Ganesha Chaturthi 2026 : ಗಣೇಶ ಚತುರ್ಥಿ ದಿನವೇ ಎರಡೆರಡು ಶುಭ ಯೋಗ : ಮೂರ್ತಿ ಪ್ರತಿಷ್ಟಾಪನೆಯ ಘಳಿಗೆ, ವಿಧಿ ಹೀಗೆಯೇ ಇರಲಿ
Ganesha Chaturthi 2026 : ಗಣೇಶ ಚತುರ್ಥಿಯನ್ನು ಇದೇ ಬರುವ ಸೋಮವಾರ ಅಂದರೆ ಸೆಪ್ಟೆಂಬರ್ 14ಕ್ಕೆ ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ಗಣೇಶ ಚತುರ್ಥಿ ಎಂದು ಕರೀತಾರೆ. ಪುರಾಣಗಳ ಪ್ರಕಾರ, ಈ ದಿನದಂದು ಗಣಪತಿ ಜನನವಾಯಿತು ಎನ್ನುವುದು ನಂಬಿಕೆ. ಗಣಪತಿ ಎಂದರೆ ವಿಘ್ನ ನಿವಾರಕ, ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸುವವ. ಅದಕ್ಕೇ ಅವನು ಪ್ರಥಮ ಪೂಜಿತ. ಯಾವುದೇ ಹೊಸ ಕೆಲಸದ ಆರಂಭಕ್ಕೂ ಮುನ್ನ ಮೊದಲ ಪೂಜೆ ಗಣೇಶನಿಗೇ ಸಲ್ಲುವುದು. ದೇಶಾದ್ಯಂತ ವಿನಾಯಕ ಚೌತಿಯನ್ನು ಭಕ್ತಿಭಾವದಿಂದ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಇದಕ್ಕೆ ಬಡವ ಬಲ್ಲಿದರು ಎನ್ನುವ ಭೇದವೇ ಇಲ್ಲ. ಗಣೇಶನನ್ನು ಹಿಂದೂಗಳು ಮಾತ್ರವಲ್ಲದೆ ಅನೇಕ ಕಡೆಗಳಲ್ಲಿ ಬೇರೆ ಧರ್ಮದವರು ಕೂಡಾ ಪ್ರತಿಷ್ಟಾಪಿಸಿ ಪೂಜೆ ಮಾಡುತ್ತಾರೆ ಅನ್ನೋದೇ ಈ ಹಬ್ಬದ ವಿಶೇಷ.

ಗಣೇಶ ಚತುರ್ಥಿ ತಿಥಿ (Ganesha Chaturthi 2026) :
ಗಣೇಶ ಚತುರ್ಥಿ ತಿಥಿಯು ಸೆಪ್ಟೆಂಬರ್ 14, 202 ರ ಬೆಳಿಗ್ಗೆ 5.22 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 15ರ ಬೆಳಿಗ್ಗೆ 7.14 ಕ್ಕೆ ಕೊನೆಯಾಗುವುದು. ಆದ್ದರಿಂದ, ಸೆಪ್ಟೆಂಬರ್ 14 ರಂದೇ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುವುದು. ಈ ದಿನ, ಗಣಪತಿಯ ಮೂರ್ತಿಯನ್ನು ಮನೆಯಲ್ಲಿ, ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ಪೆಂಡಾಲ್‌ಗಳಲ್ಲಿ ಪ್ರತಿಷ್ಟಾಪನೆ ಮಾಡುತ್ತಾರೆ. ಮೂರ್ತಿಗೆ ವಿಶೇಷ ಅಲಂಕಾರಗಳನ್ನು ಮಾಡಿ ಬಗೆ ಬಗೆ ತಿಂಡಿ ತಿನಿಸುಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಪಂಚಾಂಗ ವಿವರಗಳ ಪ್ರಕಾರ, ಸೆಪ್ಟೆಂಬರ್ 14 ರಂದು ಗಣೇಶನನ್ನು ಪೂಜಿಸುವ ಸಮಯ ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1.35 ರವರೆಗೆ ಇರುತ್ತದೆ.
ಗಣೇಶ ಚತುರ್ತಿಯಂದು ಎರಡು ಶುಭ ಯೋಗ :
ಈ ಬಾರಿ ವಿನಾಯಕ ಚತುರ್ಥಿ ದಿನದಂದು ಬ್ರಹ್ಮ ಯೋಗ ಮತ್ತು ಇಂದ್ರ ಯೋಗದಂತಹ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ದಿನ ಚಿತ್ರ ನಕ್ಷತ್ರವು ಮಧ್ಯಾಹ್ನ 1.55 ರವರೆಗೆ ಇರುತ್ತದೆ, ನಂತರ ಸ್ವಾತಿ ನಕ್ಷತ್ರ ಪ್ರಾರಂಭವಾಗುತ್ತದೆ. ಭಕ್ತರು ಶುಭ ಚಟುವಟಿಕೆಗಳಿಗೆ ಶುಭ ಸಮಯವನ್ನು ಆಧರಿಸಿಯೇ ಪೂಜೆ ಪುಸ್ಕಾರಗಳಲ್ಲಿ ತೊಡಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.
ಪೂಜಾ ವಿಧಿ ಹೀಗಿರಬೇಕು :
ವಿನಾಯಕ ಚತುರ್ಥಿಯ (ganesha chaturthi) ದಿನದಂದು, ಬೆಳಿಗ್ಗೆ ಬೇಗನೆ ಎದ್ದು ಮನೆ ಮತ್ತು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಪೂಜಾ ಮಂಟಪವನ್ನು ಸುಂದರವಾಗಿ ಅಲಂಕರಿಸಬೇಕು. ಈಶಾನ್ಯ ದಿಕ್ಕಿನಲ್ಲಿ ಗಣಪತಿ ಪ್ರತಿಷ್ಟಾಪಿಸುವ ಪೀಠವನ್ನು ಇಡಬೇಕು. ಆ ಪೀಠದ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹರಡಬೇಕು. ಶುಭ ಸಮಯದಲ್ಲಿಯೇ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಪ್ರಾರಂಭಿಸುವುದು ವಾಡಿಕೆ. ಅರಿಶಿನ, ಕುಂಕುಮ, ಅಕ್ಷತೆ, ಹೂವುಗಳು, ಹಣ್ಣುಗಳು, ಸಿಂಧೂರ ಮತ್ತು ಮೋದಕವನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ಪ್ರಾದೇಶಿಕ ಪದ್ಧತಿಗಳನ್ನು ಅವಲಂಬಿಸಿ, ಪೂಜೆಯನ್ನು ಒಂದು, ಮೂರು, ಐದು, ಒಂಭತ್ತು ಅಥವಾ ಹತ್ತು ದಿನಗಳವರೆಗೆ ನಡೆಸಲಾಗುತ್ತದೆ ಮತ್ತು ನಂತರ ಗಣಪತಿಯನ್ನು ವಿಸರ್ಜಿಸಲಾಗುತ್ತದೆ.
ಗರಿಕೆ ಹುಲ್ಲ, ಮೋದಕದ ಮಹತ್ವ :
ಗಣೇಶನ ಫೂಜೆಯಲ್ಲಿ ಗರಿಕೆ ಹುಲ್ಲನ್ನು ತಪ್ಪದೇ ಅರ್ಪಿಸಬೇಕು.ಗರಿಕೆ ಹುಲ್ಲು ಗಣೇಶನಿಗೆ ಅತ್ಯಂತ ಪ್ರಿಯವಾದುದು. ಹಾಗಾಗಿ ಗಣಪತಿ ಪೂಜೆಯಲ್ಲು ಗರಿಕೆ ಹುಲ್ಲಿಗೆ ವಿಶೇಷ ಪ್ರಾಧಾನ್ಯತೆ ಇದೆ. ಇನ್ನು ಗಣೇಶ ಚತುರ್ಥಿಯ ನೈವೇದ್ಯದಲ್ಲಿ ಗಣೇಶನಿಗೆ ಮೋದಕವನ್ನು ಅರ್ಪಿಸಲಾಗುತ್ತದೆ. ಮೋದಕವನ್ನು ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ವಿಧಗಳಲ್ಲಿ ತಯಾರಿಸಿ ಅರ್ಪಿಸುತ್ತಾರೆ. ಕೆಲವರು ಹಬೆಯಲ್ಲಿ ಬೇಯಿಸಿದರೆ ಇನ್ನು ಕೆಲವರು ಕರಿದ ಮೋದಕ ತಯಾರಿಸುತ್ತಾರೆ. ತೆಂಗಿನ ಕಾಯಿ, ಬೆಲ್ಲ, ಒಣ ಹಣ್ಣುಗಳನ್ನು ಸೇರಿಸಿ ಈ ಮೋದಕವನ್ನು ತಯಾರಿಸಲಾಗುತ್ತದೆ.
ಚಂದ್ರನನ್ನು ನೋಡಿದರೆ ಸುತ್ತಿಕೊಳ್ಳುವುದು ಪಾಪ :
ಕೆಲವು ಹಿಂದೂ (hindu) ಸಂಪ್ರದಾಯಗಳ ಪ್ರಕಾರ, ವಿನಾಯಕ ಚತುರ್ಥಿಯಂದು ರಾತ್ರಿ ಚಂದ್ರನನ್ನು ನೋಡಬಾರದು. ಪೌರಾಣಿಕ ನಂಬಿಕೆಗಳ ಪ್ರಕಾರ, ಆ ದಿನ ಚಂದ್ರನನ್ನು ನೋಡಿದರೆ, ಮಾಡದ ತಪ್ಪುಗಳಿಗೂ ಶಿಕ್ಷೆ ಅನುಭವಿಸಬೇಕಾಗುತ್ತದೆಯಂತೆ.


Click it and Unblock the Notifications
