ಮಿಡತೆಗಳ ನಿಯಂತ್ರಣಕ್ಕೆ ಸರ್ಕಸ್ ಪಿಸ್ತೂಲ್...!
ಸಿನೆಮಾವೊಂದರಲ್ಲಿ ಬರುವ ಪ್ರಸಂಗವಿದು."ಒಬ್ಬ ಪಿಸ್ತೂಲಿನಿಂದ ಎದುರಾಳಿಯತ್ತ ಗುಂಡು ಹಾರಿಸುತ್ತಾನೆ. ಗುಂಡು ಹಿಂದಕ್ಕೆ ಸಿಡಿದು ಶೂಟ್ ಮಾಡಿದವನಿಗೇ ತಾಗುತ್ತದೆ. ಮರುಕ್ಷಣ ಪಿಸ್ತೂಲ್ ನ ನಳಿಕೆ ತನ್ನತ್ತ ತಿರುಗಿಸಿಕೊಂಡು ಶೂಟ್ ಮಾಡುತ್ತಾನೆ ಎರಡನೆಯ ಬುಲೆಟ್ ಅವನಿಗೇ ತಾಕುತ್ತದೆ". ಅವ ಬಳಸಿದ್ದು ಸರ್ಕಸ್ ಪಿಸ್ತೂಲ್ ಎಂಬುದು ಆ ದೃಶ್ಯ ಹೆಣೆದವರು ಸೃಷ್ಟಿಸಿದ ಪ್ರಸಂಗ.
ಇದೀಗ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆಂದು ಸರ್ಕಾರ ಶಿಫಾರಸ್ಸು ಮಾಡಿರುವ ರಾಸಾಯನಿಕಗಳು ಸರ್ಕಸ್ ಪಿಸ್ತೂಲಿನಂತಾಗಬಹುದಾ ಎಂಬ ಗುಮಾನಿ ದಟ್ಟವಾಗಿದೆ.
ಸರ್ಕಾರ ಶಿಫಾರಸ್ಸು ಮಾಡಿರುವ ರಾಸಾಯನಿಕಗಳಲ್ಲಿ ''ಕ್ಲೋರೋಫೈರಿಫಾಸ್ ಹಾಗೂ ಡೆಲ್ಟಾಮೆಥ್ರಿನ್'' ಒಳಗೊಂಡಿವೆ. ಇವೆರಡೂ ಕೀಟನಾಶಕಗಳು ಪರಿಸರಕ್ಕೆ ಹಾನಿಕಾರವೆಂದು ಇವುಗಳನ್ನು ಕೃಷಿ ಕ್ಷೇತ್ರದಲ್ಲಿ ಬಳಸಲು ಆಮದು ಮಾಡಿಕೊಳ್ಳುವುದು, ಉತ್ಪಾದನೆ ಮಾಡುವುದು, ಮಾರಾಟ ಮಾಡುವುದು, ಸಾಗಣೆ ಮಾಡುವುದು, ವಿತರಿಸುವುದು ನಿರ್ಭಂದಿಸಿ ಮೇ 18, 2020 ರಂದು ಭಾರತ ಸರ್ಕಾರದ ಕೃಷಿ ಇಲಾಖೆ ಆದೇಶ ಹೊರಡಿಸಿದೆ. (ಅಉ-ಆಐ-ಇ-18052020-219423)

31 ದೇಶಗಳಲ್ಲಿ ನಿಷೇಧಿತ ರಾಸಾಯನಿಕ ಬಳಕೆ
ಕೃಷಿ ಕ್ಷೇತ್ರದಲ್ಲಿ ಈ ರಾಸಾಯನಿಕಗಳನ್ನು ಬಳಸಬಾರದೆಂಬ ಆದೇಶದಲ್ಲಿಯೇ "ಮರುಭೂಮಿ ಮಿಡತೆ"ಗಳ ನಿಯಂತ್ರಕ್ಕೆ ಬಳಸಬಹುದೆಂದೂ ಸಹ ಹೇಳಲಾಗಿದೆ. ಕ್ಲೋರೋಫೈರಿಫಾಸ್ ರಸಾಯನಿಕವನ್ನು 31 ದೇಶಗಳಲ್ಲಿ ಈಗಾಗಲೇ ನಿಷೇಧಿಸಿರುವುದಾಗಿಯೂ ಇದೇ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಡೆಲ್ಟಾಮೆಥ್ರಿನ್ ಕೂಡಾ ಪರಿಸರಕ್ಕೆ ಹಾನಿಕಾರಕವೆಂದೂ, ವಿಶೇಷವಾಗಿ ಜೇನು ಹುಳುಗಳಿಗೆ ಮಾರಣಾಂತಿಕವೆಂದು ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಪರಂತು ಮರುಭೂಮಿ ಮಿಡತೆಗಳ ನಿಯಂತ್ರಣಕ್ಕಾಗಿ ಈ ರಾಸಾಯನಿಕವನ್ನು ಕೂಡಾ ಬಳಸಬಹುದೆಂದು ಅದೇ ಆದೇಶದಲ್ಲಿ ದಾರಿಮಾಡಿಕೊಡಲಾಗಿದೆ.

ಯಾವ ರಾಸಾಯನಿಕಗಳು ಜನ-ಜಾನುವಾರುಗಳು, ಪರಿಸರಕ್ಕೆ ಮಾರಕವೆಂದು ಸರ್ಕಾರವೇ ನಿಷೇಧ ಹೇರಿದೆಯೋ ಅದೇ ಕೀಟನಾಶಕಗಳನ್ನು ಮರುಭೂಮಿ ಮಿಡತೆಗಳ ಸಿಂಪರಣೆಗೆ ಬಳಸಬಹುದೆಂದೂ ತಿಳಿಸುತ್ತಾ, ಇದೀಗ ಶಿಫಾರಸ್ಸು ಮಾಡಿದೆ.
ಇಂಥಃ ಇಕ್ಕಟ್ಟಿನ ಸಂದರ್ಭದಲ್ಲಿ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಜೈವಿಕ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಸರ್ಕಾರ ಗಮನಹರಿಸುವುದು ವಿವೇಕದ ನಡೆ ಆಗಬಹುದು. "ನಮಾಜ್ ಮಾಡೋಕೋಗಿ ಮಸೀದಿ ಮೈಮೇಲೆ ಕೆಡವಿಕೊಂಡಂತಾಗಬಾರದು".












Click it and Unblock the Notifications