ರಕ್ಷಾಬಂಧನದ ದಿನ ಚಂದ್ರಗ್ರಹಣ: ಗ್ರಹಣ ಕಾಲ ಎಷ್ಟು? ರಾಖಿ ಕಟ್ಟುವ ಶುಭ ಸಮಯ ಯಾವುದು?
ಆಗಸ್ಟ್ 28, 2026 ರಂದು ನಡೆಯುವ ಅತಿದೊಡ್ಡ ಖಗೋಳ ಘಟನೆಗಳಲ್ಲಿ ಚಂದ್ರ ಗ್ರಹಣವೂ ಒಂದು. ಇದು ಭಾಗಶಃ ಚಂದ್ರಗ್ರಹಣ. ಚಂದ್ರನ ಬಹುಪಾಲು ಭೂಮಿಯ ಕಪ್ಪು ನೆರಳಿನ ಮಧ್ಯದಲ್ಲಿ ಹಾದುಹೋಗುತ್ತದೆ. ಇಡೀ ಘಟನೆಯು ಸುಮಾರು 5 ಗಂಟೆ 38 ನಿಮಿಷಗಳ ಕಾಲ ಇರುತ್ತದೆ. ಆದರೆ ಈ ಸಂಪೂರ್ಣ ಅವಧಿಯು ಅರೆನೆರಳಿನ ಹಂತಗಳನ್ನು ಕೂಡಾ ಒಳಗೊಂಡಿದೆ. ದೃಷ್ಟಿಗೋಚರವಾಗಿ ಹೆಚ್ಚು ಗಮನಾರ್ಹವಾದ ಭಾಗಶಃ ಗ್ರಹಣವು ಸುಮಾರು 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ.
ಭಾರತದಲ್ಲಿ ಚಂದ್ರ ಗ್ರಹಣ 2026 ಆರಂಭ ಮತ್ತು ಮೋಕ್ಷದ ಸಮಯ
ಈ ಗ್ರಹಣವು ಹಗಲಿನಲ್ಲಿ ಗೋಚರಿಸುತ್ತದೆ. ಹಾಗಾಗಿ ಭಾರತದ ಹೆಚ್ಚಿನ ಭಾಗದಲ್ಲಿ ಈ ಗ್ರಹಣವನ್ನು ನೋಡುವುದು ಸಾಧ್ಯವಾಗುವುದಿಲ್ಲ. ಆದರೆ ಖಗೋಳ ಸಮಯಕ್ಕೆ ಅನುಗುಣವಾಗಿ ಅದನ್ನು ನೋಡಬಹುದು. ಆಗಸ್ಟ್ 28, 2026 ರಂದು ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಸಮಯ ಈ ರೀತಿ ಇರಲಿದೆ.

· ಅರೆನೆರಳಿನ ಗ್ರಹಣ ಪ್ರಾರಂಭ: ಬೆಳಿಗ್ಗೆ 6:53
· ಭಾಗಶಃ ಚಂದ್ರಗ್ರಹಣ ಪ್ರಾರಂಭ: ಬೆಳಿಗ್ಗೆ 8:03
· ಗರಿಷ್ಠ ಗ್ರಹಣ: ಬೆಳಿಗ್ಗೆ 9:42
· ಭಾಗಶಃ ಗ್ರಹಣ ಮುಕ್ತಾಯ : ಬೆಳಿಗ್ಗೆ 11:21
· ಸಂಪೂರ್ಣ ಗ್ರಹಣ ಮೋಕ್ಷ : ಮಧ್ಯಾಹ್ನ 12:31
2026ರ ಚಂದ್ರ ಗ್ರಹಣ ಎಷ್ಟು ಕಾಲದವರೆಗೆ ಇರುವುದು ?
ಭೂಮಿಯ ಹೊರಗಿನ ತಿಳಿಯಾದ ನೆರಳು ಚಂದ್ರನ ಮುಖದ ಮೇಲೆ ಬೀಳುವಾಗ ಗ್ರಹಣ ಪ್ರಾರಂಭವಾಗುತ್ತದೆ. ಇದು ಸುಮಾರು ಐದೂವರೆ ಗಂಟೆಗಳವರೆಗೆ ಇರುವುದು. ಇನ್ನೂ ನಿಖರವಾಗಿ ಹೇಳುವುದಾದರೆ ಐದು ಗಂಟೆ 38 ನಿಮಿಷಗಳ ನಂತರ ಚಂದ್ರನು ಆ ನೆರಳಿನಿಂದ ಹೊರ ಬರುವಾಗ ಗ್ರಹಣ ಕೊನೆಯಾವುಗುದು. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8.03ಕ್ಕೆ ಚಂದ್ರನ ಮೇಲೆ ಭೂಮಿಯ ನೆರಳು ಬೀಳಲು ಶುರುವಾಗುತ್ತದೆ. ಬೆಳಿಗ್ಗೆ 11.21ಕ್ಕೆ ಈ ನೆರಳಿನಿಂದ ಚಂದ್ರ ಹೊರಕ್ಕೆ ಬರುತ್ತಾನೆ. ನಂತರ ಭಾಗಶಃ ಚಂದ್ರ ಗ್ರಹಣ ಸುಮಾರು 3 ಗಂಟೆ 18 ನಿಮಿಷಗಳ ಕಾಲ ಗೋಚರಿಸುತ್ತದೆ.
ಗರಿಷ್ಠ ಗ್ರಹಣವು ಭಾರತೀಯ ಕಾಲಮಾನ ಬೆಳಿಗ್ಗೆ 9:42 ರ ಸುಮಾರಿಗೆ ಸಂಭವಿಸಲಿದೆ. ಈ ಸಮಯದಲ್ಲಿ, ಭೂಮಿಯ ನೆರಳು ಚಂದ್ರನ ಮೇಲ್ಮೈ ವಿಸ್ತೀರ್ಣದ ಸರಿಸುಮಾರು ಶೇ. 96.2 ರಷ್ಟು ಭಾಗವನ್ನು ಆವರಿಸುತ್ತದೆ. ಗ್ರಹಣದ ಪ್ರಮಾಣ 0.930 ಎಂದು ಲೆಕ್ಕಹಾಕಲಾಗಿದೆ.
ಇದು ಸಂಪೂರ್ಣ ಚಂದ್ರಗ್ರಹಣವೇ ?
ಆಗಸ್ಟ್ 28 ರಂದು ನಡೆಯುವ ಈ ಘಟನೆ ಹೆಸರಿಗೆ ಮಾತ್ರ ಭಾಗಶಃ ಚಂದ್ರಗ್ರಹಣ.
ಚಂದ್ರನ ಡಿಸ್ಕ್‌ನ ಹೆಚ್ಚಿನ ಭಾಗವು ಕತ್ತಲೆಯ ನೆರಳಿನಲ್ಲಿ ಚಲಿಸುವುದರಿಂದ, ಅದು ಬಹುತೇಕ ಸಂಪೂರ್ಣ ಗ್ರಹಣದಂತೆ ಕಾಣಿಸಬಹುದು. ಆದರೆ, ಇಲ್ಲಿ ಚಂದ್ರನ ಸಣ್ಣ ಭಾಗ ಭೂಮಿಯ ನೆರಳಿನ ಹೊರಗೆ ಉಳಿಯುತ್ತದೆ. ಹಾಗಾಗಿ ಇದು ಬಾಗಶಃ ಗ್ರಹಣವೇ.
ಚಂದ್ರಗ್ರಹಣ ಎಲ್ಲಿ ಗೋಚರಿಸಲಿದೆ ?
ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರ ಆಗಲಿದೆ. ಏಷ್ಯಾದ ಕೆಲವು ಪಶ್ಚಿಮ ಭಾಗಗಳಲ್ಲಿ ಕೂಡಾ ಈ ಗ್ರಹಣ ಕಾಣಿಸಲಿದೆ. ಅಮೆರಿಕದ ಕೆಲವು ಭಾಗಗಳಲ್ಲಿ ಈ ಗ್ರಹಣವು ವಿಶೇಷವಾಗಿ ಸ್ಪಷ್ಟವಾಗಿ ಗೋಚರಿಸಲಿದೆ.
ರಕ್ಷಾಬಂಧನದಂದು ಗ್ರಹಣ
ಆಗಸ್ಟ್ 28 ರ ಚಂದ್ರಗ್ರಹಣದ ದಿನವೇ ರಕ್ಷ ಬಂಧನ ಹಬ್ಬ ಕೂಡಾ ಬಂದಿದೆ. ಹಾಗಾಗಿ ಭಾರತದಲ್ಲಿ ಗ್ರಹಣದ ಸಮಯ, ಅವಧಿ ಮತ್ತು ಗ್ರಹಣ ಗೋಚರದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಹಾಗಾಗಿ ಸೂತಕ ಅವಧಿಯು ಕೂಡಾ ಮಾನ್ಯವಾಗಿರುವುದಿಲ್ಲ. ಹೀಗಾಗಿ ಗ್ರಹಣದ ಸಮಯದಲ್ಲಿಯೂ ರಾಖಿ ಕಟ್ಟುವುದಕ್ಕೆ ಯಾವುದೇ ಅಭ್ಯಂತರ ಇಲ್ಲ.
ಚಂದ್ರ ಗ್ರಹಣದ ಧಾರ್ಮಿಕ ಅರ್ಥ
ಹಿಂದೂ ಸಂಪ್ರದಾಯದಲ್ಲಿ ಚಂದ್ರ ಗ್ರಹಣವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಸಾಂಪ್ರದಾಯಿಕವಾಗಿ ಚಂದ್ರನು ಮನಸ್ಸು, ಭಾವನೆಗಳು, ಶಾಂತಿ, ಸ್ಮರಣೆ ಮತ್ತು ತಾಯಿಯ ಶಕ್ತಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಪರಿಣಾಮವಾಗಿ,ಚಂದ್ರಗ್ರಹಣವನ್ನು ಭಾವನಾತ್ಮಕ ಮತ್ತು ಮಾನಸಿಕ ಶಕ್ತಿಗಳು ಅಸ್ಥಿರವಾಗುವ ಅವಧಿ ಎಂದೇ ಹೇಳಲಾಗುತ್ತದೆ. ಸಾಂಪ್ರದಾಯಿಕ ಜ್ಯೋತಿಷ್ಯದಲ್ಲಿ, ಗ್ರಹಣಗಳು ರಾಹು ಮತ್ತು ಕೇತುಗಳೊಂದಿಗೆ ಸಂಬಂಧ ಹೊಂದಿವೆ.


Click it and Unblock the Notifications
