ನವದೆಹಲಿ ರಸ್ತೆಯಲ್ಲಿ ರೈತರ ಚಳಿಗಾಲದ ಅಧಿವೇಶನ!
ನವದೆಹಲಿ, ನವೆಂಬರ್ 20 : ಸಂಸತ್ತಿನ ಬದಲು ದೆಹಲಿ ರಸ್ತೆಗಳಲ್ಲಿ ಸೋಮವಾರ (ನ.20)ರಂದು ರೈತರ ಚಳಿಗಾಲದ ಅಧಿವೇಶನ ನಡೆಯಲಿದೆ.
ದೇಶದಾದ್ಯಂತ ಇರುವ ಸಾವಿರಾರು ರೈತರು ಒಂದೆಡೆ ಸೇರಿದ್ದು ದೆಹಲಿಯ ಸಂಸ್ ಮಾರ್ಗದಲ್ಲಿ "ಕಿಸಾನ್ ಮುಕ್ತಿ ಸಂಸತ್' ನಡೆಸುತ್ತಿದ್ದಾರೆ. ಬೆಳೆಗಳಿಗೆ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿದಂತೆ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಅಂಗೀಕರಿಸಲಿದ್ದಾರೆ.

ಬಳಿಕ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಅವುಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದ್ದಾರೆ. ಇದಕ್ಕಾಗಿ170ಕ್ಕೂ ಹೆಚ್ಚು ರೈತ ಪರ ಸಂಘಟನೆಗಳು ಸೇರಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ರಚಿಸಿಕೊಂಡಿದ್ದು ಕಳೆದ ಒಂದು ತಿಂಗಳಿನಿಂದ ದೇಶದೆಲ್ಲೆಡೆ ಕಿಸಾನ್ ಮುಕ್ತಿ ಯಾತ್ರೆ ನಡೆಸಿದ್ದರು. ಇವರ ಈ ಯಾತ್ರೆ ಈಗ ದೆಹಲಿ ತಲುಪಿದ್ದು, ಇಂದು ಬೃಹತ್ ಸಮಾವೇಶ ನಡೆಸಲಿದ್ದಾರೆ,
ಸರ್ಕಾರಿ ನೌಕರರಿಗೆ ಪಿಂಚಣಿ ನೀಡುವಂತೆ ರೈತರಿಗೂ ಮಾಸಿಕ 5ಸಾವಿರ ರೂ. ಪಿಂಚಣ ನೀಡಬೇಕು, ಬೇಸಾಯದ ಬೆಂಬಲ ಬೆಲೆ ನಿಗದಿಗಾಗಿ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಮಾಡಬೇಕು, ಕೃಷಿಕರ ಎಲ್ಲಾ ರೀತಿ ಸಾಲವನ್ನೂ ಬಡ್ಡಿ ಸಮೇತ ಮನ್ನಾ ಮಾಡಬೇಕು. ಬೇಸಾಯದ ವೆಚ್ಚದ ಒಂದೂವರೆ ಪಟ್ಟು ದರವನ್ನು ಬೆಂಬಲ ಬೆಲೆಯಾಗಿ ನಿಗದಿ ಮಾಡಬೇಕು ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಕಿಸಾನ್ ಮುಕ್ತಿ ಸಂಸತ್ ಆಯೋಜಿಸಿದ್ದಾರೆ.












Click it and Unblock the Notifications