ಕೊನೆಗೂ ಕುಮಾರಸ್ವಾಮಿ ಒತ್ತಡಕ್ಕೆ ಮಣಿದ ಕಂದಾಯ ಸಚಿವ ಆರ್. ಅಶೋಕ್!
ಬೆಂಗಳೂರು, ಆ. 17: ರಾಜ್ಯದಲ್ಲಿ ಪ್ರವಾಹ ಪೀಡಿತ ತಾಲೂಕುಗಳ ಹೊಸ ಪಟ್ಟಿಯನ್ನು ಕಂದಾಯ ಸಚಿವ ಆರ್. ಅಶೋಕ್ ಬಿಡುಗಡೆ ಮಾಡಿದ್ದಾರೆ. ಈ ಮೊದಲು 61 ತಾಲೂಕುಗಳನ್ನು ಮಾತ್ರ ಅತಿವೃಷ್ಟಿ ಪೀಡಿತ ತಾಲೂಕುಗಳೆಂದು ಘೋಷನೆ ಮಾಡಲಾಗಿತ್ತು. ಆದರೆ ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದಿರುವ ಕಂದಾಯ ಸಚಿವ ಆರ್. ಅಶೋಕ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಗೆ ಹೊಸದಾಗಿ ಮತ್ತೆ 22 ತಾಲೂಕುಗಳನ್ನು ಸೇರಿಸಿದ್ದಾರೆ.
ಅತಿವೃಷ್ಟಿ ತಾಲೂಕುಗಳಲ್ಲಿ ಸಂತ್ರಸ್ತರಿಗೆ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ತಕ್ಷಣವೇ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಮಸ್ಯೆ ನೀಗಿಸಲು ಪರಿಹಾರ ಘೊಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅತಿವೃಷ್ಟಿ ಪೀಡತವಾಗಿದ್ದರೂ ತಮ್ಮ ಕ್ಷೇತ್ರವನ್ನು ಪಟ್ಟಿಗೆ ಸೇರಿಸಿಲ್ಲ ಎಂದು ಶಾಸಕ ಕುಮಾರಸ್ವಾಮಿ ವಿಧಾನಸೌಧ ಮಾಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ಧರಣಿಗೆ ಕುಳಿತಿದ್ದರು. ಕಂದಾಯ ಇಲಾಖೆ ಮೇಲೆ ಹರಿಹಾಯ್ದಿದ್ದರು. ಇದೀಗ ಹೊಸ ಪಟ್ಟಿಯನ್ನು ಕಂದಾಯ ಸಚಿವ ಆರ್. ಅಶೋಕ್ ಬಿಡಗಡೆ ಮಾಡಿದ್ದಾರೆ.

ಕುಮಾರಸ್ವಾಮಿ ಒತ್ತಡಕ್ಕೆ ಮಣಿದ ಆರ್. ಅಶೋಕ್
ರಾಜ್ಯದಲ್ಲಿ 83 ತಾಲ್ಲೂಕುಗಳು ಅಧಿಕೃತವಾಗಿ ಪ್ರವಾಹ ಪೀಡಿತಗೊಂಡಿವೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಿಧಾನಸೌಧದಲ್ಲಿ ಘೋಷಣೆ ಮಾಡಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಈ ಮೊದಲು ನಾವು 61 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದ್ದೆವು. ಆದರೆ, ಇತ್ತೀಚಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ನಂತರ, ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ, ತರೀಕೆರೆ, ಮುಂಡಗೋಡು, ಸೂಪಾ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ಹರಪನಹಳ್ಳಿ, ಹೊಸನಗರ ಮತ್ತು ಮುದಿಗೆರೆ ಸೇರಿದಂತೆ 22 ತಾಲ್ಲೂಕುಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ. ಹೀಗಾಗಿ ರಾಜ್ಯದಲ್ಲಿ 83 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಪಟ್ಟಿ ಮಾಡಲಾಗಿದೆ" ಎಂದು ಹೇಳಿದರು.
ಕಂದಾಯ ಸಚಿವ ಆರ್. ಅಶೋಕ್ ನಿರ್ಧಾರ ಬದಲಿಸಲು ಕಾರಣವಾಗಿರುವುದು ಕುಮಾರಸ್ವಾಮಿ ಒತ್ತಡ ಕಾರಣ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಶಾಸಕ ಕುಮಾರಸ್ವಾಮಿ ಕೂಡ ಮಾತನಾಡಿದ್ದಾರೆ.

ಆರ್. ಅಶೋಕ್‌ಗೆ ಧನ್ಯವಾದ ಹೇಳಿದ ಕುಮಾರಸ್ವಾಮಿ!
ತಮ್ಮ ಕ್ಷೇತ್ರವನ್ನು ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿರುವುದನ್ನು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. "ತಡವಾಗಿಯಾದರೂ ಕ್ಷೇತ್ರವನ್ನು ಅತಿವೃಷ್ಟಿ ಪೀಡಿದ ತಾಲೂಕುಗಳ ಪಟ್ಟಿಗೆ ಸೇರಿಸಿದ್ದಾರೆ. ಮಳೆ ಅಳತೆ ಮಾಪನವನ್ನು ಎಲ್ಲಿಡಬೇಕಿತ್ತೊ ಅಲ್ಲಿ ಇಟ್ಟಿಲ್ಲ. ನಮ್ಮ ತಾಲೂಕು ಯಾವಾಗಲೂ ಅತಿವೃಷ್ಠಿ ಜಾಗ. ಈಗ ಕಂದಾಯ ಸಚಿವ ಆರ್. ಅಶೋಕ್ ನಮ್ಮ ಸಮಸ್ಯೆ ಅರಿತು ಪರಿಹರಿಸಿದ್ದಾರೆ" ಎಂದಿದ್ದಾರೆ.
ಜೊತೆಗೆ ಮಂತ್ರಿಸ್ಥಾನದ ಬಗ್ಗೆಯೂ ಮಾತನಾಡಿದ್ದಾರೆ. "ನಾನಿನ್ನೂ ಮಂತ್ರಿ ಹುದ್ದೆಗೆ ಕೇಳುವ ಸಮಯ ಬಂದಿಲ್ಲ. ಸರ್ಕಾರ ಎರಡು ವರ್ಷ ಉತ್ತಮ ಆಡಳಿತ ನೀಡಲಿ. ಈಗ ಸಚಿವ ಸ್ಥಾನ ಕೇಳುವ ಸಮಯ ಬಂದಿಲ್ಲ. ಸಮಯ ಬಂದಾಗ ಮೊದಲೇ ನಾನು ಕೇಳುತ್ತೇನೆ. ಈಗ ಸಮಯ ಬಂದಿಲ್ಲ, ಒತ್ತಾಯ ಮಾಡಲ್ಲ. ನಾನು ಯಾವಾಗಲೂ ಸಚಿವ ಸ್ಥಾನದ ಆಕಾಂಕ್ಷಿಯೇ" ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಂಭವನೀಯ ಮಿಂಚಿನ ಬಗ್ಗೆ ಮುಂಜಾಗ್ರತೆ ಕೊಡುತ್ತೇವೆ!
ಇದೇ ಸಂದರ್ಭದಲ್ಲಿ ನೈಸರ್ಗಿಕ ವಿಕೋಪಗಳನ್ನು ಮೊದಲೇ ಪತ್ತೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ. "ಸಂಭವನೀಯ ಮಿಂಚಿನ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ನಾವು ಆಯ್ದ ಗ್ರಾಮಗಳಲ್ಲಿ ಮಿಂಚು ಸಂಭವಿಸುವ ಕುರಿತಂತೆ ಮುಂಜಾಗ್ರತೆ ನೀಡುವ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ನೆರವಿನಿಂದ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಈ ಎಚ್ಚರಿಕೆಯ ವ್ಯವಸ್ಥೆಗಳನ್ನು ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಬೆಂಗಳೂರಿನ ಹವಾಮಾನ ಕಚೇರಿಯೊಂದಿಗೆ ಇದನ್ನು ಸಂಪರ್ಕಿಸಲಾಗುವುದು. ಈ ಯೋಜನೆಯ ಕೆಲಸಗಳು ಈಗಾಗಲೇ ನಡೆಯುತ್ತಿವೆ ಮತ್ತು ಶೀಘ್ರವೇ ಕಾರ್ಯಗತಗೊಳ್ಳಲಿದೆ" ಎಂದು ಅಶೋಕ್ ಹೇಳಿದ್ದಾರೆ.

ಚಂಡಮಾರುತದ ಬಗ್ಗೆಯೂ ಎಚ್ಚರಿಕೆ ಕೊಡುವ ವ್ಯವಸ್ಥೆ!
"ನಾವು ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಬಗ್ಗೆಯೂ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಿದ್ದೇವೆ. ಆರು ಕಿಲೋಮೀಟರ್‌ಗಳವರೆಗೆ ಕೇಳಬಹುದಾದ ಸೈರನ್‌ಗಳನ್ನು ಸ್ಥಾಪಿಸಲಾಗುತ್ತದೆ. ಕರಾವಳಿ ಪ್ರದೇಶದಲ್ಲಿ 40 ಸ್ಥಳಗಳಲ್ಲಿ ಪ್ರಾರಂಭಿಸಲು ಯೋಜಿಸಲಟಗಿದ್ದು, ಶೀಘ್ರದಲ್ಲೇ ಇದನ್ನು 60 ಸ್ಥಳಗಳಿಗೆ ವಿಸ್ತರಿಸುವ ಚಿಂತನೆಯಿದೆ. ಪ್ರತಿ ಕೇಂದ್ರವನ್ನು ಸ್ಥಾಪಿಸಲು 10 ರಿಂದ 12 ಕೋಟಿ ವೆಚ್ಚವಾಗುತ್ತಿದ್ದು ಕೇಂದ್ರ ಸರ್ಕಾರದ ನಿಧಿಯೊಂದಿಗೆ ಇದನ್ನು ಕಾರ್ಯಗತಗೊಳಿಸಲಾಗುವುದು. ಇದು ವಿಶೇಷವಾಗಿ ಮೀನುಗಾರರು ಮತ್ತು ಕರಾವಳಿ ಪ್ರದೇಶಗಳಲ್ಲಿ ಇರುವವರನ್ನ ಎಚ್ಚರಿಸಿ, ಸಂಭವಿಸಬಹುದಾದ ಪ್ರಾಣಹಾನಿಯನ್ನು ತಪ್ಪಿಸುತ್ತದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಳೆ ನೀರಿನ ಸಮಸ್ಯೆ!
ಜೊತೆಗೆ "ಬೆಂಗಳೂರಿನಲ್ಲಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಚರಂಡಿಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರಿಂದ ಬೆಂಗಳೂರಿನ ಬೀದಿಗಳಲ್ಲಿ ನೀರು ನಿಲ್ಲುವುದನ್ನು ತಡೆಯಬಹುದು. ರಸ್ತೆಗಳಲ್ಲಿ ನೀರು ಹರಿಯುವುದರಿಂದ ಅನೇಕ ರಸ್ತೆಗಳು ಮಳೆ ಬೀಳುವ ಸಮಯದಲ್ಲಿ ಟ್ರಾಫಿಕ್ ಜಾಮ್‌ಗಳಿಗೆ ಸಾಕ್ಷಿಯಾಗುತ್ತವೆ. ಅಂತಹ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲು ನಾವು ನಿರ್ಧರಿಸಿದ್ದೇವೆ. ನಾನು ಇತ್ತೀಚೆಗೆ ಕಮರ್ಷಿಯಲ್ ಸ್ಟ್ರೀಟ್ ಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದೇನೆ. ಅಲ್ಲಿ ಕಾಮಗಾರಿ ಕಳಪೆಯಾಗಿದ್ದು, ಟೈಲ್ಸ್ ಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಆದೇಶಿಸಿದ್ದೇನೆ. ಎರಡು ತಿಂಗಳಲ್ಲಿ ರಸ್ತೆ ಹೊಸ ರೂಪವನ್ನು ಪಡೆಯುತ್ತದೆ. ನಿಯಮಿತವಾಗಿ ಕೆಲಸಗಳನ್ನು ಪರಿಶೀಲಿಸಲು ಮತ್ತು ಕಳಪೆ ಗುಣಮಟ್ಟದ ಕೆಲಸಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಅಧಿಕಾರಿ ನಿರ್ಲಕ್ಷ್ಯ ತೋರಿದರೆ, ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ "ಎಂದು ಅಶೋಕ ಹೇಳಿದ್ದಾರೆ.












Click it and Unblock the Notifications