ದೆಹಲಿಯಲ್ಲಿ ರೈತರ ಹೋರಾಟಕ್ಕೆ ಬಿಜೆಪಿ ಮುಖಂಡನ ಬೆಂಬಲ
ಚಂಡೀಗಢ, ಡಿಸೆಂಬರ್ 19: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬಿಜೆಪಿ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ಚೌದರಿ ಬಿರೇಂದ್ರ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ. "ಇದು ಕೇವಲ ರೈತರ ಹೋರಾಟವಲ್ಲ, ಎಲ್ಲರ ಹೋರಾಟ" ಎಂದಿದ್ದಾರೆ.
ಹರಿಯಾಣದ ಸಾಂಪ್ಲಾದಲ್ಲಿ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಕೈಗೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ರೈತರಿಗೆ ಸಾಥ್ ನೀಡುವುದಾಗಿ ತಿಳಿಸಿದರು.
ಸರ್ ಚೊಟ್ಟು ರಾಮ್ ಸಂಘಟನೆ ಸದಸ್ಯರು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಮೇಲಿನ ದೌರ್ಜನ್ಯ ತಡೆಗಟ್ಟಲು ಹಲವು ಕಾನೂನು ಕ್ರಮಗಳ ಜಾರಿಯ ಹಿಂದೆ ಚೊಟ್ಟುರಾಮ್ ಅವರ ಶ್ರಮವಿದ್ದು, ಅವರ ಮೊಮ್ಮಗರಾಗಿರುವ ಬಿರೇಂದರ್ ಸಿಂಗ್ ಈ ಧರಣಿಯಲ್ಲಿ ಪಾಲ್ಗೊಂಡರು. ಬಿರೇಂದರ್ ಸಿಂಗ್ ಪುತ್ರ ಬ್ರಿಜೇಂದ್ರ ಸಿಂಗ್ ಅವರು ಹಿಸಾರ್ ನ ಬಿಜೆಪಿ ಸಂಸದ ಆಗಿದ್ದಾರೆ.

ಕಳೆದ ಮೂರು ವಾರಗಳಿಂದಲೂ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಗೆ ಹೋಗಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
"ನಾನು ರೈತರ ಪರವಾಗಿ ನಿಲ್ಲುತ್ತೇನೆ. ಇದು ಎಲ್ಲರ ಹೋರಾಟ. ಸಮಾಜದ ಒಂದು ವರ್ಗಕ್ಕೆ ಸೀಮಿತವಾಗಿರುವುದಲ್ಲ. ಈಗಾಗಲೇ ಹೋರಾಟಕ್ಕೆ ಇಳಿದಿದ್ದೇನೆ. ಹೋರಾಟದಲ್ಲಿ ಮುನ್ನೆಲೆಯಲ್ಲಿರಲಿದ್ದೇನೆ" ಎಂದು ತಿಳಿಸಿದರು.
"ನೀವು ಯಾರನ್ನು ಬೇಕಾದರೂ ಕೇಳಿ... ವಿದ್ಯಾರ್ಥಿ, ಮಹಿಳೆ, ಕಾರ್ಮಿಕರು, ಯಾರನ್ನಾದರೂ ಕೇಳಿ, ಎಲ್ಲರೂ ಈ ಹೋರಾಟಕ್ಕೆ ಬೆಂಬಲ ನೀಡುತ್ತಾರೆ. ಎಲ್ಲರೂ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಬಯಸುತ್ತಾರೆ. ಕಳೆದ ಐದಾರು ದಿನಗಳಿಂದ ದೆಹಲಿಯಲ್ಲಿ ಚಳಿ ಹೆಚ್ಚಾಗಿದೆ. ಆದರೂ ರೈತರು ಹೋರಾಟವನ್ನು ಬಿಟ್ಟಿಲ್ಲ" ಎಂದರು.
ಕನಿಷ್ಠ ಬೆಂಬಲ ಬೆಲೆ ಹಾಗೂ ಎಪಿಎಂಸಿ ಚೌದರಿ ಚೊಟ್ಟು ರಾಮ್ ಅವರ ಶ್ರಮದ ಫಲ. ಬ್ರಿಟಿಷರ ಕಾಲದಲ್ಲಿ ಮೊದಲ ಬಾರಿ ಅವರು ಕೃಷಿ ಕಾಯ್ದೆಗಳನ್ನು ತಂದಿದ್ದರು, ಅವರ ಮೊಮ್ಮಗನಾಗಿ ನಾನು ರೈತರ ಬೆಂಬಲವಾಗಿ ನಿಲ್ಲುತ್ತಿದ್ದೇನೆ ಎಂದು ತಿಳಿಸಿದರು. ಚೊಟ್ಟು ರಾಮ್ ಅವರ ಪ್ರತಿಮೆ ಸ್ಥಳದಲ್ಲಿ ಚೊಟ್ಟು ರಾಮ್ ಸಂಘಟನೆಯ ಸದಸ್ಯರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.












Click it and Unblock the Notifications