ನವರಾತ್ರಿ 4ನೇ ದಿನ: ಸೂರ್ಯನನ್ನೇ ನಿಯಂತ್ರಿಸೋ ಕೂಷ್ಮಾಂಡಾಗೆ ಏನಿಷ್ಟ? ಮಾಡೋದು ಹೇಗೆ?
Navaratri day 4;ಈಗಾಗಲೇ ನವರಾತ್ರಿ ಅಕ್ಬೋಬರ್ 11ರಿಂದ ಆರಂಭವಾಗಿದ್ದು, ಎಲ್ಲೆಡೆ ದೇವಿಯನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸಲಾಗುತ್ತಿದೆ. ನವರಾತ್ರಿಯ ನಾಲ್ಕನೇ ದಿನ ಬ್ರಹ್ಮಾಂಡದ ಸೃಷ್ಟಿಕರ್ತೆ ಎಂದು ಪರಿಗಣಿಸುವ ಕೂಷ್ಮಾಂಡಾ ದೇವಿಯನ್ನು ಆರಾಧಿಸಲಾಗುತ್ತದೆ. 'ಕು' ಎಂದರೆ ಸ್ವಲ್ಪ, 'ಉಷ್ಮಾ' ಎಂದರೆ ಉಷ್ಣತೆ ಅಥವಾ ಶಕ್ತಿ ಮತ್ತು 'ಆಂಡಾ' ಎಂದರೆ ಬ್ರಹ್ಮಾಂಡ. ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗಿದ್ದಾಗ, ಈ ದೇವಿ ತನ್ನ ನಗುವಿನಿಂದಲೇ ಬ್ರಹ್ಮಾಂಡವನ್ನು ಸೃಷ್ಟಿಸಿದಳು ಎಂಬ ನಂಬಿಕೆಯಿದೆ. ಸೂರ್ಯನ ಮಧ್ಯ ಭಾಗದಲ್ಲಿ ನೆಲೆಸಿರುವ ಈಕೆ , ತೇಜಸ್ಸನ್ನು ನಿಯಂತ್ರಿಸುವ ಶಕ್ತಿ ಈಕೆಗಿದೆ .ಸಿಂಹ ಅಥವಾ ಹುಲಿಯ ಮೇಲೆ ಸವಾರಿ ಮಾಡುವ ಈ ದೇವಿಗೆ ಎಂಟು ಕೈಗಳಿದ್ದು, ಕಮಂಡಲ, ಬಿಲ್ಲು, ಬಾಣ, ಕಮಲ, ಅಮೃತ ಕಲಶ, ಚಕ್ರ, ಗದೆ ಮತ್ತು ಜಪಮಾಲೆಯನ್ನು ಧರಿಸಿದ್ದಾಳೆ. ಈಕೆ ತನ್ನ ಭಕ್ತರಿಗೆ ಆರೋಗ್ಯ, ಆಯುಷ್ಯ, ಸಂಪತ್ತು ಮತ್ತು ಶಕ್ತಿಯನ್ನು ಕರುಣಿಸುತ್ತಾಳೆ.

ಗಾಢನೀಲಿ ಪ್ರಿಯವಾದ ದೇವಿಗೆ ಗಾಢ ನೀಲಿ ಇಷ್ಟವಾಗಿದ್ದು, ಸಮೃದ್ಧಿ, ಶಕ್ತಿ ಹಾಗೂ ಆರೋಗ್ಯದ ಸೂಚಕವಿದು. ಸೂರ್ಯನ ತೇಜಸ್ಸನ್ನು ಪ್ರತಿನಿಧಿಸುವ ಕಿತ್ತಳೆ ಹಾಗೂ ಹಳದಿ ಬಣ್ಣವೂ ಈ ದೇವಿಗಿಷ್ಟ. ಇವಳಿಗೂ ಮಲ್ಲಿಗೆ ಪ್ರಿಯ ಪುಷ್ಪ. ಕೆಂಪು, ಹಳದಿ ದಾಸವಾಳವನ್ನೂ ಅರ್ಪಿಸಲಾಗುತ್ತದೆ. ಮಾಲ್ಪೂವಾ ಹಾಗೂ ಚಿತ್ರಾನ್ನ ಈ ದೇವಿಗೆ ಇಷ್ಟವಾದ ನೇವೇದ್ಯ. ಇವನ್ನು ಮಾಡುವುದು ಹೇಗೆ?
Navaratri day 4: ಮಾಲ್ಪುವಾ ಮಾಡೋದು ಹೇಗೆ?
ಮಾಲ್ಪುವಾ (Malpua) ಅಥವಾ ಅತ್ರಸಾವನ್ನು ಮೈದಾ, ರವೆ ಅಥವಾ ಅಕ್ಕಿ ಹಿಟ್ಟು ಮಾಡ್ಕೊಂಡು, ಎಣ್ಣೆ ಅಥವಾ ತುಪ್ಪದಲ್ಲಿ ಕರಿದು, ನಂತರ ಸಕ್ಕರೆ ಪಾಕದಲ್ಲಿ ಅದ್ದಿ ಸಿದ್ಧಪಡಿಸಲಾಗುವ ಒಂದು ರೀತಿಯ ಸಿಹಿ ಪ್ಯಾನ್‌ಕೇಕ್ ಎಂದು ಕರೆಯಬಹುದು. ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟಿಗೆ ಹಾಲು, ಮೊಸರು, ಬಾಳೆಹಣ್ಣು (banana) ಮತ್ತು ಸೋಂಪು ಕಾಳುಗಳನ್ನು (fennel seeds) ಸೇರಿಸಿ ದಪ್ಪನೆಯ ಮಿಶ್ರಣ ಮಾಡಿಕೊಳ್ಳಲಾಗುತ್ತದೆ. ಇದನ್ನು ಸಣ್ಣ ಸಣ್ಣ ಪ್ಯಾನ್‌ಕೇಕ್‌ಗಳ ಆಕಾರದಲ್ಲಿ ಎಣ್ಣೆ ಅಥವಾ ತುಪ್ಪದಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿದು, ನಂತರ ಏಲಕ್ಕಿ ಮಿಶ್ರಿತ ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
• ಹಿಟ್ಟು: 1 ಕಪ್ ಮೈದಾ ಅಥವಾ ಗೋಧಿ ಹಿಟ್ಟು
• ಸಕ್ಕರೆ: 1 ಕಪ್
• ಹಾಲು: ಮುಕ್ಕಾಲು ಕಪ್
• ಏಲಕ್ಕಿ ಪುಡಿ: ಅರ್ಧ ಸ್ಪೂನ್
• ಸೋಂಪು ಕಾಳು (Fennel powder): ಅರ್ಧ ಸ್ಪೂನ್ (ರುಚಿಗಾಗಿ)
• ತುಪ್ಪ ಅಥವಾ ಎಣ್ಣೆ: ಕರಿಯಲು ಬೇಕಾದಷ್ಟು
• ನೀರು: ಸಕ್ಕರೆ ಪಾಕ ಮಾಡಲು
ಮಾಲ್ಪುವಾ ಮಾಡುವ ವಿಧಾನ:
• ಪಾತ್ರೆಗೆ 1 ಕಪ್ ಸಕ್ಕರೆ ಮತ್ತು ಅರ್ಧ ಕಪ್ ನೀರು ಹಾಕಿ ಕುದಿಸಿ, ಪಾಕ ಬಂದ ನಂತರ ಸ್ಟವ್ ಆಫ್ ಮಾಡಿ, ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ.
• ಒಂದು ಪಾತ್ರೆಯಲ್ಲಿ ಮೈದಾ ಅಥವಾ ಗೋಧಿ ಹಿಟ್ಟು ತೆಗೆದುಕೊಳ್ಳಿ.ಸ್ವಲ್ಪ ಸ್ವಲ್ಪವೇ ಹಾಲು ಮತ್ತು ನೀರು ಸೇರಿಸಿ ಗಂಟುಗಳಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಇದಕ್ಕೆ ಸೋಂಪು ಮತ್ತು ಉಳಿದ ಏಲಕ್ಕಿ ಪುಡಿ ಸೇರಿಸಿ 10 ನಿಮಿಷ ಹಾಗೇ ಬಿಡಿ.
ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಸೌಟಿನಲ್ಲಿ ಸ್ವಲ್ಪ ಹಿಟ್ಟನ್ನು ತೆಗೆದು ಮಧ್ಯಭಾಗಕ್ಕೆ ಹಾಕಿ. ಸಿಮ್‌ನಲ್ಲಿಟ್ಟು ಎರಡೂ ಕಡೆ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಕರಿದಿದ್ದನ್ನು ಸಕ್ಕರೆ ಪಾಕದಲ್ಲಿ 1-2 ನಿಮಿಷ ಹಾಕಿ. ನಂತರ ಹೊರತೆಗೆದು ಒಣಹಣ್ಣುಗಳಿಂದ ಅಲಂಕರಿಸಿ.
ಚಿತ್ರಾನ್ನ ಮಾಡೋದು ಹೇಗೆ?
ಕೂಷ್ಮಾಂಡಗೆ ಮಾಲ್ಪೂವಾ ಜೊದೆ ಚಿತ್ರಾನ್ನವನ್ನು ಮಾಡಲಾಗುತ್ತದೆ. ಇದನ್ನು ಮಾಡಲು ಹೇಗೆ?
• ಅಕ್ಕಿ (ಅಥವಾ ಈಗಾಗಲೇ ಬೇಯಿಸಿದ ಅನ್ನ. ಸ್ವಲ್ಪ ಉದರು ಉದರಾಗಿರಲಿ): 1 ಕಪ್
• ಎಣ್ಣೆ: 2 ಟೇಬಲ್ ಸ್ಪೂನ್
• ಸಾಸಿವೆ: 1 ಟೀಸ್ಪೂನ್
• ಕಡ್ಲೆಬೀಜ (ಶೇಂಗಾ): 2 ಟೇಬಲ್ ಸ್ಪೂನ್
• ಕಡ್ಲೆಬೇಳೆ ಹಾಗೂ ಉದ್ದಿನಬೇಳೆ: ತಲಾ 1 ಟೀಸ್ಪೂನ್
• ಹಸಿಮೆಣಸಿನಕಾಯಿ: 2-3 (ಸಣ್ಣಗೆ ಹೆಚ್ಚಿದವು)
• ಕರಿಬೇವಿನ ಸೊಪ್ಪು: 1 ಎಸಳು
• ಇಂಗು: ಚಿಟಿಕೆಯಷ್ಟು
• ಅರಿಶಿನ ಪುಡಿ: ಅರ್ಧ ಟೀಸ್ಪೂನ್
• ನಿಂಬೆ ಹಣ್ಣಿನ ರಸ: 1 ರಿಂದ 2 ಟೇಬಲ್ ಸ್ಪೂನ್
• ಉಪ್ಪು: ರುಚಿಗೆ ತಕ್ಕಷ್ಟು
• ಕೊತ್ತಂಬರಿ ಸೊಪ್ಪು: ಸ್ವಲ್ಪ (ಸಣ್ಣಗೆ ಹೆಚ್ಚಿದ)
ಮಾಡುವ ವಿಧಾನ:
1. ಅನ್ನ ತಯಾರಿಸಿಟ್ಟುಕೊಂಡು, ಸ್ವಲ್ಪ ತಣಿಯಲು ಬಿಡಿ.
2. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಸಾಸಿವೆ ಸಿಡಿದ ನಂತರ ಕಡ್ಲೆಬೀಜ, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಇಂಗು ಮತ್ತು ಅರಿಶಿನ ಪುಡಿ ಹಾಕಿ ಚೆನ್ನಾಗಿ ಬಾಡಿಸಿ. ಉಪ್ಪು ಮತ್ತು ನಿಂಬೆರಸ: ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗ್ಯಾಸ್ ಆಫ್ ಮಾಡಿ. ನಂತರ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತಯಾರಾದ ಒಗ್ಗರಣೆಗೆ ತಣ್ಣಗಾದ ಅನ್ನವನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಕಲಸಿದರೆ ಸುವಾಸನೆಯುಕ್ತ ಚಿತ್ರಾನ್ನ ನವರಾತ್ರಿ (navaratri) ನೇವೇದ್ಯಕ್ಕೆ ಸಿದ್ಧವಾಗುತ್ತದೆ.


Click it and Unblock the Notifications
