ಪ್ರಳಯದ ಬುರುಡೆ ಕಥೆ ಬಗ್ಗೆ ನಾಸಾ ಹೇಳಿದ್ದೇನು?
ಡಿ.21, 2012ರಂದು ಪ್ರಳಯವಾಗುತ್ತದೆ ಎಂಬುದು ಸುಳ್ಳು ಸುದ್ದಿ. ಊಹಾಪೋಹಗಳಿಗೆ ಕಿವಿಕೊಡಬೇಡಿ. ಸಾರ್ವಜನಿಕರಿಗೆ ಪ್ರಳಯದ ಭೀತಿ ಬೇಡ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.
2012 ಡಿಸೆಂಬರ್ ನಲ್ಲಿ ಮಾಯನ್ ಕ್ಯಾಲೆಂಡರ್ ಪ್ರಕಾರವೂ ಜಗತ್ತು ಅಂತ್ಯವಾಗುವುದಿಲ್ಲ. ಅಂತ್ಯವಾದರೂ ಅದು ಬರೀ ಕ್ಯಾಲೆಂಡರ್ ಅಂಕಿಗಳು ಮಾತ್ರ. ಜಗತ್ತಿನ ಆಗು ಹೋಗುಗಳಲ್ಲ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಪ್ರಳಯದ ಬಗ್ಗೆ ಎದ್ದಿರುವ ಅನೇಕ ಪ್ರಶ್ನೆಗಳಿಗೆ ನಾಸಾ ತನ್ನ ವೆಬ್ ಸೈಟ್ ಮೂಲಕ ಉತ್ತರ ನೀಡಿದೆ.. ಪ್ರಶ್ನೋತ್ತರ ಮಾಲೆ ಇಲ್ಲಿದೆ.

ವೆಬ್ ಸೈಟ್ ಗಳಲ್ಲಿ 2012ರಲ್ಲಿ ವಿಶ್ವ ಕೊನೆಗೊಳ್ಳಲಿದೆ ಎಂದು ವರದಿ ಇದೆ, ಜಗತ್ತಿಗೆ ಏನಾದರೂ ಆಪತ್ತು ಕಾದಿದೆಯೆ?
2012ಕ್ಕೆ ಸಂಬಂಧಿಸಿ ಯಾವುದೇ ಬೆದರಿಕೆಯಿಲ್ಲ. 4 ಬಿಲಿಯನ್ ವರ್ಷಗಳಿಗಿಂತ ಗ್ರಹವು ಇನ್ನಷ್ಟು ಉತ್ತಮಗೊಳ್ಳುತ್ತಿದೆ ಎಂಬುದು ವಿಶ್ವದ ಎಲ್ಲ ವಿಜ್ಞಾನಿಗಳಿಗೆ ಚೆನ್ನಾಗಿ ತಿಳಿದಿದೆ ಎಂದು ನಾಸಾ ತನ್ನ ವೆಬ್ ಸೈಟ್ ನಲ್ಲಿ ಸ್ಪಷ್ಟಪಡಿಸಿದೆ

ವಿಶ್ವ ಕೊನೆಗೊಳ್ಳಲಿದೆ ಎಂಬ ಹೇಳಿಕೆ ಮೂಲ ಯಾವುದು?
ನಿಬಿರು ಎಂದು ಕರೆಯುವ ಕಾಲ್ಪನಿಕ ಗ್ರಹದ ಜೊತೆಗೆ ಈ ಎಲ್ಲಾ ಕಥೆ ಹುಟ್ಟುಕೊಂಡಿದೆ. ಸುಮೇರಿಯನ್ನರು ಕಂಡು ಹಿಡಿದ ಈ ಗ್ರಹ ಜಗತ್ತಿನೆಡೆಗೆ ಧಾವಿಸುತ್ತಿದೆ ಎಂದು ಬಿಂಬಿಸಲಾಗಿದೆ. 2003ರಲ್ಲೇ ನಿಬಿರು ಭಾರತಕ್ಕೆ ಬಂದು ಅಪ್ಪಳಿಸಲಿದೆ ಎನ್ನಲಾಗಿತ್ತು.
ಆದರೆ, ಆಗೇನು ಆಗಲಿಲ್ಲ. ಈಗ ಮತ್ತೊಮ್ಮೆ ಡಿಸೆಂಬರ್ 2012ರಲ್ಲಿ ಜನರಲ್ಲಿ ಇದೇ ಭೀತಿ ತುಂಬಲಾಗುತ್ತಿದೆ. ಇದಕ್ಕೆ ಮಾಯನ್ ಕ್ಯಾಲೆಂಡರ್ ಕೊನೆಗೊಳ್ಳಲಿದೆ ಎಂದು ಇನ್ನಷ್ಟು ಪೊಳ್ಳು ಪುರಾವೆ ಒದಗಿಸಲಾಗಿದೆ.

ಮಾಯನ್ ಕ್ಯಾಲೆಂಡರ್ ಡಿಸೆಂಬರ್ 2012ಕ್ಕೆ ಕೊನೆಗೊಳ್ಳುವುದು ನಿಜವೇ?
ನಿಮ್ಮ ಮನೆಯಲ್ಲಿರೋ ಯಾವುದೇ ಕ್ಯಾಲೆಂಡರ್ ಅವಧಿ ಮುಗಿಯುವಂತೆ ಡಿಸೆಂಬರ್ 31 ಕ್ಕೆ ಈ ಕ್ಯಾಲೆಂಡರ್ ಕೂಡಾ ಬದಲಾಗುತ್ತೆ. ಡಿಸೆಂಬರ್ 21,2012ಕ್ಕೆ ಮಾಯನ್ ಕ್ಯಾಲೆಂಡರ್ ಕೊನೆಗೊಳ್ಳುತ್ತಿಲ್ಲ. ಜನವರಿ 1ಕ್ಕೆ ಮತ್ತೆ ಗಣನೆ ಆರಂಭವಾಗಲಿದೆ. ಇದರಿಂದ ಯಾವುದೇ ಜಾಗತಿಕ ವ್ಯತ್ಯಯ ಉಂಟಾಗುವುದಿಲ್ಲ.

ಡಿ 23 ರಿಂದ ಡಿ.25 ರ ವೇಳೆಯಲ್ಲಿ ಸಂಪೂರ್ಣ ಕಗ್ಗತ್ತಲು ಆವರಿಸಲಿದೆಯೇ?
ಈ ರೀತಿ ಟೋಟಲ್ ಬ್ಲಾಕ್ ಔಟ್ ಬಗ್ಗೆ ನಾಸಾ ಆಗಲಿ ಯಾವುದೇ ವಿಜ್ಞಾನಿಯಾಗಲಿ ಹೇಳಿಲ್ಲ.
1962ರಲ್ಲಿ ಹಾಗೂ 1982 ಮತ್ತು 2000 ರಲ್ಲಿ ಈ ರೀತಿ ಯೂರ್ನಿವರ್ಸಲ್ ಅಲೈನ್ ಮೆಂಟ್ ಸಂಭವಿಸಿತ್ತು. ಮಿಲ್ಕಿ ವೇ ಗ್ಯಾಲಕ್ಸಿ(ಅಕಾಶಗಂಗೆ ನಕ್ಷತ್ರಪುಂಜದ ಮಧ್ಯಭಾಗಕ್ಕೆ ಸೂರ್ಯ ಮತ್ತು ಭೂಮಿ ಸಾಮಾನಾಂತರವಾಗಿ ಹೊಂದಾಣಿಕೆಯಾಗುವುದು ವಾರ್ಷಿಕ ಪ್ರಕ್ರಿಯೆಯಾಗಿದೆ. ಇದರಿಂದ ಯಾವುದೇ ಪರಿಣಾಮ ಜನಜೀವನ, ಪ್ರಕೃತಿಯ ಮೇಲೆ ಆಗದು.

ನಿಬಿರು ಗ್ರಹ ಇರುವುದು ನಿಜವೇ? ಕಂದು ಬಣ್ಣದ ಕುಬ್ಜ ಗ್ರಹ ಅಥವಾ ಎರಿಸ್ ಜಗತ್ತಿಗೆ ಅಪ್ಪಳಿಸಲಿದೆಯೇ?
ನಿಬಿರು ಗ್ರಹ ಅಥವಾ ಇತರೆ ಕಂದು ಬಣ್ಣದ ಕುಬ್ಜ ಗ್ರಹಗಳು ಭೂಮಿಗೆ ಅಪ್ಪಳಿಸುವುದು ಇಂಟರ್ನೆಟ್ ನಲ್ಲಿ ಹರಿದಾಡಿರುವ ಸುಳ್ಳು ಕಥೆ. ನಿಬಿರು ಅಥವಾ ಪ್ಲಾನೆಟ್ X ಭೂ ಗ್ರಹದೆಡೆಗೆ ಧಾವಿಸುತ್ತಿದ್ದರೆ ದಶಕದ ಹಿಂದೆಯೇ ಖಗೋಳ ಶಾಸ್ತ್ರಜ್ಞರಿಗೆ ತಿಳಿಯುತ್ತಿತ್ತು. ನಿಬಿರು ಇರೋದು ನಿಜವಾಗಿದ್ದರೆ ಈ ವೇಳೆಗೆ ಬರೀ ಕಣ್ಣಿಗೆ ಕಾಣಿಸುತ್ತಿತ್ತು.
ಪ್ಲುಟೋನಂತೆ ಎರೀಸ್ ಕುಬ್ಜ ಗ್ರಹ, ಸೌರ ಮಂಡಲದ ಹೊರ ವಲಯದಲ್ಲಿದೆ. ಇದರಿಂದ ಅಪಾಯವಿಲ್ಲ. ಭೂ ಗ್ರಹದಿಂದ 4 ಬಿಲಿಯನ್ ಮೈಲಿಗಳ ದೂರದಲ್ಲಿ ಸಂಚರಿಸಬಹುದು.

2012ರ ಕೊನೆಗೆ ಉಲ್ಕಾಪಾತ ಸಾಧ್ಯತೆಯಿದೆಯೇ?
ಭೂ ಗ್ರಹಕ್ಕೆ ಧೂಮಕೇತುಗಳು, ಉಲ್ಕಾಪಾತಗಳು ಹೊಸದೇನಲ್ಲ. ಆದರೆ, ಬೃಹತ್ ಗಾತ್ರದ ಉಲ್ಕೆಗಳ ದಾಳಿ ಅತಿ ವಿರಳ.
65 ಮಿಲಿಯನ್ ವರ್ಷಗಳ ಕೆಳಗೆ ಬೃಹತ್ ಉಲ್ಕೆಗಳು, ಧೂಮಕೇತು ದಾಳಿ ಸಂಭವಿಸಿತ್ತು ಎಂದು ನಂಬಲಾಗಿದೆ. ಇದರಿಂದ ದೈತ್ಯ ಸರಿಸೃಪಗಳಾದ ಡೈನೋಸರಸ್ ನಾಶಗೊಂಡಿದೆ ಎನ್ನಲಾಗಿದೆ.
ನಾಸಾದ ಖಗೋಳ ವಿಜ್ಞಾನಿಗಳು ಭೂಗ್ರಹಕ್ಕೆ ಅಪ್ಪಳಿಸಬಹುದಾದ ಉಲ್ಕೆಗಳು, ಧೂಮಕೇತು, ಕ್ಷುದ್ರ ಗ್ರಹ(asteroids) ಗಳ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಿಸಿದ್ದಾರೆ. ದೈತ್ಯ ಸರೀಸೃಪಗಳನ್ನು ನಾಶಮಾಡಿದಂಥ ಕ್ಷುದ್ರಗ್ರಹಗಳು ಭೀತಿ ಸದ್ಯಕ್ಕಂತೂ ಇಲ್ಲ.

ಸೌರ ಮಾರುತ, ವಿಕಿರಣದ ದಾಳಿ ಸಾಧ್ಯತೆ?
ಸೌರ ಮಂಡಲದ ಸಹಜ ಪ್ರಕ್ರಿಯೆಗಳಿಂದ ಭೂಮಿ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ. ಸೌರ ಮಾರುತಗಳ ಪ್ರಖರತೆ 11 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ.
ಇದರಿಂದ ಉಪಗ್ರಹ ಸಂವಹನ ಶಕ್ತಿ ಕೆಲಕಾಲ ವ್ಯತ್ಯಯ ವಾಗಬಹುದು ಅಷ್ಟೇ. ಸಾಮಾನ್ಯವಾಗಿ ಟಿವಿಯಲ್ಲಿ ಈ ರೀತಿ ಸಂದೇಶವನ್ನು ಪ್ರಸಾರ ಮಾಡುವುದನ್ನು ಕಂಡಿರಬಹುದು. 2012ರಲ್ಲಿ ಜಗತ್ತನ್ನೇ ನಾಶ ಮಾಡಬಲ್ಲ ವಿಕಿರಣವಾಗಲಿ, ಸೌರ ಮಾರುತವಾಗಲಿ ಭೂಮಿಗೆ ತಟ್ಟುವುದಿಲ್ಲ.












Click it and Unblock the Notifications