ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ಸಂಘದ ಡಾ. ವೆಂಕಟರೆಡ್ಡಿ ನೆನಪಿನಲ್ಲಿ..

By ಕೆ.ಎನ್‌ ನಾಗೇಶ್‌
|
Google Oneindia Kannada News

23 ಅಕ್ಟೋಬರ್ 2022 ಭಾನುವಾರ ದೊಡ್ಡಬಳ್ಳಾಪುರದಲ್ಲಿ ರೈತ ಸಂಘದ ಹಿರಿಯ ಮುಖಂಡರಾದ ಡಾ.ವೆಂಕಟರೆಡ್ಡಿ ಅವರ ಹತ್ತು ವರ್ಷಗಳ ನೆನಪಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ನೆನಪಿನಲ್ಲಿ ಒಂದೆರಡು ವಿಷಯಗಳು ರೈತ ಸಂಘದ ನಿಜ ಸತ್ಯಾಗ್ರಹಿಗಳಿಗೆ ಮತ್ತು ರೈತಪರ ಕಾಳಜಿಯ ಎಲ್ಲ ಮಹನೀಯರು ಮಹಿಳೆಯರಿಗೆ..

ಫೋನ್ ರಿಂಗ್ ಆಯ್ತು...

ಮೊನ್ನೆ ದಿನ ಗೆಳೆಯ ಮಂಜುನಾಥ್ ಅದ್ದೆ (ಮಂಜಣ್ಣ) ಕರೆ ಮಾಡಿ ಡಾ.ವೆಂಕಟರೆಡ್ಡಿ ಅವರ ನೆನಪಿನ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರಕ್ಕೆ ಬಾ ಎಂದರು. ವೆಂಕಟರೆಡ್ಡಿ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾಗಿ ಹತ್ತು ವರ್ಷಗಳಾಯಿತು. ಮಂಜಣ್ಣ ವೆಂಕಟರೆಡ್ಡಿ ಅವರ ನೆನಪು ಮಾಡಿಕೊಟ್ಟ ತಕ್ಷಣ ನನಗೆ ಎರಡು ಮೂರು ವಿಚಾರಗಳು ತಲೆಯಲ್ಲಿ ಸುಳಿದವು. ಡಾ.ವೆಂಕಟರೆಡ್ಡಿ ಈಗ ಹತ್ತು ವರ್ಷಗಳ ಹಿಂದೆ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ಬೆಳೆಯಲಾಗಿದ್ದ ಬಿಟಿ ಭತ್ತದ ತಾಕಿನ ಮೇಲೆ ತಮ್ಮ ಸಹ ರೈತ ಸತ್ಯಾಗ್ರಹಿಗಳೊಂದಿಗೆ ನುಗ್ಗಿ ಭತ್ತದ ಪೈರು ಕತ್ತರಿಸಿ ಪ್ರತೀರೋಧ ಒಡ್ಡಿದ್ದರು.

ಈ ಘಟನೆಯ ಬಗ್ಗೆ ಕೊಂಚ ವಿವರ (ಬಹಳಷ್ಟು ಮಂದಿಗೆ ಗೊತ್ತಿಲ್ಲದ) ಈಗ ಕೊಡಬಹುದು. ಆಗ ನಾನು ಸಮಯ ಟಿವಿಯ "ಕೃಷಿ ಸಮಯ" ಕಾರ್ಯಕ್ರಮದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದೆ. ಅದೊಂದು ದಿನ ಸಂಜೆ ನನಗೆ ರೈತ ಹೋರಾಟದ ಸತ್ಯಾಗ್ರಹಿ ಒಬ್ಬರು ಫೋನ್ ಮಾಡಿ "ನಾಳೆ ಹೀಗೊಂದು ಡೈರೆಕ್ಟ್ ಆಕ್ಷನ್" ಇದೆ ಎಂದು ಸುದ್ದಿ ಮುಟ್ಟಿಸಿ ವಿಷಯವನ್ನು ಗೌಪ್ಯವಾಗಿಟ್ಟು ಲೈವ್ ಪ್ರಚಾರ ಮಾಡಲು ಕೋರಿದ್ದರು. ನಾನು ಕಚೇರಿಯಲ್ಲಿ ಯಾರಿಗೂ ಪೂರ್ತಿ ಸುದ್ದಿ ಮುಟ್ಟಿಸಿದೆ ಎಕ್ಸ್‌ಕ್ಲ್ಯೂಸಿವ್‌ ಸುದ್ದಿ ಸಾರ್ ನನಗೆ ಒಬಿ ಮತ್ತು ಸೀನಿಯರ್ ರಿಪೋರ್ಟರ್ ಒಬ್ಬರು ಬೇಕು ಎಂದೆ. ಆಗ ಎಡಿಟರ್ ಶಶಿಧರ್ ಭಟ್, ಅವರು ಮರು ಮಾತನಾಡದೆ, ಸುದ್ದಿ ಏನೆಂದೂ ಕೇಳದೆ ಗೋ ಅಹೆಡ್ ಅಂದರು.

Doddaballapura Raitha Sangha Dr.Venkata Reddy Memorial Function

ಹಿರಿಯ ವರದಿಗಾರರಾದ ಉಷಾ ಅವರಿಗೆ ಅಸೈನ್ಮೆಂಟ್ ಫಿಕ್ಸ್ ಆಯ್ತು. ಅವರು ಡೀಟೇಲ್ಸ್ ಕೇಳುವುದು ನಾನು ನಾಳೆ ನಾನು ಹೇಳುವ ದಿಕ್ಕಿಗೆ ಹೊರಡಿ ದಾರಿ ಮಧ್ಯೆ ನಿಮಗೆ ಸುದ್ಧಿ ಮುಟ್ಟಿಸುತ್ತೇನೆ. ಬೇರೆ ಯಾರಿಗೂ ನೀವೆಲ್ಲಿಗೆ ಹೋಗುತ್ತಿದ್ದೀರಿ ಎಂದು ಹೇಳುವುದು ಬೇಡವೆಂದು ಕಳುಹಿಸಿದೆ.

ದೊಡ್ಡಬಳ್ಳಾಪುರ ಎಂದಾಕ್ಷಣ ನನಗೆ ವೆಂಕಟರೆಡ್ಡಿ ಅವರ ನೆನಪಾಯಿತಾದರೂ ಅವರಿಗೆ ಫೋನ್ ಮಾಡಲಿಲ್ಲ. ಟಿವಿ ಮಾಧ್ಯಮಕ್ಕೆ ಸುದ್ದಿ ಮುಟ್ಟಿದೆ ಎಂದು ಅವರೂ ಆತಂಕಪಡುವುದು ಬೇಡವೆಂದು ಸುಮ್ಮನಾದೆ. ಡೈರೆಕ್ಟ್ ಆಕ್ಷನ್ ಮಾಡುವಾಗ ಗೌಪ್ಯತೆ ಬಹಳ ಮುಖ್ಯ. ರೈತ ಸಂಘದ ಡೈರೆಕ್ಟ್ ಆಕ್ಷನ್ ಬಗ್ಗೆ ವಿವಿ ಅಧಿಕಾರಿಗಳಿಗೆ ಮೊದಲೇ ಸುದ್ದಿ ತಿಳಿದರೆ ಅಹೋರಾತ್ರಿ ಭತ್ತದ ತಾಕು ಇಲ್ಲವಾಗಿಸಿಬಿಡಬಹುದಲ್ಲಾ. ಆಗ ಅವರ ಬಣ್ಣ ಬಯಲು ಮಾಡೋದೇಗೆ..?

ಮಾರನೆಯ ದಿನ ನಮ್ಮ ಒಬಿ ಹಾಡೋನಳ್ಳಿಗೆ ತಲುಪಿದ್ದೇ ತಡ ಅಲ್ಲೇ ಅಡ್ಡಾಡುತ್ತಿದ್ದ ರೈತ ಸತ್ಯಾಗ್ರಹಿಗಳು ವೆಂಕಟರೆಡ್ಡಿ ಅವರ ನೇತೃತ್ವದಲ್ಲಿ ಭತ್ತದ ತಾಕಿನ ಮೇಲೆ ದಾಳಿಯಿಟ್ಟರು. ಅಷ್ಟರಲ್ಲಿ ಇಡೀ ವಿಷಯ ನಮ್ಮ ರಿಪೋರ್ಟರ್‌ಗೆ ಅರ್ಥಮಾಡಿಸಿದ್ದೆ. ಅವರು ಸಮರ್ಥವಾಗಿ ಲೈವ್ ಕಾರ್ಯಕ್ರಮದಲ್ಲಿ ವಿವರಣೆ ಕೊಟ್ಟರು.

ಅದಾದ ಮೇಲೆ ಎಲ್ಲಾ ಚಾನಲ್‌ಗಳೂ ಎಚ್ಚೆತ್ತುಕೊಂಡು ಸುದ್ದಿ ಪ್ರಸಾರ ಶುರುಮಾಡಿಬಿಟ್ಟವು. ಅಂದೇ ಸಂಜೆ ಡಾ. ವೆಂಕಟರೆಡ್ಡಿ ಅವರನ್ನು ಸ್ಟುಡಿಯೋಗೆ ಚರ್ಚೆಗೆ ಆಹ್ವಾನಿಸಿದೆ. ಅವರು ಸಮಯಕ್ಕೆ ಬಂದರು. ಆಗಿನ ಜಿ.ಕೆ.ವಿ.ಕೆ ಕುಲಪತಿ ನಾರಾಯಣ ಗೌಡರನ್ನೂ ಆಹ್ವಾನಿಸಿದ್ದೆ. ಅವರು ಬರುವುದಾಗಿ ಒಪ್ಪಿದ್ದರು. ಕಡೆಗೆ ಬರಲಿಲ್ಲ. ಇನ್ನೇನು ಲೈವ್ ಡಿಸ್ಕಷನ್‌ಗೆ ಅರ್ಧ ಗಂಟೆ ಇರಬೇಕಾದರೆ ಫೋನ್ ಮಾಡಿದೆ. ಇನ್ನೂ ವಿವಿಯಲ್ಲಿ ಸಭೆಯಲ್ಲಿರುವುದಾಗಿ ತಿಳಿಸಿದರು. ಕಡೆಗೆ ಅವರಿಂದ ಸ್ಪಷ್ಟೀಕರಣ ಪತ್ರ ಫ್ಯಾಕ್ಸ್‌ನಲ್ಲಿ ತರಿಸಿಕೊಂಡೆ. ಮಾರನೆಯ ದಿನ ಪ್ರೆಸ್ ಕಾನ್ಫರೆನ್ಸ್ ಮಾಡಿ ಬಿಟಿ ಆಹಾರ ಬೆಳೆಗಳನ್ನು ಕಾನೂನುಬಾಹಿರವಾಗಿ ಎಲ್ಲೂ ಬೆಳೆಯಲು ವಿಶೇಷವಾಗಿ ಓಪನ್ ಫೀಲ್ಡ್ ನಲ್ಲಿ ಬೆಳೆಯಲು ಅವಕಾಶ ನೀಡುವುದಿಲ್ಲವೆಂದು ಪ್ರಕಟಿಸಿದರು.

ಈಗಲೂ ಕರ್ನಾಟಕದ ಮಟ್ಟಿಗೆ ಕುಲಾಂತರಿ ಆಹಾರ ಬೆಳೆಗಳನ್ನು ಅಧಿಕೃತವಾಗಿ ಬೆಳೆಯಲು ಅವಕಾಶ ನೀಡಿಲ್ಲ. ಇದು ರೈತ ಸಂಘದ ಸಾಧನೆ. ವೆಂಕಟರೆಡ್ಡಿ ಅವರು ಅದರಲ್ಲಿ ಮುಖ್ಯ ಪಾತ್ರವಹಿಸಿದ್ದರು. ಕರ್ನಾಟಕದಲ್ಲಿ ಬಿಟಿ ಬಗ್ಗೆ ಒಂದೆರಡು ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಬೇಕು, ಬಿಟಿ ಹತ್ತಿ ಕರ್ನಾಟಕಕ್ಕೆ ಅದೇ ತಾನೇ ಕಾಲಿಟ್ಟದ್ದು. ಕೊಪ್ಪಳದಲ್ಲಿರಬೇಕು, ಪ್ರೊ ಎಂಡಿ ಎನ್ ಮತ್ತು ಮಹೇಂದ್ರ ಸಿಂಗ್ ಟಿಕಾಯತ್ ಹಾಗೂ ರೈತ ಸಂಘದ ಕಾರ್ಯಕರ್ತರನೇಕರು ಬಿಟಿ ಹತ್ತಿ ಸುಟ್ಟು ಪ್ರತಿರೋಧ ಒಡ್ಡಿದ್ದರು. ಅಂದು ಪ್ರೊ ಹೇಳಿದ್ದ ಮಾತು ಹೀಗಿದೆ " ನಾವು ಈಗಲೇ ಬಿಟಿ ಹತ್ತಿಯನ್ನು ತಿರಸ್ಕರಿಸದಿದ್ದರೆ ಇನ್ನತ್ತು ವರ್ಷಗಳಲ್ಲಿ ಇಡೀ ದೇಶದಲ್ಲಿ ಬಿಟಿ ಹತ್ತಿ ವ್ಯಾಪಿಸಿಕೊಳ್ತದೆ, ಸ್ಥಳೀಯ ತಳಿಗಳನ್ನು ಇಲ್ದೆ ಇರೋ ಹಾಗೇ ನೋಡ್ಕೋತಾರೆ ಅವ್ರು" ಎಚ್ಚರ ಇರಲಿ ಎಂದಿದ್ದರು.

ಹತ್ತು ವರ್ಷಗಳ ನಂತರ ಕುತೂಹಲಕ್ಕೆಂದು ದೇಶದ ಹತ್ತಿಯ ಬಗ್ಗೆ ಅಂಕಿ ಅಂಶಗಳನ್ನು ತಡಕಾಡಿದೆ. ಶೇಕಡಾ 98ರಷ್ಟು ಬಿಟಿ ಹತ್ತಿ ದೇಶದ ಹತ್ತಿ ಬೆಳೆಯ ಭೂಮಿಯನ್ನು ಆಕ್ರಮಿಸಿತ್ತು. ಇದು ಪ್ರೊ ಅವರ ದೂರದೃಷ್ಟಿಗೆ ಒಂದು ಉದಾಹರಣೆ. ಅಂಥ ಎಲ್ಲ ಗುಣಗಳೂ ವೆಂಕಟರೆಡ್ಡಿ ಅವರಲ್ಲೂ ಇತ್ತು.

ಡೈರೆಕ್ಟ್ ಆಕ್ಷನ್ ಎಂದರೆ ಏನು?

ಒಮ್ಮೆ ಪ್ರೊ ಎಂಡಿಎನ್ ಪ್ರೆಸ್ ಕಾನ್ಫರೆನ್ಸ್ ಅಡ್ರೆಸ್ ಮಾಡುವಾಗ ಪತ್ರಕರ್ತೆಯೊಬ್ಬರು " Mr Prof.. You have broken Monsanto, you have broken KFC, you have broken Kargil" and you talk about non violence. You say Farmers movement believes in non violence.. What right you have to speak about non violence.

ಅದಕ್ಕೆ ಪ್ರೊ ಉತ್ತರವೂ Spontaneous ಆಗೇ ಇತ್ತು.

See... you should know the difference between violence, nonviolence and nonviolent direct action ಎಂದವರು.

If I grab your pen you cannot write, if I break your glasses you cannot see properly, making you not to write and not to see properly is nonviolent direct action against you. If I slap you that's a violence. ಅಲ್ಲಿಗೆ ಸಭೆ ಸ್ತಬ್ಧ.

ಅಂಥದೊಂದು ಐತಿಹಾಸಿಕ ಡೈರೆಕ್ಟ್ ಆಕ್ಷನ್.. ಹಾಡೋನಹಳ್ಳಿಯಲ್ಲಿ ನಡೆದ ಡೈರೆಕ್ಟ್ ಆಕ್ಷನ್ ನಲ್ಲಿ ವೆಂಕಟರೆಡ್ಡಿ ಮುಂದಾಳತ್ವವಹಿಸಿದ್ದರು. ಅವರನ್ನು ನೆನಪು ಮಾಡಿಕೊಳ್ಳೋದಷ್ಟೇ ಈ ಹೊತ್ತಿಗೆ ಸಾಕಾಗುವುದಿಲ್ಲ. ಅವರ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನೂ ನಾವೆಲ್ಲರೂ ಮಾಡೋಣ ಎಂದು ಹೇಳುತ್ತಾ ನೆನಪಿನ ಮಾತುಗಳನ್ನು ಮುಗಿಸುತ್ತೇನೆ.

English summary
Doddaballapura Raitha sangha Dr.Venkata reddy memorial function,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X