ರೈತರು ಬರ ಪರಿಹಾರ ಪಡೆಯಲು ಎಫ್‍ಐಡಿ ಬೇಕು, ಏನಿದು ಐಡಿ?, ವಿವರ
ಬೆಂಗಳೂರು, ನವೆಂಬರ್ 12; ಕರ್ನಾಟಕದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಬರಪರಿಸ್ಥಿತಿ ಆವರಿಸಿದೆ. ಸರ್ಕಾರ ವಿವಿಧ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಬರದಿಂದಾಗಿ ಬೆಳೆನಷ್ಟವಾದ ರೈತರು ಪರಿಹಾರವನ್ನು ಪಡೆಯಲು ಎಫ್‌ಐಡಿ ಹೊಂದಿರುವುದು ಸೂಕ್ತ.
ಬರ ಘೋಷಣೆಗೊಂಡ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರ ಧನ ಪಡೆಯಲು ಭೂಮಿ ವಿವರ ಇರುವ ಎಫ್‌ಐಡಿ Fruits ID (FID) ಹೊಂದಿರುವುದು ಸೂಕ್ತ. ಆ ಎಫ್‍ಐಡಿ ಗುರುತಿನ ಸಂಖ್ಯೆಯೊಂದಿಗೆ ರೈತನು ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಧೀನ ಕಚೇರಿಗಳಲ್ಲಿ ರೈತರ ಫ್ರೂಟ್ಸ್ ಐಡಿ ಸೃಷ್ಟಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದೆ.
ಭೂಮಿಯ ವಿವರಗಳು ಇರಬೇಕು; ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಬರ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರದ ಧನ ಪಡೆಯಲು ಅನುಕೂಲವಾಗುವಂತೆ ಎಫ್‍ಐಡಿ ಗುರುತಿನ ಸಂಖ್ಯೆಗೆ ತಾವು ಹೊಂದಿರುವ ಎಲ್ಲ ಜಮೀನುಗಳ ವಿವರನ್ನು ಸೇರಿಸಬೇಕು.
ಎಫ್‍ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ್ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ (Fruits) ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಇರುವ ರೈತರ ಫ್ರೂಟ್ಸ್ ಐಡಿಯಲ್ಲಿ ರೈತರ ಜಮೀನು, ಆಧಾರ ನಂಬರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ವಿವರ ಇರುತ್ತದೆ. ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ ಡಿಬಿಟಿ (Direct Benefit Transfer) ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ರೈತರು ಎಫ್‍ಐಡಿ (FRUITS-Farmer Registration and Unified beneficiary Information System) ಮಾಡಿಸಿಕೊಳ್ಳಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಅಗತ್ಯವಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಬರ ಪರಿಹಾರದ ಹಣ ಮಾತ್ರವಲ್ಲದೇ, ಬೆಳೆವಿಮೆ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು ಮತ್ತು ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಹಾಗೂ ಬ್ಯಾಂಕ್ ಸಾಲ ಪಡೆಯಲು ಎಫ್‍ಐಡಿ ಅಗತ್ಯವಿದೆ. ರೈತರು ಅಗತ್ಯ ದಾಖಲಾತಿಗಳೊಂದಿಗೆ ಎಫ್‍ಐಡಿ ಮಾಡಿಸಿಕೊಳ್ಳಬೇಕು.
ಫ್ರೂಟ್ಸ್ ಐಡಿ ಮಾಡುವ ಕೇಂದ್ರಗಳು: ಜಮೀನು ಹೊಂದಿರುವ ರೈತರು ತಮ್ಮ ವಿವರಗಳೊಂದಿಗೆ ಫ್ರೂಟ್ಸ್ ಐಡಿ (ರೈತರ ಗುರುತಿನ ಸಂಖ್ಯೆ ಮತ್ತು ವಿವರ) ಯನ್ನು ತಮ್ಮ ಜಮೀನು ಹದ್ದೆಯ ಹತ್ತಿರದ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿಗಳಲ್ಲಿ ಮಾಡಿಸಬಹುದು ಮತ್ತು ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಆಯಾ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಸರ್ಕಾರದ ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಪ್ರತಿ ರೈತರಿಗೆ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರ ಹೊಂದಿರುವ ಫ್ರೂಟ್ಸ್ ಐಡಿ ಹೊಂದುವುದು ಅಗತ್ಯ. ಈಗಾಗಲೇ ಫ್ರೂಟ್ಸ್ ಐಡಿ ಹೊಂದಿರುವ ರೈತರು ತಮ್ಮ ಐಡಿಯೊಂದಿಗೆ ಎಲ್ಲ ವಿವರಗಳು ಸೇರಿರುವ ಬಗ್ಗೆ ಖಾತರಿ ಮಾಡಿಕೊಳ್ಳಲು ಸಹ ಕರೆ ನೀಡಲಾಗಿದೆ.












Click it and Unblock the Notifications