ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ; ರೈತರಿಗೆ ಗೊಂದಲ
ಬೆಂಗಳೂರು, ಜನವರಿ 23; ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತರು ಈ ನಂಬರ್‌ಗೆ ಆಧಾರ್ ಜೋಡಣೆ ಮಾಡಲು ಸೂಚನೆ ನೀಡುತ್ತಿವೆ. ಇದು ರೈತರಲ್ಲಿ ಗೊಂದಲ ಹುಟ್ಟು ಹಾಕಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ನಿರ್ದೇಶನಗಳ ಪ್ರಕಾರ 10 ಹೆಚ್‌ಪಿ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಹೊಂದಿರುವ ನೀರಾವರಿ ಪಂಪ್‌ಸೆಟ್ ಗ್ರಾಹಕರು ತಮ್ಮ ಸ್ಥಾವರ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ ಎಂಬುದು ಸೂಚನೆಯಾಗಿದೆ.

ಈ ಕುರಿತ್ ವಿದ್ಯುತ್ ಸರಬರಾಜು ಕಂಪನಿಗಳು ಸೂಚನೆಯನ್ನು ನೀಡುತ್ತಿವೆ. ಆದರೆ ಹೀಗೆ ಆಧಾರ್ ಲಿಂಕ್ ಮಾಡಲು ಯಾವುದೇ ಅಂತಿಮ ದಿನಾಂಕವನ್ನು ನಿಗದಿ ಮಾಡಿಲ್ಲ. ನೀರಾವರಿ ಪಂಪ್‌ಸೆಟ್ ಹೊಂದಿರುವ ಗ್ರಾಹಕರು ಸಮೀಪದ ಮೆಸ್ಕಾಂ ಉಪವಿಭಾಗ ಕಛೇರಿಯನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಬೇಕಾಗಿ ತಿಳಿಸಲಾಗುತ್ತಿದೆ.
ರೈತರಲ್ಲಿ ಗೊಂದಲ, ಆಕ್ರೋಶ; ರಾಜ್ಯಾದ್ಯಂತ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಬೆಳೆ ನಷ್ಟ ಮಾಡಿಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಈ ಆದೇಶ ಗೊಂದಲ ಮೂಡಿಸಿದೆ. ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಮೀಟರ್ ಅಳವಡಿಕೆ ಮಾಡಲು ಆಧಾರ್ ಲಿಂಕ್ ಮಾಡಲು ಕೇಳುತ್ತಿರುವುದು ಏಕೆ? ಎಂಬುದು ರೈತರ ಪ್ರಶ್ನೆಯಾಗಿದೆ.
2023ರ ಮಾರ್ಚ್‌ನಲ್ಲಿಯೇ ಕೆಇಆರ್‌ಸಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ 6 ತಿಂಗಳಿನಲ್ಲಿ ಕೃಷಿ ಪಂಪ್‌ಸೆಟ್ ಮತ್ತು ಆಧಾರ್ ಜೋಡಣೆ ಮಾಡುವ ಕುರಿತು ಸೂಚನೆ ನೀಡಿತ್ತು. ಈಗ ಎಸ್ಕಾಂಗಳು ಪದೇ ಪದೇ ಈ ಕುರಿತು ರೈತರಿಗೆ ಸೂಚನೆ ನೀಡುತ್ತಿವೆ.
ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡುವ ಹುನ್ನಾರ ನಡೆಸಿದೆ. ಆದ್ದರಿಂದ ಆಧಾರ್ ಜೋಡಣೆಗೆ ತಿಳಿಸಲಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ಸಬ್ಸಿಡಿ ನಿಲ್ಲಿಸಲಾಗುತ್ತದೆ ಎಂಬ ಸುದ್ದಿಯೂ ಹಬ್ಬುತ್ತಿದೆ.
ಕೃಷಿ ಚಟುವಟಿಕೆಗೆ 10 ಹೆಚ್‌ಪಿ ತನಕ ವಿದ್ಯುತ್ ಉಚಿತವಾಗಿ ಪೂರೈಕೆ ಆಗುತ್ತಿದೆ. 10 ಹೆಚ್‌ಪಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಹಣವನ್ನು ಕಟ್ಟಬೇಕು. ಈಗ ಪಂಪ್‌ಸೆಟ್ ಮತ್ತು ಆಧಾರ್ ಲಿಂಕ್ ಮಾಡಿ ಸರ್ಕಾರ ಮಾಡುವುದೇನು? ಎಂಬುದು ರೈತರ ಪ್ರಶ್ನೆ.
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕಿದರೆ ಹೆಚ್ಚಿನ ಬಿಲ್ ಅನ್ನು ರೈತರು ಪಾವತಿ ಮಾಡಬೇಕಾಗುತ್ತದೆ ಎಂಬುದು ಆತಂಕವಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆ ಪಂಪ್ ಸೆಟ್ ಮತ್ತು ಆಧಾರ್ ಲಿಂಕ್ ವಿರೋಧಿಸಿ ರೈತರು ಪ್ರತಿಭಟನೆ ಮಾಡಿದ್ದಾರೆ.












Click it and Unblock the Notifications