Get Updates
Get notified of breaking news, exclusive insights, and must-see stories!

Agriculture: ಮಳೆಗಾಲದಲ್ಲಿ ಕರಿಮೆಣಸು ಬಳ್ಳಿಯನ್ನು ರಕ್ಷಿಸುವುದು ಹೇಗೆ?

ಮಡಿಕೇರಿ, ಜೂನ್ 21: ಕೊಡಗಿನಲ್ಲಿ ಕಾಫಿ ತೋಟಗಳ ನಡುವೆ ಇರುವ ಮರಗಳಿಗೆ ಕರಿಮೆಣಸನ್ನು ನೆಟ್ಟು ಬೆಳೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ಕಾಫಿ ಜತೆಗೆ ಉಪಬೆಳೆಯಾಗಿ ಬೆಳೆಗಾರರಿಗೆ ಆದಾಯ ತರುತ್ತಿದೆಯಲ್ಲದೆ, ಕಾಫಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬೆಳೆ ಇದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚೆಗಿನ ವಾತಾವರಣದಲ್ಲಿನ ಏರುಪೇರಿನಿಂದಾಗಿ ಫಸಲು ನೀಡುವ ಬಳ್ಳಿಯನ್ನು ರಕ್ಷಿಸಿಕೊಳ್ಳುವುದು ಸವಾಲ್ ಆಗಿರುವುದಂತು ನಿಜ.

ಕರಿಮೆಣಸಿನ ಬೆಳೆ ಏರಿಕೆಯಾದಂತೆಲ್ಲ ಬಳ್ಳಿಗೆ ಕಾಡುವ ರೋಗಗಳು ಹೆಚ್ಚಾಗಿವೆ. ಜತೆಗೆ ಕೊಡಗಿನಲ್ಲಿ ಮಳೆ ಹೆಚ್ಚಾದ ಸಂದರ್ಭದಲ್ಲಿ ಬಳ್ಳಿಗಳಿಗೆ ಹಲವು ರೋಗಗಳು ತಗಲುತ್ತಿದ್ದು, ಅವುಗಳನ್ನು ಕಾಪಾಡಿಕೊಳ್ಳುವುದು ಸುಲಭವಾಗಿ ಉಳಿದಿಲ್ಲ. ಬಳ್ಳಿಯನ್ನು ನೆಟ್ಟು ಮೂರ್ನಾಲ್ಕು ವರ್ಷಗಳಲ್ಲಿ ಫಸಲು ಬಿಡಲು ಆರಂಭಿಸುವ ಬಳ್ಳಿಗಳು ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಸಾಯಲು ಆರಂಭಿಸುತ್ತವೆ. ಈ ವೇಳೆ ಅದನ್ನು ಪೋಷಿಸಿ ಬೆಳೆಸಿದ ಬೆಳೆಗಾರರು ಕಂಗಾಲಾಗುತ್ತಾರೆ.

Tips For Farmers How To Protect Black Pepper Wine During Rainy Season

ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಕರಿಮೆಣಸನ್ನು ಪ್ರತ್ಯೇಕವಾಗಿ ಬೆಳೆಸದೆ ಮಿಶ್ರಬೆಳೆಯಾಗಿಯೇ ಬೆಳೆಯುವುದು ಹೆಚ್ಚಾಗಿ ಕಂಡು ಬರುತ್ತದೆ. ಜತೆಗೆ ವೈಜ್ಞಾನಿಕವಾಗಿ ಇದರ ಕೃಷಿಗೆ ಹೆಚ್ಚು ಒತ್ತು ನೀಡಿಲ್ಲ. ಇದರಿಂದ ನಾವು ಹೆಚ್ಚೆಂದರೆ ಹೆಕ್ಟೇರಿಗೆ ಇನ್ನೂರರಿಂದ ಇನ್ನೂರೈವತ್ತು ಕಿ.ಗ್ರಾಂ,ನಷ್ಟು ಇಳುವರಿ ಪಡೆದರೆ, ದೂರದ ಥಾಯ್ಲೆಂಡ್ ನಲ್ಲಿ ಹೆಕ್ಟೇರಿಗೆ 4200 ಕಿ.ಗ್ರಾಂ.ನಷ್ಟು ಇಳುವರಿ ಪಡೆಯುತ್ತಾರಂತೆ. ನಮ್ಮಲ್ಲಿ ಕೆಲವೊಂದು ರೋಗಗಳು ಅದಕ್ಕೆ ಕರಿಮೆಣಸಿಗೆ ಫಸಲು ಬಿಡಲು ಆರಂಭಿಸಿದ ನಂತರವೇ ಕಾಡುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬೆಳೆಗಾರರದ್ದಾಗಿದೆ.

ಕೇರಳದಲ್ಲಿ ಕಾಣಿಸಿದ ಸೊರಗುರೋಗ

ಮೂರು ದಶಕಗಳ ಹಿಂದಕ್ಕೆ ಹೋದರೆ ಅವತ್ತು ಯಾವುದೇ ರೋಗಗಳು ತಗುಲದೆ ಇದ್ದುದರಿಂದ ಕರಿಮೆಣಸನ್ನು ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯುತ್ತಿದ್ದರು. ಆಗ ತೋಟದ ನಡುವಿನ ಮರವೊಂದರ ಬುಡಕ್ಕೆ ಬಳ್ಳಿನೆಟ್ಟು ಒಂದಿಷ್ಟು ಗೊಬ್ಬರ ಹಾಕಿದ್ದೇ ಆದರೆ ಶೀಘ್ರವೇ ಬೆಳೆದು ಫಸಲು ನೀಡುತ್ತಿತ್ತು. ಇದಕ್ಕೆ ರೋಗ ತಗಲುವ ಭಯವೂ ಇರಲಿಲ್ಲ. ಈಗ ಹಾಗಿಲ್ಲ ವಾತಾವರಣದಲ್ಲಿ ಬದಲಾವಣೆ, ಅತಿವೃಷ್ಟಿ, ಅನಾವೃಷ್ಟಿಗಳು ಕರಿಮೆಣಸಿಗೆ ಮಾರಕವಾಗುತ್ತಿವೆ.

Tips For Farmers How To Protect Black Pepper Wine During Rainy Season

ಇದೆಲ್ಲದರ ನಡುವೆ ಕರಿಮೆಣಸಿಗೆ ಬಹುಮುಖ್ಯವಾಗಿ ಸೊರಗು ರೋಗ ಬಾಧಿಸುತ್ತಿದೆ. ಜತೆಗೆ ಶೀಘ್ರಗತಿಯಲ್ಲಿ ವ್ಯಾಪಿಸುತ್ತಿರುವುದರಿಂದ ಯಾವಾಗ ಬಳ್ಳಿ ರೋಗಕ್ಕೆ ಬಲಿಯಾಗುತ್ತದೆ ಎಂಬುದನ್ನು ಹೇಳುವುದೇ ಅಸಾಧ್ಯಘವಾಗಿದೆ. ಈ ಸೊರಗು ರೋಗದ ಬಗ್ಗೆ ಹೇಳಬೇಕೆಂದರೆ ಇದರಲ್ಲಿ ಎರಡು ವಿಧವಿದೆ. ಒಂದು ಶೀಘ್ರಗತಿಯದ್ದಾದರೆ, ಮತ್ತೊಂದು ನಿಧಾನಗತಿಯ ಸೊರಗುರೋಗವಾಗಿದೆ. ಈ ರೋಗ ಮೊದಲಿಗೆ ಕೇರಳದ ವೈನಾಡಿನಲ್ಲಿ 1920ರಲ್ಲಿ ಕಾಣಿಸಿಕೊಂಡಿತು ಎಂದು ಹೇಳಲಾಗಿದೆ.

ಕರಿಮೆಣಸು ಬಳ್ಳಿ ಬೇರಿಗೆ ತಗಲುವ ರೋಗ

ಆ ನಂತರ ಕರ್ನಾಟಕದತ್ತ ನಿಧಾನಗತಿಯಲ್ಲಿಯೇ ಹರಡಿರುವುದು ಕಂಡು ಬಂದಿದೆ. ಮೊದಲಿಗೆ ಅಲ್ಲೊಂದು ಇಲ್ಲೊಂದು ಬಳ್ಳಿಗಳು ಸಾವನ್ನಪ್ಪುತ್ತಿದ್ದಾಗ ಬೆಳೆಗಾರರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದರೆ 1991ರ ನಂತರ ಕರ್ನಾಟಕದಲ್ಲಿ ಇದು ತೀವ್ರಗತಿಯಲ್ಲಿ ಹರಡಿದ್ದು, ಇಲ್ಲಿಯವರೆಗೂ ರೋಗವನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಆದರೆ ನಿಯಂತ್ರಣ ಮಾಡಿಕೊಂಡು ಬೆಳೆಗಾರರು ಹೋಗುತ್ತಿದ್ದಾರೆ. ಆದರೂ ಸೊರಗು ರೋಗ ಕರಿಮೆಣಸು ಬಳ್ಳಿಗಳು ಬಲಿಯಾಗುತ್ತಲೇ ಇವೆ.

ಕರಿಮೆಣಸು ಬಳ್ಳಿಗೆ ಸೊರಗು ರೋಗ ತಗುಲಿರುವುದನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ರೋಗಕ್ಕೆ ತುತ್ತಾದ ಬಳ್ಳಿಯ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಾ ಬಳ್ಳಿ ಒಣಗಿ ಸಾಯುತ್ತವೆ. ಇನ್ನು ರೋಗ ಬರಲು ಕಾರಣ ಮತ್ತು ಹೇಗೆ ಬರುತ್ತದೆ? ಎಂಬುವುದರ ಬಗ್ಗೆ ಹೇಳುವುದಾದರೆ ಈ ರೋಗ ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂದ್ರದಿಂದ ಬರುತ್ತದೆ. ಈ ಶಿಲೀಂದ್ರವು ಮೊದಲು ಬಳ್ಳಿಯ ಬೇರಿಗೆ ಆಕ್ರಮಣ ಮಾಡುತ್ತದೆ. ಇದರಿಂದ ನೀರು, ಆಹಾರಗಳ ಚಲನೆಗೆ ಅಡ್ಡಿಯಾಗಿ ಬೇರು ಸಾಯುತ್ತದೆ. ನಂತರ ಬಳ್ಳಿ ಎಲೆಗಳನ್ನು ಆಕ್ರಮಿಸುತ್ತದೆ.

ಮಳೆಗಾಲದಲ್ಲಿ ಹೆಚ್ಚು ಹರಡುವ ರೋಗ

ಮುಖ್ಯವಾಗಿ ಸೊರಗು ರೋಗವು ಮಳೆಗಾಲದಲ್ಲಿ ಹರಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಮಳೆಹನಿ ಬಿದ್ದು ಚಿಮ್ಮುವಾಗ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂದ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಇನ್ನು 'ಮೆಲೋಯ್ಡೋಗೈನ್ ಇಂಕಾಗ್ನಿಟ' ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಶೀಘ್ರಗತಿಯ ಸೊರಗುರೋಗದಲ್ಲಿ ಬಳ್ಳಿಗಳು ಬೇಗ ಸಾವನ್ನಪ್ಪುತ್ತವೆ.

ನಿಧಾನಗತಿಯ ಸೊರಗುರೋಗಕ್ಕೆ ತುತ್ತಾದ ಬಳ್ಳಿಯ ಶಾಖೆ ಬೇರುಗಳಿಗೆ ಶಿಲೀಂದ್ರಗಳು ದಾಳಿ ಮಾಡುವುದರಿಂದ ಬೇರು ಸಾಯುವುದರಿಂದ ನೀರು, ಗೊಬ್ಬರ ಬಳ್ಳಿಗೆ ದೊರೆಯದೆ ಎಲೆಗಳು ನಿಧಾನವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಳಿಕ ಉದುರುತ್ತದೆ. ಆದರೆ ಕೆಲವೊಮ್ಮೆ ಮಳೆಗಾಲದಲ್ಲಿ ಮತ್ತೆ ಚೇತರಿಸಿದಂತೆ ಕಂಡು ಬಂದರೂ ಬಳಿಕ ಅದು ಸಾಯುತ್ತದೆ. ಈಗಾಗಲೇ ಸೊರಗುರೋಗವನ್ನು ತಡೆಗಟ್ಟುವಲ್ಲಿ ಹಲವು ಸಂಶೋಧನೆ ನಡೆದಿದ್ದು, ಕೆಲವು ಸುಧಾರಿತ ತಳಿಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

ರೋಗ ನಿಯಂತ್ರಣಕ್ಕೆ ಏನೇನು ಮಾಡಬೇಕು?

ಕಲ್ಲಿಕೋಟೆಯ ನ್ಯಾಷನಲ್ ರೀಸರ್ಚ್ ಸೆಂಟರ್ ಫಾರ್ ಸ್ಪೈಷಸ್ ಜೈವಿಕ ನಿಯಂತ್ರಣದಿಂದ ಟ್ರೈಕೋಡರ್ಮ್ ಹಾಗೂ ಗ್ಲಿಯೋಕ್ಲಾಡಿಯಂನ ಕೆಲವು ಪ್ರಭೇದಗಳನ್ನು ಉಪಯೋಗಿಸಿ ಸಂಶೋಧನೆ ನಡೆಸಿ ಒಂದಷ್ಟು ಯಶಸ್ಸು ಕಂಡಿದೆ. ಅವರ ಸಂಶೋಧನೆಯ ಪ್ರಕಾರ ರೋಗವನ್ನು ಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲವಾದರೂ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ.

ಇದೆಲ್ಲದರ ನಡುವೆ ಮಳೆಗಾಲದಲ್ಲಿ ಮಳೆ ಹೆಚ್ಚಾಗಿ ಸುರಿದು ಇಡೀ ವಾತಾವರಣವೇ ತೇವಾಂಸದಿಂದ ಕೂಡಿರುವ ಕಾರಣ ಸೊರಗು ರೋಗ ಈ ಸಂದರ್ಭವೇ ಕರಿಮೆಣಸು ಬಳ್ಳಿಯನ್ನು ಕಾಡುತ್ತದೆ. ಹಾಗಾಗಿ ನಿಯಂತ್ರಣ ಮಾಡಲು ತೋಟದೊಳಗೆ ಬಸಿಲು ಕಾಲುವೆಯನ್ನು ತೋಡುವುದರ ಮೂಲಕ ಮಣ್ಣಿನ ತೇವಾಂಶ ಕಡಿಮೆಗೊಳಿಸಬೇಕು, ಭೂಮಿಯ ಮೇಲೆ ಕೊಳೆತ ಎಲೆ, ಹುಲ್ಲಿನ ಕಡ್ಡಿಯ ಪದರವಿರುವಂತೆ ಮಾಡಬೇಕು. ಬಳ್ಳಿಯ ಬುಡದಿಂದ ಚಿಗುರಿ ನೆಲದಲ್ಲಿ ಹರಡುವ ಮರಿ ಬಳ್ಳಿಗಳನ್ನು ಕತ್ತರಿಸಿ ಅಥವಾ ಮೇಲೆ ಹಬ್ಬುವಂತೆ ಮಾಡುವುದರಿಂದ ಬಳ್ಳಿಯಿಂದ ಬಳ್ಳಿಗೆ ಹರಡುವ ರೋಗವನ್ನು ತಡೆಯಲು ಸಹಕಾರಿಯಾಗಲಿದೆ.

ರೋಗ ರಹಿತ ಗಿಡಗಳನ್ನೇ ಬಳಸಬೇಕು

ತೋಟದಲ್ಲಿ ಬಿಸಿಲು ಹಾಯಲು ಸೂಕ್ತವಾಗುವಂತೆ ಮರದ ನೆರಳನ್ನು ತೆಗೆಯಬೇಕು. ರೋಗರಹಿತ ಪಾತಿಯಿಂದಲೇ ಆಯ್ದು ಆರೋಗ್ಯವಂತ ಬಳ್ಳಿಯ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು. ತೋಟದಲ್ಲಿ ರೋಗವಿದೆ ಎಂದಾದಲ್ಲಿ ನೆಡುವ ಜಾಗವನ್ನು 'ಮೆಟಲಕ್ಸಿಲ್' ಎಂಬ ಶಿಲೀಂದ್ರ ನಾಶಕದ ಶೇ. 0.3 ದ್ರಾವಣದಿಂದ ತೋಯಿಸಬೇಕು.

ಮಳೆಗಾಲವು ಪ್ರಾರಂಭವಾಗುವ ಮುನ್ನ ಮೇ, ಜೂನ್ ತಿಂಗಳಲ್ಲಿ ಶೇಕಡ ಒಂದರ ಬೋರ್ಡೋ ಮಿಶ್ರಣವನ್ನು ಬಳ್ಳಿಗೆ ಮೊದಲು ಸಿಂಪಡಿಸಬೇಕು. ಈ ರೀತಿಯ ಕೆಲವು ಕ್ರಮಗಳನ್ನು ಮಾಡುವುದರಿಂದ ರೋಗವನ್ನು ಸ್ವಲ್ಪ ಮಟ್ಟಿಗೆ ಹತೋಟಿಗೆ ತರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+