Artificial intelligence: ಭಾರತದಲ್ಲಿ ಎಷ್ಟು ಮಂದಿ ಎಐ ಬಳಸುತ್ತಿದ್ದಾರೆ ಗೊತ್ತಾ?
ಕೃತಕ ಬುದ್ಧಿಮತ್ತೆಯು (ಎಐ) ಜಗತ್ತಿನೆಲ್ಲೆಡೆ ಕ್ರಾಂತಿ ಮಾಡುತ್ತಿದೆ. ಎಐ ತಂತ್ರಜ್ಞಾನ ಹಲವರ ಕೆಲಸ ಕಸಿಯುತ್ತಿದ್ದರೆ, ಮತ್ತೊಂದೆಡೆ ಕೆಲಸ ಮಾಡಲು ಒಡನಾಡಿಯೂ ಆಗಿದೆ. ವರದಿಯೊಂದರ ಪ್ರಕಾರ ಭಾರತದ ಡಿಜಿಟಲ್ ವಲಯದಲ್ಲಿ ಶೇ 40ಕ್ಕಿಂತ ಹೆಚ್ಚು ಜನರು ಈಗ ಎಐ ಟೂಲ್‌ಗಳನ್ನು ಬಳಸುತ್ತಿದ್ದಾರೆ. ಇದು ಉದ್ಯೋಗಾವಕಾಶದಲ್ಲಿ ಸ್ಥಿರವಾದ ಏರಿಕೆಯನ್ನು ಸಹ ತೋರಿಸುತ್ತದೆ.
ಇಂಡಿಯಾ ಸ್ಕಿಲ್ಸ್ ರಿಪೋರ್ಟ್ ಪ್ರಕಾರ ಭಾರತದ ಐಟಿ ಹಾಗೂ ಗಿಗ್ ಕಾರ್ಯಪಡೆಯ ಶೇ 40ಕ್ಕಿಂತ ಹೆಚ್ಚು ಜನರು ಈಗ ಎಐ ಟೂಲ್‌ಗಳನ್ನು ಬಳಸುತ್ತಾರೆ. ಇದರಿಂದ ಉದ್ಯೋಗಾವಕಾಶವನ್ನು ಶೇ 56ರಷ್ಟು ಹೆಚ್ಚಾಗಿದೆ. ಒಟ್ಟಾರೆ ದೇಶದ ಡಿಜಿಟಲ್ ಕೌಶಲ್ಯದಲ್ಲೂ ತೀವ್ರ ಬದಲಾವಣೆಯಾಗುತ್ತಿದೆ. ಈ ವರದಿಯು ಭಾರತ ಕೌಶಲ್ಯ ವರದಿಯ 13ನೇ ಆವೃತ್ತಿಯಾಗಿದೆ. ಇದನ್ನು ಕೈಗಾರಿಕಾ ಸಂಸ್ಥೆಗಳಾದ ಭಾರತೀಯ ಕೈಗಾರಿಕಾ ಒಕ್ಕೂಟ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಸಂಘಗಳ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.

ದೇಶದ ಐಟಿ, ಗಿಗ್ ಕಾರ್ಯಪಡೆಯ ಹೆಚ್ಚಿನ ಜನರು ಆಟೋಮೇಷನ್, ವಿಶ್ಲೇಷಣೆ ಮತ್ತು ಸೃಜನಶೀಲ ಉತ್ಪಾದನೆ ಸೇರಿದಂತೆ ಹೊಸ ಯುಗದ ಕೆಲಸದ ಅವಶ್ಯಕತೆಗಳನ್ನು ಪೂರೈಸಲು ಕೃತಕ ಬುದ್ಧಿಮತ್ತೆ ಆಧಾರಿತ ಟೂಲ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಇದರಿಂದ ಪ್ರತಿಭಾನ್ವಿತ ಗುಂಪಿನ ಒಟ್ಟಾರೆ ಉದ್ಯೋಗಾವಕಾಶವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಗಮನಿಸಿದರೆ ಪ್ರತಿ ಹತ್ತರಲ್ಲಿ ಒಂಬತ್ತಕ್ಕೂ ಹೆಚ್ಚು ಉದ್ಯೋಗಿಗಳಿಗೆ ಎಐ ಟೂಲ್‌ಗಳ ಬಳಕೆಯು ಈಗ ರೂಢಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಭಾರತದ ಐಟಿ ಮತ್ತು ವಿಶಾಲವಾದ ಗಿಗ್ ಆರ್ಥಿಕತೆಯಲ್ಲಿ ಸದ್ಯ ಎಲ್ಲದಕ್ಕೂ ಎಐ ಬಳಕೆ ಹೆಚ್ಚಾಗಿದೆ ಎಂದು ಹೇಳಿದೆ.
ಎಐ ಕೋರ್ಸ್‌ಗಳಿಗೆ ಡಿಮ್ಯಾಂಡ್
2026-27ರ ಅವಧಿಯಲ್ಲಿ ಭಾರತವು 3ನೇ ತರಗತಿಯಿಂದ ಎಐ ಶಿಕ್ಷಣ ಪರಿಚಯಿಸಲು ಸಜ್ಜಾಗುತ್ತಿದೆ. ಗೂಗಲ್ AI ಕೂಡ ಏಜೆಂಟ್‌ಗಳ ಕುರಿತು ಉಚಿತ, ಸಮಗ್ರ ಕೋರ್ಸ್ ಅನ್ನು ಪ್ರಾರಂಭಿಸಿದೆ. ಇದು ಕೃತಕ ಬುದ್ಧಿಮತ್ತೆಯಲ್ಲಿ ಮುಂದಿನ ಮಹತ್ವದ ಪ್ರಗತಿಗೆ ನಾಂದಿ ಹಾಡಲಿದೆ. ಆಸಕ್ತರಿಗೆ ಎಐ ಅರ್ಥಮಾಡಿಕೊಳ್ಳಲು, ವಿನ್ಯಾಸಗೊಳಿಸಲು ಮತ್ತು ನಿಯೋಜಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಈ ಕೋರ್ಸ್, ಗೂಗಲ್‌ನ ಡೇಟಾ ಸೈನ್ಸ್ ಪ್ಲಾಟ್‌ಫಾರ್ಮ್ ಎಲ್ಲರಿಗೂ ಮುಕ್ತವಾಗಿದೆ.
ಗೂಗಲ್ ಪ್ರಕಾರ ಈ ಕೋರ್ಸ್ ಎಐ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವುದು, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಅವರ ಪರಿಸರದೊಂದಿಗಿನ ಸಂವಹನದಿಂದ ಹೇಗೆ ಕಲಿಯುವುದು ಎಂಬುದನ್ನು ಪರಿಶೀಲಿಸುತ್ತದೆ. ಇದು ಶೈಕ್ಷಣಿಕ ಸಿದ್ಧಾಂತವನ್ನು ಪ್ರಾಯೋಗಿಕ ವಿಚಾರಗಳೊಂದಿಗೆ ಸಂಯೋಜಿಸುತ್ತದೆ, ಕಲಿಯುವವರಿಗೆ ತಮ್ಮದೇ ಆದ ಕೆಲಸ ಮಾಡುವ ಎಐ ಏಜೆಂಟ್ ರಚಿಸಲು ಜ್ಞಾನ ಮತ್ತು ಸಾಧನಗಳನ್ನು ಒದಗಿಸುತ್ತದೆ. ಅಲ್ಲದೆ ಈಗ ಉದ್ಯೋಗಗಳಲ್ಲಿಯೂ ಎಐ ಕೌಶಲ್ಯ ಹೊಂದಿರುವ ಪ್ರತಿಭಾನ್ವಿತರಿಗೆ ಆದ್ಯತೆ ಕೊಡಲಾಗುತ್ತಿದೆ.












Click it and Unblock the Notifications