ಮಹದಾಯಿ ತೀರ್ಪಿಗೆ ಮೇಲ್ಮನವಿ, ತಜ್ಞರ ಜತೆ ಸಿಎಂ ಸಮಾಲೋಚನೆ
ಬೆಂಗಳೂರು, ಆಗಸ್ಟ್ 16: ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಪರಾಮರ್ಶೆ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ತಜ್ಞರು ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.
ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ 13.42 ಟಿಎಂಸಿ ಅಡಿ , ಗೋವಾಕ್ಕೆ 24 ಟಿಎಂಸಿ ಮತ್ತು ಮಹರಾಷ್ಟ್ರಕ್ಕೆ 1.30 ಟಿಎಂಸಿ ನೀರು ದೊರೆಯಲಿದೆ. ಈ ಕುರಿತು ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ದು ಈ ಕುರಿತು ಚರ್ಚೆ ನಡೆಸಲು ಗುರುವಾರ ಕುಮಾರಸ್ವಾಮಿ ಸಭೆ ಕರೆದಿದ್ದಾರೆ.
ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ರಾಜ್ಯ ಸರ್ಕಾರ ಸಭೆಯಲ್ಲಿ ತಜ್ಞರ ಜತೆ ಚರ್ಚಿಸಲಿದ್ದಾರೆ.ರಾಜ್ಯ ಸರ್ಕಾರವು ಮಹದಾಯಿ ಜಲಾನಯನ ಪ್ರದೇಶದಿಂದ ತಮಗೆ 36.558 ಟಿಎಂಸಿ ಅಡಿ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ ಸಿಕ್ಕಿರುವುದು 13.42 ಟಿಎಂಸಿ ಅಡಿ ಮಾತ್ರ. ಈ ನೀರನ್ನು ಯಾವುದಕ್ಕೆ ಬಳಸಿಕೊಳ್ಳಬೇಕು ಎಂದು ನ್ಯಾಯಾಧಿಕರಣ ಹೇಳಿದೆ.

ಮಹದಾಯಿ ಜಲಾನಯನ ಪ್ರದೇಶದಿಂದ ನೀರನ್ನು ಹರಿಸಿಕೊಂಡು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ 13.08 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿತ್ತು.
ಕಳಸಾ ನಾಲೆಗೆ 3.56 ಟಿಎಂಸಿ ಅಡಿ, ಬಂಡೂರಾ ನಾಲೆಗೆ 4 ಟಿಎಂಸಿ ಮತ್ತು ಕಾಳಿ ನದಿಗೆ ಹರಿಸಿ ಕೆಎಚ್‌ಪಿಇ ಯೋಜನೆ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು 5.52 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿತ್ತು. ನ್ಯಾಯಾಧಿಕರಣವು 3.90 ಟಿಎಂಸಿ ಅಡಿ ನೀರು ಮಾತ್ರ ನೀಡಿದ್ದು, ಕಾಳಿ ನದಿಗೆ ಹರಿಸುವ ನೀರಿನ ಬೇಡಿಕೆಯನ್ನು ತಳ್ಳಿ ಹಾಕಿದೆ. ಹೀಗಾಗಿ ಈ ಕುರಿತು ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.












Click it and Unblock the Notifications