ಡಿಕೆಶಿ ಬಿಡದಿ ಎಐ ನಗರದ ಕನಸಿನ ಯೋಜನೆಗೆ ಜೆಡಿಎಸ್ ಅಡ್ಡಿ: ಹೆಚ್ ಡಿ ದೇವೇಗೌಡ್ರು ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 03: ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡದಿಯಲ್ಲಿ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಯನ್ನು ಕೈ ಬಿಡುವಂತೆ ಜೆಡಿಎಸ್ ಆಗ್ರಹಿಸಿದೆ. ಈ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಪ್ರತಿಕ್ರಿಯಿಸಿದ್ದು, ಈ ಯೋಜನೆ ಬಗ್ಗೆ ನನಗೆ ಎಲ್ಲಾ ಮಾಹಿತಿಯೂ ಇದೆ. ಭೂಸ್ವಾಧೀನಕ್ಕೆ ರೈತರು ವಿರೋಧ ಮಾಡುತ್ತಿದ್ದಾರೆ. ಸರಕಾರ ಕಾಂಗ್ರೆಸ್ ಕೈಯ್ಯಲ್ಲಿದೆ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು. ಅಲ್ಲಿಯವರೆಗೂ ಕಾಯಬೇಕು ಎಂದು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಈ ಯೋಜನೆಯ ಬಗ್ಗೆ ಬೇರೆಯವ ಹೆಸರು ತೆಗೆದು ಚರ್ಚೆ ಮಾಡುವುದು ಬೇಡ. ಆ ವಿಚಾರವನ್ನು ನಾನು ಮಾತಾಡಲು ಹೋಗಲ್ಲ. ಮೂರು ತಿಂಗಳ ಹಿಂದೆ ಮಾಧ್ಯಮಗಳು ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಮ್ಮ ಮನೆ ಬಳಿಯೇ ಇರುತ್ತಿದ್ದವು. ಇದು ಯಾರ ಪ್ರೇರಣೆಯಿಂದ? ಅದರ ಹಿಂದೆ ಯಾರ ಶಕ್ತಿ ಇತ್ತು? ನನಗೆ ಗೊತ್ತಿದೆ, ಅದರ ಬಗ್ಗೆ ಚರ್ಚೆ ಬೇಡ. ನಮ್ಮದು ಸಣ್ಣ ರಾಜಕೀಯ ಪಕ್ಷ. ಇರಲಿ, ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ ಎಂದು ಯಾರ ಹೆಸರನ್ನೂ ಹೇಳಿದೆ ದೇವೇಗೌಡರು ಕುಟುಕಿದರು.

ಪಕ್ಷ ಸಂಘಟನೆಗೆ ನಾನು ಶ್ರಮ ಹಾಕುತ್ತೇನೆ. ಹಿಂದಿನಂತೆ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯನ್ನು ಮಾಡುತ್ತಿದ್ದಾರೆ. ಮೂರು ಸಲ ಅವರು ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂರದೆ ಸಂಘಟನೆ ಕೆಲಸದಲ್ಲಿ ನಿರತರಾಗಿದ್ದಾರೆ. ಸೋಲಿನ ಅನುಭವದಿಂದ ಪಾಠ ಕಲಿತು ರಾಜ್ಯ ಪ್ರವಾಸ ಮಾಡುತ್ತಿರುವ ಅವರು, ಅನುಭವೀ ರಾಜಕಾರಣಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ವ್ಯಾಪಿ ನಡೆಸುತ್ತಿರುವ ಸದಸ್ಯ ಅಭಿಯಾನ ಮತ್ತು ಸಂಘಟನಾ ಪ್ರವಾಸ ಯಶಸ್ವಿಯಾಗಿದೆ. ಅಲ್ಲದೆ; ಬೆಂಗಳೂರು ನಗರದಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟುತ್ತೇವೆ. ಈ ನಿಟ್ಟಿನಲ್ಲಿ ಅಕ್ಟೋಬರ್ 12ರಂದು ಜೆಡಿಎಸ್ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಕನಿಷ್ಠ 50,000- 60,000 ಮಹಿಳೆಯರು ಭಾಗವಹಿಸಲಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದು ಎಂದ ಅವರು; ಚುನಾವಣೆ ಬಂದಾಗ ನಮ್ಮ ಶಕ್ತಿ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಂಬರುವ ಜಿಬಿಎ ಚುನಾವಣೆಯಲ್ಲಿ ಕನಿಷ್ಠ 50-60 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್ ಹೊಂದಿದೆ. ಹೀಗಾಗಿ ನಗರದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿರುವುದಾಗಿ ಅವರು ತಿಳಿಸಿದರು. ಲೋಕಸಭೆ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ ಮಾಡಿಕೊಂಡವು. ಈ ಮೈತ್ರಿ ಮುಂದಿನ ಚುನಾವಣೆಗಳಿಗೂ ಅಬಾಧಿತವಾಗಿ ಮುಂದುವರಿಯುತ್ತದೆ. ಯಾವುದೇ ಚುನಾವಣೆಯಾದರೂ ಮೈತ್ರಿಗೆ ಧಕ್ಕೆ ಇಲ್ಲ. ಈ ಬಗ್ಗೆ ಯಾರೂ ಚಿಂತಿಸುವ ಅಗತ್ಯವಿಲ್ಲ. ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಗಳಿಗೂ ಮುಂದುವರಿಯುತ್ತದೆ ಎಂದು ದೇವೇಗೌಡರು ಒತ್ತಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನನ್ನ ಸಂಬಂಧ ಎಂದಿಗೂ ಬದಲಾಗುವುದಿಲ್ಲ. ನಮ್ಮ ಬಾಂಧವ್ಯ ಉತ್ತಮವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಾನು ಅವರ ಬಗ್ಗೆ ಲಘುವಾಗಿ ಮಾತನಾಡಿದ ಒಂದು ಸಂದರ್ಭವನ್ನು ತೋರಿಸಿ ಎಂದು ಹೇಳಿದರು. ಇನ್ನೂ ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಟಿ. ಜವರಾಯಿ ಗೌಡ, ವಿವೇಕಾನಂದ, ಮಾಜಿ ಎಮ್ಮೆಲ್ಸಿಗಳಾ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ನಿಂಗಪ್ಪ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ನಗರ ಘಟಕದ ಮಹಿಳಾ ಅಧ್ಯಕ್ಷೆ ಶೈಲಾ ಸಂತೋಷ ರಾವ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications