18 ವರ್ಷಗಳ ಬಳಿಕ AIನಿಂದ ದಂಪತಿಗೆ ಮಗು ಪಡೆಯುವ ಅವಕಾಶ; ಹೇಗೆ ಸಾಧ್ಯ?
AI: ತಂತ್ರಜ್ಞಾನದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಆಗುತ್ತಿದೆ. ಯಾವ ಕ್ಷೇತ್ರದಲ್ಲಿ ನೋಡಿದರೂ ಎಐನದ್ದೇ ಸದ್ದು ಜೋರಾಗಿದ್ದು, ಇದನ್ನು ಬರೀ ಐಟಿ-ಬಿಟಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ಆರೋಗ್ಯ ಕ್ಷೇತ್ರದಲ್ಲೂ ಕೂಡ ಬಳಕ್ಕೆ ಮಾಡುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಇಲ್ಲಿದೆ ತಿಳಿಯಿರಿ.
ಬಹುತೇಕ ದಂಪತಿಗಳು ಮಕ್ಕಳು ಆಗಿಲ್ಲ ಎನ್ನುವ ಕೊರಗಿನಲ್ಲಿರುತ್ತಾರೆ. ಸಾಮಾನ್ಯವಾಗಿ ಈ ಸಮಸ್ಯೆಯಾದ್ರೆ ಮೊದಲು ಹೆಬ್ಬೆಟ್ಟು ಮಾಡಿ ತೋರಿಸುವುದೇ ಹೆಣ್ಣಿನ ಕಡೆ. ಕೆಲವು ಬಾರಿ ಗಂಡುಮಕ್ಕಳ ಅಂದರೆ ಪತಿ ಕಡೆಯಿಂದಲೂ ಕೆಲ ಅಂಶಗಳ ಕೊರತೆಯಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದನ್ನು ಮೊದಲು ನಮ್ಮ ಸಮಾಜ ಅರ್ಥ ಮಾಡಕೊಳ್ಳಬೇಕಾಗುತ್ತದೆ. ಇದೀಗ ಇದಕ್ಕೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವ ವಿಧಾನವನ್ನು ಎಐ ಮಾಡುತ್ತಿದೆ.

ಫಲವತ್ತತೆಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ನೆರವಿಗೆ ಕೃತಕ ಬುದ್ಧಿಮತ್ತೆ ಬಂದಿದೆ. ಪತಿಯಲ್ಲಿ ವೀರ್ಯವನ್ನು ಗುರುತಿಸಿದ ಎಐ ತಂತ್ರಜ್ಞಾನ, ಆ ದಂಪತಿ ಮಕ್ಕಳನ್ನು ಪಡೆದುಕೊಳ್ಳಲು ಸಹಾಯವನ್ನ ಒದಗಿಸಿದೆ. 18 ವರ್ಷಗಳ ಕಾಲ ವಿವಿಧ ಐವಿಎಫ್ ಕೇಂದ್ರಗಳಲ್ಲಿ ಪರಿಹಾರ ಸಿಗದ ಕಾರಣ ಕೊಲಂಬಿಯಾ ವಿವಿಯ ಫಲವತ್ತತೆ ಕೇಂದ್ರಕ್ಕೆ ಭೇಟಿ ನೀಡಿದ್ದ ದಂಪತಿಗೆ ಕೊನೆಗೂ ಮಕ್ಕಳ ಭಾಗ್ಯ ಸಿಕ್ಕಂತಾಗಿದೆ.
ಪತಿ ಅತ್ಯಂತ ಕಡಿಮೆ ಪ್ರಮಾಣದ ವೀರ್ಯ ಹೊಂದಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ದರಿಂದ ವೈದ್ಯರಿಗೆ ಅವರ ವೀರ್ಯವನ್ನು ಗುರುತಿಸಲು ಸಾಧ್ಯ ಆಗುತ್ತಿರಲಿಲ್ಲ. ಆದರೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕೇವಲ ಒಂದೇ ಗಂಟೆಯಲ್ಲಿ 44 ವೀರ್ಯಗಳನ್ನು ಗುರುತಿಸಿದ್ದು, ದಂಪತಿಗೆ ನೆರವಾದಂತಾಗಿದೆ. ಕೊನೆಗೂ ದಂಪತಿಗಳು ಮಗು ಪಡೆವ ಅವಕಾಶ ಪಡೆದುಕೊಂಡಿದ್ದಾರೆ.
ತುಂಬೆ ಲ್ಯಾಬ್ ಫಾರ್ ಎಐ ಇನ್ ಹೆಲ್ತ್‌ಕೇರ್: ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ತುಂಬೆ ಲ್ಯಾಬ್ ಫಾರ್ ಎಐ ಇನ್ ಹೆಲ್ತ್‌ಕೇರ್ ಅನ್ನು AIಗಾಗಿ ಉದ್ಘಾಟನೆ ಮಾಡಿದೆ.
ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ ಮೂಲಕ ಶಿಕ್ಷಣ ಮತ್ತು ಸಂಶೋಧನೆಯನ್ನು ಮುನ್ನಡೆಸುವ ಗುರಿ ಇದರ ಉದ್ದೇಶವಾಗಿದೆ. ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಖ್ಯ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು.
ಈ ಬಗ್ಗೆ ಮಾತನಾಡಿದ ಡಾ.ತುಂಬೆ ಮೊಯ್ದೀನ್, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ನಮ್ಮ ಬದ್ಧತೆಯನ್ನು ಈ ಪ್ರಯೋಗಾಲಯ ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸಂಶೋಧನೆಯಲ್ಲಿ ಸಹಕರಿಸಲಿದೆ ಎಂದು ಹೇಳಿದರು.
ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಅವರು ಮಾತನಾಡಿ, ಈ ಪ್ರಯೋಗಾಲಯ ನಮ್ಮ ವಿದ್ಯಾರ್ಥಿಗಳನ್ನು ಉದಯೋನ್ಮುಖ ತಂತ್ರಜ್ಞಾನಗಳಿಗೆ ಪ್ರಾಯೋಗಿಕವಾಗಿ ಹೊಂದಿಕೊಳ್ಳುವಂತೆ ಮಾಡಿ ಅವರ ಶೈಕ್ಷಣಿಕ ಅನುಭವವನ್ನು ಬಲಗೊಳಿಸುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಸಂಶೋಧನೆ ಮತ್ತು ನೈಜ ಸಮಸ್ಯೆ ಪರಿಹಾರಕ್ಕೆ ಹೊಸ ಹಾದಿಯನ್ನು ತೋರಿಸಲಿದೆ ಎಂದು ಹೇಳಿದರು.
ಹೊಸದಾಗಿ ಪ್ರಾರಂಭಿಸಲಾದ ಪ್ರಯೋಗಾಲಯ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವದಲ್ಲಿರುವ ಎಐ ಸಂಬಂಧಿತ ಕಾರ್ಯಕ್ರಮಗಳನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ. ರೋಗ ನಿರ್ಣಯ, ರೋಗಿಗಳ ಆರೈಕೆ ಸೇರಿದಂತೆ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಎಐ ಬಳಕೆಗೆ ಅನುವು ಮಾಡಿಕೊಡುತ್ತದೆ. ಇದು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಆರೋಗ್ಯ ವೃತ್ತಿಪರರಿಗೆ ಕ್ರಿಯಾತ್ಮಕ ಕಲಿಕೆ ಮತ್ತು ಸಂಶೋಧನೆಗೆ ಅವಕಾಶ ಮಾಡಿಕೊಡಲಿದೆ.












Click it and Unblock the Notifications