ಬೆಂಗಳೂರು-ಪುಣೆ ಹೈಸ್ಪೀಡ್ ರೈಲು: ಜೋಶಿ, ಕುಮಾರಸ್ವಾಮಿ ನಡೆಗೆ ಎಂ.ಬಿ. ಪಾಟೀಲ್ ಮೆಚ್ಚುಗೆ
ಬೆಂಗಳೂರು: ದೇಶದ ಟೆಕ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರ ಮುಂಬೈ ನಡುವೆ 'ಹೈಸ್ಪೀಡ್ ರೈಲು ಕಾರಿಡಾರ್' ನಿರ್ಮಾಣವಾಗಬೇಕೆಂಬ ರಾಜ್ಯದ ಬೇಡಿಕೆಗೆ ಕೇಂದ್ರ ಮಟ್ಟದಲ್ಲಿ ಸ್ಪಂದನೆ ಸಿಕ್ಕಿದೆ. ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತುಕತೆ ನಡೆಸಿರುವುದ್ದರು. ಇದನ್ನು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಸ್ವಾಗತಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯ ಮಹತ್ವ ಮತ್ತು ಇತ್ತೀಚೆಗೆ ನಡೆದ ಲಿಂಗಾಯತ ಶಾಸಕರ ಸಭೆಯ ಕುರಿತು ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದರು. ಇದೇ ವೇಳೆ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ಚರ್ಚೆ ಕುರಿತು ಪ್ರತಿಕ್ರಿಯಿಸಿದರು.

ಉತ್ತರ ಕರ್ನಾಟಕಕ್ಕೆ ಸಂಜೀವಿನಿ ಈ ಯೋಜನೆ
ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಸೇರಿದಂತೆ ಏಳು ಕಡೆಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ ಘೋಷಿಸಲಾಗಿದೆ. ಇದು ಸ್ವಾಗತಾರ್ಹವಾವಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರು-ಪುಣೆ-ಮುಂಬೈ ಮಾರ್ಗ ಅತ್ಯಂತ ನಿರ್ಣಾಯಕವಾಗಿದೆ ಎಂದು ಎಂ.ಬಿ.ಪಾಟೀಲ್ ಅವರು ಹೇಳಿದರು.
"ನಾನು ಬಜೆಟ್ ಮಂಡನೆಯಾದ ದಿನವೇ ಈ ಬಗ್ಗೆ ಧ್ವನಿ ಎತ್ತಿದ್ದೆ. ಚೆನ್ನೈ ಮತ್ತು ಹೈದರಾಬಾದ್ ಮಾರ್ಗಗಳಿಂದ ಕರ್ನಾಟಕದ ಒಳನಾಡು ಪ್ರದೇಶಗಳಿಗೆ ಹೆಚ್ಚಿನ ಲಾಭವೇನೂ ಆಗುವುದಿಲ್ಲ. ಅದೇ ಬೆಂಗಳೂರು ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ಬಂದರೆ, ಅದು ಉತ್ತರ ಕರ್ನಾಟಕದ ಚಿತ್ರಣವನ್ನೇ ಬದಲಿಸಲಿದೆ. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ ಮತ್ತು ಪುಣೆ ನಗರಗಳಿಗೆ ಇದು ವರದಾನವಾಗಲಿದೆ. ಈ ಭಾಗದಲ್ಲಿ ಕೈಗಾರಿಕಾ ಕ್ರಾಂತಿ ಮತ್ತು ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ," ಎಂದು ಅವರು ವಿವರಿಸಿದರು.
ಈ ನಿಟ್ಟಿನಲ್ಲಿ ಪಕ್ಷಬೇಧ ಮರೆತು ಕೇಂದ್ರ ಸಚಿವರುಗಳಾದ ಪ್ಲಹ್ಲಾದ್ ಜೋಶಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕೇವಲ ಭೇಟಿಗೆ ಸೀಮಿತವಾಗದೆ, ಈ ಯೋಜನೆಗೆ ಒಪ್ಪಿಗೆ ಸಿಗುವವರೆಗೂ ಒತ್ತಡ ಹೇರಬೇಕು ಎಂದು ಪಾಟೀಲ್ ಮನವಿ ಮಾಡಿದರು. ಈಗಾಗಲೇ ತಾವು ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್ ಮತ್ತು ವಿ. ಸೋಮಣ್ಣ ಅವರಿಗೂ ಪತ್ರ ಬರೆದಿರುವುದಾಗಿ ತಿಳಿಸಿದರು.
ಲಿಂಗಾಯತ ಶಾಸಕರ ಸಭೆ ಶಕ್ತಿ ಪ್ರದರ್ಶನವಲ್ಲ
ಇದೇ ವೇಳೆ, ನಾಲ್ಕು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಲಿಂಗಾಯತ ಶಾಸಕರ ಸಭೆಯ ಬಗ್ಗೆಯೂ ಸಚಿವರು ಸ್ಪಷ್ಟನೆ ನೀಡಿದರು. "ಅದು ಯಾವುದೇ ಕಾರಣಕ್ಕೂ ಶಕ್ತಿ ಪ್ರದರ್ಶನದ ಸಭೆಯಾಗಿರಲಿಲ್ಲ. ಶಾಸಕರಾದ ಅಶೋಕ ಪಟ್ಟಣ ಮತ್ತು ಬಿ.ಆರ್.ಪಾಟೀಲ್ ಅವರು ಸಭೆ ಕರೆದಿದ್ದರು. ಸಮುದಾಯದ ಅಭಿವೃದ್ಧಿ ಮತ್ತು ಹಿತಾಸಕ್ತಿಗಳ ಬಗ್ಗೆ ಚರ್ಚಿಸುವುದಷ್ಟೇ ಅದರ ಉದ್ದೇಶವಾಗಿತ್ತು," ಎಂದು ಹೇಳಿದರು.
ಇತರೆ ಸಮುದಾಯಗಳ ಶಾಸಕರು ಸಭೆ ನಡೆಸಿದಾಗ ಇಲ್ಲದ ಚರ್ಚೆ, ಲಿಂಗಾಯತರು ಸೇರಿದಾಗ ಮಾತ್ರ ಏಕೆ ಬರುತ್ತದೆ? ಎಂದು ಪ್ರಶ್ನಿಸಿದ ಅವರು, 1989ರಲ್ಲಿ ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ 178 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು ಎಂಬುದನ್ನು ನೆನಪಿಸಿದರು. "ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ 34 ಲಿಂಗಾಯತ ಶಾಸಕರಿದ್ದೇವೆ. 2023ರ ಚುನಾವಣೆಯಲ್ಲಿ ಸಮುದಾಯ ಪಕ್ಷದ ಕೈ ಹಿಡಿದಿದೆ. ಹೀಗಾಗಿ ಸರ್ಕಾರದಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕೇಳುವುದು ನಮ್ಮ ಹಕ್ಕು. ಇದರ ಅರ್ಥ ನಾವು ಬೇರೆ ಸಮುದಾಯದ ಪಾಲನ್ನು ಕಸಿದುಕೊಳ್ಳುತ್ತೇವೆ ಎಂದಲ್ಲ," ಎಂದು ಸ್ಪಷ್ಟಪಡಿಸಿದರು.
ಎಂನರೆಗಾ ಬಗ್ಗೆ ಆಕ್ರೋಶ
ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯನ್ನು ಪ್ರಸ್ತುತ ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಪಾಟೀಲ್ ಆರೋಪಿಸಿದರು. ಹಿಂದೆ ಬಿಜೆಪಿ ನಾಯಕರೇ ಈ ಯೋಜನೆಯನ್ನು ಹೊಗಳಿದ್ದರು. ಆದರೆ, ಈಗ ಅದರ ಸ್ವರೂಪವನ್ನೇ ಬದಲಾಯಿಸಲು ಹೊರಟಿದ್ದಾರೆ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ದ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು. ಒಟ್ಟಾರೆಯಾಗಿ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದ ಸಹಕಾರ ಅತ್ಯಗತ್ಯವಾಗಿದ್ದು, ಹೈಸ್ಪೀಡ್ ರೈಲು ಯೋಜನೆ ಜಾರಿಯಾದರೆ ಕರ್ನಾಟಕದ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂಬುದು ಸಚಿವರ ಅಭಿಪ್ರಾಯವಾಗಿದೆ.












Click it and Unblock the Notifications