತ್ತಡಗಳನ್ನು ಕೊಡುತ್ತಾನೆ. ತಾಯಿಯ ಆರೋಗ್ಯಕ್ಕೆ ಸಮಸ್ಯೆ. ವೃಥಾ ಅಲೆದಾಟ, ಅಪವಾದ, ಬರುವ ಹಣ ಬಾರದೇ ಇರುವುದು, ಅನಾರೋಗ್ಯ ಮುಂತಾದ ಸಮಸ್ಯೆಗಳು ಇವೆ. ಖರ್ಚು ನಿಮ್ಮ ಹಿಡಿತ ಮೀರುತ್ತದೆ. ಕೌಟುಂಬಿಕ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬಂದು ಮನೆಯಲ್ಲಿ ನೆಮ್ಮದಿಗೆ ಧಕ್ಕೆಯಾಗುತ್ತದೆ. ಕಚೇರಿಯಲ್ಲಿ ಬಿಸಿ ಬಿಸಿ ವಾತಾವರಣ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ನಿಭಾಯಿಸಿ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸಾಕಷ್ಡು ಮುನ್ನೆಚ್ಚರಿಕೆ ವಹಿಸಿ.

ಮೀನ ರಾಶಿಯ ವಾರ ಭವಿಷ್ಯ
ನಿಮಗೂ ಕುಂಭರಾಶಿಗೆ ಹೇಳಿದ್ದೇ ಅನ್ವಯಿಸುತ್ತದೆ. ದುಡುಕಬೇಡಿ. ಒಂದಲ್ಲ ಹತ್ತು ಬಾರಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಹಣದ ಅಡಚಣೆ ಬಹಳ ಇರುತ್ತದೆ. ಹೆಚ್ಚಿನ ಯೋಜನೆಗಳನ್ನು ಹಾಕಬೇಡಿ. ಆದಷ್ಟು ಪ್ರಾಮಾಣಿಕತೆ ಯಿಂದ ಇರಿ. ದೇವರ ಪ್ರಾರ್ಥನೆ ದಾನಧರ್ಮ ನಿಮ್ಮನ್ನು ಕಾಪಾಡುತ್ತದೆ.












Click it and Unblock the Notifications