ಗುಂಡ್ಲುಪೇಟೆ: ಕೊಳ್ಳುವವರಿಲ್ಲದೆ ಟೊಮೆಟೊವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸುರಿಯುತ್ತಿರುವ ಬೆಳೆಗಾರರು
ಚಾಮರಾಜನಗರ, ಆಗಸ್ಟ್, 22: ಭಾರೀ ಮಳೆ ಹಿನ್ನೆಲೆ ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಅತೀವೃಷ್ಟಿಯಾಗಿ ರೈತರು ಬೆಳೆದ ಬೆಳೆಗಳಿಗೆ ರೋಗ ತಗುಲಿ ಸರ್ವನಾಶವಾದ ಘಟನೆಗಳು ನಡೆದಿವೆ. ಹಾಗೆಯೇ ಅಡಿಗೆ ಮನೆಯ ಕೆಂಪು ರಾಣಿ ಅಂತೆ ಪ್ರಖ್ಯಾತಿ ಪಡೆದಿರುವ ಟೊಮೆಟೋಗೆ ಹೂಜಿ ರೋಗ ತಗುಲಿದ್ದು, ಗುಣಮಟ್ಟ ಕುಸಿತಗೊಂಡು ರೈತರು ಕಂಗಲಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಅತೀವೃಷ್ಟಿಯಿಂದಾಗಿ ಟೊಮೆಟೊ ಫಸಲಿಗೆ ಹೂಜಿ ರೋಗ ಬರುತ್ತಿದ್ದು, ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಉತ್ತಮ ದರ ಇದ್ದರೂ ಎರಡನೇ ದರ್ಜೆ ಟೊಮೆಟೊ ಕೊಳ್ಳಲು ಯಾರೂ ಬಾರದ ಹಿನ್ನೆಲೆ ರೈತರು ಟೊಮೆಟೊವನ್ನು ಬಿಸಾಡಿ ಹೋಗುತ್ತಿದ್ದಾರೆ.

ಕೆಜಿಗೆ 10 ರೂಪಾಯಿ ಕುಸಿದ ಟೊಮೆಟೊ ಬೆಲೆ: ಗುಂಡ್ಲುಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಕೆ.ಜಿ.ಟೊಮೆಟೊಗೆ 10 ರೂಪಾಯಿ ಇದ್ದು, ಇದು ಕೂಡ ಉತ್ತಮ ಬೆಲೆಯಾಗಿದೆ. ಆದರೆ, ಗುಣಮಟ್ಟದ ಟೊಮೆಟೊವನ್ನು ಮಾತ್ರ ತೆಗೆದುಕೊಳ್ಳುವುದರಿಂದ ಎರಡನೇ ದರ್ಜೆ ಟೊಮೆಟೊವನ್ನು ಬಿಸಾಡಿ ಹೋಗುತ್ತಿದ್ದಾರೆ.
ವಹಿವಾಟು ಕೂಡ ಕಡಿಮೆ: ವಯನಾಡು ದುರಂತದ ಬಳಿಕ ಕೇರಳದಿಂದ ಬರುವ ಖರೀದಿದಾರರ ಸಂಖ್ಯೆಯೂ ಕಡಿಮೆಯಾಗಿದ್ದು, ಟೊಮೆಟೊಗೆ ಬರ ಸಿಡಿಲು ಬಂದಂತಾಗಿದೆ. ಇನಗನು ಎಪಿಎಂಸಿಗೆ ತಂದು ಯಾರೂ ಕೊಳ್ಳುವವರಿಲ್ಲದೇ ಟೊಮೆಟೊವನ್ನು ಬೆಳೆಗಾರರು ಎಪಿಎಂಸಿ ಆವರಣ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ.
ನೀರು ಹರಿಸುವಂತೆ ಆಗ್ರಹ: ಹಿರಿಯೂರು ತಾಲ್ಲೂಕಿನ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ರೈತ ಸಂಘದಿಂದ ನಡೆಸುತ್ತಿರುವ ಧರಣಿ ಗುರುವಾರ (ಆಗಸ್ಟ್ 22) 65ನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೂ ಕ್ಷೇತ್ರದ ಸಚಿವರು ಸ್ಥಳಕ್ಕೆ ಆಗಮಿಸದೇ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದರು.
ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ನೀರಿಗಾಗಿ ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವರು ಭೇಟಿ ನೀಡದೇ ಇರುವುದು ನಿಜಕ್ಕೂ ಖಂಡನೀಯವಾಗಿದೆ ಎಂದರು.
ಸಚಿವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದೇ ಆಗಿದ್ದಲ್ಲಿ ಅವರು ಧರಣಿ ಸ್ಥಳಕ್ಕೆ ಆಗಮಿಸಬೇಕು. ರೈತರ ಅಹವಾಲುಗಳನ್ನು ಸ್ವೀಕರಿಸಿ ಸರ್ಕಾರಕ್ಕೆ ತಲುಪಿಸಬೇಕು ಎಂದು ಒತ್ತಾಯಿಸಿದರು. ಧರಣಿ ಹಮ್ಮಿಕೊಂಡು ಎರಡು ತಿಂಗಳು ಕಳೆದರೂ ಇದುವರೆಗೂ ರೈತರನ್ನು ಭೇಟಿ ಮಾಡದೇ ಇರುವುದು ಆಶ್ಚರ್ಯ ತಂದಿದೆ.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡದಿದ್ದಲ್ಲಿ ಸಚಿವರ ಕಚೇರಿ ಮುಂದೆ ರೈತರು ಧರಣಿ ಕೂರಲಾಗುವುದು. ಜೊತೆಗೆ ಸಚಿವರಿಗೆ ಘೇರಾವ್ ಹಾಕಲಾಗುವುದು. ಅಲ್ಲದೆ, ಸಚಿವರು ಕ್ಷೇತ್ರದಲ್ಲಿ ಭೇಟಿ ನೀಡಿದ ಎಲ್ಲಾ ಕಡೆಗಳಲ್ಲಿ ಧಿಕ್ಕಾರ ಕೂಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಮಳೆಗಾಲ ಮುಗಿಯುತ್ತಾ ಬಂದಿದ್ದು, ಕೆರೆಗಳಿಗೆ ನೀರು ಬಾರದೆ ಇರುವುದು ರೈತರಲ್ಲಿ ಆತಂಕ ಉಂಟಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ತೋಟಗಳು ಮತ್ತು ಜಾನುವಾರುಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ರೈತರು ದಂಗೆ ಹೇಳುವುದಕ್ಕಿಂತ ಮೊದಲು ಸರ್ಕಾರ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಪೂರೈಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಗಾಯಿತ್ರಿ ಡ್ಯಾಂ ಸೇರಿದಂತೆ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಧರಣಿಗೆ ಕೆ.ಆರ್.ಹಳ್ಳಿ, ಬೋರನಕುಂಟೆ ಹಾಗೂ ಗೊರ್ಲಡಕು ಗ್ರಾಮದ ರೈತರು ಭಜನೆ ಮಾಡುವ ಮೂಲಕ 65ನೇ ದಿನದ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.












Click it and Unblock the Notifications