ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕನ್ನಡ ಸಮ್ಮೇಳನ ಇನ್ನು ಐದು ವರ್ಷಕ್ಕೊಮ್ಮೆ

By Srinath
|
Google Oneindia Kannada News

World Kannada Meet
ಬೆಳಗಾವಿ, ಮಾ. 14: ಇನ್ನು ಮುಂದೆ ವಿಶ್ವ ಕನ್ನಡ ಸಮ್ಮೇಳನ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆವರು ಘೋಷಿಸಿದ್ದಾರೆ. ಇನ್ನು, ಬೆಳಗಾವಿಯ ಆತಿಥ್ಯಕ್ಕೆ ಮಾರುಹೋಗಿರುವ ಯಡಿಯೂರಪ್ಪ ಅವರು ಬೆಳಗಾಂಅನ್ನು ಅದರ ಹೆಸರಿನಿಂದ ಹಿಡಿದು ಆಮೂಲಾಗ್ರವಾಗಿ ಬದಲಾಯಿಸಲು ಕಂಕಣ ತೊಟ್ಟಿದ್ದಾರೆ.

ಇನ್ಫೋಸಿಸ್ ನಾರಾಯಣ ಮೂರ್ತಿ ಅವರಿಂದ ಉದ್ಘಾಟನೆಗೊಂಡ ವಿಶ್ವ ಕನ್ನಡ ಸಮ್ಮೇಳನಕ್ಕೆ ಭಾನುವಾರ (ಮಾರ್ಚ್ 13) ತೆರೆ ಎಳೆದ ಯಡಿಯೂರಪ್ಪ ಅವರು ಐದು ವರ್ಷದ ಬಳಿಕ ಮತ್ತೆ ಕನ್ನಡದ ತೇರನ್ನು ಎಳೆಯಲು ಸಜ್ಜಾಗಿರುವಂತೆ ಕನ್ನಡಿಗರಿಗೆ ಕರೆ ನೀಡಿದರು. ಆದರೆ ಮುಂದಿನ ಸಮ್ಮೇಳನ ಎಲ್ಲಿ ಎಂಬುದು ಸದ್ಯಕ್ಕೆ ನಿರ್ಧಾರವಾಗುವ ವಿಷಯವಲ್ಲ. ಅದಕ್ಕಿನ್ನೂ ಕಾಲ ಪಕ್ವವಾಗಿಲ್ಲ ಎಂದೂ ಹೇಳಿದರು.

ಸಕ್ಕರೆಯ ನಾಡು ಕುಂದಾನಗರಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು ಇಲ್ಲಿನ ಯಶಸ್ಸು ಎಲ್ಲ ಗಡಿ ಜಿಲ್ಲೆಗಳಿಗೆ ಹೊಸ ಉತ್ಸಾಹವನ್ನು ತಂದುಕೊಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ಬೆಳಗಾವಿಯಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇದಿಕೆಯಲ್ಲಿ ಸಾಲುಮರದ ತಿಮ್ಮಕ್ಕ ಅವರು ಸಲ್ಲಿಸಿದ್ದ ಅಹವಾಲನ್ನು ಪರಿಗಣಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಮ್ಮಕ್ಕನ ಕೋರಿಕೆಯಂತೆ ಅವರ ಊರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡುವ ಭರವಸೆ ನೀಡಿದರು.

ಬದಲಾಗಲಿದೆ ಬೆಳಗಾಂ: ಮುಖ್ಯಮಂತ್ರಿಗಳೇ ಬ್ಯಾಂಗಲೋರ್ ಅನ್ನು ಬೆಂಗಳೂರು ಎಂದು ಬದಲಾಯಿಸಿರುವುದು ಶ್ಲಾಘನೀಯ. ಅದೇ ರೀತಿ ಬೆಳಗಾಂ ಅನ್ನು ಬೆಳಗಾವಿ ಎಂದು ಮಾರ್ಪಾಡುಗೊಳಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದವರು ಹಿರಿಯ ಸಾಹಿತಿ ಹಾ.ಮಾ. ನಾಗರಾಜಯ್ಯ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾಂಅನ್ನು ತಕ್ಷಣವೇ ಬದಲಾಯಿಸಲಾಗುವುದು. ಕುಂದಾನಗರಿಯ ಹೆಸರನ್ನು ಸುಂದರ 'ಬೆಳಗಾವಿ'ಯನ್ನಾಗಿ ಮಾರ್ಪಡಿಸುವ ಸಂಬಂಧ ಶೀಘ್ರವೇ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಾಪಸಾಗಲು ಮನಸಾಗುತ್ತಿಲ್ಲ: ಬೆಳಗಾವಿ ಜನ ಸಹೃದಯಿಗಳು, ಸಹಕಾರ ಮನೋಭಾವದವರು. ವಿಶ್ವ ಕನ್ನಡ ಸಮ್ಮೇಳನದಲ್ಲಂತೂ ಜನಸಾಗರ ನೋಡಿದ ಮೇಲೆ ಇಲ್ಲಿಂದ ಹೋಗಲು ಮನಸೇ ಬರುತ್ತಿಲ್ಲ. ಇನ್ನೂ ಕೆಲ ದಿನಗಳ ಕಾಲ ಇಲ್ಲೇ ಇದ್ದು ಬಿಡೋಣ ಅನಿಸುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ. ಮೂರು ದಿನಗಳ ಕಾಲ ಇಲ್ಲಿದ್ದು ಅನುಭವಿಸಿದ್ದು ಅವಿಸ್ಮರಣೀಯ ಕ್ಷಣಗಳನ್ನು. ಯಾವುದಕ್ಕೂ ಪೂರ್ವ ಜನ್ಮದ ಪುಣ್ಯ ಬೇಕು ಎಂದು ಗದ್ಗದಿತರಾದರು.

ಠಾಕ್ರೆ ಕ್ಯಾತೆಗೆ ಪಾಪು ಕಿಡಿ: ಬೆಳಗಾವಿಯ ಕನ್ನಡಿಗರು ಮರಾಠಿಗರು ಕನ್ನಡ ವಿರೋಧಿಗಳಲ್ಲ. ಆದರೆ ಹೊರಗಿನವರು ಮಾತ್ರ ಇಲ್ಲದ ಕ್ಯಾತೆ ತೆಗೆಯುತ್ತ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ ಎನ್ನುವ ಮೂಲಕ ನಾಡೋಜ ಪಾಟೀಲ ಪುಟ್ಟಪ್ಪ ಅವರು ಪರೋಕ್ಷವಾಗಿ ಬಾಳಾಠಾಕ್ರೆ ವಿರುದ್ಧ ಕಿಡಿಕಾರಿದರು.

ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಹಿರಿಯ ಪತ್ರಕರ್ತ ಪಾಪು ತಮ್ಮ ನಿರರ್ಗಳ ಭಾಷಣದಲ್ಲಿ ಕನ್ನಡದ ಹಿರಿಮೆಯನ್ನು ತೆರೆದಿಟ್ಟರು. ಹಾಗೆಯೇ ಕನ್ನಡಿಗರ ಶಕ್ತಿ ಎಷ್ಟು ಅಗಾಧ ಎಂಬುದನ್ನು ಒತ್ತಿ ಹೇಳಿದರು. ಈಗಿನ ಮಹಾರಾಷ್ಟ್ರದಲ್ಲಿ ಮೊದಲು ಕನ್ನಡವೇ ಇತ್ತು. ಈಗಿನ ಮರಾಠಿ ಭಾಷೆಯಲ್ಲಿರುವ ಅವ್ವ, ಅಕ್ಕ, ತಾಯಿ, ಅಪ್ಪ ಮೊದಲಾದ ಶಬ್ದಗಳೆಲ್ಲ ಕನ್ನಡದವು.ಅದಕ್ಕೆ ಸಾಹೇಬ್ ಪದ ಅಂಟಿಸಿಕೊಂಡಿದ್ದಾರಷ್ಟೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿರುವ ಉಪನಗರಗಳಲ್ಲಿ ಬಹುತೇಕವು ಕನ್ನಡದ ಹೆಸರುಗಳ ಮೂಲವನ್ನು ಹೊಂದಿವೆ. ಉದಾಹರಣೆಗೆ ಮಲ್ನಾಡ್ ಎಂಬುದು ಮಲಾಡ್ ಆಗಿದೆ ಎಂದು ಹೇಳಿದರು.

ಮಿಷನರಿಗಳಿಂದ ಕನ್ನಡ ಶಾಲೆ: 1837ರಲ್ಲಿ ಕ್ರಿಸ್ತ ಮಿಷನ್ ಬೆಳಗಾವಿಯಲ್ಲಿ ಕನ್ನಡಿಗರೇ ಅಧಿಕವಾಗಿದ್ದರಿಂದ ಕನ್ನಡ ಶಾಲೆ ಆರಂಭಿಸಿದರೇ ಹೊರತು ಮರಾಠಿಯದ್ದಲ್ಲ. ಮಹಾರಾಷ್ಟ್ರದ ಒಟ್ಟು ಶಿಲಾಶಾಸನಗಳಲ್ಲಿ ಶೇ. 85ರಷ್ಟು ಕನ್ನಡದಲ್ಲಿ, ಶೇ. 10ರಷ್ಟು ಮರಾಠಿಯಲ್ಲಿ ಮತ್ತು ಶೇ. 5ರಷ್ಟು ಬ್ರಾಹ್ಮಿ ಲಿಪಿಯಲ್ಲಿದೆ. ಈ ಎಲ್ಲ ಇತಿಹಾಸ ವಿಚಾರಿಸಿದರೆ ಯಾರಿಗಾದರೂ ಕನ್ನಡದ ವ್ಯಾಪ್ತಿ ಅರ್ಥವಾಗುತ್ತದೆ. ಇದನ್ನು ಎಲ್ಲರೂ ತಿಳೀಯಬೇಕು ಎಂದು ಪಾಫು ಇದೇ ಸಂದರ್ಭದಲ್ಲಿ ಹೇಳಿದರು.

ಕೋಲಾರದಲ್ಲಿ ನಡೆಸುವ ಆಶಯ: ಕೇಂದ್ರ ರೈಲ್ವೆ ಖಾತೆ ಉಪಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಮುಂದಿನ ವಿಶ್ವ ಕನ್ನಡ ಸಮ್ಮೇಳವು ಗಡಿನಾಡಾದ ಕೋಲಾರದಲ್ಲಿ ನಡೆಯುವಂತಾಗಬೇಕು ಎಂದು ಆಶಿಸಿದರು. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಕನ್ನಡದಲ್ಲಿ ಮಾತನಾಡಲು ಹಿಂಜರಿಯಬೇಕಾಗಿಲ್ಲ ಎಂದರು. ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಮಾತನಾಡಿ, ಹಿಂದಿ, ಮರಾಠಿ, ಇಂಗ್ಲಿಷ್ ಎಲ್ಲಾ ಭಾಷೆಗಳನ್ನು ಕನ್ನಡದ ಜತೆ ಕಲಿಯಿರಿ. ಆದರೆ ಕನ್ನಡಕ್ಕೆ ನಿಮ್ಮ ಪ್ರೀತಿ ಇರಲಿ ಎಂದು ಮನವಿ ಮಾಡಿದರು. ಜತೆಗೊಂದು ಜಾನಪದ ಗೀತೆಯನ್ನೂ ಹಾಡಿ ಬೆಳಗಾವಿ ಕನ್ನಡಾಭಿಮಾನಿಗಳನ್ನು ರಂಜಿಸಿದರು.

English summary
Karnataka CM Yeddyurappa announced that the World Kannada Meet will be held once in five years. In his speech during the belgaum kannada convention’s closing ceremony in Belgaum on Sunday (March 14), Mr Yeddyurappa said that the government was also committed to changing the name of Belgaum to Belagavi. Renowned journalist Patil Puttappa sent a strong message to Maharashtra through his speech saying that they could not stake claim over any part of Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X