ನಾವೂ ನಿಮ್ಮೊಂದಿಗಿದ್ದೇವೆ-ಕ.ರಾ.ರೈ.ಸಂ: ಚುಕ್ಕಿ ನಂಜುಂಡಸ್ವಾಮಿ-ಕೆ.ಟಿ. ಗಂಗಾಧರ್
ದೆಹಲಿಯ ರೈತ ಚಳವಳಿಯನ್ನು ಹತ್ತಿಕ್ಕುವ ಅನೇಕ ಪಿತೂರಿಗಳಲ್ಲಿ "ಇದು ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟವಷ್ಟೇ, ಇಡೀ ದೇಶದ ರೈತರು ಈ ಹೋರಾಟದ ಪರವಾಗಿಲ್ಲ" ಎಂದು ಬಿಂಬಿಸುತ್ತಿರುವುದೂ ಒಂದು.
ಇದನ್ನು ಮನಗಂಡ ದೇಶದ ಅನೇಕ ರಾಜ್ಯಗಳು, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ರೈತರು ದಿಲ್ಲಿ ಚಳುವಳಿಯಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಬಹುತೇಕ ಎಲ್ಲಾ ರಾಜ್ಯಗಳ ರೈತ ಸಂಘಗಳು ದಿಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ "ನಾವು ನಿಮ್ಮೊಂದಿಗಿದ್ದೇವೆ" ಎಂಬ ಮಾಹಿತಿ ರವಾನಿಸಿವೆ. ಕರ್ನಾಟಕದಿಂದಲೂ ರೈತರು ದಿಲ್ಲಿ ಚಳವಳಿಯಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗಷ್ಟೇ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದಾಗ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ರೈತರು ದಿಲ್ಲಿ ಚಳವಳಿಗೆ ಹೋದದ್ದು, ಚಳವಳಿಯ ಐತಿಹಾಸಿಕ ಸಂದರ್ಭವೆಂದು ನಿಸ್ಸಂದೇಹವಾಗಿ ಹೇಳಬಹುದು. ಟಿಕಾಯತ್ ಅವರ ಕಣ್ಣೀರು ನೆಲ ತಾಗುವಷ್ಟರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ಕೆ.ಟಿ.ಗಂಗಾಧರ್ ಮತ್ತು ಚುಕ್ಕಿ ನಂಜುಂಡಸ್ವಾಮಿ ದಿಲ್ಲಿಯತ್ತ ಪ್ರಯಾಣ ಬೆಳೆಸಲು ಸಜ್ಜಾದರು.
ದಿಲ್ಲಿ ತಲುಪಿದ ಚುಕ್ಕಿ ನಂಜುಂಡಸ್ವಾಮಿ ಅವರನ್ನು ಒನ್ಇಂಡಿಯಾ ಸಂಪರ್ಕ ಮಾಡಿತ್ತು. ಆಗ ಅವರು "ರೈತ ಹೋರಾಟಗಾರರಷ್ಟೇ ಅಲ್ಲ, ಪತ್ರಕರ್ತರು, ಜನಪರಕಾಳಜಿಯ ಎಲ್ಲರೂ ಈ ಚಳವಳಿಯನ್ನೊಮ್ಮೆ ನೋಡಬೇಕು. ಇದರಲ್ಲಿ ಭಾಗಿಯಾಗಬೇಕು" ಎಂದು ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದರು. ಮುಂದಿನ ದಿನಗಳಲ್ಲಿ ರಾಜ್ಯ ರೈತ ಸಂಘ ಹೇಗೆಲ್ಲಾ ದಿಲ್ಲಿ ಚಳವಳಿಗೆ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದನ್ನೂ ತಿಳಿಸುವುದಾಗಿ ಹೇಳಿದ್ದರು.
ಇದೀಗ ದೆಹಲಿ ಚಳುವಳಿಗೆ ಬೆಂಬಲವಾಗಿ ರೈತರ ಸ್ವಾಭಿಮಾನದ ಸಂಕೇತವಾದ ಹಸಿರು ಶಾಲುಗಳನ್ನು ಹೋರಾಟ ನಿರತ ಸಹೋದರ ಸಹೋದರಿಯರಿಗೆ ಪಾರ್ಸಲ್ ಮಾಡುವ ಮೂಲಕ ಚಳುವಳಿಗೆ ಬೆಂಬಲ ವ್ಯಕ್ತಪಡಿಸುವ ಭಾವನಾತ್ಮಕ ನಡೆಗೆ ಚುಕ್ಕಿ ನಂಜುಂಡಸ್ವಾಮಿ ಹಾಗೂ ಕೆ.ಟಿ. ಗಂಗಾಧರ್ ಚಾಲನೆ ನೀಡಿದ್ದಾರೆ.
ಆ ಕೆಲಸಕ್ಕೆ ದಿನಾಂಕ ನಿಗದಿಯಾಗಬೇಕಷ್ಟೇ. ಅಷ್ಟೇ ಅಲ್ಲದೆ ದಿಲ್ಲಿಯ ಹೋರಾಟದ ಪ್ರಮುಖರಲ್ಲೊಬ್ಬರಾದ ರಾಕೇಶ್ ಟಿಕಾಯತ್ ಅವರನ್ನು ರಾಜ್ಯಕ್ಕೆ ಕರೆಸಿ ಹಾವೇರಿಯಲ್ಲಿ ಬೃಹತ್ ರೈತ ಸಮಾವೇಶ ಮಾಡುವ ಮೂಲಕ ದೆಹಲಿಯ ಚಳುವಳಿಗೆ ಬೆಂಬಲ ವ್ಯಕ್ತಪಡಿಸುವ ಮಹತ್ವದ ಕೆಲಸಕ್ಕೆ ಚಾಲನೆ ನೀಡಲಿದ್ದಾರೆ.

ದೆಹಲಿ ರೈತ ಚಳುವಳಿಗೆ ಪೂರಕವಾಗಿ ಹೋರಾಟ ನಿರತ ಕಾರ್ಯಕರ್ತರಿಗೆ ಹಸಿರು ಶಾಲುಗಳನ್ನು ರವಾನಿಸುವುದು ಮತ್ತು ರಾಕೇಶ್ ಟಿಕಾಯತ್ ಹಾಗೂ ಇತರ ಮುಖಂಡರನ್ನು ರಾಜ್ಯಕ್ಕೆ ಕರೆಸಿ ಸಮಾವೇಶ ಮಾಡುವುದೂ ಸೇರಿದಂತೆ ಇನ್ನೂ ಏನೆಲ್ಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಚಟುವಟಿಕೆಗಳ ದಿನಾಂಕ ಹಾಗೂ ಸಮಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮುಖಂಡರಾದ ಕೆ.ಟಿ. ಗಂಗಾಧರ್ ಹಾಗೂ ಚುಕ್ಕಿ ನಂಜುಂಡಸ್ವಾಮಿ ಈ ವಾರಾಂತ್ಯದಲ್ಲಿ ತಿಳಿಸಲಿದ್ದಾರೆ.












Click it and Unblock the Notifications