Shravana: ಶ್ರಾವಣ ಮಾಸದಲ್ಲಿ ಮನೆಯಲ್ಲಿ ಈ 3 ಗಿಡ ನೆಟ್ಟರೆ ಸಿಗುತ್ತೆ ಶಿವನ ಆಶೀರ್ವಾದ! ಹೆಚ್ಚುತ್ತೆ ಸಿರಿ-ಸಂಪತ್ತು

ಹಿಂದೂ ಸಂಪ್ರದಾಯದಲ್ಲಿ, ಶ್ರಾವಣ ಮಾಸವನ್ನು ಶಿವನಿಗೆ ಅತ್ಯಂತ ಶುಭ ಸಮಯವೆಂದು ಹೇಳಲಾಗುತ್ತದೆ. ಈ ತಿಂಗಳಲ್ಲಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶಿವನಿಗೆ ಜಲ ಅಭಿಷೇಕ ಮಾಡುತ್ತಾರೆ. ಬಿಲ್ವಪತ್ರೆಗಳನ್ನು ಅರ್ಪಿಸುತ್ತಾರೆ. ಈ ಮಾಸದಲ್ಲಿ ಆಚರಿಸುವ ಉಪವಾಸ ವ್ರತಕ್ಕೆ ವಿಶೇಷ ಮಹತ್ವವಿದೆ. ಈ ತಿಂಗಳಲ್ಲಿ ಭಕ್ತರು ಭಕ್ತಿಯಿಂದ ಶಿವನನ್ನು ಪೂಜಿಸಿದರೆ, ಅವರ ಇಷ್ಟಾರ್ಥಗಳು ಈಡೇರುತ್ತವೆ. ಜೀವನದಲ್ಲಿನ ಅನೇಕ ಕಷ್ಟಗಳು ದೂರವಾಗುತ್ತವೆ ಎನ್ನುವುದು ನಂಬಿಕೆ. 2026ರ ಶ್ರಾವಣ ಮಾಸ ಆಗಸ್ಟ್‌ 13ರಿಂದ ಆರಂಭವಾಗುತ್ತದೆ.

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸದಲ್ಲಿ ಕೆಲವು ವಿಶೇಷ ಸಸ್ಯಗಳನ್ನು ನೆಡುವುದು, ಪೂಜಿಸುವುದು ಮತ್ತು ಆರೈಕೆ ಮಾಡುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಈ ಸಸ್ಯಗಳಿಗೆ ವಿಶೇಷ ಮಹತ್ವವಿದ್ದು ಶ್ರಾವಣ ಮಾಸದಲ್ಲಿ ಇದು ಇನ್ನಷ್ಟು ಶ್ರೇಷ್ಠವಾಗಿರುವುದು.

Shravana

ಶಿವನಿಗೆ ಬಿಲ್ವದಳ ಅರ್ಪಿಸಿ

ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ ಶಿವಲಿಂಗಕ್ಕೆ ಜಲಭಿಷೇಕ ಮಾಡುವುದು ತುಂಬಾ ಶುಭ. ಇನ್ನು ಶಿವನಿಗೆ ಜಲ ಅರ್ಪಿಸುವಾಗ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ಜಪಿಸುತ್ತಾ ಭಕ್ತಿಯಿಂದ ಶಿವಲಿಂಗವನ್ನು ಪೂಜಿಸಿದರೆ ಶಿವನ ಆಶೀರ್ವಾದ ಸಿಗುತ್ತದೆ. ಶಿವನಿಗೆ ಬಿಲ್ವದಳವನ್ನು ಅರ್ಪಿಸುವುದರಿಂದ ಪಾಪಗಳು ದೂರವಾಗುತ್ತವೆ. ಜೀವನದಲ್ಲಿನ ಕಷ್ಟಗಳು ಕರಗುತ್ತವೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಒಲಿಯುವಂತೆ ಮಾಡುತ್ತದೆ ಎಂದು ಪುರಾಣಗಳು ಹೇಳುತ್ತವೆಯಂತೆ.

ಬಿಲ್ವಪತ್ರೆಯ ಗಿಡ

ಶ್ರಾವಣ ಮಾಸದಲ್ಲಿ ಬಿಲ್ವ ಪತ್ರೆಯ ಮರವನ್ನು ನೆಡುವುದು ಬಹಳ ಶುಭವಾಗಿರುತ್ತದೆ. ಮನೆಯ ಸುತ್ತಲೂ ಜಾಗವಿದ್ದರೆ, ಬಿಲ್ವಪತ್ರೆ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡಬಹುದು. ಜಾಗವಿಲ್ಲದಿದ್ದರೆ, ಅದನ್ನು ಕುಂಡದಲ್ಲಿಯೂ ಬೆಳೆಸಬಹುದು. ಪ್ರತಿದಿನ ಸ್ವಲ್ಪ ನೀರು ಹಾಕುವ ಮೂಲಕ ಗಿಡವನ್ನು ನೋಡಿಕೊಳ್ಳುವುದು ಒಳ್ಳೆಯದು. ಆದರೆ, ಶ್ರಾವಣ ಮಾಸದಲ್ಲಿ ನೆಟ್ಟ ಬಿಲ್ವಪತ್ರೆ ಗಿಡದ ಎಲೆಗಳನ್ನು ಪೂಜೆಗೆ ತೆಗೆಯಬಾರದು. ಪೂಜೆಗೆ ಅಗತ್ಯವಿರುವ ಬಿಲ್ವ ಎಲೆಗಳನ್ನು ದೊಡ್ಡ ಮರದಿಂದ ಅಥವಾ ಮಾರುಕಟ್ಟೆಯಿಂದ ತರಬೇಕು ಎಂದು ಹೇಳಲಾಗುತ್ತದೆ.

ಶಮಿ ಗಿಡ

ಶಮಿ ಗಿಡವು ಶಿವನಿಗೆ ಪ್ರಿಯವಾದ ಗಿಡಗಳಲ್ಲಿ ಒಂದು. ಮನೆಯ ಉತ್ತರ ದಿಕ್ಕಿನಲ್ಲಿರುವ ಕುಂಡದಲ್ಲಿ ಈ ಗಿಡವನ್ನು ಬೆಳೆಸಿದರೆ ಶುಭ ಎಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಶಮಿ ಎಲೆಗಳನ್ನು ಅರ್ಪಿಸುವುದರಿಂದ ಕುಟುಂಬದಲ್ಲಿನ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನುವುದು ನಂಬಿಕೆ. ಈ ಗಿಡವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬ ಸದಸ್ಯರಿಗೆ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಅನೇಕ ಜನರು ಶ್ರಾವಣ ಮಾಸದಲ್ಲಿ ಶಮಿ ಗಿಡವನ್ನು ನೆಟ್ಟು ಪ್ರತಿದಿನ ಪೂಜಿಸುತ್ತಾರೆ.

ಎಕ್ಕದ ಹೂವು

ಶಿವನ ಪೂಜೆಯಲ್ಲಿ ಎಕ್ಕದ (ಎಕ್ಕೆ) ಹೂವಿನ ಸಸ್ಯಕ್ಕೂ ವಿಶೇಷ ಸ್ಥಾನವಿದೆ. ಇದರ ವಿಶೇಷತೆಯೆಂದರೆ ಈ ಸಸ್ಯದ ಎಲೆಗಳನ್ನು ಒಡೆದಾಗ ಬಿಳಿ ಹಾಲು ಹೊರಬರುತ್ತದೆ. ಶ್ರಾವಣ ಸಮಯದಲ್ಲಿ ಶಿವನಿಗೆ ಎಕ್ಕದ ಎಲೆಗಳನ್ನು ಅರ್ಪಿಸುವುದರಿಂದ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ದೊರೆಯುತ್ತದೆ ಎನ್ನಲಾಗಿದೆ. ಇದು ಮನೆಯಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶಿವನನ್ನು ಭಕ್ತಿ ಮತ್ತು ಭಾವದಿಂದ ಪೂಜಿಸುವ ಪ್ರತಿಯೊಬ್ಬರೂ ಆತನ ವಿಶೇಷ ಆಶೀರ್ವಾದ ಪಡೆಯುತ್ತಾರೆ.

ಶ್ರಾವಣ ಮಾಸದಲ್ಲಿ ಗಿಡಗಳನ್ನು ನೆಡುವುದು ಮಾತ್ರವಲ್ಲದೆ, ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಕೂಡಾ ಅಗತ್ಯವಾಗಿದೆ. ಪ್ರತಿದಿನ ಶಿವನಾಮವನ್ನು ಜಪಿಸುವುದು ಮತ್ತು ಸಾತ್ವಿಕ ಜೀವನಶೈಲಿಯನ್ನು ಅನುಸರಿಸುವುದು ಸಹ ಬಹಳ ಮುಖ್ಯ. ಭಕ್ತಿ ಮತ್ತು ನಂಬಿಕೆಯಿಂದ ಮಾಡುವ ಪೂಜೆಯಿಂದ ಶಿವನನ್ನು ಪ್ರಸನ್ನಗೊಳಿಸಬಹುದು. ಈ ಮೂಲಕ ಶಿವ ನಮ್ಮ ಜೀವನದಲ್ಲಿ ಶಾಂತಿ, ಸಂಪತ್ತು ಮತ್ತು ಆರೋಗ್ಯವನ್ನು ದಯಪಾಲಿಸುತ್ತಾನೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+