ಸೂರ್ಯಕಾಂತಿಗೆ ಬೆಂಬಲ ಬೆಲೆ: ಗುಂಡ್ಲೆಪೇಟೆಯಲ್ಲಿ ಮೊದಲ ದಿನವೇ ನೋಂದಣಿಗೆ ಮುಗಿಬಿದ್ದ ರೈತರು
ಚಾಮರಾಜನಗರ, ಸೆಪ್ಟೆಂಬರ್, 02: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಕಚೇರಿ ಹಾಗೂ ತೆರಕಣಾಂಬಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಗೆ ಹೆಸರು ನೋಂದಣಿ ಕಾರ್ಯ ಇಂದಿನಿಂದ (ಸೆಪ್ಟೆಂಬರ್ 2) ಆರಂಭ ಆಗಿದ್ದು, ರೈತರು ಮುಗಿಬಿದ್ದು ತಮ್ಮ ತಮ್ಮ ಹೆಸರುಗಳನ್ನು ನೋಂದಾಯಿಸಿದರು.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಈಗಾಗಲೇ ಸೂರ್ಯಕಾಂತಿ ಒಕ್ಕಣೆ ಮಾಡಿ ಶೇಖರಿಸಿಟ್ಟಿರುವ ಸೂರ್ಯಕಾಂತಿ ಬೆಳೆಗಾರರು ಕೃಷಿ ಮಾರಾಟ ಇಲಾಖೆ ಹಾಗೂ ಕೃಷಿ ಮಾರಾಟ ಮಂಡಳಿ ವತಿಯಿಂದ ಸೂರ್ಯಕಾಂತಿ ಖರೀದಿಗೆ ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಅರಿತು ಎಪಿಎಂಸಿ ಕಚೇರಿ ಹಾಗೂ ತೆರಕಣಾಂಬಿ ಮಾರುಕಟ್ಟೆ ಮುಂದೆ ಜಮಾಯಿಸಿದ್ದರು.

ನಂತರ ಸರತಿ ಸಾಲಿನಲ್ಲಿ ನಿಂತು ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಇತರೆ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಿಕೊಂಡರು. ಸೋಮವಾರ ನೋಂದಣಿಯ ಮೊದಲ ದಿನವಾದ ಹಿನ್ನೆಲೆ ರೈತರು ಮುಗಿಬಿದ್ದರು. ಮಹಿಳಾ ರೈತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ಪ್ರತಿಕ್ರಿಯೆ ನೀಡಿ, ಸೂರ್ಯಕಾಂತಿ ಮಾರುಕಟ್ಟೆ ಬೆಲೆ ಕುಸಿದಿರುವ ಹಿನ್ನೆಲೆ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಕ್ವಿಂಟಾಲ್ ಸೂರ್ಯಕಾಂತಿಯನ್ನು 7,280 ರೂಪಾಯಿ ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಪ್ರತಿ ಹೆಕ್ಟೇರ್‌ಗೆ 3 ಕ್ವಿಂಟಾಲ್ ಮತ್ತು ಗರಿಷ್ಟ 15 ಕ್ವಿಂಟಾಲ್‌ವರೆಗೆ ಖರೀದಿ ಮಾಡಲಾಗುತ್ತಿದೆ.
ಮೊದಲ ದಿನವಾದ ಸೋಮವಾರ ಸುಮಾರು 200ಕ್ಕೂ ಅಧಿಕ ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ರೈತರು ಕಚೇರಿಗೆ ಆಗಮಿಸಿ ನೋಂದಣಿಯಾಗುವ ಮೂಲಕ ಎಂಎಸ್‍ಪಿ ಅಡಿಯಲ್ಲಿ ಸೂರ್ಯಕಾಂತಿ ಮಾರಾಟ ಮಾಡಬೇಕೆಂದು ತಿಳಿಸಿದರು.
ಕಾಡಾನೆ ದಾಳಿಗೆ ಫಸಲು, ಕೃಷಿ ಉಪಕರಣ ಧ್ವಂಸ: ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಫಸಲು ಮತ್ತು ಕೃಷಿ ಉಪಕರಣಗಳನ್ನು ತುಳಿದು ನಾಶ ಪಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯ ವ್ಯಾಪ್ತಿಯ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.
ಕೋಟೆಕೆರೆ ಗ್ರಾಮದ ಮಹಾದೇವಸ್ವಾಮಿ ಎಂಬುವವರ 3 ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಜೋಳ, 5 ತೆಂಗಿನ ಸಸಿಗಳು ಮತ್ತು ಪೈಪ್ ಲೈನ್ ತುಳಿದು ಹಾಕಿವೆ. ವೆಂಕಟರಾಮಯ್ಯ ಎಂಬ ರೈತನ ಜಮೀನಿನಲ್ಲಿ ಟೊಮೆಟೊ ಹಾಗೂ ಚೆನ್ನನಾಯಕ ಎಂಬುವವರ ಜಮೀನಿನಲ್ಲಿದ್ದ ಬೋರ್ ವೆಲ್ ಮತ್ತು ಇತರೆ ಕೃಷಿ ಉಪಕರಣಗಳನ್ನು ತುಳಿದು ನಾಶಪಡಿಸಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಕೋಟೆಕೆರೆ ಗ್ರಾಮದ ಮೂವರು ರೈತರ ಜಮೀನುಗಳ ಮೇಲೆ ಕಾಡಾನೆಗಳು ಲಗ್ಗೆಯಿಟ್ಟು ಫಸಲು ಮತ್ತು ಕೃಷಿ ಉಪಕರಣಗಳನ್ನು ನಾಶ ಪಡಿಸಿರುವ ಹಿನ್ನೆಲೆ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಆದ್ದರಿಂದ ಸಂಬಂಧಪಟ್ಟ ಓಂಕಾರ್ ವಲಯದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರವಾಗಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕರು ಒತ್ತಾಯಿಸಿದ್ದಾರೆ.
ಆನೆಗಳ ಹಾವಳಿಗೆ ಕಡಿವಾಣ ಹಾಕಿ: ಓಂಕಾರ್ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆಳೆದ ಫಸಲುಗಳ ಮೇಲೆ ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ನಡೆಸಿ ತುಳಿದು ತಿಂದು ನಾಶ ಪಡಿಸುತ್ತಿದೆ. ಇದರ ಮಾಹಿತಿ ಇದ್ದರೂ ಕೂಡ ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಆದ್ದರಿಂದ ಕೂಡಲೇ ಎಚ್ಛೆತ್ತುಕೊಂಡು ಆನೆಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ, ಅರಣ್ಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications