ಕಟಕ-ಸಿಂಹ ರಾಶಿಯಲ್ಲಿ ಗುರು ಗ್ರಹ ಸಂಚಾರ; ಯಾವ ರಾಶಿಗೆ ಏನು ಫಲ, ಏನಿದೆ ಸುಲಭ ಪರಿಹಾರ? -ಇಲ್ಲಿದೆ ವಿವರ
ಇದೇ ಜೂನ್ 2, 2026ಕ್ಕೆ ಕರ್ಕಾಟಕ (ಕಟಕ) ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಗುರು ಸಂಚಾರ ಇರುತ್ತದೆ. ಆದರೆ ಕಳೆದ ವರ್ಷದಂತೆಯೂ ಈ ಸಲವೂ ಅತಿಚಾರ ಸಂಚಾರ, ಅಂದರೆ ಸಾಮಾನ್ಯಕ್ಕಿಂತ ವೇಗವಾಗಿ ಮುಂದಿನ ರಾಶಿಗೆ ತೆರಳಿ, ವಕ್ರಿಯಲ್ಲಿ ಬಂದು ತನ್ನ ಸಂಚಾರ ಕ್ರಮವನ್ನು ಬೃಹಸ್ಪತಿ ಪೂರ್ಣಗೊಳಿಸುತ್ತದೆ. ಕರ್ಕಾಟಕ ರಾಶಿಯಲ್ಲಿ ಗುರು ಉಚ್ಚ ಸ್ಥಿತಿಯನ್ನು ತಲುಪುತ್ತಾನೆ. ಈ ಅವಧಿಯಲ್ಲಿ ದೊರೆಯುವ ಶುಭ ಫಲದ ಸಂಪೂರ್ಣ ಪ್ರಾಪ್ತಿಗೆ ಹಾಗೂ ಜನ್ಮ, ವ್ಯಯ, ಅಷ್ಟಮ, ಷಷ್ಟ್ಯ ಸ್ಥಾನದಲ್ಲಿ ಯಾರಿಗೆ ಸಂಚಾರ ಆಗುತ್ತದೋ ಅಂಥವರು ಶಾಂತಿಪೂರ್ವಕ ಹೋಮ- ಗುರು ಆರಾಧನೆ ಮಾಡಿಕೊಳ್ಳುವುದು ಉತ್ತಮ. ಈ ಗುರು ಸಂಚಾರದ ಬಗ್ಗೆ ಪ್ರಾಥಮಿಕ ಮಾಹಿತಿ ಹೀಗಿದೆ:
* ಜೂನ್ 2, 2026ರಿಂದ ಅಕ್ಟೋಬರ್ 31, 2026ರ ತನಕ ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ
* ಅಕ್ಟೋಬರ್ 31, 2026ರಿಂದ ಜನವರಿ 25, 2027ರ ತನಕ ಸಿಂಹ ರಾಶಿಯಲ್ಲಿ ಗುರು ಗ್ರಹದ ಸಂಚಾರ
* ಜನವರಿ 25, 2027ರಿಂದ ಜೂನ್ 26, 2027ರ ತನಕ ಕರ್ಕಾಟಕ ರಾಶಿಯಲ್ಲಿ ಗುರು ಗ್ರಹದ ಸಂಚಾರ
* ಯಾವ ರಾಶಿಯ ಮೇಲೆ ಏನು ಪ್ರಭಾವ ಎನ್ನುವ ವಿವರ ಮುಂದಿನ ಸಾಲುಗಳಲ್ಲಿ ಇದೆ.

ಮೇಷ ರಾಶಿ: ವಿಲಾಸಿ ವಸ್ತುಗಳ ಖರೀದಿ
ಮೇಷ ನಿಮ್ಮ ರಾಶಿಗೆ ನಾಲ್ಕು ಹಾಗೂ ಐದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಸುಖ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ವಿಲಾಸಿ ವಸ್ತುಗಳ ಖರೀದಿ ಮಾಡುತ್ತೀರಿ, ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಸಮಯ ಆಗುತ್ತದೆ. ವಿದ್ಯಾರ್ಥಿಗಳಿಗೆ ಸಹ ಒಳ್ಳೆ ಕಾಲ. ಮನೆ ಖರೀದಿ, ನವೀಕರಣ, ಸಣ್ಣ- ಪುಟ್ಟ ಬದಲಾವಣೆಗಳು ಮಾಡುವುದಕ್ಕೂ ಈ ಅವಧಿಯಲ್ಲಿ ಮನಸ್ಸು ಮಾಡುತ್ತೀರಿ. ಭಾಗ್ಯ ಹಾಗೂ ವ್ಯಯಾಧಿಪತಿಯಾಗಿರುವ ಗುರು ಗ್ರಹ ನಿಮ್ಮಿಂದ ಖರ್ಚು ಸಹ ಮಾಡಿಸುತ್ತದೆ. ಖರ್ಚು- ವೆಚ್ಚದ ಬಗ್ಗೆ ಒಂದಿಷ್ಟು ನಿಗಾ ಇರಲಿ. ಶುಭ ಫಲದ ಸಂಪೂರ್ಣ ಪ್ರಾಪ್ತಿ ಹಾಗೂ ನಿರ್ಧಾರಗಳಲ್ಲಿ ವಿವೇಚನಾ ಸಾಮರ್ಥ್ಯ ವೃದ್ಧಿ ಆಗುವುದಕ್ಕೆ ಗುರು ಗ್ರಹದ ಆರಾಧನೆಯನ್ನು ಮಾಡಿಕೊಳ್ಳಿ. ತಂದೆ ಅಥವಾ ತಂದೆ ಸಮಾನರಾದವರು ನೀಡುವ ಸಲಹೆ- ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ.
ವೃಷಭ: ಆತ್ಮವಿಶ್ವಾಸ ವೃದ್ಧಿ
ನಿಮ್ಮ ರಾಶಿಗೆ ಮೂರು ಹಾಗೂ ನಾಲ್ಕನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ಧೈರ್ಯ ಹಾಗೂ ಪರಾಕ್ರಮದ ಸ್ಥಾನದಲ್ಲಿ ಬೃಹಸ್ಪತಿ ಸಂಚಾರದ ವೇಳೆ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಸಣ್ಣ ಪ್ರಮಾಣದ ಪ್ರವಾಸ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ನಾಲ್ಕನೇ ಮನೆಯಲ್ಲಿ ಗುರುವಿನ ಸಂಚಾರದ ವೇಳೆ ಕೌಟುಂಬಿಕ ಸುಖ ವೃದ್ಧಿಯಾಗಲಿದೆ. ತಾಯಿಯ ಕಡೆಯಿಂದ ಸಹಕಾರ ಅಥವಾ ಆಸ್ತಿಯ ವಿಷಯದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ವಾಹನ ಖರೀದಿ ಅಥವಾ ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ ನಿರೀಕ್ಷಿಸಬಹುದು. ಧನ- ಕುಟುಂಬ ಸ್ಥಾನ ಹಾಗೂ ಅಷ್ಟಮಾಧಿಪತಿಯೂ ಆದಂಥ ಗುರು ಗ್ರಹವು ನಿಮ್ಮ ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಅಥವಾ ಹೂಡಿಕೆಯಿಂದ ಲಾಭ ಗಳಿಸಲು ಸಹಕರಿಸುತ್ತಾನೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ಇರಲಿ. ಹೆಚ್ಚಿನ ಶುಭ ಫಲಕ್ಕಾಗಿ ಗುರು ಆರಾಧನೆ ಮಾಡುವುದು ಉತ್ತಮ.
ಮಿಥುನ: ಮಾತೇ ಮುತ್ತು, ಶುಭ ಕಾಲ
ನಿಮ್ಮ ರಾಶಿಗೆ ಎರಡು ಹಾಗೂ ಮೂರನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ಧನ- ಕುಟುಂಬ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಆರ್ಥಿಕವಾಗಿ ಇದು ನಿಮಗೆ ಸುವರ್ಣ ಕಾಲ. ಬರಬೇಕಾದ ಬಾಕಿ ಹಣ ಕೈ ಸೇರಲಿದೆ ಹಾಗೂ ಮಾತಿನ ಪ್ರಭಾವದಿಂದ ಕಠಿಣ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳುತ್ತೀರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಮೂರನೇ ಮನೆಯಲ್ಲಿ ಗುರು ಸಂಚರಿಸುವಾಗ ಸೋದರ-ಸೋದರಿಯರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಅಥವಾ ಬರವಣಿಗೆ, ಸಂವಹನ ಮಾಧ್ಯಮದ ಕೆಲಸಗಳಲ್ಲಿ ತೊಡಗಿರುವವರಿಗೆ ಭಾರೀ ಯಶಸ್ಸು ಸಿಗಲಿದೆ. ನಿಮಗೆ ಸಪ್ತಮ ಹಾಗೂ ದಶಮಾಧಿಪತಿ ಆಗಿರುವ ಗುರು ಗ್ರಹವು ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳನ್ನು ತಂದುಕೊಡಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವ ಸಾಧ್ಯತೆ ಇದೆ. ಹೆಚ್ಚಿನ ಶುಭ ಫಲಕ್ಕಾಗಿ ಗುರುವಿನ ಆರಾಧನೆ ಮಾಡಿಕೊಳ್ಳಿ.
ಕರ್ಕಾಟಕ: ಈಡೇರಲಿದೆ ಬಹುಕಾಲದ ಆಸೆ
ನಿಮಗೆ ಜನ್ಮ ರಾಶಿ ಹಾಗೂ ಎರಡನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ಜನ್ಮ ರಾಶಿಯಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗುತ್ತದೆ ಹಾಗೂ ಬಹುಕಾಲದ ಆಸೆಗಳು ಈಡೇರಲಿವೆ. ಆದರೆ ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ದೇಹದ ತೂಕ ನಿರ್ವಹಣೆ, ಕೊಲೆಸ್ಟ್ರಾಲ್, ಮಧುಮೇಹ ನಿರ್ವಹಣೆಗೆ ಒತ್ತು ಕೊಡಿ. ಎರಡನೇ ಮನೆಯಲ್ಲಿ ಗುರುವಿನ ಪ್ರಭಾವ ಇರುವುದರಿಂದ ಆರ್ಥಿಕ ಲಾಭದ ಜೊತೆಗೆ ಕುಟುಂಬದಲ್ಲಿ ಸಾಮರಸ್ಯ ಹೆಚ್ಚಲಿದೆ. ಹೊಸ ಹೂಡಿಕೆಗಳಿಗೆ ಇದು ಸಕಾಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ ಹಾಗೂ ಅವರ ಸಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಷಷ್ಟ ಹಾಗೂ ಭಾಗ್ಯಾಧಿಪತಿಯಾಗಿರುವ ಗುರು ಸವಾಲುಗಳನ್ನು ಎದುರಿಸಲು ಧೈರ್ಯ ನೀಡುತ್ತಾನೆ. ಆಹಾರ ಪದ್ಧತಿಯಲ್ಲಿ ಶಿಸ್ತು ರೂಢಿಸಿಕೊಳ್ಳಿ. ಶುಭ ಫಲದ ಸಂಪೂರ್ಣ ಪ್ರಾಪ್ತಿಗಾಗಿ ಗುರು ಆರಾಧನೆ ಮಾಡಿಕೊಳ್ಳಿ.
ಸಿಂಹ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ
ನಿಮ್ಮ ರಾಶಿಗೆ ಹನ್ನೆರಡನೇ ಸ್ಥಾನ ಹಾಗೂ ಜನ್ಮ ಮನೆಯಲ್ಲಿ ಗುರು ಸಂಚಾರ ಇರುತ್ತದೆ. ವ್ಯಯ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಧಾರ್ಮಿಕ ಕಾರ್ಯಗಳಿಗೆ ಅಥವಾ ಶುಭ ಕಾರ್ಯಗಳಿಗಾಗಿ ಹಣ ವ್ಯಯವಾಗುತ್ತದೆ. ವಿದೇಶ ಪ್ರಯಾಣದ ಹಂಬಲ ಇರುವವರಿಗೆ ಈ ಅವಧಿಯಲ್ಲಿ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಜನ್ಮ ರಾಶಿಯ ಸಂಚಾರದ ವೇಳೆ ಮನಸ್ಸಿನ ಮೇಲೆ ಹತೋಟಿ ಇರಲಿ. ನಿಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರಬೇಡಿ. ನಿದ್ರೆ ಹಾಗೂ ನೀರಿನ ಸೇವನೆ ಅಗತ್ಯ ಪ್ರಮಾಣದಲ್ಲಿ ಮಾಡಿ. ನಿಮಗೆ ಪಂಚಮ ಹಾಗೂ ಅಷ್ಟಮಾಧಿಪತಿಯಾಗಿರುವ ಗುರು ಗ್ರಹವು ಮಕ್ಕಳ ವಿಷಯದಲ್ಲಿ ಒಂದಿಷ್ಟು ಚಿಂತೆ ತಂದರೂ, ಅಂತಿಮವಾಗಿ ಶುಭ ಫಲವನ್ನೇ ನೀಡುತ್ತಾನೆ. ಹಳೆಯ ಹೂಡಿಕೆಗಳಿಂದ ಅನಿರೀಕ್ಷಿತ ಲಾಭ ಅಥವಾ ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಪ್ರಗತಿ ಕಂಡುಬರಬಹುದು. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಅಶುಭ ಫಲದ ಪರಿಹಾರಕ್ಕೆ ಗುರು ಆರಾಧನೆ ಮಾಡಿಕೊಳ್ಳಿ.
ಕನ್ಯಾ: ಸೋದರ, ಮಿತ್ರರಿಂದ ಸಹಕಾರ
ನಿಮ್ಮ ರಾಶಿಗೆ ಹನ್ನೊಂದು, ಹನ್ನೆರಡರಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಲಾಭ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಆರ್ಥಿಕವಾಗಿ ಲಾಭದಾಯಕ ಸಮಯ. ಹಿರಿಯ ಸೋದರರು ಅಥವಾ ಮಿತ್ರರಿಂದ ನಿರೀಕ್ಷಿತ ಸಹಕಾರ ದೊರೆಯಲಿದೆ. ವೃತ್ತಿಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹನ್ನೆರಡರಲ್ಲಿ ಗುರು ಸಂಚರಿಸುವುದರಿಂದ ಹೂಡಿಕೆ ಅಥವಾ ವಿದೇಶಿ ವ್ಯವಹಾರಗಳ ಮೂಲಕ ಧನ ಲಾಭವಾಗಬಹುದು. ನಿಮ್ಮ ರಾಶಿಗೆ ಸುಖ ಸ್ಥಾನ ಹಾಗೂ ಸಪ್ತಮಾಧಿಪತಿ ಆಗಿರುವ ಗುರು ಗ್ರಹವು ಕೌಟುಂಬಿಕ ಜೀವನದಲ್ಲಿ ನೆಮ್ಮದಿ ತರುತ್ತಾನೆ. ಸಂಗಾತಿಯೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಬಾಂಧವ್ಯ ಗಟ್ಟಿಯಾಗಲಿದೆ. ಹೊಸ ಮನೆ ಅಥವಾ ವಾಹನ ಖರೀದಿಯ ಯೋಗವೂ ಈ ಅವಧಿಯಲ್ಲಿ ಕಂಡುಬರುತ್ತಿದೆ. ಅನಗತ್ಯ ಖರ್ಚುಗಳ ಮೇಲೆ ಹಿಡಿತವಿರಲಿ ಹಾಗೂ ಗುರಿ ಮುಟ್ಟಲು ದೃಢ ನಿರ್ಧಾರ ಕೈಗೊಳ್ಳಿ. ಶುಭ ಫಲದ ವೃದ್ಧಿಗಾಗಿ ಗುರು ಗ್ರಹ ಆರಾಧನೆ ಮಾಡಿಕೊಳ್ಳಿ
ತುಲಾ: ವೃತ್ತಿ ಜೀವನದಲ್ಲಿ ಏಳ್ಗೆ
ನಿಮ್ಮ ರಾಶಿಗೆ ಹತ್ತು ಹಾಗೂ ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಕರ್ಮ ಸ್ಥಾನದ ಬೃಹಸ್ಪತಿ ಸಂಚಾರದಿಂದಾಗಿ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತೀರಿ, ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರುತ್ತವೆ. ಹನ್ನೊಂದನೇ ಮನೆಯಲ್ಲಿ ಗುರುವಿನ ಸಂಚಾರದಿಂದ ಆರ್ಥಿಕವಾಗಿ ಲಾಭದ ಪ್ರಮಾಣ ಹೆಚ್ಚಾಗಲಿದೆ ಹಾಗೂ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯವಾಗಲಿದ್ದು, ಅವರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ. ತೃತೀಯ ಹಾಗೂ ಷಷ್ಟಾಧಿಪತಿಯಾದ ಗುರು ಗ್ರಹವು ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತಾನೆ ಮತ್ತು ಶತ್ರುಗಳ ಮೇಲೆ ಜಯ ಸಾಧಿಸಲು ನೆರವಾಗುತ್ತಾನೆ. ಸಹೋದರ-ಸಹೋದರಿಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದಲ್ಲಿ ಅವು ಬಗೆಹರಿಯಲಿವೆ. ಹಳೆ ಕಾಯಿಲೆಗಳಿಂದ ಮುಕ್ತಿ ಸಿಗುವ ಲಕ್ಷಣಗಳಿವೆ. ಹೆಚ್ಚಿನ ಶುಭ ಫಲಕ್ಕಾಗಿ ಗುರು ಗ್ರಹದ ಆರಾಧನೆ ಮಾಡಿ.
ವೃಶ್ಚಿಕ: ಆರ್ಥಿಕ ಸ್ಥಿತಿ ಸುಧಾರಣೆ
ನಿಮ್ಮ ರಾಶಿಗೆ ಒಂಬತ್ತು ಹಾಗೂ ಹತ್ತನೇಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಭಾಗ್ಯ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳುತ್ತೀರಿ. ಹಿರಿಯರ ಹಾಗೂ ಗುರು ಸಮಾನರ ಆಶೀರ್ವಾದದಿಂದ ನಿಮ್ಮ ಕೆಲಸಗಳು ಸುಗಮವಾಗಿ ಸಾಗಲಿವೆ. ಹತ್ತನೇ ಮನೆಯ ಮೇಲೆ ಗುರುವಿನ ಪ್ರಭಾವ ಇರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ದ್ವಿತೀಯ ಹಾಗೂ ಪಂಚಮಾಧಿಪತಿಯಾಗಿರುವ ಗುರು ಗ್ರಹವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಾನೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದ್ದು, ಉಳಿತಾಯ ಮಾಡಿದಂಥ ಹಣ ಅಥವಾ ಹೂಡಿಕೆಯಲ್ಲಿ ವೃದ್ಧಿಯಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಇದ್ದ ಮನಸ್ತಾಪಗಳು ದೂರವಾಲಿದೆ. ಶುಭ ಫಲದ ಸಂಪೂರ್ಣ ಪ್ರಾಪ್ತಿಗಾಗಿ ಗುರು ಆರಾಧನೆ ಮಾಡಿಕೊಳ್ಳಿ.
ಧನುಸ್ಸು: ಆರೋಗ್ಯದ ಬಗ್ಗೆ ಇರಲಿ ಎಚ್ಚರ
ನಿಮ್ಮ ರಾಶಿಗೆ ಎಂಟು ಹಾಗೂ ಒಂಬತ್ತನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಅಷ್ಟಮ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟಿನ ಎಚ್ಚರಿಕೆ ಅಗತ್ಯ, ವಿಶೇಷವಾಗಿ ಆಹಾರ ಪದ್ಧತಿಯಲ್ಲಿ ಶಿಸ್ತು ಇರಲಿ. ಇದೇ ವೇಳೆ ವಾಹನ ಸಂಚಾರದ ವೇಳೆ ಕೂಡ ಜಾಗ್ರತೆ ವಹಿಸಿ. ಒಂಬತ್ತನೇ ಮನೆಯಲ್ಲಿ ಗುರುವಿನ ಸಂಚಾರ ವೇಳೆ ಭಾಗ್ಯೋದಯವಾಗಲಿದ್ದು, ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳಲಿವೆ. ಧಾರ್ಮಿಕ ಪ್ರವಾಸ ಅಥವಾ ವಿದ್ವತ್ ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ನಿಮ್ಮ ರಾಶ್ಯಾಧಿಪತಿಯೇ ಗುರುವಾಗಿರುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗಲಿವೆ. ಹಿರಿಯರ ಮತ್ತು ತಂದೆಯ ಕಡೆಯಿಂದ ಮಾರ್ಗದರ್ಶನ ಹಾಗೂ ಆರ್ಥಿಕ ಸಹಾಯ ದೊರೆಯಲಿದೆ. ಹೆಚ್ಚಿನ ಶುಭ ಫಲಕ್ಕಾಗಿ ಗುರುವಿನ ಆರಾಧನೆ ಮಾಡಿಕೊಳ್ಳಿ.
ಮಕರ: ದಾಂಪತ್ಯದಲ್ಲಿ ಸಾಮರಸ್ಯ, ಅವಿವಾಹಿತರಿಗೆ ವಿವಾಹ ಯೋಗ
ನಿಮ್ಮ ರಾಶಿಗೆ ಏಳು ಹಾಗೂ ಎಂಟನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಸಪ್ತಮ ಸ್ಥಾನದಲ್ಲಿ ಬೃಹಸ್ಪತಿಯ ಸಂಚಾರವಿರುವುದರಿಂದ ವೈವಾಹಿಕ ಜೀವನದಲ್ಲಿ ಸಾಮರಸ್ಯ ವೃದ್ಧಿಯಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದ್ದು, ಸೂಕ್ತ ಸಂಬಂಧಗಳು ನಿಶ್ಚಿತವಾಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯಲಿದ್ದು, ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಸಕಾಲ. ಎಂಟನೇ ಮನೆಯಲ್ಲಿ ಗುರು ಸಂಚಾರದ ವೇಳೆ ಸಂಶೋಧನಾತ್ಮಕ ಕೆಲಸಗಳಲ್ಲಿ ಅಥವಾ ನಿಗೂಢ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ತೃತೀಯ ಹಾಗೂ ಹನ್ನೆರಡನೇ ಮನೆಯಾಧಿಪತಿಯಾದ ಗುರು ಗ್ರಹವು ಧಾರ್ಮಿಕ ಉದ್ದೇಶಗಳಿಗಾಗಿ ಖರ್ಚುಗಳನ್ನು ಮಾಡಿಸುತ್ತದೆ ಅಥವಾ ದೂರದ ಪ್ರಯಾಣದ ಯೋಗ ತರಲಿದೆ. ಹಳೆಯ ಹೂಡಿಕೆಗಳಿಂದ ಅನಿರೀಕ್ಷಿತ ಪ್ರತಿಫಲ ಸಿಗುತ್ತದೆ. ಕೌಟುಂಬಿಕ ವಿಷಯಗಳಿಗೆ ಹೆಚ್ಚಿನ ಸಮಯ ನೀಡಿ. ಹೆಚ್ಚಿನ ಶುಭ ಫಲಕ್ಕಾಗಿ ಗುರು ಆರಾಧನೆ ಮಾಡಿಕೊಳ್ಳಿ.
ಕುಂಭ: ಪಾದ, ಹೊಟ್ಟೆ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ
ನಿಮ್ಮ ರಾಶಿಗೆ ಆರು ಹಾಗೂ ಏಳನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಆರನೇ ಮನೆಯಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಶತ್ರುಗಳ ಮೇಲೆ ಜಯ ಸಾಧಿಸುವಿರಿ ಹಾಗೂ ಹಳೆಯ ಸಾಲಬಾಧೆಗಳಿಂದ ಮುಕ್ತಿ ಪಡೆಯಲು ಮಾರ್ಗಗಳು ಗೋಚರಿಸಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಶ್ರಮಕ್ಕೆ ತಕ್ಕ ಫಲ ನೀಡುವ ಕಾಲ. ಏಳನೇ ಮನೆಯಲ್ಲಿ ಗುರು ಸಂಚಾರದ ವೇಳೆ ವೈವಾಹಿಕ ಜೀವನದಲ್ಲಿನ ಬಾಂಧವ್ಯ ಮಧುರವಾಗಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ನಿಮಗೆ ಲಾಭ ಹಾಗೂ ದ್ವಿತೀಯಾಧಿಪತಿಯಾಗಿರುವ ಗುರು ಗ್ರಹವು ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ತಂದುಕೊಡುತ್ತಾನೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ, ವಿಶೇಷವಾಗಿ ಪಾದ ಹಾಗೂ ಹೊಟ್ಟೆಯ ಭಾಗದ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಿ. ಹೆಚ್ಚಿನ ಶುಭ ಫಲಕ್ಕಾಗಿ- ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಗುರು ಗ್ರಹದ ಆರಾಧನೆ ಮಾಡಿಕೊಳ್ಳಿ.
ಮೀನ: ಓದಿನ ಆಸಕ್ತಿ, ವೃತ್ತಿಯಲ್ಲೀಗ ಪದೋನ್ನತಿ
ನಿಮ್ಮ ರಾಶಿಗೆ ಐದು ಹಾಗೂ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಪಂಚಮ ಸ್ಥಾನದಲ್ಲಿ ಬೃಹಸ್ಪತಿ ಸಂಚಾರ ಇರುವುದರಿಂದ ಜ್ಞಾನಾರ್ಜನೆಗೆ ಪ್ರಶಸ್ತ ಸಮಯ. ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭವಿದೆ. ಸೃಜನಾತ್ಮಕ ಕೆಲಸಗಳಲ್ಲಿ ಅಥವಾ ಕಲಾತ್ಮಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಮನ್ನಣೆ ಸಿಗಲಿದೆ. ಆರನೇ ಮನೆಯಲ್ಲಿ ಗುರುವಿನ ಸಂಚಾರ ವೇಳೆ ಆರೋಗ್ಯದಲ್ಲಿ ಜಾಗ್ರತೆ ತೆಗೆದುಕೊಳ್ಳಬೇಕು. ನಿಮ್ಮ ರಾಶ್ಯಾಧಿಪತಿಯೇ ಗುರುವಾಗಿರುವುದರಿಂದ ನಿಮ್ಮ ಆಸಕ್ತಿ, ಕಾರ್ಯದಕ್ಷತೆ ಹೆಚ್ಚಾಗಲಿದೆ ಮತ್ತು ಸಮಾಜದಲ್ಲಿ ಗೌರವ ವೃದ್ಧಿಯಾಗಲಿದೆ. ಹತ್ತನೇ ಮನೆಯಾಧಿಪತಿಯೂ ಆಗಿರುವ ಗುರು ಗ್ರಹವು ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಅಥವಾ ಪದೋನ್ನತಿಯನ್ನು ತಂದುಕೊಡಲಿದೆ. ಹೆಚ್ಚಿನ ಶುಭ ಫಲಕ್ಕಾಗಿ ಗುರು ಆರಾಧನೆಯನ್ನು ಮಾಡಿಕೊಳ್ಳಿ.
ವಿವಿಧ ರಾಶಿಗಳಿಗೆ ಸುಲಭ ಪರಿಹಾರ
ಗುರು ಸಂಕ್ರಮಣದಿಂದ ಉತ್ತಮ ಫಲ ಪಡೆಯಲು ಇಚ್ಛಿಸುವವರು ಶಾಂತಿ ಮಾಡಿಸಿಕೊಳ್ಳಬೇಕೆಂದು ಜ್ಯೋತಿಷಿಗಳು ಸಲಹೆ ಮಾಡುತ್ತಾರೆ. ಇದೇ ಜೂನ್‌ನಲ್ಲಿ ಅಧ್ಯಾತ್ಮ ಚಿಂತಕರೂ- ದೇವೀ ಉಪಾಸಕರೂ ಆದ ಮಂಜುನಾಥ್ ಭಾರದ್ವಾಜ್ ಅವರು ವೇದೋಕ್ತವಾದ "ಮಹಾ ಬೃಹಸ್ಪತಿ ಯಾಗ"ವನ್ನು ಆಯೋಜಿಸುತ್ತಿದ್ದಾರೆ. ಗೋಚಾರದಲ್ಲಿ ಗುರು ಗ್ರಹದ ಅಶುಭ ಸ್ಥಾನದ ಫಲಗಳು ಎದುರಾಗುವಂಥ ರಾಶಿಗಳವರು ಹಾಗೂ ಅದೇ ರೀತಿ ಜನ್ಮ ಜಾತಕದಲ್ಲಿ ಗುರು ಗ್ರಹದ ದೋಷ ಇರುವವರು ಈ ಯಾಗಕ್ಕೆ ಸಂಕಲ್ಪ ಮಾಡಿಸಬಹುದು. ಅಷ್ಟೇ ಅಲ್ಲ, ಗುರು ಗ್ರಹದ ಸಂಪೂರ್ಣ ಶುಭ ಫಲದ ಅನುಭವ ಪಡೆಯುವುದಕ್ಕೆ ಸಹ ಈ ಯಾಗವು ಸಹಾಯ ಮಾಡುತ್ತದೆ. ಮಾಹಿತಿಗೆ ಮಂಜುನಾಥ್ ಭಾರದ್ವಾಜ್ ಮೊಬೈಲ್ ಫೋನ್ ಸಂಖ್ಯೆ 9980 300790 ಸಂಪರ್ಕಿಸಬಹುದು.
ಬರಹ: ಶ್ರೀನಿವಾಸ ಮಠ
(ಗಮನಿಸಿ: ಇದು ಶಾಸ್ತ್ರಗಳ ಆಧಾರದ ಮೇಲೆ ವೃತ್ತಿನಿರತ ಜ್ಯೋತಿಷಿ ಬರೆದ ಲೇಖನ. ಜನ್ಮಜಾತಕವನ್ನು ನೋಡಿಯೇ ವೈಯಕ್ತಿಕ ಮಟ್ಟದ ಫಲಾಫಲಗಳನ್ನು ನಿರ್ಣಯಿಸಬೇಕಾಗುತ್ತದೆ. 'ಒನ್ ಇಂಡಿಯಾ ಕನ್ನಡ' ಜಾಲತಾಣದ ಸಿಬ್ಬಂದಿ ಈ ಬರಹದಲ್ಲಿರುವ ಯಾವುದೇ ಮಾಹಿತಿಯನ್ನು ಬದಲಿಸಿಲ್ಲ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಈ ಬರಹ ಪ್ರಕಟಿಸಲಾಗಿದೆ).












Click it and Unblock the Notifications