ಕಾಫಿ ಬೆಳೆಗಾರರ ಬೇಜವಾಬ್ದಾರಿಯಿಂದ ಕಲುಷಿತಗೊಳ್ಳುತ್ತಿರುವ ಹೇಮಾವತಿ ನದಿ ನೀರು
ಚಿಕ್ಕಮಗಳೂರು, ಜನವರಿ, 29: ಹೇಮಾವತಿ ಉಗಮ ಸ್ಥಾನದಲ್ಲೇ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು, ಇದರಿಂದ ಜನಸಾಮಾನ್ಯರು, ಜಲಚರಗಳು, ಬೆಳೆಗಳ ಮೇಲೂ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪವಿರುವ ಹೇಮಾವತಿ ನದಿ ನೀರು ಕಾಫಿ ಬೆಳೆಗಾರರಿಂದ ಕಲುಷಿತಗೊಳ್ಳುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಮೂಡಿಗೆರೆ-ಸಕಲೇಶಪುರ ಭಾಗದ ಕಾಫಿ ಬೆಳೆಗಾರರು ಕಾಫಿಯನ್ನು ಪಲ್ಪರಿಂಗ್ ಮಾಡುತ್ತಾರೆ, ನಂತರ ಪಲ್ಪರಿಂಗ್‌ನ ಕಲುಷಿತ ನೀರನ್ನು ಹೇಮಾವತಿ ನದಿಗೆ ಬಿಡುತ್ತಿದ್ದಾರೆ. ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹೋದರೆ, ಬೇಸಿಗೆಯಲ್ಲಿ ನೀರಿಗೆ ಬಣ್ಣವಿಲ್ಲದಿದ್ದರೂ ಶುಭ್ರವಾಗಿ ಹರಿಯುತ್ತಾಳೆ. ಆದರೆ, ಕಾಫಿತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನು ನೇರವಾಗಿ ಹೇಮಾವತಿ ನದಿಗೆ ಬಿಡುತ್ತಿದ್ದಾರೆ. ಇದರಿಂದ ಸ್ವಚ್ಛವಾಗಿ ಹರಿಯುವ ಹೇಮಾವತಿ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ನದಿ ನೀರು ಕೂಡ ದುರ್ವಾಸನೆ ಬರುತ್ತಿದೆ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನಹರಿಸಿ ಕಾಫಿ ಪಲ್ಪರ್ ಮಾಡಿದ ನೀರನ್ನು ಇಂಗು ಗುಂಡಿ ಮೂಲಕ ಇಂಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಲುಷಿತಗೊಳ್ಳುತ್ತಿರುವ ಹೇಮಾವತಿ ನದಿ ನೀರು
ಹೇಮಾವತಿ ನದಿ ಎಲ್ಲೋ ಹುಟ್ಟಿ, ಎಲ್ಲೋ ಹರಿದು ಮತ್ತೆಲ್ಲೋ ಹೋಗಿ ಸೇರಲ್ಲ. ಹರಿಯುವ ಮಾರ್ಗದುದ್ಧಕ್ಕೂ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿದೆ. ಈ ನದಿಯ ನೀರನ್ನು ನಂಬಿ ಲಕ್ಷಾಂತರ ಕುಟುಂಗಳು ಬದುಕು ಕಟ್ಟಿಕೊಂಡಿವೆ. ಈ ನದಿಯು ಮಲೆನಾಡಿನ ಬೆಟ್ಟದಲ್ಲಿ ಹುಟ್ಟುವ ಗೋರೂರು ಮೂಲಕ ಕೆ.ಆರ್.ಎಸ್. ಜಲಾಶಯ ಸೇರಿ ಮೈಸೂರು-ಮಂಡ್ಯ-ಬೆಂಗಳೂರು ದಾಟಿ ತಮಿಳುನಾಡಿಗೂ ಹರಿಯುತ್ತದೆ.

ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ
ಈ ನದಿ ನೀರು ಕಲುಷಿತಗೊಂಡರೇ ಅದನ್ನು ಬಳಸುವ ಜನಸಾಮಾನ್ಯರ ಕಥೆ ಏನೆಂಬ ಪ್ರಶ್ನೆ ಮೂಡಿದೆ. ಏಕೆಂದರೆ, ಇಡೀ ಹಾಸನ ಹೇಮಾವತಿ ನದಿ ನೀರಿನ ಮೇಲೆ ಅವಲಂಬಿತವಾಗಿದೆ. ಜನ-ಜಾನುವಾರುಗಳು, ಬೆಳೆಗಳಿಗೂ ಇದೇ ನೀರನ್ನು ಅವಲಂಬಿಸಿದ್ದಾರೆ. ಹೀಗೆ ಕೆಮಿಕಲ್ಸ್ ಮಿಶ್ರಿತ ನೀರು ಇಂತಹ ದೊಡ್ಡ ನದಿಯಲ್ಲಿ ಸೇರಿದರೆ ಅದನ್ನು ಬಳಸುವ ಜನ-ಜಾನುವಾರಗಳ ಆರೋಗ್ಯ ಏನಾಗಬೇಡ. ಹಾಗಾಗಿ, ಸ್ಥಳೀಯರು ಕೂಡ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ನದಿಯೇ ಸಂಪೂರ್ಣ ಕಲುಷಿತಗೊಂಡರೂ ಆಶ್ಚರ್ಯವಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೇಮಾವತಿ ನದಿ ನೀರನ್ನೇ ಅವಲಂಬಿಸಿದ ಜನ
ಒಟ್ಟಾರೆ, ಮಲೆನಾಡಿನ ಬಹುತೇಕ ಕಾಫಿ ಬೆಳೆಗಾರರು ಕೂಡ ಹೇಮಾವತಿ ನದಿ ನೀರನ್ನೇ ಅವಲಂಬಿಸಿದ್ದಾರೆ. ಬೆಳೆಗಾರರು ಕಾಫಿಯ ಪಲ್ಪರಿಂಗ್‌ಗೆ ಬಳಸುವ ನೀರು ಕೂಡ ಇದೇ ಹೇಮಾವತಿ ನದಿಯದ್ದಾಗಿದೆ. ಆದರೆ, ಪಲ್ಪರಿಂಗ್ ಬಳಿಕ ಆ ನೀರನ್ನು ಮತ್ತದೇ ಹೇಮಾವತಿ ನದಿಗೆ ಬಿರುವುದಕ್ಕೆ ಮನಸ್ಸು ಬರುತ್ತದೆಯೋ ಗೊತ್ತಿಲ್ಲ. ಆದರೆ ಅದರಿಂದ ಹೇಮಾವತಿ ನದಿಯಂತೂ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಲೇ ಇದೆ. ಆದ್ದರಿಂದ ಬೆಳೆಗಾರರ ಈ ಬೇಜವಾಬ್ದಾರಿ ವರ್ತನೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಿದೆ. ಇಲ್ಲವಾದರೆ, ನಾಡಿನ ಜೀವಜಲ ಜನ-ಜಾನುವಾರುಗಳ ಪಾಲಿಗೆ ವಿಷಜಲವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.











Click it and Unblock the Notifications